ಗುರುವಾರ , ನವೆಂಬರ್ 26, 2020
22 °C
ಬಿಕೊ ಎನ್ನುತ್ತಿದ್ದ ದೇವಾಲಯದ ಆವರಣ, ಸಿಬ್ಬಂದಿ, ಪೊಲೀಸರು, ಸ್ಥಳೀಯರಷ್ಟೇ ಭಾಗಿ

ಮಹದೇಶ್ವರ ಬೆಟ್ಟ: ಭಕ್ತರಿಲ್ಲದೇ ಕಳೆಗುಂದಿದ ಮಾದಪ್ಪನ ದಸರಾ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಹದೇಶ್ವರಬೆಟ್ಟ: ಇಲ್ಲಿನ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರದಲ್ಲಿ ದಸರಾಜಾತ್ರೆ ಭಕ್ತರ ಅನುಪಸ್ಥಿತಿಯಲ್ಲಿ ಅತ್ಯಂತ ಸರಳವಾಗಿ ಸಾಂಪ್ರದಾಯಿಕವಾಗಿ ನಡೆಯಿತು. ಸೋಮವಾರ ರಾತ್ರಿ ತೆಪ್ಪೋತ್ಸವದೊಂದಿಗೆ ಜಾತ್ರೆಗೆ ತೆರೆಬೀಳಲಿದೆ. 

ಕೋವಿಡ್‌ ಕಾರಣದಿಂದ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದರಿಂದ, ಜನ ಜಾತ್ರೆ ಇರಲಿಲ್ಲ. ದೇವಾಲಯದ ಆವರಣ ಭಣಗುಡುತ್ತಿತ್ತು. ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ, ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸರು ಹಾಗೂ ಸ್ಥಳೀಯ ಬೆರಳೆಣಿಕೆಯಷ್ಟು ಮಂದಿ ಮಾತ್ರ ಇದ್ದರು. 

ಬೆಟ್ಟಕ್ಕೆ ಬರುತ್ತಿದ್ದ ಭಕ್ತರನ್ನು ತಾಳಬೆಟ್ಟದಲ್ಲೇ ತಡೆಯಲಾಗುತ್ತಿತ್ತು. ನಿರ್ಬಂಧದ ಬಗ್ಗೆ ಮಾಹಿತಿ ಇದ್ದುದರಿಂದ ಭಕ್ತರು ಬೆಟ್ಟದ ಕಡೆ ಸುಳಿಯಲಿಲ್ಲ. ಆದರೂ ಕೆಲವರು, ಬಾಡಿಗೆ ವಾಹನಗಳಲ್ಲಿ ಕುಟುಂಬ ಸಮೇತ ಬಂದಿದ್ದವರು, ತಾಳಬೆಟ್ಟದಿಂದ ವಾಪಸ್‌ಆಗಬೇಕಾಯಿತು. 

ಮೂರು ದಿನಗಳ ಕಾಲ ನಡೆಯುವ ದಸರಾ ಜಾತ್ರೆಗೆ ಲಕ್ಷಾಂತರ ಭಕ್ತರು ಬರುತ್ತಿದ್ದರು. ಕೋವಿಡ್‌ ಕಾರಣದಿಂದ ಭಕ್ತರ ಪ್ರವೇಶಕ್ಕೆ ಚಾಮರಾಜನಗರ ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು. 

ಆಯುಧಪೂಜೆಯ ದಿನವಾದ ಭಾನುವಾರ ಮಹದೇಶ್ವರಸ್ವಾಮಿ ಹಾಗೂ ವೀರಭದ್ರಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ನವಮಿ ದಿನದ ಪೂಜೆಯ ಬಳಿಕ ಬೆಳಿಗ್ಗೆ ಚಿನ್ನದ ತೇರಿನಲ್ಲಿ ಉತ್ಸವ ಮೂರ್ತಿಯನ್ನು ಇರಿಸಿ ದೇವಾಲಯದ ಆವರಣದಲ್ಲಿ ರಥೋತ್ಸವ ನಡೆಸಲಾಯಿತು. ಮಂಗಳವಾದ್ಯಗಳೊಂದಿಗೆ ಬೆರಳೆಣಿಕೆಯ ಸಿಬ್ಬಂದಿ ತೇರನ್ನು ಎಳೆದರು.

ಸಂಜೆ, ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರ ನೇತತೃತ್ವದಲ್ಲಿ ಆಯುಧಪೂಜೆಯ ಅಂಗವಾಗಿ ಪ್ರಾಧಿಕಾರದ ವಾಹನಗಳಿಗೆ, ಬಸ್‌ಗಳಿಗೆ, ನೀರು ಸರಬರಾಜು ಮಾಡುವ ಯಂತ್ರಾಗಾರದಲ್ಲಿರುವ ಸಲಕರಣೆಗಳಿಗೆ ಪೂಜೆ ಸಲ್ಲಿಸಲಾಯಿತು.

ವಿಜಯ ದಶಮಿಯ ದಿನವಾದ ಸೋಮವಾರ ಬೆಳಿಗ್ಗೆ ವಿಶೇಷ ಪೂಜೆಗಳು ನಡೆದವು. ಧಾರ್ಮಿಕ ವಿಧಿ ವಿಧಾನಗಳು ದೇವಾಲಯದ ಆವರಣಕ್ಕಷ್ಟೇ ಸೀಮಿತವಾಗಿದ್ದವು. ರಾತ್ರಿ 8 ಗಂಟೆಗೆ ಬೆಟ್ಟದಲ್ಲಿರುವ ದೊಡ್ಡ ಕಲ್ಯಾಣಿಯಲ್ಲಿ ತೆಪ್ಪೋತ್ಸವ ನಡೆಯಲಿದೆ. 

ನೀರಸ ಜಾತ್ರೆ: ‘ಬೆಟ್ಟದ ಜಾತ್ರೆ ಎಂದರೆ ಅಲ್ಲಿ ಭಕ್ತರ ಜಾತ್ರೆಯೇ ಇರಬೇಕು. ಮೂರ್ನಾಲ್ಕು ದಿನಗಳ ಕಾಲ ನಮಗೆ ಒಂದು ನಿಮಿಷವೂ ಪುರುಸೊತ್ತು ಇರುವುದಿಲ್ಲ. ಆದರೆ, ಕೋವಿಡ್‌ನಿಂದಾಗಿ ಜಾತ್ರೆಯ ವಾತಾವರಣವೇ ಕಂಡು ಬರುತ್ತಿಲ್ಲ. ಮಾಮೂಲಿ ದಿನಗಳ ರೀತಿಯಲ್ಲೂ ಇಲ್ಲ. ನನ್ನ 33 ವರ್ಷಗಳ ಸೇವೆಯಲ್ಲಿ ಈ ರೀತಿಯ ಜಾತ್ರೆ ನೋಡಿರುವುದು ನೋಡಿರಲಿಲ್ಲ’ ಎಂದು ದೇವಸ್ಥಾನದ ಆವರಣದಲ್ಲಿ ಕರ್ತವ್ಯದಲ್ಲಿದ್ದ ಪ್ರಾಧಿಕಾರದ ಹಿರಿಯ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

ಪೊಲೀಸರೂ ನಿರಾಳ: ಭಕ್ತರು ಇಲ್ಲದೇ ಇದ್ದುದರಿಂದ ಪೊಲೀಸರಿಗೂ ಕೆಲಸ ಇರಲಿಲ್ಲ. ಸುಮ್ಮನೆ ಕುಳಿದಿದ್ದರು.


ದಸರಾ ಜಾತ್ರೆಯ ಸಂದರ್ಭದಲ್ಲಿ ಭಕ್ತರಿಲ್ಲದೇ ದೇವಾಲಯ ಬಿಕೋ ಎನ್ನುತ್ತಿತ್ತು

‘ಇಂತಹ ಜಾತ್ರೆ ಹಿಂದೆ ನೋಡಿಲ್ಲ, ಮುಂದೆ ನೋಡುವುದೂ ಇಲ್ಲ ಎನಿಸುತ್ತದೆ. ಜಾತ್ರೆ ಸಂದರ್ಭದಲ್ಲಿ ನಮಗೆ ಸಮಯವೇ ಇರುವುದಿಲ್ಲ. ಇವತ್ತು ನೋಡಿ ಖಾಲಿ ಇದ್ದೇವೆ. ಜಾತ್ರೆಯ ಕಳೆಯೇ ಕಾಣುತ್ತಿಲ್ಲ’ ಎಂದು ಬೆಟ್ಟದ ಪೊಲೀಸ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ವೀರಣ್ಣಾರಾಧ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಜಾತ್ರೆಯ ಸಮಯದಲ್ಲಿ ಸ್ಥಳೀಯರು ಕೂಡ ಮಾದಪ್ಪನ ದರ್ಶನ ಮಾಡಲು ಕಷ್ಟ ಪಡಬೇಕು. ಅಂಗಡಿಗಳನ್ನು ಇಟ್ಟುಕೊಂಡಿರುವ ಸ್ಥಳೀಯ ವ್ಯಾಪಾರಿಗಳಿಗೆ ದೇವಾಲಯದಲ್ಲಿ ನಡೆಯುವ ಯಾವ ಕಾರ್ಯಕ್ರಮವನ್ನೂ ವೀಕ್ಷಿಸಲು ಆಗುವುದಿಲ್ಲ. ಇದೇ ಮೊದಲ ಬಾರಿಗೆ ಅವರು ಕೂಡ ಹಬ್ಬದ ದಿನ ಮಾದಪ್ಪನ ದರ್ಶನ ಪಡೆದಿದ್ದಾರೆ. 

ನಿರ್ಬಂಧ ಅನಿವಾರ್ಯ: ‘ಭಕ್ತರು ಇಲ್ಲದಿದ್ದರೆ ಜಾತ್ರೆಗೆ ಕಳೆ ಇರುವುದಿಲ್ಲ ನಿಜ. ನಮಗೂ ಇದು ಬೇಸರದ ವಿಷಯವೇ.  ಆದರೆ, ಕೋವಿಡ್‌ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಸೇರಿದರೆ, ನಿರ್ವಹಣೆ ಕಷ್ಟ. ಹಾಗಾಗಿ ಅನಿವಾರ್ಯವಾಗಿ ಭಕ್ತರನ್ನು ನಿರ್ಬಂಧ ಮಾಡಲೇಬೇಕಾಯಿತು. ಮಂಗಳವಾರ ಬೆಳಿಗ್ಗೆ 7 ಗಂಟೆಯಿಂದ ದರ್ಶನಕ್ಕೆ ಅವಕಾಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ಸಾಧ್ಯತೆ ಇದೆ. ಏಕ ಕಾಲಕ್ಕೆ ನಾಲ್ಕೈದು ಸಾವಿರ ಭಕ್ತರು ಬಂದರೆ ನಿರ್ವಹಣೆ ಮಾಡಬಹುದು. ಅದಕ್ಕಿಂತ ಹೆಚ್ಚು ಬಂದರೆ ಕಷ್ಟವಾಗುತ್ತದೆ. ಸರತಿ ಸಾಲಿಗಾಗಿ ಬ್ಯಾರಿಕೇಡ್‌ ಅಳವಡಿಸಲಾಗಿದೆ’ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 


ಭಕ್ತರು ಇಲ್ಲದೇ ಇದ್ದುದರಿಂದ ಪ್ರಾಧಿಕಾರದ ಸಿಬ್ಬಂದಿ ಹಾಗೂ ಪೊಲೀಸ್‌ ಸಿಬ್ಬಂದಿ ಕೆಲಸವಿಲ್ಲದೇ ಸುಮ್ಮನೇ ಕುಳಿತಿದ್ದರುCaption

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು