ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರದ ನೆರೆ ಪ್ರದೇಶಗಳಿಗೆ ಡಿ.ಸಿ, ಶಾಸಕ ಭೇಟಿ

ಪ್ರವಾಹ ಪೀಡಿತರಿಗೆ ಧೈರ್ಯ ತುಂಬಿದ ಮುಖಂಡರು, ಅಧಿಕಾರಿಗಳು
Last Updated 5 ಸೆಪ್ಟೆಂಬರ್ 2022, 17:11 IST
ಅಕ್ಷರ ಗಾತ್ರ

ಚಾಮರಾಜನಗರ: ಪ್ರವಾಹದಿಂದ ತೊಂದರೆಗೆ ಒಳಗಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌, ಶಾಸಕ ಸಿ.ಪುಟ್ಟರಂಗ ಶೆಟ್ಟಿ, ವಿವಿಧ ಪಕ್ಷಗಳ ಮುಖಂಡರು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲಾಧಿಕಾರಿ ಸುವರ್ಣಾವತಿ ಹಾಗೂ ಚಿಕ್ಕಹೊಳೆ ಜಲಾಶಯಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಮುಂಜಾಗ್ರತಾ ಕ್ರಮ ಕೈಗೊಳ್ಳುವುದಕ್ಕಾಗಿ ಕಾಲಕಾಲಕ್ಕೆ ಹೊರ ಹರಿವಿನ ಮಾಹಿತಿ ನೀಡುವಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.

ಹರದನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ, ಅಂಚೆ ಕಚೇರಿ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು.

ಕಾಳಜಿ ಕೇಂದ್ರ: ಕೋಡಿ ಮೋಳೆ ಕೆರೆ ನೀರಿನ ಜಲಾವೃತಗೊಂಡ ಪ್ರದೇಶದ ನಿವಾಸಿಗಳಿಗಾಗಿ ಸಮುದಾಯ ಭವನದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಚಾರುಲತಾ ಕೋಡಿಮೋಳೆ ಜನರ ಅಹವಾಲು ಆಲಿಸಿ ಅಲ್ಲಿನ ಜಲಾವೃತ ಪ್ರದೇಶಗಳನ್ನು ವೀಕ್ಷಣೆ ಮಾಡಿದರು.

ನಾಗವಳ್ಳಿ,ಜ್ಯೋತಿಗೌಡನಪುರ ಭಾಗಗಳಿಗೂ ಭೇಟಿಕೊಟ್ಟರು. ತಹಶೀಲ್ದಾರ್ ಬಸವರಾಜು, ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್, ಸಹಾಯಕ ಎಂಜಿನಿಯರ್ ಮಹದೇವಸ್ವಾಮಿ, ಕಂದಾಯ ಇಲಾಖೆಯ ಅಧಿಕಾರಿಗಳು, ಆಯಾ ಭಾಗದ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು
ಇದ್ದರು.

ಪುಟ್ಟರಂಗಶೆಟ್ಟಿ ಭೇಟಿ:ತಾಲ್ಲೂಕಿನ ಹರದನಹಳ್ಳಿ, ಅಮಚವಾಡಿ, ದೊಡ್ಡಮೋಳೆ, ದಡದಹಳ್ಳಿ, ಕಾಗಲವಾಡಿಮೋಳೆ, ಜ್ಯೋತಿಗೌಡನಪುರ ಗ್ರಾಮಗಳಿಗೆ ಪುಟ್ಟರಂಗಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದರು.

ದಡದಹಳ್ಳಿ ಗ್ರಾಮದಲ್ಲಿ ಮನೆಗೋಡೆ ಕುಸಿತದಿಂದ ಮೃತಪಟ್ಟ ಮೂರ್ತಿ ಮನೆಗೆ ಭೇಟಿ ನೀಡಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.ಹರದನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರ, ಪಂಚಾಯಿತಿ ಕಚೇರಿ, ಸೆಸ್ಕ್ ಕಚೇರಿ ಆವರಣದಲ್ಲಿ ಮಳೆನೀರು ನಿಂತು ಜಲಾವೃತವಾಗಿರುವುದನ್ನು ಪರಿಶೀಲಿಸಿದರು.ಮರಗದಕೆರೆಯಿಂದ ದೊಡ್ಡಮೋಳೆ, ಚಿಕ್ಕಮೋಳೆ, ಚಂದುಕಟ್ಟೆಮೋಳೆ ಗ್ರಾಮಗಳಿಗೆ ನೀರುನುಗ್ಗಿದ ಪರಿಣಾಮ ಸೇತುವೆ ಹಾಳಾಗಿದ್ದು, ತಮ್ಮ ಗ್ರಾಮಕ್ಕೆ ತಾತ್ಕಾಲಿಕವಾಗಿ ಸೇತುವೆ ನಿರ್ಮಿಸಿಕೊಡಬೇಕು ಎಂದು ಗ್ರಾಮಸ್ಥರು ಶಾಸಕರಲ್ಲಿ ಮನವಿ ಮಾಡಿದರು.

ತಹಸೀಲ್ದಾರ್ ಬಸವರಾಜು, ಹರದನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋಧ, ಮುಖಂಡರಾದ ಬಿ.ಕೆ.ರವಿಕುಮಾರ್‌, ರಮೇಶ್, ಮಹದೇವಶೆಟ್ಟಿ, ಗ್ರಾಮಸ್ಥರು ಇದ್ದರು.

ರಾಮಚಂದ್ರ ಭೇಟಿ: ಪ್ರವಾಹದಿಂದ ತತ್ತರಿಸಿರುವಜ್ಯೋತಿಗೌಡನಪುರ ಗ್ರಾಮಕ್ಕೆ ಬಿಜೆಪಿ ಮುಖಂಡರಾದ ಎಂ.ರಾಮಚಂದ್ರ, ಅಮ್ಮನಪುರ ಮಲ್ಲೇಶ, ಬಿಜೆಪಿ ಜಿಲ್ಲಾ ವಕ್ತಾರ ಅಯ್ಯನಪುರ ಶಿವಕುಮಾರ್ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.

ತುರ್ತು ಸ್ಪಂದನೆಗೆ ಸೂಚನೆ

ಪ್ರವಾಹ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಜಲಾವೃತವಾಗಿರುವ ಗ್ರಾಮಗಳು ಹಾಗೂ ಇನ್ನಿತರ ಭಾಗಗಳಲ್ಲಿ ಪರಿಹಾರ ಕಾರ್ಯಾಚರಣೆ ಕೈಗೊಳ್ಳಬೇಕು. ಅಗತ್ಯವಿರುವ ಕಡೆಗಳಲ್ಲಿ ಅಗ್ನಿಶಾಮಕ ದಳ ಇನ್ನಿತರ ಸಿಬ್ಬಂದಿ ನೆರವಿನಿಂದ ನೀರು ತೆರವುಗೊಳಿಸುವ ಕಾರ್ಯವನ್ನು ಕೂಡಲೇ ನಿರ್ವಹಿಸಬೇಕು. ತೊಂದರೆಯಲ್ಲಿರುವ ಜನರ ನೆರವಿಗೆ ತುರ್ತಾಗಿ ಸ್ಪಂದಿಸುವಂತೆ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT