ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಬೆಳ್ಳಿ ಹಬ್ಬ ಮರೆತ ಸರ್ಕಾರ: ವಾಟಾಳ್‌

ಕರ್ನಾಟಕ ಕನ್ನಡ ಮಹಾಸಭಾದಿಂದ ಬೆಳ್ಳಿ ಹಬ್ಬ ಮಹೋತ್ಸವ: ಸಾಧಕರಿಗೆ ಸನ್ಮಾನ
Last Updated 9 ನವೆಂಬರ್ 2022, 16:06 IST
ಅಕ್ಷರ ಗಾತ್ರ

ಚಾಮರಾಜನಗರ: ‘ಚಾಮರಾಜನಗರ ಜಿಲ್ಲೆಯಾಗಿ 25 ವರ್ಷಗಳಾಗಿವೆ. ಸರ್ಕಾರ ಬೆಳ್ಳಿಹಬ್ಬ ಆಚರಿಸುವುದನ್ನು ಮರೆತಿದೆ. ನನ್ನನ್ನು ಕರೆದು ಸನ್ಮಾನ ಮಾಡಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಬೆಳ್ಳಿ ಹಬ್ಬ ಮಾಡಿಲ್ಲ’ ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ವಾಟಾಳ್‌ ನಾಗರಾಜ್‌ ಬುಧವಾರ ಆರೋಪಿಸಿದರು.

ಅಖಿಲ ಕರ್ನಾಟಕ ಕನ್ನಡ ಮಹಾಸಭಾ ನಗರದಲ್ಲಿ ಹಮ್ಮಿಕೊಂಡಿದ್ದ ಚಾಮರಾಜನಗರ ಜಿಲ್ಲಾ ಬೆಳ್ಳಿ ಹಬ್ಬ ಮಹೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಚಾಮರಾಜನಗರವನ್ನು ಪ್ರತ್ಯೇಕವಾದ ಜಿಲ್ಲೆ ಮಾಡಿದ್ದು ನಾನು. ಜಿಲ್ಲಾಡಳಿತ ಜಿಲ್ಲಾ ಬೆಳ್ಳಿಹಬ್ಬ ಆಚರಣೆ ಮಾಡಲಿಲ್ಲ. ಶ್ರೀನಿವಾಸಗೌಡ ಮತ್ತು ತಂಡ ಬೆಳ್ಳಿಹಬ್ಬ ಮಹೋತ್ಸವ ಮಾಡಿರುವುದು ತುಂಬಾ ಸಂತಸವಾಗಿದೆ’ ಎಂದರು.

ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಮಾತನಾಡಿ, ‘ವಾಟಾಳ್‌ ನಾಗರಾಜ್‌ ಅಂದರೆ ಕನ್ನಡಿಗರ ಧ್ವನಿ. ಚಾಮರಾಜನಗರ ಜಿಲ್ಲೆ ಮಾಡುವಲ್ಲಿ ವಾಟಾಳ್ ನಾಗರಾಜ್ ಪರಿಶ್ರಮ ಅಪಾರವಾಗಿದೆ. ಆಡಳಿತಾತ್ಮಕ ದೃಷ್ಟಿಯಿಂದ ರಾಜ್ಯದಲ್ಲಿ ಜಿಲ್ಲೆಗಳು ಆಗಬೇಕು ಎಂಬ ಕಾರಣಕ್ಕೆ ಐದಾರು ಸಮಿತಿಗಳನ್ನು ರಚಿಸಲಾಗಿತ್ತು. ಸಮಿತಿಗಳ ವರದಿ ನೀಡಿ ಅದರ ಆದರಲ್ಲಿ ಹೊಸ ಜಿಲ್ಲೆಗಳ ರಚನೆಯಾಗಿದೆ.ಚಾಮರಾಜನಗರ ಜಿಲ್ಲೆ ಮಾಡುವ ಸಂದರ್ಭದಲ್ಲಿ ಚಾಮರಾಜನಗರ ಮತ್ತು ಕೊಳ್ಳೇಗಾಲ ಜಿಲ್ಲೆ ಮಾಡುವ ವಿಚಾರ ಶೈತ್ಯಾಗಾರದಲ್ಲಿ ಇತ್ತು. ಆಗ ನಾನೂ ಚಾಮರಾಜನಗರವನ್ನು ಜಿಲ್ಲೆ‌ಮಾಡುವಂತೆ ಸಲಹೆ, ಸೂಚನೆ ಕೊಟ್ಟಿದ್ದೆ. ಜೆ.ಎಚ್‌.ಪಟೇಲ್‌ ಅವರ ಮೇಲೆ ಒತ್ತಡ ಹಾಕಿದ್ದರಿಂದ ಏಳು ಜಿಲ್ಲೆಗಳನ್ನು ರಚನೆಯಾಯಿತು’ ಎಂದರು.

ಬಿಜೆಪಿ ಮುಖಂಡ ಎಂ.ರಾಮಚಂದ್ರ ಮಾತನಾಡಿ, ‘ಚಾಮರಾಜನಗರ ಜಿಲ್ಲೆಯಾಗಿ 25 ವರ್ಷಗಳಾಗಿದ್ದು, ಹಂತಹಂತವಾಗಿ ಅಭಿವೃದ್ದಿಯಾಗುತ್ತಿದೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ‘ವಾಟಾಳ್ ನಾಗರಾಜ್ ಚಾಮರಾಜನಗರದ ಶಾಸಕರಾಗಿ ಇಲ್ಲದೆ ಹೋದರೆ ಚಾಮರಾಜನಗರ ಜಿಲ್ಲೆಯಾಗುತ್ತಿರಲಿಲ್ಲ. ಜಿಲ್ಲೆಗಾಗಿ ದಶಕಗಳ ಹೋರಾಟ ನಡೆಯಿತು. ರಾಮಸಮುದ್ರ ಮಹದೇವನಾಯಕ ಅವರ ನೇತೃತ್ವದಲ್ಲಿ ಜಿಲ್ಲಾ ಹೋರಾಟ ಸಮಿತಿ ರಚಿಸಿಕೊಂಡು ಹೋರಾಟ ಮಾಡಲಾಯಿತು. ಸರ್ಕಾರ ಬೆಳ್ಳಿಹಬ್ಬದ ಮಾಡದೇ ನಿರ್ಲಕ್ಷ್ಯ ವಹಿಸಿದ್ದರಿಂದ ನಮ್ಮ ಸಂಘಟನೆ ವತಿಯಿಂದ ಜಿಲ್ಲಾ ಬೆಳ್ಳಿಹಬ್ಬ ಮಹೋತ್ಸವ ಅಯೋಜಿಸಲಾಗಿದೆ’ ಎಂದರು.

ವೇದಿಕೆ ಸಮಾರಂಭಕ್ಕೂ ಮೊದಲು ವಾಟಾಳ್‌ ನಾಗರಾಜ್‌ ಅವರನ್ನು ಸಾರೋಟಿನಲ್ಲಿ ಮೆರವಣಿಗೆ ಮಾಡಲಾಯಿತು.ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದಿಂದ ಜೆ.ಎಚ್.ಪಟೇಲ್ ಸಭಾಂಗಣವರಗೆ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಯಿತು.

ವಾಟಾಳ್ ತಿ.ನರಸೀಪುರ ಸೂರ್ಯ ಸಿಂಹಾಸನ ಮಠದ ಡಾ.ಸಿದ್ದಲಿಂಗ ಶಿವಚಾರ್ಯಸ್ವಾಮೀಜಿ, ನಗರದ ಸಿದ್ದಮಲ್ಲೇಶ್ವರ ವಿರಕ್ತಮಠ ಚೆನ್ನಬಸವಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 23 ಮಂದಿಯನ್ನು ಸನ್ಮಾನಿಸಲಾಯಿತು.

ಮುಖಂಡರಾದ ಉಡಿಗಾಲ ಕುಮಾರಸ್ವಾಮಿ, ಜಿ.ಎಂ.ಗಾಡ್ಕರ್, ರೈತ ಮುಖಂಡ ಹೊನ್ನೂರು ಪ್ರಕಾಶ್, ಮಹಾಸಭಾ ಗೌರವ ಅಧ್ಯಕ್ಷ ಶಾ.ಮುರಳಿ, ಪ್ರಧಾನ ಕಾರ್ಯದರ್ಶಿ ಚಾ.ವೆಂ.ರಾಜ್‌ಗೋಪಾಲ್, ಸಹ ಕಾರ್ಯದರ್ಶಿ ಪಣ್ಯದಹುಂಡಿರಾಜು, ಸಂಘಟನಾ ಕಾರ್ಯದರ್ಶಿ ಅರುಣ್‌ಕುಮಾರ್‌ಗೌಡ, ಜಿಲ್ಲಾಧ್ಯಕ್ಷ ಸಾಗರ್‌ರಾವತ್, ನಿಜಧ್ವನಿಗೋವಿಂದರಾಜು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶೈಲ ಕುಮಾರ್, ಗಡಿನಾಡು ಕನ್ನಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಚಾ.ರಾ.ಕುಮಾರ್, ಶ್ರೀಗಂಧ ಕನ್ನಡ ಯುವ ವೇದಿಕೆ ಜಿಲ್ಲಾಧ್ಯಕ್ಷ ರವಿಚಂದ್ರ ಪ್ರಸಾದ್ ಕಹಳೆ ಇದ್ದರು.

ರಾಜಕೀಯ ನಿವೃತ್ತಿ‌: ಶ್ರೀನಿವಾಸಪ್ರಸಾದ್

ಮುಂಬರುವ ಚುನಾವಣೆಯಲ್ಲಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಹೇಳಿದರು.

‘ಲೋಕಸಭೆಗೆ 14 ಬಾರಿ ಸ್ಪರ್ಧಿಸಿದ್ದು 9 ಬಾರಿ ಸಂಸದನಾಗಿ ಎಳುಬೀಳು ಕಂಡಿದ್ದೇನೆ. ನನ್ನ ಅವಧಿಯಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸ ಮಾಡಿದ್ದೇನೆ. ಆರೋಗ್ಯ ಸಮಸ್ಯೆಯಿಂದಾಗಿ ರಾಜಕೀಯ ನಿವೃತ್ತಿ ಬಯಸಿದ್ದೇನೆ . ಮುಂಬರುವ ಚುನಾವಣೆ ಯಾರಾದರೂ ಸ್ಪರ್ಧಿಸಿ ಗೆದ್ದು ಕ್ಷೇತ್ರವನ್ನು ಮುನ್ನಡೆಸಲಿ’ ಎಂದರು.

ಇದಕ್ಕೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದ ವಾಟಾಳ್‌ ನಾಗರಾಜ್‌, ‘ಲೋಕಸಭೆಗೆ ಸ್ಪರ್ಧಿಸದೇ ಇದ್ದರೆ, ಅವರನ್ನು ರಾಜ್ಯ ಸಭಾ ಸದಸ್ಯರನ್ನಾಗಿ ಮಾಡಬೇಕು. ಪ್ರಸಾದ್‌ ಅದ್ಬುತ ವ್ಯಕ್ತಿ. ಅವರು ರಾಜಕೀಯ ನಿವೃತ್ತಿಯಾದರೆ ಅವರ ಪಕ್ಷಕ್ಕೆ ನಷ್ಟ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT