ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಕೆರೆ ಏರಿ ದುರಸ್ತಿ ಆರಂಭ, ವಾರದಲ್ಲಿ ಪೂರ್ಣ

ಮಾದರಿ ಕೆರೆ ಅಭಿವೃದ್ಧಿ ಯೋಜನೆಗೆ ಅಯ್ಕೆಯಾಗಿದ್ದ ಕೆರೆ, ನಾಳೆಯಿಂದ ಹಾನಿ ಸಮೀಕ್ಷೆ
Last Updated 20 ಸೆಪ್ಟೆಂಬರ್ 2020, 14:48 IST
ಅಕ್ಷರ ಗಾತ್ರ

ಕೊಳ್ಳೇಗಾಲ: ತಾಲ್ಲೂಕಿನ ಪಾಳ್ಯ ಗ್ರಾಮದ ದೊಡ್ಡಕೆರೆ ಏರಿಯ ದುರಸ್ತಿ ಕಾಮಗಾರಿಯನ್ನು ಕಾವೇರಿ ನೀರಾವರಿ ನಿಗಮ ಭಾನುವಾರ ಆರಂಭಿಸಿದೆ.

ಶುಕ್ರವಾರ ಮಧ್ಯರಾತ್ರಿ ಒಡೆದು ಹೋಗಿ ಅಪಾರ ಪ್ರಮಾಣದಲ್ಲಿ ನೀರು ಪಕ್ಕದ ನೂರಾರು ಎಕರೆ ಕೃಷಿ ಜಮೀನಿಗೆ ನುಗ್ಗಿತ್ತು. ಶನಿವಾರ ಸ್ಥಳಕ್ಕೆ ಭೇಟಿ ನೀಡಿದ್ದ ನಿಗಮದ ಅಧಿಕಾರಿಗಳು ಹಾಗೂ ಶಾಸಕ ಆರ್.ನರೇಂದ್ರ ಅವರು ನಾಲೆ ಮೂಲಕ ಕೆರೆಗೆ ಹರಿಯುತ್ತಿದ್ದ ನೀರನ್ನು ಕಡಿಮೆ ಮಾಡಿಸಿದರು.

727 ಎಕರೆ ವಿಸ್ತೀರ್ಣ ಇರುವ ದೊಡ್ಡಕೆರೆ ಪೂರ್ಣವಾಗಿ ಭರ್ತಿಯಾಗಿತ್ತು. ಕೆರೆಗೆ ಐದು ತೂಬುಗಳನ್ನು ಅಳವಡಿಸಲಾಗಿತ್ತು. ಒಂದು ತೂಬು ಹಾನಿಗೆ ಒಳಗಾಗಿ ಏರಿ ಒಡೆದಿದೆ.

‘ತಿಂಗಳ ಹಿಂದೆಯೇ ತೂಬಿಗೆ ಹಾನಿಯಾಗಿತ್ತು. ರೈತರು ಕಾವೇರಿ ನೀರಾವರಿ ನಿಗಮದ ಅಧಿಕಾರಿಳಿಗೆ ಮಾಹಿತಿ ನೀಡಿದ್ದರೂ ತಲೆಕೆಡಿಸಿಕೊಂಡಿರಲಿಲ್ಲ. ಅವರ ನಿರ್ಲಕ್ಷ್ಯದಿಂದಾಗಿ ಈ ರೀತಿ ಆಗಿದೆ’ ಎಂದು ಸ್ಥಳೀಯ ರೈತ ಕೃಷ್ಣ ಅವರು ಆರೋಪಿಸಿದರು.

ಎಂಟು ದಿನಗಳ ಕಾಮಗಾರಿ ಪೂರ್ಣ: ಎರಡು ಜೆಸಿಬಿಗಳನ್ನು ಬಳಸಿಕೊಂಡು ದುರಸ್ತಿ ಕಾರ್ಯ ಆರಂಭಿಸಲಾಗಿದೆ. ಏರಿ ಒಡೆದ ಜಾಗಕ್ಕೆ ಮಣ್ಣು ಮತ್ತು ಕಲ್ಲುಗಳಿಂದ ಮುಚ್ಚಲಾಗುತ್ತಿದೆ.

‘ಕೆರೆಗೆ ಹರಿಸಲಾಗುತ್ತಿದ್ದ ನೀರನ್ನು ಕಡಿಮೆ ಮಾಡಲಾಗಿದೆ. ನೀರು ಪೂರ್ಣವಾಗಿ ಖಾಲಿಯಾಗಿರುವುದರಿಂದ ಕಾಮಗಾರಿ ಆರಂಭಿಸಿದ್ದೇವೆ. ಪೂರ್ಣಗೊಳಿಸಲು ಕನಿಷ್ಠ ಎಂಟು ದಿನಗಳು ಬೇಕು. ಆದಷ್ಟು ಶೀಘ್ರವಾಗಿ ಕಾಮಗಾರಿ ಮುಗಿಸಿ ರೈತರಿಗೆ ಅನುಕೂಲಮಾಡಿಕೊಡುತ್ತೇವೆ’ ಎಂದು ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲ ಎಂಜಿನಿಯರ್ ಶಾಂತಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮಾದರಿ ಕೆರೆಗೆ ಆಯ್ಕೆ: ಜಿಲ್ಲಾ ಉಸ್ತುವಾರಿ ಸಚಿವ ‌ಎಸ್‌. ಸುರೇಶ್‌ ಕುಮಾರ್‌ ಅವರು ಇತ್ತೀಚೆಗೆ ರೈತಮುಖಂಡರು ಹಾಗೂ ಶಾಸಕರೊಂದಿಗೆ ಕೆರೆ ವೀಕ್ಷಣೆ ಮಾಡಿದ್ದರು. ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಮಾದರಿ ಕೆರೆ ಅಭಿವೃದ್ಧಿ ಮಾಡುವ ಯೋಜನೆಯಲ್ಲಿ ಹನೂರು ಕ್ಷೇತ್ರದಿಂದ ಈ ಕೆರೆಯನ್ನು ಆಯ್ಕೆ ಮಾಡಲಾಗಿತ್ತು.

‘ದೊಡ್ಡಕೆರೆಯನ್ನು ಮಾದರಿ ಕೆರೆಯನ್ನಾಗಿ ಅಭಿವೃದ್ಧಿ ಪಡಿಸುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ ಕುಮಾರ್‌ ಅವರು ಹೇಳಿದ್ದಾರೆ. ಅದರಂತೆ, ಕೆರೆ ಅಭಿವೃದ್ಧಿಗೆ ₹4.8 ಕೋಟಿ ಬೇಕಾಗಬಹುದು ಎಂಬ ಮಾಹಿತಿಯನ್ನೂ ನೀಡಿದ್ದೇವೆ’ ಎಂದು ಅವರು ಹೇಳಿದರು.

ಸೋಮವಾರದಿಂದ ಜಂಟಿ ಸಮೀಕ್ಷೆ

ಏರಿ ಒಡೆದ ಕಾರಣ 600 ಎಕರೆಗೂ ಹೆಚ್ಚು ಕೃಷಿ ಜಮೀನು ಜಲಾವೃತವಾಗಿದೆ ಎಂದು ಹೇಳಲಾಗುತ್ತಿದೆ. ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ. ಭತ್ತ ಹಾಗೂ ಜೋಳ ಬೆಳೆಗೆ ಹಾನಿಯಾಗಿದೆ. 10 ದಿನಗಳ ಹಿಂದೆಯಷ್ಟೇ ರೈತರು ಭತ್ತದ ನಾಟಿ ಮಾಡಿದ್ದರು. ವೈಜ್ಞಾನಿಕ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.

‘ಭತ್ತ ನಾಟಿ ಇತ್ತೀಚೆಗೆ ಮಾಡಲಾಗಿತ್ತು. ಜಮೀನುಗಳಲ್ಲಿ ಇನ್ನೂ ನೀರು ಇದೆ. ಹಾಗಾಗಿ ಸಮೀಕ್ಷೆ ಆರಂಭಿಸಲು ಸಾಧ್ಯವಾಗಿಲ್ಲ. ಸೋಮವಾರದ ನಂತರ ಕಂದಾಯ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ, ಮಾಹಿತಿ ನೀಡಲಾಗುವುದು’ ಎಂದು ತಹಶೀಲ್ದಾರ್‌ ಕೆ.ಕುನಾಲ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT