ಯಳಂದೂರು: ಗೌರಿ ಗಣೇಶ ಹಬ್ಬಕ್ಕೆ ಒಂದು ವಾರ ಬಾಕಿ ಇದ್ದು ಪೇಟೆ, ಪಟ್ಟಣಗಳಲ್ಲಿ ವಿವಿಧ ನಮೂನೆಯ ಗಣೇಶ ಮೂರ್ತಿಗಳ ತಯಾರಿ ಭರದಿಂದ ಸಾಗಿದೆ. ಯುವಕರು ಅಂದಚಂದದಿಂದ ಕಂಗೊಳಿಸುವ ಗೌರಿ ಸುತನನ್ನು ಪ್ರತಿಷ್ಠಾಪಿಸಲು ಮುಂಗಡ ಕಾಯ್ದಿರಿಸುವತ್ತ ಚಿತ್ತ ಹರಿಸಿದ್ದಾರೆ. ಈ ನಡುವೆ ಪರಿಸರ ಪ್ರಿಯರು ರಸಾಯನಿಕ ರಹಿತ, ಪರಿಸರ ಸ್ನೇಹಿ ಗಣಪನ ಹುಡುಕಾಟದಲ್ಲಿದ್ದಾರೆ.
ತಾಲ್ಲೂಕಿನ ಮಾರುಕಟ್ಟೆಯಲ್ಲಿ ಮೈಸೂರು, ಶ್ರೀರಂಗಪಟ್ಟಣದಲ್ಲಿ ನಿರ್ಮಾಣವಾಗಿರುವಗಜಾನನ ಮೂರ್ತಿಗಳು ಹೆಚ್ಚಿನ ಸಂಕ್ಯೆಯಲ್ಲಿವೆ. ಈ ನಡುವೆ ಪಿಒಪಿ ಹಾಗೂ ರಾಸಾಯನಿಕ ರಹಿತ ಗಣೇಶನ ಮಾರಾಟಕ್ಕೆ ಮಾತ್ರ ಜಿಲ್ಲಾಡಳಿತ ಅನುಮತಿ ನೀಡಿರುವುದು ನೆಲಮೂಲ ಸಂಸ್ಕೃತಿಯ ಮಣ್ಣಿನ ಗಣಪನ ಪ್ರತಿಷ್ಠಾಪನೆಗೆ ಸಾರ್ವಜನಿಕರು ಹೆಚ್ಚು ಒಲವು ತೋರುತ್ತಿರುವುದು ಕಂಡುಬಂದಿದೆ.
ಈ ಬಾರಿ ವರುಣ ಕೆರೆಕಟ್ಟೆ ತುಂಬಿಸುವ ಆಶಾಭಾವ ಮೂಡಿಸಿರುವ ಹಿನ್ನೆಲೆಯಲ್ಲಿ ಗಣಪತಿ ಹಬ್ಬದ ಆಚರಣೆ ಕಳೆಗಟ್ಟುತ್ತಿದೆ. ಪೇಟೆಯಲ್ಲಿ ಮೋದಿ ಗಣೇಶ, ಹನುಮಂತ ಮಾದರಿಯ ಗಣೇಶ, ಬಾಲ ಗಣಪತಿ, ಕ್ಷೇಮನಾಥ, ಪಿಟೀಲು ಹಿಡಿದ ಗಣಪತಿ ಹಾಗೂ ನಂದಿ ಗಣದೊಂದಿಗೆ ವಿಜೃಂಭಿಸುವ ಬಗೆ ಬಗೆಯ ವಿಗ್ರಹಗಳು ಗಮನ ಸೆಳೆಯುತ್ತಿವೆ.
ಗಣೇಶನನ್ನು ಆವರಿಸಿರುವ ಅಲಂಕಾರ, ಕಿರೀಟ, ಚತುರ್ಭಜದ ವೇಶ, ಭೂಷಣದಿಂದ ಬೆಲೆ ಹೆಚ್ಚಾಗಿದೆ ಎನ್ನುತ್ತಾರೆ ಎನ್ನುತ್ತಾರೆ ವ್ಯಾಪಾರಿ ಸೋಮಣ್ಣ.
ಜಲಮೂಲಗಳ ರಕ್ಷಣೆ ಮತ್ತು ಸಾರ್ವಜನಿಕರ ಆರೋಗ್ಯ ಹಾಗೂ ಸುರಕ್ಷತೆಯ ಹಿತದೃಷ್ಟಿಯಿಂದ ನಿಸರ್ಗ ಸ್ನೇಹಿ ಹಾಗೂ ಮಣ್ಣಿನ ಮೂರ್ತಿಗಳನ್ನು ಮಾತ್ರ ಮಾರಾಟ ಮಾಡಲು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಗಣೇಶನ ಪ್ರತಿಷ್ಠಾಪನೆಗೆ ಬೇಕಾದ ಸ್ಥಳ, ಪೆಂಡಾಲ್, ವಿದ್ಯುತ್ ಸಂಪರ್ಕಗಳನ್ನು ಏಕಗವಾಕ್ಷಿ ಪದ್ಧತಿಯಲ್ಲಿ ಪಡೆಯಬೇಕು. ಬ್ಯಾನರ್ ಮತ್ತು ಬಂಟಿಂಗ್ಸ್, ಧ್ವನಿವರ್ಧಕ ಬಳಕೆಗೆ ಪರವಾನಗಿ ಅಗತ್ಯ ಎಂದು ತಹಶಿಲ್ದಾರ್ ಆರ್.ಜಯಪ್ರಕಾಶ್ ತಿಳಿಸಿದರು.
ಮಣ್ಣಿನ ಜೊತೆ ಪಿಒಪಿ ಸೇರಿಸಿ ಸಿದ್ಧಪಡಿಸಿದ ಗಣಪತಿಯ ಮೂರ್ತಿಗಳು ಮಾರುಕಟ್ಟೆಗೆ ಬಂದಿದ್ದು ಗುರುತಿಸುವುದೇ ಸವಾಲಾಗಿದೆ. ಮಣ್ಣಿನ ಮೂರ್ತಿಗಳನ್ನು ಗುರುತಿಸಲಾಗದಷ್ಟೂ ವರ್ಣಮಯವಾಗಿ ಮೂರ್ತಿಗಳನ್ನು ನಿರ್ಮಿಸಲಾಗಿದೆ. ಪಿಒಪಿ ಸೇರಿಸಿ ಮಣ್ಣಿನ ಗಣಪ ನಿರ್ಮಾಣ ಮಾಡಲು ಅನುಮತಿ ಇಲ್ಲ ಎನ್ನುತ್ತಾರೆ ಅಧಿಕಾರಿಗಳು
ಪಿಪಿಪಿ ಮೂರ್ತಿಗಳ ಹಾವಳಿ ಇದ್ದರೂ ನೈಸರ್ಗಿಕ ವರ್ಣದಲ್ಲಿ ಮೂಡಿಬಂದಿರುವ ವಿನಾಯಕನ ಖರೀದಿಗೆ ಸಾರ್ವನಿಕರು ಒಲವು ತೋರುತ್ತಿದ್ದಾರೆ. ಮಾರುಕಟ್ಟೆಯಲ್ಲಿ ₹ 100 ರಿಂದ 10 ಸಾವಿರ ಮೌಲ್ಯದವರೆಗೂ ಸಹಜ ಸುಂದರ ಗಣೇಶ ಮೂರ್ತಿಗಳ ಮಾರಾಟ ನಡೆದಿದೆ ಎನ್ನುತ್ತಾರೆ ಮಾರಾಟಗಾರ ಕಂದಹಳ್ಳಿ ಮನು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.