ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿ: ಡಿ.ಸಿ. ಪರಿಶೀಲನೆ

Last Updated 2 ಡಿಸೆಂಬರ್ 2020, 15:48 IST
ಅಕ್ಷರ ಗಾತ್ರ

ಚಾಮರಾಜನಗರ: ಯಡಬೆಟ್ಟದ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬಳಿ ನಿರ್ಮಾಣವಾಗುತ್ತಿರುವ ವೈದ್ಯಕೀಯ ವಿಜ್ಞಾನ ಸಂಸ್ಥೆಯ 450 ಹಾಸಿಗೆ ಸಾಮರ್ಥ್ಯವುಳ್ಳ ₹125 ಕೋಟಿ ವೆಚ್ಚದ ಆಸ್ಪತ್ರೆ ಕಟ್ಟಡ ಕಾಮಗಾರಿಯನ್ನು ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಅವರು ಬುಧವಾರ ಪರಿಶೀಲಿಸಿದರು.

ಕಟ್ಟಡದ ಪ್ರತಿಯೊಂದು ವಿಭಾಗದ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದ ಅವರು, ಗುಣಮಟ್ಟದ ಕೆಲಸ ನಿರ್ವಹಿಸುವಂತೆ ಸೂಚಿಸಿದರು. ಹೊರರೋಗಿಗಳ ವಿಭಾಗ, ತುರ್ತು ನಿಗಾ ಘಟಕ, ಶಸ್ತ್ರ ಚಿಕಿತ್ಸೆ ಕೊಠಡಿಗಳು, ತೀವ್ರ ನಿಗಾ ಘಟಕ, ವಾರ್ಡುಗಳು, ಸಭಾಂಗಣ ಕಾಮಗಾರಿಯನ್ನು ವೀಕ್ಷಿಸಿದರು. ಪ್ರತಿ ಕಟ್ಟಡದ ಮುಖ್ಯ ಪ್ರವೇಶ ದ್ವಾರದಲ್ಲಿ ರೋಗಿಗಳು, ಅಶಕ್ತರು ಪ್ರವೇಶಿಸಲು ಅನುಕೂಲವಾಗುವಂತೆ ರ‍್ಯಾಂಪ್‌ಗಳನ್ನು ಕಡ್ಡಾಯವಾಗಿ ನಿರ್ಮಿಸುವಂತೆ ನಿರ್ದೇಶನ ನೀಡಿದರು.

‘ಆಸ್ಪತ್ರೆ ಆವರಣದಲ್ಲಿ ಸಾಕಷ್ಟು ವಾಹನಗಳ ನಿಲುಗಡೆಗೆ ಅವಕಾಶವಾಗುವಂತೆ ಪಾರ್ಕಿಂಗ್ ಸ್ಥಳಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು. ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡಬೇಕು. ನೀರಿನ ವ್ಯವಸ್ಥೆಗೆ ಗಮನಕೊಟ್ಟು ಈ ಸಂಬಂಧ ಕಾಮಗಾರಿ ವೇಗವಾಗಿ ಕೈಗೊಳ್ಳಬೇಕು’ ಎಂದರು.

‘ಆಸ್ಪತ್ರೆ ಆವರಣದಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆಗೂ ಅವಕಾಶವಿರಬೇಕು. ತ್ಯಾಜ್ಯ ನೀರಿನ ಶುದ್ದೀಕರಣ ಘಟಕ ನಿರ್ಮಿಸಿ, ಶುದ್ದೀಕರಿಸಿದ ನೀರನ್ನು ಆಸ್ಪತ್ರೆ ಆವರಣದಲ್ಲಿಯೇ ನಿರ್ವಹಿಸಲಾಗುವ ಉದ್ಯಾನಕ್ಕೆ ಬಳಕೆ ಮಾಡಿಕೊಳ್ಳಬೇಕು, ತ್ಯಾಜ್ಯ ನೀರು ಸರಾಗವಾಗಿ ಹರಿದುಹೋಗುವ ಅತ್ಯಾಧುನಿಕ ಚರಂಡಿ ವ್ಯವಸ್ಥೆಯು ಇರುವಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ವೈದ್ಯಕೀಯ ಕಾಲೇಜು, ಹೊಸ ಆಸ್ಪತ್ರೆಯನ್ನು ಸಂಪರ್ಕಿಸುವ ಈಗಿರುವ 40 ಅಡಿ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಮಾರ್ಪಡಿಸಲು ಅಗತ್ಯವಿರುವ ಅಂದಾಜು ಪಟ್ಟಿ ಪ್ರಸ್ತಾವನೆಯನ್ನು ಸಲ್ಲಿಸಬೇಕು. ವೈದ್ಯಕೀಯ ಕಾಲೇಜು ಮುಂಭಾಗದಲ್ಲಿ ತುರ್ತಾಗಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಜಿಲ್ಲಾಧಿಕಾರಿಯವರು ಸೂಚನೆ ನೀಡಿದರು.

ಇದೇ ವೇಳೆ ವೈದ್ಯಕೀಯ ಕಾಲೇಜಿನ ಡೀನ್ ಡಾ.ಸಂಜೀವ್ ಅವರು ಮಾತನಾಡಿ, ‘ಆಸ್ಪತ್ರೆಗೆ ಬರುವ ರೋಗಿಗಳ ಸಂಬಂಧಿಕರು ವಾಸ್ತವ್ಯ ಹೂಡಲು ಅನುಕೂಲವಾಗುವಂತೆ ಡಾರ್ಮಿಟರಿ ನಿರ್ಮಾಣ ಮಾಡಲು ಜಾಗದ ಅಗತ್ಯವಿದ್ದು ಆದಷ್ಟು ಶೀಘ್ರವೇ ನೀಡಬೇಕೆಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು ಸ್ಥಳದಲ್ಲಿಯೇ ಇದ್ದ ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ ಅವರಿಗೆ ತಕ್ಷಣವೇ ಡಾರ್ಮಿಟರಿ ಕಟ್ಟಡಕ್ಕಾಗಿ ಸ್ಥಳ ಗುರುತಿಸಿ ಒದಗಿಸುವಂತೆ ಸೂಚಿಸಿದರು.

ಕೆಎಚ್ಆರ್‌ಡಿಪಿ ಮುಖ್ಯ ಎಂಜಿನಿಯರ್ ಶ್ರೀನಾಥ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕುಮಾರ್, ಜಿಲ್ಲಾ ಸರ್ಜನ್ ಡಾ.ಮುರಳೀಕೃಷ್ಣ, ಸ್ಥಾನಿಕ ವೈದ್ಯಾಧಿಕಾರಿ ಡಾ.ಕೃಷ್ಣ ಪ್ರಸಾದ್, ತಜ್ಞ ವೈದ್ಯರಾದ ಡಾ.ರಮೇಶ್, ಡಾ.ಮಹೇಶ್, ಸೆಸ್ಕ್‌ ಕಾರ್ಯಪಾಲಕ ಎಂಜಿನಿಯರ್ ರಾಜು ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಿರ್ಮಾಣವಾಗುತ್ತಿರುವ ಗಾಂಧಿ ಭವನ ಕಟ್ಟಡ ಕಾಮಗಾರಿ ಸ್ಥಳಕ್ಕೂ ಜಿಲ್ಲಾಧಿಕಾರಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT