ಮಂಗಳವಾರ, ಜೂನ್ 2, 2020
27 °C
ಮೈಕ್ರೊ ಫೈನಾನ್ಸ್‌, ಬ್ಯಾಂಕ್‌ಗಳ ಅಧಿಕಾರಿಗಳೊಂದಿಗೆ ಡಿ.ಸಿ. ಸಭೆ

ಜೂ.30ರವರೆಗೆ ಸಾಲ, ಬಡ್ಡಿ ವಸೂಲು ಮಾಡುವಂತಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಲಾಕ್‌ಡೌನ್ ಇರುವುದರಿಂದ ಮೈಕ್ರೋ ಫೈನಾನ್ಸ್ ಕಂಪನಿಗಳು, ಬ್ಯಾಂಕ್‌ಗಳು, ಸಹಕಾರಿ ಬ್ಯಾಂಕ್‌ಗಳು ಗ್ರಾಹಕರಿಂದ ಬಲವಂತವಾಗಿ ಸಾಲ, ಬಡ್ಡಿ ವಸೂಲಾತಿ ಮಾಡುವಂತಿಲ್ಲ. ಅಂತಹದ್ದು ಗಮನಕ್ಕೆ ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಎಚ್ಚರಿಕೆ ನೀಡಿದ್ದಾರೆ.

ಮೈಕ್ರೊ ಫೈನಾನ್ಸ್, ಬ್ಯಾಂಕ್‌ಗಳು ಹಾಗೂ ಸಹಕಾರಿ ಬ್ಯಾಂಕ್‌ಗಳ ಅಧಿಕಾರಿಗಳು ಮತ್ತು ಪ್ರತಿನಿಧಿಗಳ ಸಭೆ ನಡೆಸಿದ ಅವರು, ‘ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಜನರಿಗೆ ಹಲವು ತೊಂದರೆಗಳಿವೆ. ಆದಾಯ, ಉದ್ಯೋಗ ಏರುಪೇರಿನಿಂದಾಗಿ ಕೆಲವರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸಾಲ, ಬಡ್ಡಿ ನೀಡುವಂತೆ ಗ್ರಾಹಕರನ್ನು ಒತ್ತಾಯ ಮಾಡುವಂತಿಲ್ಲ. ಜೂನ್‌ 30ರವರೆಗೆ ಯಾವುದೇ ಕಾರಣಕ್ಕೂ ಗ್ರಾಹಕರಿಂದ ಸಾಲ ಹಾಗೂ ಬಡ್ಡಿ ಹಣವನ್ನು ಪಡೆಯಬಾರದು’ ಎಂದು ತಾಕೀತು ಮಾಡಿದರು.

‘ಮೈಕ್ರೊ ಫೈನಾನ್ಸ್‌ಗಳು ಪ್ರಸಕ್ತ ಸನ್ನಿವೇಶದಲ್ಲಿ ಗ್ರಾಹಕರಿಗೆ ಹೇಗೆ ನೆರವಾಗಬೇಕೆಂಬ ಉದ್ದೇಶದಿಂದ ಸರ್ಕಾರ ಸಾಕಷ್ಟು ನಿರ್ದೇಶನ, ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದರ ಅನುಸಾರ ನಡೆದುಕೊಳ್ಳಬೇಕು. ಗ್ರಾಹಕರಿಗೆ ಒತ್ತಾಯಪೂರ್ವಕವಾಗಿ ಸಾಲ, ಬಡ್ಡಿ ಇನ್ನಿತರ ಹಣವನ್ನು ಪಾವತಿ ಮಾಡುವಂತೆ ಒತ್ತಾಯಿಸಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಜಿಲ್ಲಾಡಳಿತ ಗಂಭೀರ ಕ್ರಮ ತೆಗೆದುಕೊಳ್ಳಲು ಮುಂದಾಗಬೇಕಾಗುತ್ತದೆ’ ಎಂದು ತಿಳಿಸಿದರು.

‘ಸ್ವಸಹಾಯ ಸಂಘಗಳು, ಸಹಕಾರಿ ಬ್ಯಾಂಕ್‌ಗಳು, ಇತರೆ ಹಣಕಾಸು ಸಂಸ್ಥೆಗಳು, ಬ್ಯಾಂಕ್‌ಗಳು ಸಾಲ ನೀಡುವಂತೆ ಗ್ರಾಹಕರಿಗೆ ನೋಟಿಸ್ ನೀಡಬಾರದು. ಇನ್ನು ಮುಂದೆ ನೋಟಿಸ್ ನೀಡುವುದು ಗಮನಕ್ಕೆ ಬಂದರೇ ಸಂಬಂಧಪಟ್ಟ ಬ್ಯಾಂಕ್‌, ಹಣಕಾಸು ಸಂಸ್ಥೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದರು.

‘ಸಾಲ ಬಡ್ಡಿಯನ್ನು ವಸೂಲು ಮಾಡುವ ಪ್ರಕ್ರಿಯೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂಬ ಮಾಹಿತಿಯನ್ನು ಸಂಸ್ಥೆಗಳೇ ಗ್ರಾಹಕರಿಗೆ ವಿವಿಧ ಮಾಧ್ಯಮಗಳ ಮೂಲಕ ತಿಳಿಸಬೇಕು. ವೈಯಕ್ತಿಕವಾಗಿಯೂ ಗ್ರಾಹಕರಿಗೆ ತಿಳಿವಳಿಕೆ ನೀಡಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಲೀಡ್‌ಬ್ಯಾಂಕ್ ವ್ಯವಸ್ಥಾಪಕಿ ಸುನಂದಾ, ಸಹಕಾರ ಸಂಘಗಳ ಸಬ್‌ರಿಜಿಸ್ಟ್ರಾರ್‌ ಜೆ.ವಿಕ್ರಮರಾಜೇ ಅರಸ್, ಸಹಾಯಕ ರಿಜಿಸ್ಟ್ರಾರ್‌  ರಮೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಿ. ಬಸವರಾಜು, ವಿವಿಧ ಹಣಕಾಸು, ಬ್ಯಾಂಕ್‌ಗಳು, ಮೈಕ್ರೊ ಫೈನಾನ್ಸ್ ಸಂಸ್ಥೆಗಳ ವ್ಯವಸ್ಥಾಪಕರು, ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.

ಸಾಲ ಮರುಪಾವತಿ: ಜೂ.30ರವರೆಗೆ ಅವಕಾಶ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಸಹಕಾರ ಬ್ಯಾಂಕ್ ಹಾಗೂ ಪಿಕಾರ್ಡ್ ಬ್ಯಾಂಕ್‌ಗಳಿಂದ ಮಧ್ಯಮಾವಧಿ, ದೀರ್ಘಾವಧಿ ಸಾಲಗಳನ್ನು ಜನವರಿ ಅಂತ್ಯಕ್ಕೆ ಸುಸ್ತಿಯಾಗಿರುವ ಸಾಲಗಳನ್ನು ಜೂನ್ 30ರೊಳಗೆ ಸಂಪೂರ್ಣ ಅಸಲನ್ನು ರೈತರು ಪಾವತಿ ಮಾಡಿದರೆ ಸರ್ಕಾರವು ಬಡ್ಡಿಯನ್ನು ಭರಿಸಲಿದೆ.

₹3 ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಬೆಳೆಸಾಲ ಯೋಜನೆ, ಸ್ವ ಸಹಾಯ ಗುಂಪು, ಕಾಯಕ ಯೋಜನೆಯ ಚಾಲ್ತಿ ಸಾಲದ ಕಂತುಗಳನ್ನು ಜೂನ್ 30ರ ಒಳಗೆ ಪಾವತಿಸಿದರೆ, ಬಡ್ಡಿ ಸಹಾಯ ಧನವನ್ನು ಸರ್ಕಾರದಿಂದ ಭರಿಸಲಾಗುವುದು. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಹಕಾರ ಸಂಘಗಳ ಸಬ್‌ರಿಜಿಸ್ಟ್ರಾರ್‌ ಜೆ. ವಿಕ್ರಮರಾಜ್ ಅರಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು