ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯಕ್ಕಿಂತ ಹೆಚ್ಚು ಆಸ್ತಿ: ಡಿಸಿಎಫ್‌ ಶಿವಶಂಕರಸ್ವಾಮಿ ಅಮಾನತು

Last Updated 11 ಅಕ್ಟೋಬರ್ 2021, 16:52 IST
ಅಕ್ಷರ ಗಾತ್ರ

ಚಾಮರಾಜನಗರ: ಅಕ್ರಮ ಸಂಪಾದನೆ ಆರೋಪದಲ್ಲಿ ಭ್ರಷ್ಟಾಚಾರ ನಿಗ್ರಹ ದಳದಿಂದ (ಎಸಿಬಿ) ತನಿಖೆಗೆ ಒಳಗಾಗಿದ್ದ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಟಿಂಬರ್‌ಯಾರ್ಡ್‌ ಘಟಕದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ಹಾಗೂ ಪ್ರಾದೇಶಿಕ ವ್ಯವಸ್ಥಾಪಕ ಪಿ.ಶಿವಶಂಕರಸ್ವಾಮಿ ಅವರನ್ನು ಕರ್ತವ್ಯದಿಂದ ಅಮಾನತು ‌ಮಾಡಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.

ಅವರು ಈ ಹಿಂದೆ ಮೈಸೂರಿನ ಶ್ರೀಗಂಧ ಕೋಠಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದರು. ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಆರೋಪದಲ್ಲಿ ಎಸಿಬಿ ಅಧಿಕಾರಿಗಳು 2020ರ ಡಿ.18ರಂದು ಮೈಸೂರಿನಲ್ಲಿರುವ ಅವರ ಮನೆ, ಕಚೇರಿ ಸೇರಿದಂತೆ ಐದು ಕಡೆ ದಾಳಿ ನಡೆಸಿದ್ದರು. ಅವರ ಆಸ್ತಿಗಳ ಬಗ್ಗೆ ಮಾಹಿತಿ ಕಲೆಹಾಕಿ ದಾಖಲೆ ವಶಪಡಿಸಿಕೊಂಡಿದ್ದರು.

ಪ್ರಕರಣದ ತನಿಖೆ ನಡೆಯುತ್ತಿದ್ದ ಸಂದರ್ಭದಲ್ಲೇ, ಕೆಲ ತಿಂಗಳ ಹಿಂದೆ ಅವರು ಡಿಸಿಎಫ್ ಹುದ್ದೆಗೆ ಬಡ್ತಿ ಹೊಂದಿದ್ದರು. ಶಿವಶಂಕರಸ್ವಾಮಿ ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ಶಿವಮೊಗ್ಗ ಎಸಿಬಿ ಪೊಲೀಸ್‌ ಠಾಣೆಯಲ್ಲಿ 2020ರ ಡಿ.17ರಂದು ದೂರು ದಾಖಲಾಗಿತ್ತು.

ಶೇ 249ರಷ್ಟು ಹೆಚ್ಚು ಆಸ್ತಿ: ಪ್ರಕರಣ ತನಿಖೆ ನಡೆಸಿದ್ದ ಅಧಿಕಾರಿಗಳು, ಶಿವಶಂಕರಸ್ವಾಮಿ ಅವರ ಚರ ಹಾಗೂ ಸ್ಥಿರ ಆಸ್ತಿಯ ಮೌಲ್ಯ ₹3,84,28,812 ಎಂದು ಅಂದಾಜಿಸಿದ್ದರು. ಖರ್ಚು ವೆಚ್ಚವನ್ನು ₹ 62 ಲಕ್ಷ ಎಂದು ಗುರುತಿಸಲಾಗಿತ್ತು.ಅವರ ಕುಟುಂಬದ ಎಲ್ಲ ಮೂಲಗಳ ಆದಾಯ ₹1.10 ಕೋಟಿ ಎಂದು ಅಂದಾಜಿಸಲಾಗಿತ್ತು.

ಶಿವಶಂಕರಸ್ವಾಮಿ ಹೆಚ್ಚುವರಿಯಾಗಿ ₹2,74,28,912 ಮೌಲ್ಯದ ಸ್ಥಿರ ಹಾಗೂ ಚರಾಸ್ತಿ ಗಳಿಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿತ್ತು. ಶೇ 249.35ರಷ್ಟು ಹೆಚ್ಚು ಸಂಪಾದನೆ ಮಾಡಿರುವುದು ದೃಢಪಟ್ಟಿದೆ ಎಂದು ವರದಿ ಹೇಳಿತ್ತು.

ಅಕ್ರಮ ಆಸ್ತಿ ಸಂಪಾದನೆ ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಶಿವಶಂಕರಸ್ವಾಮಿ ಅವರನ್ನು ಅಮಾನತಿನಲ್ಲಿ ಇರಿಸಬೇಕೆಂದು ಭ್ರಷ್ಟಾಚಾರ ನಿಗ್ರಹ ದಳದ ಎಡಿಜಿಪಿ, ಅರಣ್ಯ ಇಲಾಖೆಗೆ ಪತ್ರ ಬರೆದಿದ್ದರು. ದಾಖಲೆಗಳನ್ನು ಪರಿಶೀಲಿಸಿರುವ ಅರಣ್ಯ ಇಲಾಖೆ, ಶಿವಶಂಕರಸ್ವಾಮಿ ವಿರುದ್ಧ ಶಿಸ್ತು ಕ್ರಮ ವಹಿಸುವುದನ್ನು ಬಾಕಿ ಇರಿಸಿ ಅಮಾನತು ಮಾಡಿ ಇದೇ 8ರಂದು ಆದೇಶ ಹೊರಡಿಸಿದೆ.

ಹಿಂದೆಯೂ ಅಮಾನತು!
ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿಯೂ ಶಿವಶಂಕರಸ್ವಾಮಿ, ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದರು. 2017ರಲ್ಲಿ ಪುಣಜನೂರು ವನ್ಯಜೀವಿ ವಲಯದ ಬೇಡಗುಳಿಯಲ್ಲಿ ರಜಾಕ್‌ ಎಂಬ ವ್ಯಕ್ತಿಯೊಂದಿಗೆ ಸೇರಿ ಸಿಲ್ವರ್‌ ಓಕ್‌ ಮರಗಳನ್ನು ಕಡಿದು ಸಾಗಣೆ ಮಾಡಿದ ಆರೋಪದಲ್ಲಿ ಅವರನ್ನು ಅಮಾನತು ಮಾಡಲಾಗಿತ್ತು. ಮರಗಳ ಕಡಿತಲೆಯಿಂದ ಇಲಾಖೆಗೆ ₹10.52 ಲಕ್ಷ ನಷ್ಟವಾಗಿದೆಎಂದು ಹೇಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT