ಶನಿವಾರ, ಡಿಸೆಂಬರ್ 4, 2021
20 °C
ಕಬ್ಬು ಬೆಳೆಗಾರರ ಸಮಸ್ಯೆ ಪ್ರಸ್ತಾಪ, ಕೆರೆಗಳಿಗೆ ಬೇಗ ನೀರು ತುಂಬಿಸಲು ಆಗ್ರಹ

ರೈತರ ಸಭೆ: ಭೂಸುಧಾರಣಾ ತಿದ್ದುಪಡಿ ಕಾಯ್ದೆ ವಾಪಸ್‌ಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ಕುಮಾರ್‌ ಅವರು ಸೋಮವಾರ ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಸೇರಿ ಜಿಲ್ಲೆಯ ವಿವಿಧ ರೈತ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿದರು. 

ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಕೆರೆಗೆ ನೀರು ತುಂಬಿಸುವುದು, ಕಾಡಂಚಿನ ರೈತರ ಸಮಸ್ಯೆ, ಕಬ್ಬು ಬೆಳೆಗಾರರ ಸಮಸ್ಯೆ, ಗಣಿಗಾರಿಕೆಯಿಂದ ರೈತರು ಎದುರಿಸುತ್ತಿರುವ ತೊಂದರೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಸಭೆ ಅರಂಭವಾಗುತ್ತಿದ್ದಂತೆಯೇ ಭೂ ಸುಧಾರಣಾ ತಿದ್ದುಪಡಿ, ಎಪಿಎಂಸಿ ತಿದ್ದುಪಡಿ ಕಾಯ್ದೆಗಳ ಬಗ್ಗೆ ಪ್ರಸ್ತಾಪಿಸಿದ ರೈತ ಮುಖಂಡರು, ಸುಗ್ರೀವಾಜ್ಞೆ ಮೂಲಕ ಈ ಕಾಯ್ದೆಯನ್ನು ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು. 

‘ಕಾಯ್ದೆಯು ರೈತರ ವಿರೋಧಿಯಾಗಿದ್ದು, ಸಣ್ಣ ರೈತರಿಗೆ ಮರಣಶಾಸನವಾಗಿದೆ. ಕಾರ್ಪೊರೇಟ್‌ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಜಾರಿಗೆ ತರಲಾಗಿದೆ. ಈ ಬಗ್ಗೆ ನಿಮ್ಮ ನಿಲುವು ಏನು’ ಎಂದು ರೈತ ಸಂಘದ ಒಂದು ಬಣದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಹಾಗೂ ಮತ್ತೊಂದು ಬಣದ ಮೈಸೂರು ವಿಭಾಗದ ಕಾರ್ಯದರ್ಶಿ ಎಂ.ಮಹೇಶ ಪ್ರಭು ಅವರು ಸುರೇಶ್‌ ಕುಮಾರ್‌ ಅವರನ್ನು ಕೇಳಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಸರ್ಕಾರದ ನಿಲುವೇ ನನ್ನ ನಿಲುವು. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕಾಯ್ದೆಯಿಂದ ರೈತರಿಗೆ ಅನನುಕೂಲ ಎಂದು ನೀವು ಹೇಳುತ್ತಿದ್ದೀರಿ. ನಾವು ಅನುಕೂಲವಾಗಲಿದೆ ಎಂದು ಹೇಳುತ್ತಿದ್ದೇವೆ. ನಿಮ್ಮ ಆತಂಕವನ್ನು ನಾನು ಮುಖ್ಯಮಂತ್ರಿ ಅವರ ಗಮನಕ್ಕೆ ತರುತ್ತೇನೆ’ ಎಂದು ಹೇಳಿದರು. 

ಹೊನ್ನೂರು ಪ್ರಕಾಶ್‌ ಅವರು ಮಾತನಾಡಿ, ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್‌ಡೌನ್‌ ಅವಧಿಯಲ್ಲಿ ಎಂಟು ಕಾಯ್ದೆಗಳನ್ನು ಜಾರಿಗೆ ತಂದಿವೆ. ಎಲ್ಲವೂ ರೈತ ವಿರೋಧಿ. ಇವುಗಳನ್ನು ರದ್ದು ಮಾಡದಿದ್ದರೆ, ರೈತರು ಉಗ್ರ ಹೋರಾಟ ಮಾಡಲಿದ್ದಾರೆ. ಚುನಾವಣೆಯಲ್ಲಿ ನಿಮಗೆ ತಕ್ಕ ಪಾಠ ಕಲಿಸುತ್ತೇವೆ’ ಎಂದು ಎಚ್ಚರಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಸುರೇಶ್‌ ಕುಮಾರ್‌ ಅವರು, ‘ಯಡಿಯೂರಪ್ಪ ಅವರು ಈಗಲೂ ರೈತ ನಾಯಕರು. ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆಯಾಗಲು ಸರ್ಕಾರ ಬಿಡುವುದಿಲ್ಲ’ ಎಂದು ಭರವಸೆ ನೀಡಿದರು. 

ಸಚಿವರೊಂದಿಗೆ ಸಭೆ: ಕೆರೆಗಳಿಗೆ ನೀರು ತುಂಬಿಸುತ್ತಿಲ್ಲ ಎಂದು ರೈತರು ಸಭೆಯಲ್ಲಿ ಆರೋಪಿಸಿದರು. ಮಳೆ ಬಂದು ಕಾವೇರಿ ನದಿಯಲ್ಲಿ ತಮಿಳುನಾಡಿಗೆ ಭಾರಿ ಪ್ರಮಾಣದಲ್ಲಿ ನೀರು ಹೋಗುತ್ತಿದೆ. ಆದರೆ, ಜಿಲ್ಲೆಯ ಕೆರೆಗಳಿಗೆ ಇನ್ನೂ ನೀರು ತುಂಬಿಲ್ಲ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದರು. 

ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನೀಡಿದ ವಿವರಣೆಯನ್ನು ರೈತರು ಒಪ್ಪಲಿಲ್ಲ. ಮಧ್ಯ ಪ್ರವೇಶಿಸಿದ ಸುರೇಶ್‌ ಕುಮಾರ್‌ ಅವರು, ‘10 ದಿನಗಳ ಒಳಗಾಗಿ ನಾನು ಯಳಂದೂರು ಹಾಗೂ ಕೊಳ್ಳೇಗಾಲ ಭಾಗದ ಕೆರೆಗಳ ಪರಿಶೀಲನೆ ನಡೆಸುತ್ತೇನೆ. ಅಧಿವೇಶನ ಮುಗಿದ ನಂತರ ನೀರಾವರಿ ಸಚಿವರು ಜಿಲ್ಲೆಗೆ ಕರೆದುಕೊಂಡು ಬಂದು ಅವರೊಂದಿಗೆ ಸಭೆ ನಡೆಸೋಣ. ಅಲ್ಲಿ ನಿಮ್ಮ ಸಮಸ್ಯೆಗಳನ್ನು ಪ್ರಸ್ತಾಪಿಸಿ ಬಗೆಹರಿಸಲು ಕ್ರಮ ಕೈಗೊಳ್ಳೋಣ’ ಎಂದರು. ಇದಕ್ಕೆ ಎಲ್ಲರೂ ಒಪ್ಪಿದರು.

ಕೆರೆ ಒತ್ತುವರಿ ತೆರವಿಗೆ ಆಗ್ರಹ: ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಕೆರೆಗಳಿಗೆ ಸಂಪರ್ಕ ಕಲ್ಪಿಸುವ ನಾಲೆಗಳ ದುರಸ್ತಿಯಾಗಿಲ್ಲ. ಇದರಿಂದ ಕೆರೆಗಳಿಗೆ ನೀರು ಹರಿಯುತ್ತಿಲ್ಲ. ಕೆರೆಗಳ ಒತ್ತುವರಿಯೂ ಆಗಿದೆ ಎಂದು ರೈತರು ದೂರಿದರು. 

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮಾತನಾಡಿ, ‘ಈ ಸಮಸ್ಯೆಯನ್ನು ಗಮನಿದ್ದೇನೆ. ಕೆರೆ ಒತ್ತುವರಿ ತೆರವಿಗೆ ಈಗಾಗಲೇ ಆಂದೋಲನ ಆರಂಭಿಸಿದ್ದೇವೆ. ಜಿಲ್ಲೆಯಲ್ಲಿ ಒಟ್ಟು 240 ಕೆರೆಗಳಿವೆ. ತಿಂಗಳ ಎರಡನೇ ಶನಿವಾರ ಕೆರೆಗಳ ಸರ್ವೆ ನಡೆಸಿ, ಮೂರನೇ ಶನಿವಾರ ಒತ್ತುವರಿ ತೆರವುಗೊಳಿಸುವ ಕಾರ್ಯಕ್ಕೆ ಈ ತಿಂಗಳು ಚಾಲನೆ ನೀಡಲಿದ್ದೇವೆ. ನಾಲೆಗಳ ದುರಸ್ತಿಗಳ ಬಗ್ಗೆ ಯೋಜನಾ ವರದಿಯನ್ನು ಸಿದ್ಧಪಡಿಸುವಂತೆ ಎಂಜಿನಿಯರ್‌ಗ‌ಳಿಗೆ ಸೂಚಿಸಲಾಗಿದೆ’ ಎಂದರು. 

ಶಾಸಕರಿಗೆ ಧಿಕ್ಕಾರ: ಸಭೆ ಆರಂಭವಾಗುವಾಗ ಶಾಸಕರ ಪೈಕಿ ನಿರಂಜನಕುಮಾರ್ ಒಬ್ಬರೇ ಇದ್ದರು. ಎರಡು ಗಂಟೆ ಬಳಿಕ ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಬಂದರು. ಆದರೆ, ಪುಟ್ಟರಂಗಶೆಟ್ಟಿ ಹಾಗೂ ಆರ್‌.ನರೇಂದ್ರ ಅವರು ಬಂದಿರಲಿಲ್ಲ. ರೈತರು ಇಬ್ಬರು ಶಾಸಕರಿಗೂ ಧಿಕ್ಕಾರ ಕೂಗಿದರು. 

ಹೊರ ಜಿಲ್ಲೆಗಳ ಕಬ್ಬು ಅರೆಯುವುದಕ್ಕೆ ಆಕ್ಷೇಪ

ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಪ್ರಸ್ತಾಪಿಸಿದ ರೈತರು, ಕುಂತೂರಿನ ಬಣ್ಣಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಮಾಡಿದರು. 

ಕಬ್ಬು ಬೆಳೆಗಾರರ ಸಂಘದ ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ಅವರು ಮಾತನಾಡಿ, ‘ಸಕ್ಕರೆ ಕಾರ್ಖಾನೆಯವರು ನಮ್ಮ ಜಿಲ್ಲೆಯ ರೈತರ ಕಬ್ಬು ಬಿಟ್ಟು, ಮಂಡ್ಯದಿಂದ ಕಬ್ಬು ತಂದು ಅರೆಯುತ್ತಾರೆ. 12–13 ತಿಂಗಳು ಆದರೂ ಇನ್ನೂ ಕಬ್ಬು ಕಟಾವು ಮಾಡಿಲ್ಲ. ಇದರಿಂದ ರೈತರಿಗೆ ನಷ್ಟವಾಗುತ್ತದೆ. ಟನ್‌ ಕಬ್ಬಿಗೆ ಕನಿಷ್ಠ ₹3,500 ಬೆಲೆ ನಿಗದಿಪಡಿಸಬೇಕು’ ಎಂದು ಒತ್ತಾಯಿಸಿದರು. 

ಜಿಲ್ಲಾಧಿಕಾರಿ ಅವರು ಮಾತನಾಡಿ, ‘ನಮ್ಮ ಜಿಲ್ಲೆಯ ಕಬ್ಬಿಗೆ ಆದ್ಯತೆ ಕೊಡಬೇಕು ಎಂದು ಈಗಾಗಲೇ ಸೂಚನೆ ನೀಡಲಾಗಿದೆ. ಬೇರೆ ಜಿಲ್ಲೆಯಿಂದ ತರಿಸುವ ಜಿಲ್ಲಾಡಳಿತದ ಅನುಮತಿಯನ್ನು ಪಡೆಯಲೇ ಬೇಕು’ ಎಂದು ಕುಂತೂರು ಕಾರ್ಖಾನೆಯ ಉಪಾಧ್ಯಕ್ಷ ಶರವಣ ಅವರಿಗೆ ಸೂಚಿಸಿದರು. 

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಮಾತನಾಡಿ, ‘ಶೀಘ್ರದಲ್ಲಿ ಈ ಬಗ್ಗೆ ಕಾರ್ಖಾನೆಯ ಪ‍್ರತಿನಿಧಿಗಳು ಹಾಗೂ ರೈತರ ಸಭೆಯನ್ನು ಜಿಲ್ಲಾಧಿಕಾರಿ ಅವರು ಕರೆದು ಚರ್ಚಿಸಲಿದ್ದಾರೆ’ ಎಂದು ಹೇಳಿದರು. 

ತೆರಕಣಾಂಬಿ ಕಾಲೇಜು ಉಳಿಸಿ

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿಗೆ ಸ್ಥಳಾಂತರವಾಗಿರುವ ತೆರಕಣಾಂಬಿಯ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಉಳಿಸುವಂತೆ ಕಾಲೇಜಿನ ವಿದ್ಯಾರ್ಥಿಗಳು ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು. 

‘ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾಲೇಜು ಸ್ಥಳಾಂತರ ಗೊಂಡರೆ ನಮಗೆ ತೊಂದರೆಯಾಗುತ್ತದೆ. ಶಿಕ್ಷಣದಿಂದ ವಂಚಿತರಾಗಬೇಕಾಗುತ್ತದೆ’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು. ರೈತ ಮುಖಂಡರು ಕೂಡ ಇದಕ್ಕೆ ಧ್ವನಿಗೂಡಿಸಿದರು. 

ಈ ವಿಚಾರಕ್ಕೆ ಸಂಬಂಧಿಸಿದಂತೆ ರೈತ ಮುಖಂಡರು ಹಾಗೂ ಸಚಿವರ ನಡುವೆ ವಾಗ್ವಾದವೂ ನಡೆಯಿತು. 

‘ಇದು ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ತಾಲ್ಲೂಕಿನಲ್ಲಿ ಬೇರೆ ನಾಲ್ಕು ಕಾಲೇಜುಗಳು ಇರುವುದರಿಂದ ಹಾಗೂ ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವುದರಿಂದ ಕಾಲೇಜು ವರ್ಗಾವಣೆ ಮಾಡಲು ಇಲಾಖೆ ನಿರ್ಧರಿಸಿದೆ. ಇಲ್ಲಿ ಕೌಶಲ ತರಬೇತಿ ಕೇಂದ್ರ ತೆರೆಯುವುದಾಗಿ ಉನ್ನತ ಶಿಕ್ಷಣ ಇಲಾಖೆ ಸಚಿವರು ಹೇಳಿದ್ದಾರೆ. ಉನ್ನತ ಶಿಕ್ಷಣ ಸಚಿವರನ್ನು ನಾನು ಮತ್ತೊಮ್ಮೆ ಭೇಟಿ ನೀಡಿ ಈ ಬಗ್ಗೆ ಚರ್ಚಿಸುತ್ತೇನೆ’ ಎಂದು ಸಚಿವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು