ಸೋಮವಾರ, ಸೆಪ್ಟೆಂಬರ್ 27, 2021
29 °C
ಹನೂರು; ಮಳೆಯಾಶ್ರಿತ ಪ್ರದೇಶವೇ ಹೆಚ್ಚು, ಮುಂಗಾರು ಪೂರ್ವ ಮಳೆ ಕಡಿಮೆ; ಕೃಷಿಯಿಂದ ರೈತರು ದೂರ

ಮಳೆ ನಿಧಾನ; ಬಿತ್ತನೆ ಆಮೆ ನಡಿಗೆ

ಬಿ. ಬಸವರಾಜು Updated:

ಅಕ್ಷರ ಗಾತ್ರ : | |

Prajavani

ಹನೂರು: ತಾಲ್ಲೂಕಿನಲ್ಲಿ ಈ ವರ್ಷ ಮುಂಗಾರು ಪೂರ್ವ ಮಳೆ ಪ್ರಮಾಣ ಕಡಿಮೆಯಾಗಿರುವುದು ಮುಂಗಾರು ಅವಧಿಯ ಬಿತ್ತನೆಯ ಮೇಲೂ ಪರಿಣಾಮ ಬೀರಿದೆ. ನೈರುತ್ಯ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರೂ, ಬಿತ್ತನೆ ಪ್ರಮಾಣ ಶೇ 40ರಷ್ಟನ್ನು ದಾಟಿಲ್ಲ. 

ವಾರದಿಂದ ಉತ್ತಮ ಮಳೆ ಯಾಗುತ್ತಿರುವುದರಿಂದ ರೈತರು ಕೃಷಿ ಚಟುವಟಿಕೆಗಳಿಗೆ ವೇಗ ನೀಡಿದ್ದಾರೆ. ಬಿತ್ತನೆ ನಡೆಸುತ್ತಿದ್ದಾರೆ. 

ತಾಲ್ಲೂಕಿನಲ್ಲಿ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ 32,570 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿಯನ್ನು ಕೃಷಿ ಇಲಾಖೆ ಹಾಕಿಕೊಂಡಿದೆ. ಆ.13ರವರೆಗೆ 11,747 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಶೇಕಡವಾರು ಲೆಕ್ಕಾಚಾರದಲ್ಲಿ ಶೇ 36.05ರಷ್ಟು ಪ್ರದೇಶದಲ್ಲಿ ಕೃಷಿಕರು ಬಿತ್ತನೆ ಪೂರ್ಣಗೊಳಿಸಿದ್ದಾರೆ. ತಾಲ್ಲೂಕು ವ್ಯಾಪ್ತಿಯಲ್ಲಿ ಮೂರು ಹೋಬಳಿಗಳಿದ್ದು, ಬಹುತೇಕ ರೈತರು ಕೃಷಿಗೆ ಮಳೆಯನ್ನೇ ಆಶ್ರಯಿಸಿದ್ದಾರೆ. ಜಲಾಶಯಗಳ ಸಮೀದಲ್ಲಿರುವ ಅಲ್ಪ ಜಮೀನುಗಯಲ್ಲಿ ನೀರಾವರಿ ಕೃಷಿ ನಡೆಸಲಾಗುತ್ತದೆ.   

ತಾಲ್ಲೂಕಿನಲ್ಲಿ ರಾಗಿ ಹಾಗೂ ಮುಸುಕಿನ ಜೋಳವನ್ನು ಪ್ರಧಾನವಾಗಿ ಬೆಳೆಯಾಗುತ್ತದೆ. ಬಿತ್ತನೆಯ ಒಟ್ಟು ಗುರಿಯಲ್ಲಿ ಶೇ 70–80ರಷ್ಟು ಪ್ರದೇಶದಲ್ಲಿ ಇವೆರಡನ್ನೇ ಬೆಳೆಯಲಾಗುತ್ತದೆ. 

ಈ ಬಾರಿ 13 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲು ಉದ್ದೇಶಿಸಲಾಗಿದ್ದು, 4,480 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. 13,300 ಹೆಕ್ಟೇರ್‌ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆಗೆ ಯೋಜಿಸಲಾಗಿದ್ದು, 2,470 ಹೆಕ್ಟೇರ್‌ನಲ್ಲಿ ಬಿತ್ತನೆ ನಡೆದಿದೆ. ನೆಲಗಡಲೆ ಬಿತ್ತಲು 1,090 ಹೆಕ್ಟೇರ್ ಗುರಿ ನಿಗದಿಪಡಿಸಿದ್ದು, 640 ಹೆಕ್ಟೇರ್ ಜಾಗದಲ್ಲಿ ಬಿತ್ತನೆಯಾಗಿದೆ.

ರಾಮಾಪುರ ಮತ್ತು ಹನೂರು ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಬಿತ್ತನೆ ನಡೆದಿಲ್ಲ. ಈ ಮೂರೂ ಬೆಳೆಗಳ ಬಿತ್ತನೆಗೆ ಈ ತಿಂಗಳ ಕೊನೆಯವರೆಗೂ ಅವಕಾಶ ಇದೆ. ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ರೈತರು ಬಿರುಸಿನಿಂದ ಬಿತ್ತನೆ ನಡೆಸುತ್ತಿದ್ದಾರೆ. ತಿಂಗಳಾಂತ್ಯಕ್ಕೆ ಬಹುತೇಕ ಗುರಿ ತಲುಪುವ ನಿರೀಕ್ಷೆ ಇದೆ ಎಂದು ಹೇಳುತ್ತಾರೆ ಕೃಷಿ ಅಧಿಕಾರಿಗಳು.

ಮುಂಗಾರು ಉತ್ತಮ: ತಾಲ್ಲೂಕಿನಲ್ಲಿ ಮುಂಗಾರು ಅವಧಿಯಲ್ಲಿ ಮಳೆ ಚೆನ್ನಾಗಿ ಆಗಿದೆ. ಮುಂಗಾರು ಪೂರ್ವದಲ್ಲಿ ಮಳೆಯಾಗದೇ ಇದ್ದುದರಿಂದ ಕೃಷಿಗೆ ಹೊಡೆತ ಬಿದ್ದಿದೆ. ಮಳೆಯ ನಿರೀಕ್ಷೆಯಲ್ಲಿದ್ದ ರೈತರು, ಬಿತ್ತನೆಗೆ ಹಿಂದೇಟು ಹಾಕಿದ್ದರು. 

ಜನವರಿಯಿಂದ ಇಲ್ಲಿಯವರೆಗೆ ತಾಲ್ಲೂಕಿನಲ್ಲಿ ಬಿದ್ದ ಮಳೆಯ ಅಂಕಿ ಅಂಶಗಳನ್ನು ಗಮನಿಸಿದರೆ ಈ ವರ್ಷ ಶೇ 3ರಷ್ಟು ಹೆಚ್ಚೇ ಮಳೆಯಾಗಿದೆ. ವಾಡಿಕೆಯಲ್ಲಿ 31.38 ಸೆಂ.ಮೀಗಳಷ್ಟು ಮಳೆಯಾಗುತ್ತದೆ. ಈ ಬಾರಿ 32.47 ಸೆಂ.ಮೀ ಮಳೆ ಬಿದ್ದಿದೆ. ಜೂನ್‌ 1ರಿಂದ ಇಲ್ಲಿಯವರೆಗೆ (ಮುಂಗಾರು ಅವಧಿ) ಸಾಮಾನ್ಯವಾಗಿ 12.16 ಸೆಂ.ಮೀ ಮಳೆಯಾಗುತ್ತದೆ. ಈ ಬಾರಿ 16.52 ಸೆಂ.ಮೀನಷ್ಟು ವರ್ಷಧಾರೆ ಸುರಿದಿದೆ.

ಆಗಸ್ಟ್‌ನಲ್ಲಿ ಇದುವರೆಗೆ 1.09 ಸೆಂ.ಮೀ ಮಳೆಯಾಗಿದ್ದು, ವಾಡಿಕೆಯಲ್ಲಿ 2.36 ಸೆಂ.ಮೀ ಮಳೆ ಬಿದ್ದಿದೆ. ಶೇ 11ರಷ್ಟು ಮಳೆ ಕೊರತೆ ಉಂಟಾಗಿದೆ. ಇನ್ನೂ ಕೆಲವು ದಿನಗಳ ಕಾಲ ಮಳೆಯಾಗಲಿರುವುದರಿಂದ ಕೊರತೆ ನೀಗಬಹುದು ಎಂಬ ನಿರೀಕ್ಷೆಯಲ್ಲಿ ರೈತರು, ಅಧಿಕಾರಿಗಳು ಇದ್ದಾರೆ. 

ಸೂರ್ಯಕಾಂತಿಯತ್ತ ರೈತರ ಒಲವು

ತಾಲ್ಲೂಕಿನಾದ್ಯಂತ ಬಹುತೇಕ ಭಾಗಗಳಲ್ಲಿ ರೈತರು ಮುಂಗಾರು ಪೂರ್ವದಲ್ಲಿ ಹೆಚ್ಚಾಗಿ ಎಳ್ಳು ಮತ್ತು ಸಜ್ಜೆ (ಕಂಬು) ಬೆಳೆಯುತ್ತಿದ್ದರು. ಆದರೆ, ಈ ಬಾರಿ ಸೂರ್ಯಕಾಂತಿಯನ್ನು ಹೆಚ್ಚು ಬೆಳೆದಿದ್ದಾರೆ. 

ಕೃಷಿ ಇಲಾಖೆಯು ಕೇವಲ 20 ಹೆಕ್ಟೇರ್‌ ಪ್ರದೇಶದಲ್ಲಿ ಸೂರ್ಯಕಾಂತಿ ಬಿತ್ತನೆ ಗುರಿ ಹೊಂದಿತ್ತು. ರೈತರು 308 ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದಾರೆ. 

ಕಳೆದ ವರ್ಷ ಕ್ವಿಂಟಲ್‌ಗೆ ₹6,000ದವರೆಗೆ ಬೆಲೆ ಇತ್ತು. ಈಗಲೂ ₹5,800ರಷ್ಟು ಬೆಲೆ ಇದೆ. ಕಡಿಮೆ ಖರ್ಚಿನಲ್ಲಿ ಬೆಳೆಯಬಹುದಾಗಿರುವುದರಿಂದ ಸೂರ್ಯಕಾಂತಿ ಬೆಳೆಯಲು ಮುಂದಾಗುತ್ತಿದ್ದೇವೆ ಎಂದು ಹೇಳುತ್ತಾರೆ ರೈತರು.

---

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ತಾಲ್ಲೂಕಿನಲ್ಲಿ ಮುಂಗಾರು ಪೂರ್ವ ಮಳೆ ಕಡಿಮೆಯಾಗಿದೆ. ಈ ತಿಂಗಳ ಅಂತ್ಯದವರೆಗೆ ಬಿತ್ತನೆಗೆ ಅವಕಾಶವಿದೆ.

ಎಂ.ರಘುವೀರ್,ಕೃಷಿ ಅಧಿಕಾರಿ, ಹನೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.