ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರೂಪದ ಚಿತ್ರ ಕಲಾವಿದ ಮೂರ್ತಿ

ಕೊಳ್ಳೇಗಾಲ: ಸ್ವ ಆಸಕ್ತಿಯಿಂದ ಕಲಿತ ಕಲೆ ಇಂದು ಬದುಕಿಗೆ ದಾರಿ ದೀಪ
Last Updated 28 ಆಗಸ್ಟ್ 2019, 14:56 IST
ಅಕ್ಷರ ಗಾತ್ರ

ಕೊಳ್ಳೇಗಾಲ: ತಮ್ಮೆದುರು ಕುಳಿತ ವ್ಯಕ್ತಿಯ ಚಿತ್ರವನ್ನು ಪಟಪಟನೆ ಬಿಡಿಸುವ ಕಲೆಯನ್ನು ಒಲಿಸಿಕೊಂಡಿರುವ ಜೆ.ಮೂರ್ತಿ ಅವರು ಅಪರೂಪದ ಕಲಾವಿದ. ಚಿತ್ರಕಲೆಯನ್ನು ಶೈಕ್ಷಣಿಕವಾಗಿ ಅಧ್ಯಯನ ಮಾಡದೇ ಸ್ವ ಆಸಕ್ತಿಯಿಂದ ಕಲಿತವರು.

ಪೆನ್ಸಿಲ್‌, ಬಣ್ಣ ಯಾವುದರಲ್ಲಾದರೂ ಸರಿ, ಕ್ಷಿಪ್ರವಾಗಿ ಚಿತ್ರವನ್ನು ಬಿಡಿಸುತ್ತಾರೆ. ಮಾತುಗಾರಿಕೆಯಲ್ಲೂ ಪಳಗಿರುವ ಅವರು ಮೈಕ್ ಹಿಡಿದರೆ ಸಾಕು, ಸಭಿಕರಿಗೆ ಮಾತಿನಲ್ಲೇ ಮೋಡಿ ಮಾಡುತ್ತಾರೆ. ಹಾಡುಗಾರರಾಗಿಯೂ ಗಮನ ಸೆಳೆದಿದ್ದಾರೆ.

ನಗರದ ಬಳಿಯ ಮುಡಿಗುಂಡ ಬಡಾವಣೆಯ ನಿವಾಸಿ ಮೂರ್ತಿ ಅವರು ಕಷ್ಟದಲ್ಲೇ ಬೆಳೆದು ಬಂದವರು. ಅವರ ತಂದೆ ಜವರಯ್ಯ ಗಾರೆ ಕೆಲಸಗಾರರು. ಕಷ್ಟಪಟ್ಟು ಮೂರ್ತಿ ಅವರನ್ನು ಬೆಳೆಸಿದ್ದಾರೆ. ಬಿಎಸ್ಸಿ ಪದವಿವರೆಗೆ ಶಿಕ್ಷಣವನ್ನೂ ಕೊಡಿಸಿದ್ದಾರೆ.

ಬಾಲ್ಯದ ಆಸಕ್ತಿ: ಮೂರ್ತಿ ಅವರಿಗೆ ಬಾಲ್ಯದಲ್ಲೇ ಚಿತ್ರಕಲೆಯಲ್ಲಿ ಆಸಕ್ತಿ ಇತ್ತು. ಚಿತ್ರ ಬಿಡಿಸುವುದು ಅವರಿಗೆ ಚಟವೇ ಆಗಿತ್ತು. ಯಾವುದೇ ವಸ್ತು ನೋಡಿದರೆ ಸಾಕು ಅದನ್ನು ಬಣ್ಣದಲ್ಲಿ ಹಿಡಿದಿಡುವ ಪ್ರಯತ್ನ ಮಾಡುತ್ತಿದ್ದರು.

ಪೆನ್ಸಿಲ್ ಚಿತ್ರ, ತೈಲವರ್ಣ, ವರ್ಲಿ ಕಲೆ, ಜಲವರ್ಣ ಚಿತ್ರ, ಚಾರ್ಕೋಲ್ ಚಿತ್ರಕಲೆಗಳಲ್ಲಿ (ಮಸಿ ಚಿತ್ರ), ಪರಿಣತಿ ಸಾಧಿಸಿದ್ದಾರೆ. ಥರ್ಮಾಕೋಲ್‌ ಬಳಸಿ ಬೃಹತ್ ವೇದಿಕೆಯ ವಿನ್ಯಾಸವನ್ನೂ ಮಾಡುತ್ತಾರೆ.ಬಣ್ಣಗಳ ಸಂಯೋಜನೆಯಲ್ಲೂ ಇವರ ಕೈ ಚಳಕ ಗುರುತಿಸಬಹುದು.

ನಿಸರ್ಗದ ನೋಟ, ಖಗ ಮೃಗಗಳ ದಿಟ್ಟ ನೋಟ, ದೇವ ದೇವಿಯರ ಸರಸ ಸಲ್ಲಾಪಗಳೂ ಇವರ ಕುಂಚದಲ್ಲ ಮೈದಳೆದಿವೆ. ಇದುವರೆಗೂ ಮೂರ್ತಿ ಅವರು 500ಕ್ಕೂ ಹೆಚ್ಚು ಮಹನೀಯರು, ರಾಜಕೀಯ ಮುಖಂಡರು, ಚಿತ್ರ ನಟರ ಪೆನ್ಸಿಲ್ ಚಿತ್ರಗಳನ್ನು ಬಿಡಿಸಿದ್ದಾರೆ. 200ಕ್ಕೂ ಹೆಚ್ಚು ಕಲಾಕೃತಿಗಳನ್ನು ಬಿಡಿಸಿ ಉಡುಗೊರೆಯಾಗಿ ನೀಡಿದ್ದಾರೆ.

ಉಚಿತ ತರಬೇತಿ:ಮಕ್ಕಳ ಶಿಬಿರಗಳಲ್ಲಿ ಉಚಿತವಾಗಿ ಚಿತ್ರಕಲೆ ಬಿಡಿಸುವುದನ್ನು ಕಲಿಸಿಕೊಡುತ್ತಾರೆ. ಈಗಲೂ ಕೆಲ ಮಕ್ಕಳಿಗೆ ಮನೆಯಲ್ಲಿ ಚಿತ್ರಕಲೆಯ ಮಾರ್ಗದರ್ಶನ ನೀಡುತ್ತಾರೆ.

ಇವರ ಚಿತ್ರಕಲೆಗೆ ರಾಜ್ಯ ಮಟ್ಟದ, ಜಿಲ್ಲಾ ಮಟ್ಟ, ತಾಲ್ಲೂಕು ಮಟ್ಟದಲ್ಲಿ ಅನೇಕ ಗೌರವ ಬಹುಮಾನಗಳು ಸಿಕ್ಕಿವೆ. ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಹಾಡುಗಾರಿಕೆಗೂ ಸೈ

ಮೂರ್ತಿ ಅವರು ಉತ್ತಮ ಗಾಯಕರೂ ಹೌದು. ‘ಜೋಗಿ ರಂಗ ಜೋಳಿಗೆ’ ಎಂಬ ಸಾಂಸ್ಕೃತಿಕ ಸಂಸ್ಥೆಯನ್ನು ಹುಟ್ಟು ಹಾಕಿ ಗಾಯಕರಿಗೆ ವೇದಿಕೆ ಕಲ್ಪಿಸುತ್ತಿದ್ದಾರೆ. ಜೊತೆಗೆ ಜಾನಪದ ಕಲೆ ಉಳಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT