ಶುಕ್ರವಾರ, ಜೂನ್ 25, 2021
30 °C
ಡಿ.ದೇವರಾಜು ಅರಸು ಜನ್ಮದಿನ

ಶೋಷಿತ ವರ್ಗಗಳ ದನಿಯಾಗಿದ್ದ ನಾಯಕ: ಶಾಸಕ ಎನ್‌.ಮಹೇಶ್‌ ಬಣ್ಣನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ವಿಶಿಷ್ಟ ವ್ಯಕ್ತಿತ್ವವುಳ್ಳ, ಜನಪರ ಕಾಳಜಿ ಹೊಂದಿದ್ದ ದೇವರಾಜ ಅರಸು ಅವರು ತಾರತಮ್ಯದಿಂದ ಕೂಡಿದ್ದ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮನಾವಕಾಶ ಕಲ್ಪಿಸಲು ಮುಂದಾದರು. ಅವರು ಶೋಷಿತ ಸಮುದಾಯಗಳ ದನಿಯಾಗಿದ್ದರು’ ಎಂದು ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರು ಬಣ್ಣಿಸಿದರು. 

ಜಿಲ್ಲಾಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಗುರುವಾರ ಸರಳವಾಗಿ ಹಮ್ಮಿಕೊಂಡಿದ್ದ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಅರಸು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.

‘ವಿವಿಧ ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯದ ವ್ಯವಸ್ಥಿತ ಅಭಿವೃದ್ಧಿಯ ದಿಕ್ಸೂಚಿಯಾಗಿದ್ದ ಡಿ. ದೇವರಾಜು ಅರಸು ಅವರು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಧ್ಯೇಯವನ್ನು ಹೊಂದಿದ್ದರು. ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿ ತಮ್ಮ ಆಡಳಿತಾವಧಿಯಲ್ಲಿ ಅನೇಕ ಜನಪರ ಅಭಿವೃದ್ಧಿ ಯೋಜನೆಗಳ ಕೊಡುಗೆ ನೀಡಿ ದಿಟ್ಟತನ ಮೆರೆದರು’ ಎಂದರು.

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳನ್ನು ಮಾತ್ರವಲ್ಲದೇ ಉಳಿದ ಎಲ್ಲ ಜಾತಿಗಳನ್ನು ಗುರುತಿಸುವ ಸಲುವಾಗಿ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಾನೂನು ಸಚಿವರಾಗಿದ್ದ ಹಾವನೂರು ಅವರ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗಗಳ ಆಯೋಗ ರಚಿಸಿದರು. ಆಯೋಗದ ವರದಿ ಆಧಾರದಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಗತಿಗಾಗಿ ಅವರನ್ನು ಗುರುತಿಸಿ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಅನೇಕ ಯೋಜನೆಗಳನ್ನು ಜಾರಿಗೊಳಿಸಿದರು’ ಎಂದು ಹೇಳಿದರು. 

‘ಭೂ ಸುಧಾರಣೆ ಕಾಯ್ದೆಯನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಉಳುವವರಿಗೆ ಭೂಮಿ ನೀಡಿದರು. ಜೀತ ವಿಮುಕ್ತ ಕಾಯ್ದೆಯನ್ನು ಜಾರಿಗೆ ತಂದು ಲಕ್ಷಾಂತರ ಜನರನ್ನು ಜೀತದಿಂದ ಬಿಡುಗಡೆಗೊಳಿಸಿದರು. ಸಣ್ಣ, ಅತಿ ಸಣ್ಣ ಸಾಲಗಾರರಿಗಾಗಿ ಋಣಮುಕ್ತ ಕಾಯ್ದೆಯನ್ನೂ ಜಾರಿಗೆ ತಂದು ಕಡು ಬಡವರಿಗೆ ಅನುಕೂಲ ಮಾಡಿಕೊಟ್ಟರು’ ಎಂದರು.  

‘ಮನೆ ಮನೆಗಳಿಗೆ ಬೆಳಕನ್ನು ನೀಡುವ ಸಲುವಾಗಿ ಭಾಗ್ಯಜ್ಯೋತಿ ಯೋಜನೆಯನ್ನು ಜಾರಿಗೊಳಿಸಿದರು. ಮಲ ಹೊರುವ ಪದ್ಧತಿಯನ್ನು ನಿಷೇಧಿಸಿದರು. ಜಾತಿಪದ್ದತಿ ನಿರ್ಮೂಲನೆಗಾಗಿ ಶ್ರಮಿಸಿದ ದೇವರಾಜ ಅರಸು ಅವರು ತಮ್ಮ ಆಡಳಿತಾವಧಿಯಲ್ಲಿ ಎಲ್ಲರ ಶ್ರೇಯೋಭಿವೃದ್ಧಿಗಾಗಿ ಕ್ರಮಗಳನ್ನು ಕೈಗೊಂಡರು’ ಎಂದು ಅಭಿಪ್ರಾಯಪಟ್ಟರು. 

ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಶಶಿಕಲಾ ಅವರು ಮಾತನಾಡಿ,  ‘ಹಿಂದುಳಿದ ವರ್ಗಗಳ ಹರಿಕಾರರಾದ ದೇವರಾಜ ಅರಸು ಅವರು ಅಸಾಮಾನ್ಯ ಧೀಮಂತ ರಾಜಕಾರಣಿಯಾಗಿದ್ದವರು. ಇವರ ಅತ್ಯಮೌಲ್ಯ ಆಲೋಚನೆ ಹಾಗೂ ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ಮುಂದುವರಿಸಿಕೊಂಡು ಹೋಗಬೇಕು. ಅರಸು ಅವರು ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದ ಪ್ರಬುದ್ಧ ರಾಜಕಾರಣಿಯಾಗಿದ್ದರು’ ಎಂದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಬಿ ಹದ್ದಣ್ಣವರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಧರಣೇಶ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಹೊನ್ನೇಗೌಡ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚಂದ್ರಕಲಾ, ಮುಖಂಡರಾದ ಗೋವಿಂದರಾಜು, ವಿವಿಧ ಇಲಾಖೆಯ ಅಧಿಕಾರಿ ಸಿಬ್ಬಂದಿ, ಹಿಂದುಳಿದ ವರ್ಗಗಳ ಮುಖಂಡರು, ಹಾಗೂ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು