ಬುಧವಾರ, ಸೆಪ್ಟೆಂಬರ್ 22, 2021
29 °C
ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಗ್ರಾಮ ಪುನರ್ವಸತಿ ಸಮಿತಿ ಸಭೆ

ಚಂಗಡಿ ಪುನರ್ವಸತಿ: ಸ್ಥಳ ಸಮೀಕ್ಷೆ ವರದಿಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಮಲೆಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿ ಬರುವ ಚಂಗಡಿ ಗ್ರಾಮ ಪುನರ್ವಸತಿಗಾಗಿ ಗುರುತಿಸಲಾಗಿರುವ ಹನೂರು ಭಾಗದ ವೈಶಂಪಾಳ್ಯ ಬಳಿಯ ಮೀಸಲು ಅರಣ್ಯ ಪ್ರದೇಶವನ್ನು ಕಂದಾಯ, ಅರಣ್ಯ ಹಾಗೂ ಭೂ ಮಾಪನ ಇಲಾಖೆ ಜಂಟಿಯಾಗಿ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಅವರು ಸೂಚನೆ ನೀಡಿದರು.

ಚಂಗಡಿ ಗ್ರಾಮ ಪುನರ್ವಸತಿ ಕುರಿತ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಅರಣ್ಯ ಅಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು, ಭೂ ಮಾಪನ ಇಲಾಖೆಯ ಅಧಿಕಾರಿಗಳು ಪುನರ್ವಸತಿಗೆ ಗುರುತಿಸಲಾಗಿರುವ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮಗಳನ್ನು ವಹಿಸಬೇಕು. ಜಂಟಿ ಸಮೀಕ್ಷೆ ನಡೆಸಿ ಪುನರ್ವಸತಿಗೆ ಸ್ಥಳ ಅನುಕೂಲ ಇರುವ ಕುರಿತು ಸಾಧಕ ಬಾಧಕಗಳ ಬಗ್ಗೆ ಸಂಪೂರ್ಣ ಮಾಹಿತಿಯೊಂದಿಗೆ ವರದಿ ಸಲ್ಲಿಸಬೇಕು’ ಎಂದರು.

‘ಗ್ರಾಮ ಪುನರ್ವಸತಿ ಸಂಬಂಧ ಈಗಾಗಲೇ ಕೈಗೊಂಡಿರುವ ಕುಟುಂಬಗಳು ಜಮೀನುಗಳ ಸಮೀಕ್ಷೆ ಕಾರ್ಯ ಕುರಿತು ಪರಿಶೀಲಿಸಿದ ಜಿಲ್ಲಾಧಿಕಾರಿ ಅವರು ಜಮೀನುಗಳ ಸರ್ವೆ ಕುರಿತ ತಾಂತ್ರಿಕ ದೋಷಗಳು ಇದ್ದಲ್ಲಿ ಸರಿಪಡಿಸಿಕೊಳ್ಳಬೇಕು. ಜಮೀನು ಮಾಲೀಕರಿಂದಲೂ ದಾಖಲೆಗಳನ್ನು ಪಡೆದು ಯಾವುದೇ ಅಡಚಣೆಗಳಿದ್ದಲ್ಲಿ ನಿಯಮಾನುಸಾರ ಪರಿಹರಿಸಿಕೊಳ್ಳಬೇಕು. ಪ್ರತಿ ಪ್ರಕರಣವನ್ನು ಅಧ್ಯಯನ ಮಾಡಿ ಪ್ರಾಥಮಿಕ ಹಂತದಲ್ಲಿಯೇ ತಾಲ್ಲೂಕು ಮಟ್ಟದ ಸಮಿತಿಯಲ್ಲಿ ಇತ್ಯರ್ಥ ಪಡಿಸಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

‘ಪುನರ್ವಸತಿ ಕಾರ್ಯ ಅನುಷ್ಠಾನ ಯೋಜನಾ ಸಮಿತಿ ನೇಮಿಸಿಕೊಳ್ಳಬೇಕಿದೆ. ಫಲಾನುಭವಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಯೋಜನಾ ಸಮಿತಿಯನ್ನು ರಚಿಸಬೇಕು. ಈ ಸಮಿತಿಯು ಪುನರ್ವಸತಿಗಾಗಿ ಇರುವ ತೊಡಕುಗಳನ್ನು ಬಗೆಹರಿಸಿ ಜಿಲ್ಲಾ ಮಟ್ಟದ ಪುನರ್ವಸತಿ ಸಮಿತಿಯ ಗಮನಕ್ಕೆ ತಂದಲ್ಲಿ ಮುಂದಿನ ಪ್ರಸ್ತಾವನೆಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದರು.

ಹೊಸ ಗ್ರಾಮಕ್ಕೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸುವ ಕುರಿತು ವಿವರ ನೀಡಿದ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ಹಾಗೂ ವೈಲ್ಡ್ ಲೈಫ್ ಕನ್ಸರ್ವೇಷನ್ ಸೊಸೈಟಿಯ ಎಂಜಿನಿಯರಿಂಗ್ ಕನ್ಸಲ್ಟೆಂಟ್ ಜಗದೀಶ್ ಅವರು,  ‘ಹೊಸ ಗ್ರಾಮದಲ್ಲಿ ವಸತಿ ಸೇರಿದಂತೆ ಮೂಲ ಸೌಕರ್ಯಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ಉಪವಿಭಾಗಾಧಿಕಾರಿ ಡಾ.ಗಿರೀಶ್ ದಿಲೀಪ್ ಬದೋಲೆ, ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್‌ ಅಧ್ಯಕ್ಷ ಮಲ್ಲೇಶಪ್ಪ, ರೈತ ಮುಖಂಡರಾದ ಹೊನ್ನೂರು ಪ್ರಕಾಶ್, ಗ್ರಾಮದ ಮುಖಂಡರಾದ ಕರಿಯಪ್ಪ, ಜಂಟಿ ಕೃಷಿ ನಿರ್ದೇಶಕಿ ಚಂದ್ರಕಲಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಿವಪ್ರಸಾದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ, ಉಪ ಅರಣ್ಯ ಸಂರಕ್ಷಾಣಾಧಿಕಾರಿ ಭಾಗ್ಯಲಕ್ಷ್ಮಿ, ಹನೂರು ತಹಶೀಲ್ದಾರ್‌ರಾದ ಜಿ.ಎಚ್. ನಾಗರಾಜು, ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ ಸಿ.ಚೇತನ್, ಇತರೆ ಅಧಿಕಾರಿಗಳು, ಚಂಗಡಿ ಗ್ರಾಮದ ಮುಖಂಡರು ಇದ್ದರು. 

‘ಮನೆಗಳ ವಿನ್ಯಾಸ ಬದಲಿಸಿ’

‘ಮಾಸ್ಟರ್ ಪ್ಲಾನ್‌ನಲ್ಲಿ ಈಗ ನಿರ್ದಿಷ್ಟ ಪಡಿಸಲಾಗಿರುವ ಮನೆಗಳ ವಿನ್ಯಾಸವನ್ನು ಬದಲಿಸಬೇಕಿದೆ. ಕೊಟ್ಟಿಗೆ, ಕೃಷಿ ಉತ್ಪನ್ನಗಳ ದಾಸ್ತಾನು ಸೇರಿದಂತೆ ಇತರೆ ಅವಶ್ಯಕತೆಗಳಿಗೆ ಅನುಗುಣವಾಗಿಯೂ ಮನೆ ನಿರ್ಮಿಸಿ ಕೊಡಬೇಕಾಗುತ್ತದೆ. ಪರಿಸರ ಸ್ನೇಹಿ, ತಂತ್ರಜ್ಞಾನ ಬಳಕೆ ಅಂಶಗಳಿಗೂ ಒತ್ತು ನೀಡಬೇಕು. ಮಾದರಿಯಾದ ಮನೆ ನಿರ್ಮಿಸಿ ಕೊಡಬೇಕಿದೆ’ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. 

‘ನೂತನ ಜನವಸತಿ ಗ್ರಾಮದಲ್ಲಿ ಶಾಲೆ, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ಥಳ ನಿಗದಿ ಮಾಡಿಕೊಳ್ಳಬೇಕು. ಗುಣಮಟ್ಟದ ಸೌಲಭ್ಯಗಳು ಗ್ರಾಮದಲ್ಲಿ ಲಭ್ಯವಾಗಬೇಕು. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತಾವನೆ ಸಿದ್ಧಪಡಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಸೂಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.