ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಐಎಲ್‌ಐ, ಸಾರಿ ರೋಗಿಗಳ ತಪಾಸಣೆಗೆ ಒತ್ತು

ಅಧಿಕಾರಿಗಳೊಂದಿಗೆ ಉಸ್ತುವಾರಿ ಸಚಿವ ಎಸ್‌.ಸುರೇಶ್‌ಕುಮಾರ್‌ ಸಭೆ, ಕೋವಿಡ್‌–19 ನಿ‌ಯಂತ್ರಣದ ಬಗ್ಗೆ ಚರ್ಚೆ
Last Updated 15 ಜುಲೈ 2020, 16:00 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಜ್ವರ, ಕೆಮ್ಮು, ನೆಗಡಿ, ಗಂಟಲು ನೋವು ರೋಗ ಲಕ್ಷಣಗಳುಳ್ಳ (ಐಎಲ್‌ಐ) ಹಾಗೂ ತೀವ್ರ ಉಸಿರಾಟದ ತೊಂದರೆಯಿಂದ (ಸಾರಿ) ಬಳಲುತ್ತಿರುವವರ ತಪಾಸಣೆ ಹಾಗೂ‍ಪರೀಕ್ಷೆಗೆ ಹೆಚ್ಚು ಒತ್ತು ನೀಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಬುಧವಾರ ಹೇಳಿದರು.

ಇದರ ಜೊತೆಗೆ, ವಿವಿಧ ರೋಗಗಳಿಂಗ ಬಳಲುತ್ತಿರುವ ಹಾಗೂ ಕೋವಿಡ್‌–19ಗೆ ಸುಲಭವಾಗಿ ತುತ್ತಾಗುವ ಸಾಧ್ಯತೆ ಇರುವವರ ಪರೀಕ್ಷೆಯನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಕೋವಿಡ್‌–19 ನಿಯಂತ್ರಣ ಸಂಬಂಧ ಶಾಸಕರು, ಜನಪ್ರತಿನಿಧಿಗಳು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿ ನಡೆಸಿದ ಸಚಿವರು, ‘ಜಿಲ್ಲೆಯಲ್ಲಿ 2,670 ಮಂದಿ ಐಎಲ್ಐ ನಿಂದ ಬಳಲುತ್ತಿದ್ದಾರೆ. 63 ಮಂದಿ ತೀವ್ರ ಉಸಿರಾಟದ ತೊಂದರೆಯಿಂದ (ಸಾರಿ) ಬಳಲುತ್ತಿದ್ದಾರೆ. ವಯಸ್ಸು, ವಿವಿಧ ಕಾಯಿಲೆಗಳಿಂದಾಗಿ ಸುಲಭವಾಗಿ ಸೋಂಕಿಗೆ ತುತ್ತಾಗುವ ಸಾಧ್ಯತೆ ಇರುವ 32,405 ಮಂದಿ ಜಿಲ್ಲೆಯಲ್ಲಿ ಇದ್ದಾರೆ. ಆದ್ಯತೆ ಮೇರೆಗೆ ಇವರ ಪರೀಕ್ಷೆ ನಡೆಸಲಾಗುವುದು’ ಎಂದರು.

‘ಜಿಲ್ಲೆಯಲ್ಲಿ ಕೋವಿಡ್‌–19 ಪರೀಕ್ಷಾ ವರದಿ ವಿಳಂಬವಾಗಿ ಬರುತ್ತಿದೆ ಎಂಬ ಆರೋಪವೂ ಇದೆ. 24 ಗಂಟೆಯ ಒಳಗೆ‌ ಗರಿಷ್ಠ ಎಂದರೆ 48 ಗಂಟೆಗಳ ಒಳಗೆ ಪರೀಕ್ಷೆಯ ವರದಿ ಬರುವಂತೆ ಮಾಡಲು ಕ್ರಮ ವಹಿಸಲಾಗುವುದು’ ಎಂದರು.

ಜಿಲ್ಲೆಯಲ್ಲಿ ಪ್ರತಿ ದಿನ ಗಂಟಲು ಗ್ರಹ ಸಂಗ್ರಹಿಸುವಷ್ಟು ಪ್ರಮಾಣದಲ್ಲಿ ಪರೀಕ್ಷೆ ನಡೆಯದ ಹಾಗೂ ಸಿಬ್ಬಂದಿ ಕೊರತೆ ಇರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಮೂರು ಪಾಳಿಯಲ್ಲಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ’ ಎಂದರು.

1000 ಆ್ಯಂಟಿಜೆನ್‌ ಪರೀಕ್ಷಾ ಕಿಟ್‌: ಕಡಿಮೆ ಸಮಯದಲ್ಲಿ ಸೋಂಕನ್ನು ಪತ್ತೆ ಹಚ್ಚಬಹುದಾದ ಆ್ಯಂಟಿಜೆನ್‌ ಪರೀಕ್ಷಾ ಕಿಟ್‌ಗಳನ್ನು ಜಿಲ್ಲೆಗೆ ಪೂರೈಸಲಾಗಿದೆ. ಸದ್ಯ, 1000 ಕಿಟ್‌ಗಳು ಬಂದಿವೆ. ಮುಂದಿನ ದಿನಗಳಲ್ಲಿ ಈ ಪ್ರಮಾಣ ಹೆಚ್ಚಾಗಲಿದೆ. ಇದರಲ್ಲಿ ಒಂದು ಗಂಟೆಯ ಒಳಗೆ ಫಲಿತಾಂಶ ಬರುತ್ತದೆ. ಅಗತ್ಯ ವಿರುವ ವ್ಯಕ್ತಿಗಳಿಗೆ (70 ವರ್ಷ ದಾಟಿದವರು, ಗರ್ಭಿನಿಯರು, ಕ್ಯಾನ್ಸರ್‌ ರೋಗಿಗಳು, ಹೃದ್ರೋಗಿಗಳು, ಐಎಲ್‌ಐ, ಸಾರಿ, ಡಯಾಲಿಸಿಸ್‌ಗೆ ಒಳಗಾಗುವವರು) ಮಾತ್ರ ಇದನ್ನು ಬಳಸಲು ಉದ್ದೇಶಿಸಲಾಗಿದೆ’ ಎಂದರು.

ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಸೌಲಭ್ಯಗಳ ಕೊರತೆ ಇರುವ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುರೇಶ್‌ ಕುಮಾರ್‌ ಅವರು, ‘ಸೌಲಭ್ಯಗಳ ಕೊರತೆ ಎಂದಲ್ಲ, ರೋಗಿಗಳ ಬಗ್ಗೆ ಸಿಬ್ಬಂದಿ ಗಮನಕೊಡುತ್ತಿಲ್ಲ. ಊಟ ತಂದುಕೊಡುತ್ತಿಲ್ಲ, ಸೋಂಕಿತರೇ ಹೋಗಿ ತೆಗೆದುಕೊಳ್ಳಬೇಕು... ಇಂತಹ ದೂರುಗಳನ್ನು ನೀಡಿದ್ದಾರೆ. ಯಾವುದೇ ವ್ಯಕ್ತಿಗೆ ಕೋವಿಡ್‌–19 ಬಂತು ಎಂದು ನಿಷ್ಕೃಷ್ಟವಾಗಿ ಕಾಣಬಾರದು. ಆಸ್ಪತ್ರೆಯಲ್ಲಿ ಇರುವವರಿಗೆ ಹೆಚ್ಚು ಕಾಳಜಿ ತೋರಬೇಕು. ಚಿಕಿತ್ಸೆ ನೀಡುತ್ತಿರುವವರು ಅವರಲ್ಲಿ ಧೈರ್ಯ ತುಂಬಬೇಕು. ಪ್ರತಿಯೊಬ್ಬ ರೋಗಿಯ ಬಗ್ಗೆಯೂ ವೈಯಕ್ತಿಕ ಗಮನಹರಿಸಬೇಕು’ ಎಂದು ಸೂಚಿಸಲಾಗಿದೆ’ ಎಂದರು.

‘ಜಿಲ್ಲೆಯಲ್ಲಿ ಕೋವಿಡ್‌–19 ನಿಂದ ಗುಣಮುಖರಾಗುತ್ತಿರುವ ಪ್ರಮಾಣ ಶೇ 58ರಷ್ಟಿದೆ. ಸಕ್ರಿಯ ಪ್ರಕರಣಗಳ ಪ್ರಮಾಣ ಶೇ 39ರಷ್ಟಿದೆ. ಇದುವರೆಗೆ ಮೂವರು ಮೃತಪಟ್ಟಿದ್ದು, ಸಾವಿನ ಪ್ರಮಾಣ ಶೇ 1.6ರಷ್ಟಿದೆ. ಇದುವರೆಗೆ ದಾಖಲಾದ 197 ಪ್ರಕರಣಗಳಲ್ಲಿ 137 ಮಂದಿಗೆ ರೋಗ ಲಕ್ಷಣಗಳೇ ಇಲ್ಲ.ಸಕ್ರಿಯ ಪ್ರಕರಣಗಳಲ್ಲಿ ಐವರು ಗರ್ಭಿಣಿಯರಿದ್ದಾರೆ. ಸೋಂಕು ತಗುಲಿದವರಲ್ಲಿ 21 ವರ್ಷದಿಂದ 40 ವರ್ಷದವರೆಗಿನ 108 ಮಂದಿ ಇದ್ದಾರೆ’ ಎಂದು ಸಚಿವರು ಹೇಳಿದರು.

ಶಾಸಕರಾದ ಆರ್.ನರೇಂದ್ರ, ಸಿ.ಎಸ್‌.ನಿರಂಜನ ಕುಮಾರ್, ಎಸ್‌.ಮಹೇಶ್‌, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣವರ್‌ ಇದ್ದರು.

ಜಾಗೃತಿ ಮೂಡಿಸಲು ಸಮಿತಿ

‘ಜಿಲ್ಲೆಯ ಜನರಲ್ಲಿ ಕೋವಿಡ್‌–19 ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಇದಕ್ಕೆ ಪೊಲೀಸರ ಸಹಕಾರ ಪಡೆಯಲು ನಿರ್ಧರಿಸಲಾಗಿದೆ. ಜಿಲ್ಲೆಯ ವಿವಿಧ ಕಡೆಗಳಲ್ಲಿ ಜನರು ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು, ಕಡ್ಡಾಯ ಮಾಸ್ಕ್‌ ಧರಿಸುವ ನಿಯಮ ಪಾಲನೆ ಮಾಡುತ್ತಿಲ್ಲ. ದ್ವಿಚಕ್ರ ಸೇರಿದಂತೆ ಇತರ ವಾಹನಗಳಲ್ಲೂ ನಿಯಮಗಳನ್ನು ಉಲ್ಲಂಘಿಸಲಾಗುತ್ತದೆ. ಪೊಲೀಸರು ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಗ್ರಾಮೀಣ ಭಾಗದ ಜನರಲ್ಲೂ ಅರಿವು ಮೂಡಿಸಲು ಬೂತು ಮಟ್ಟದಲ್ಲೂ ಸಮಿತಿ ರಚಿಸಲಾಗುವುದು’ ಎಂದು ಸುರೇಶ್‌ ಕುಮಾರ್‌ ಹೇಳಿದರು.

‘55 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಪೊಲೀಸ್‌ ಸಿಬ್ಬಂದಿಗೆ ಮನೆಯಲ್ಲೇ ಇರುವಂತೆ ಸೂಚನೆ ನೀಡಲಾಗಿದೆ. ಉಂಟಾಗುವ ಸಿಬ್ಬಂದಿ ಕೊರತೆಯನ್ನು ನೀಗಿಸುವುದಕ್ಕಾಗಿ ಗೃಹ ರಕ್ಷಕ ದಳದ ಸಿಬ್ಬಂದಿಯ ನೆರವು ಪಡೆಯಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಸರ್ಕಾರ ಮುಖ್ಯ ಕಾರ್ಯದರ್ಶಿ ಹಾಗೂ ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯೊಂದಿಗೆ ಮಾತನಾಡಿ ಕ್ರಮ ತೆಗೆದುಕೊಳ್ಳುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT