ಭಾನುವಾರ, ಮೇ 22, 2022
23 °C
ಸಾಧಕರು, ಕನ್ನಡ ಶಿಕ್ಷಕರು, ಕೊರೊನಾ ಸೇನಾನಿಗಳಿಗೆ ಸನ್ಮಾನ, ಮೂರು ಗೋಷ್ಠಿಗಳು

ಚಾಮರಾಜನಗರದಲ್ಲಿ 15,16ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಇದೇ 15 ಮತ್ತು 16ರಂದು ನಗರದ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ನಡೆಯಲಿದ್ದು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ (ಕಸಾಪ) ಸಿದ್ಧತೆಗಳನ್ನು ಮಾಡಿಕೊಂಡಿದೆ. 

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ವಿವರಗಳನ್ನು ನೀಡಿದ ಕಸಾಪದ ಜಿಲ್ಲಾ ಅಧ್ಯಕ್ಷ ಬಿ.ಎಸ್‌.ವಿನಯ್‌ ಅವರು, ‘ಜಿಲ್ಲಾ ಕೇಂದ್ರದಲ್ಲಿ ನಾಲ್ಕನೇ ಬಾರಿಗೆ ಜಿಲ್ಲಾ ಮಟ್ಟದ ಸಮ್ಮೇಳನ ನಡೆಯುತ್ತಿದೆ’ ಎಂದರು. 

‘ಸಾಹಿತಿ ಹಾಗೂ ಪ್ರಕಾಶಕ ಮಂಜು ಕೋಡಿ ಉಗನೆ ಅವರು ಈ ಬಾರಿಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕವಿ, ಕಾದಂಬರಿಕಾರ, ನಾಟಕಕಾರರಾಗಿ ಗುರುತಿಸಿಕೊಂಡಿರುವ ಅವರು ಜೋಳಿಗೆ ಪ್ರಕಾಶನ ಸ್ಥಾಪಿಸಿ ಬೇರೆ ಸಾಹಿತಿಗಳ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ’ ಎಂದರು.

‘ಜೆ.ಎಚ್‌.ಪಟೇಲ್‌ ಸಭಾಂಗಣದ ಪ್ರಭು ಶಂಕರ ವೇದಿಕೆಯಲ್ಲಿ ಎಲ್ಲ ಕಾರ್ಯಕ್ರಮಗಳು ನಡೆಯಲಿವೆ. ವಿಶೇಷ ಸಾಧಕರು, ಕೊರೊನಾ ಸೇನಾನಿಗಳು, ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಶೇ 100ರಷ್ಟು ಫಲಿತಾಂಶ ದಾಖಲಾಗಿರುವ ಶಾಲೆಗಳ ಕನ್ನಡ ಶಿಕ್ಷಕರಿಗೆ ಸನ್ಮಾನ ಮಾಡಲಾಗುವುದು. ಎರಡು ಕವಿಗೋಷ್ಠಿಗಳನ್ನು ಏರ್ಪಡಿಸಲಾಗಿದ್ದು, 80 ಮಂದಿ ಕವಿಗಳಿಗೆ ಅವಕಾಶ ನೀಡಲಾಗಿದೆ. ಈ ಬಾರಿಯ ಸಮ್ಮೇಳನದಲ್ಲಿ ಕನ್ನಡ ಚಳವಳಿಗಾರರಿಗೂ ಅವಕಾಶ ನೀಡಲಾಗಿದೆ. ಕನ್ನಡ ಸಾಹಿತ್ಯಕ್ಕೆ ಜಿಲ್ಲೆಯ ಕೊಡುಗೆ, ಚಾಮರಾಜನಗರ ಜಿಲ್ಲೆ: ಅಭಿವೃದ್ಧಿಯ ಸಾಧ್ಯತೆಗಳು ಹಾಗೂ ಕಾವೇರಿ ತೀರ್ಪು ಸಂಕಷ್ಟಗಳು ಮತ್ತು ಪರಿಹಾರಗಳು ಎಂಬ ವಿಷಯಗಳ ಕುರಿತು ಮೂರು ಗೋಷ್ಠಿಗಳನ್ನು ಆಯೋಜಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.  

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರಾಜಪ್ಪ, ಗೌರವ ಕೋಶಾಧ್ಯಕ್ಷ ನಿರಂಜನಕುಮಾರ್, ಹೋಬಳಿ ಅಧ್ಯಕ್ಷ ಮಾದಾಪುರ ರವಿಕುಮಾರ್ ಇದ್ದರು.

ಕಾರ್ಯಕ್ರಮದ ವಿವರ
ಫೆ.15 ಸೋಮವಾರ
ಬೆ.8.30:
ಧ್ವಜಾರೋಹಣ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಅವರು ರಾಷ್ಟ್ರಧ್ವಜ, ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ ಅವರು ನಾಡಧ್ವಜ ಹಾಗೂ ವಿನಯ್‌ ಅವರಿಂದ ಕಸಾಪ ಧ್ವಜರೋಹಣ.  

ಬೆ.9.30: ಚಾಮರಾಜೇಶ್ವರ ದೇವಾಲಯದಿಂದ ಜೆ.ಎಚ್‌.ಪಟೇಲ್‌ ಸಭಾಂಗಣದವರೆಗೆ ಜಾನಪದ ಕಲಾ ತಂಡಗಳೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ.

ಬೆ.10.30: ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಅವರಿಂದ ಸಮ್ಮೇಳನದ ಉದ್ಘಾಟನೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರಿಂದ ದತ್ತಿ ಪ್ರಶಸ್ತಿ ಪ್ರದಾನ. ಶಾಸಕ ಸಿ.ಪುಟ್ಟರಂಶೆಟ್ಟಿ ಅಧ್ಯಕ್ಷತೆ. ಸಮ್ಮೇಳನದ ಸರ್ವಾಧ್ಯಕ್ಷ ಮಂಜು ಕೋಡಿಉಗನೆ ಅವರಿಂದ ಸಮ್ಮೇಳನಾಧ್ಯಕ್ಷರ ನುಡಿ. ಏಳು ಪುಸ್ತಕಗಳ ಲೋಕಾರ್ಪಣೆ  ವಿಶೇಷ ಸಾಧಕರು ಹಾಗೂ ಕೊರೋನಾ ಯೋಧರಿಗೆ ವಿಶೇಷ ಸನ್ಮಾನ 

ಮ. 2–3.30: ‘ಕನ್ನಡ ಸಾಹಿತ್ಯಕ್ಕೆ ಜಿಲ್ಲೆಯ ಕೊಡುಗೆ ವಿಚಾರ’ ಕುರಿತು ಗೋಷ್ಠಿ. ಅಧ್ಯಕ್ಷತೆ: ಡಾ.ಎಚ್.ಎಸ್.ಪ್ರೇಮಲತಾ. ದಿಕ್ಸೂಚಿ ನುಡಿ: ಡಾ.ಮಧುವನ ಶಂಕರ.

ಮ.3.30–5.30: ಕವಿಗೋಷ್ಠಿ. ಅಧ್ಯಕ್ಷತೆ ಸಾಹಿತಿ ಪ್ರೊ.ಡಿ.ದೊಡ್ಡಲಿಂಗೇಗೌಡ. ಆಶಯ ನುಡಿ: ಕವಿ ಸ್ವಾಮಿ ಪೊನ್ನಾಚಿ. 40 ಕವಿಗಳಿಂದ ಕವನಗಳ ವಾಚನ.

ಸಂ.5.30: ವಿವಿಧ ಕ್ಷೇತ್ರಗಳ 30 ಮಂದಿ ಸಾಧಕರಿಗೆ ಸನ್ಮಾನ.

ಸಂ.6.30: ಸಾಂಸ್ಕೃತಿಕ ಕಾರ್ಯಕ್ರಮಗಳು 

ಫೆ.16–ಮಂಗಳವಾರ
ಬೆ.10–11
:ಸಮ್ಮೇಳನಾಧ್ಯಕ್ಷರೊಡನೆ ಸಂವಾದ ಅಧ್ಯಕ್ಷತೆ: ವಿಮರ್ಶಕ ಡಾ.ಸುರೇಶ್ ನಾಗಲಮಡಿಕೆ. ನುಡಿ ಗೌರವ. ಪ್ರೊ.ಮಹದೇವ ಭರಣಿ.

ಬೆ.11–12.20: ‘ಚಾಮರಾಜನಗರ ಜಿಲ್ಲೆ: ಅಭಿವೃದ್ಧಿಯ ಸಾಧ್ಯತೆಗಳು’ ಕುರಿತು ವಿಶೇಷ ಗೋಷ್ಠಿ. ವಿಶೇಷ ಉಪನ್ಯಾಸ: ‘ಚೆಲುವ ಚಾಮರಾಜನಗರ -2020 ಮುನ್ನೋಟ’ ವಿಷಯ ಕುರಿತು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ. ಆರ್ಥಿಕ ಅಭಿವೃದ್ಧಿ ಕುರಿತು ಆರ್ಥಿಕ ತಜ್ಞ ಪ್ರೊ.ಆರ್.ಎಂ.ಚಿಂತಾಮಣಿ, ಜಿಲ್ಲೆಯ ಅಭಿವೃದ್ಧಿಗೆ ಚಳವಳಿಗಳ ಕೊಡುಗೆ ಕುರಿತು ಚಿಂತಕ ವೆಂಕಟರಮಣಸ್ವಾಮಿ ಹಾಗೂ ಶೈಕ್ಷಣಿಕ ಅಭಿವೃದ್ಧಿ ಕುರಿತು ಪ್ರೊ.ಜಿ.ಎಸ್.ಜಯದೇವ.

ಮ.12.30–1.30: ‘ಕಾವೇರಿ ತೀರ್ಪು: ಸಂಕಷ್ಟಗಳು-ಪರಿಹಾರಗಳು’ ಕುರಿತು ಗೋಷ್ಠಿ. ಅಧ್ಯಕ್ಷತೆ: ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದು ಶೇಖರ್‌. ವಿಶೇಷ ಉಪನ್ಯಾಸ: ಕಾವೇರಿ ನದಿ ವಿಚಾರ ತಜ್ಞ ಅರ್ಜುನಹಳ್ಳಿ ಪ್ರಸನ್ನಕುಮಾರ್‌. 

ಮ.1.30–2.30: ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಶೇ 100ರಷ್ಟು ಫಲಿತಾಂಶ ನೀಡಿದ ಕನ್ನಡ ಶಿಕ್ಷಕರಿಗೆ ಸನ್ಮಾನ.

ಮ.2.30–ಸಂ.5: ಕವಿಗೋಷ್ಠಿ. ಅಧ್ಯಕ್ಷತೆ: ಕವಿ ಹ.ಮ.ಗುರುಸ್ವಾಮಿ, ಆಶಯ ನುಡಿ: ಪಳನಿಸ್ವಾಮಿ ಜಾಗೇರಿ. 40 ಮಂದಿಯಿಂದ ಕವನ ವಾಚನ.

ಸಂಜೆ 5–6: ಬಹಿರಂಗ ಅಧಿವೇಶನ. ಅಧ್ಯಕ್ಷತೆ: ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎಸ್‌.ವಿನಯ್‌. 

ಸಂಜೆ 6: ಸಮಾರೋಪ ಸಮಾರಂಭ. ಸಮಾರೋಪ ನುಡಿ: ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು