ಅಪಘಾತ: ಹೊತ್ತಿ ಉರಿದ ಮಾದಪ್ಪನ ಭಕ್ತರ ಕಾರು, ಆರು ಮಂದಿಗೆ ಗಾಯ

ಹನೂರು: ತಾಲ್ಲೂಕಿನ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದ ಮಲೆಮಹದೇಶ್ವರ ಸ್ವಾಮಿಯ ದರ್ಶನಕ್ಕೆಂದು ಬರುತ್ತಿದ್ದ ಭಕ್ತರ ಕಾರು ತಾಳಬೆಟ್ಟ ಸಮೀಪ ಅಪಘಾತಕ್ಕೀಡಾಗಿ ಹೊತ್ತಿ ಉರಿದು ಆರು ಮಂದಿ ಗಾಯಗೊಂಡಿದ್ದಾರೆ.
ಭಾನುವಾರ ತಡ ರಾತ್ರಿ 1.30ರ ಸುಮಾರಿಗೆ ಘಟನೆ ನಡೆದಿದೆ.
ಘಟನೆಯಲ್ಲಿ ಮೈಸೂರು ಜಿಲ್ಲೆಯ ವಾಜ ಮಂಗಲ ಗ್ರಾಮದ ಬಸವರಾಜು (23) , ಗಣೇಶ್ ( 23) ನವೀನ್ (23) ಪ್ರತಾಪ್ (25) ಡಿ.ಶ್ರೀನಿವಾಸ್ (25) ಅಜಯ್ (22) ಎಂಬುವವರಿಗೆ ಗಾಯಗಳಾಗಿವೆ. ಬಸವರಾಜು ಮತ್ತು ಗಣೇಶ್ ಅವರಿಗೆ ಗಂಭೀರ ಗಾಯವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗಾಯಾಳುಗಳನ್ನು ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆರು ಮಂದಿ ಕಾರಿನಲ್ಲಿ ಮಹದೇಶ್ವರ ಬೆಟ್ಟಕ್ಕೆ ದೇವರ ದರ್ಶನಕ್ಕೆ ತೆರಳುತ್ತಿದ್ದರು. ಭಾನುವಾರ ರಾತ್ರಿ 1.30ರ ವೇಳೆಯಲ್ಲಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಉರುಳಿ ಬಿತ್ತು. ನಂತರ ಕಾರಿನ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಮಹದೇಶ್ವರ ಬೆಟ್ಟ ಠಾಣೆ ಪೊಲೀಸರು ಮತ್ತು ಅಗ್ನಿ ಶಾಮಕ ದಳದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.