ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | ಪಂಚಾಯಿತಿ ಕರ ಸಂಗ್ರಹಕ್ಕೂ ‘ಬರ’

Published 18 ಜನವರಿ 2024, 5:18 IST
Last Updated 18 ಜನವರಿ 2024, 5:18 IST
ಅಕ್ಷರ ಗಾತ್ರ

ಚಾಮರಾಜನಗರ: ಕಳೆದ ವರ್ಷದ ಮುಂಗಾರು ಹಂಗಾಮು ಮತ್ತು ಹಿಂಗಾರು ಅವಧಿಯಲ್ಲಿ ಜಿಲ್ಲೆಯಲ್ಲಿ ಕಂಡು ಬಂದ ಬರ ಪರಿಸ್ಥಿತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂದಾಯ ವಸೂಲಿ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. 

2023–24ನೇ ಆರ್ಥಿಕ ವರ್ಷ ಮುಕ್ತಾಯವಾಗಲು ಇನ್ನು ಎರಡೂವರೆ ತಿಂಗಳು ಮಾತ್ರ ಬಾಕಿ ಇದೆ. ಆದರೆ, ಜಿಲ್ಲಾ ಪಂಚಾಯಿತಿ ನಿಗದಿಪಡಿಸಿರುವ ಕಂದಾಯ ವಸೂಲಿಯ ಗುರಿ ಶೇ 50 ಕೂಡ ದಾಟಿಲ್ಲ. ಕಳೆದ ಏಪ್ರಿಲ್‌ನಿಂದ ಇಲ್ಲಿಯವರೆಗೆ ಶೇ 31.41ರಷ್ಟು ಮಾತ್ರ ಗುರಿ ಸಾಧನೆಯಾಗಿದೆ. 

2022–23ನೇ ಸಾಲಿನಲ್ಲಿ ಕಂದಾಯ ಸಂಗ್ರಹ ಗುರಿ ಶೇ 78.05ರಷ್ಟು ಸಾಧನೆಯಾಗಿತ್ತು. 

ಈ ವರ್ಷ 130 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ₹15.26 ಕೋಟಿ ಕಂದಾಯ ಸಂಗ್ರಹಿಸುವ ಗುರಿಯನ್ನು ಜಿಲ್ಲಾ ಪಂಚಾಯಿತಿ ಹಾಕಿಕೊಂಡಿದೆ. ಈವರೆಗೆ ₹4.79 ಕೋಟಿಯಷ್ಟು ಮಾತ್ರ ವಸೂಲಾಗಿದೆ.

ಜಿಲ್ಲೆಯ ಐದು ತಾಲ್ಲೂಕುಗಳ ಪೈಕಿ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಸಾಮಾನ್ಯವಾಗಿ ಕರ ವಸೂಲಿ ಚೆನ್ನಾಗಿ ಆಗುತ್ತದೆ. ಕಳೆದ ವರ್ಷ ತಾಲ್ಲೂಕಿನ 34 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಗದಿತ ಗುರಿಯ ಶೇ 93.90 ರಷ್ಟು ಕಂದಾಯ ಸಂಗ್ರಹವಾಗಿತ್ತು. ಈ ಬಾರಿ ಅಲ್ಲಿ ಶೇ 38.71ಷ್ಟು ಮಾತ್ರ ಸಂಗ್ರಹವಾಗಿದೆ. ಎಲ್ಲ ತಾಲ್ಲೂಕುಗಳ ಪೈಕಿ ಇದೇ ಗರಿಷ್ಠ ಸಾಧನೆ.

ಉಳಿದಂತೆ, ಚಾಮರಾಜನಗರ ತಾಲ್ಲೂಕಿನಲ್ಲಿ ಶೇ 34.05, ಕೊಳ್ಳೇಗಾಲದಲ್ಲಿ ಶೇ 27.08, ಯಳಂದೂರಿನಲ್ಲಿ ಶೇ 20.93 ಮತ್ತು ಹನೂರು ತಾಲ್ಲೂಕಿನಲ್ಲಿ ಶೇ 19.48ರಷ್ಟು ಕಂದಾಯ ವಸೂಲಾಗಿದೆ.

ಬರದ ಪರಿಣಾಮ: ಕಳೆದ ವರ್ಷ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇತ್ತು. ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿತ್ತು. 

‘ಬರ ಪರಿಸ್ಥಿತಿಯಿಂದಾಗಿ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಆಸ್ತಿ ಮಾಲೀಕರು, ರೈತರು ಸ್ವಯಂ ಪ್ರೇರಿತರಾಗಿ ಕಂದಾಯ ಪಾವತಿಸಲು ಮುಂದೆ ಬಂದಿಲ್ಲ. ಹಾಗಾಗಿ ನಾವು ನಿರೀಕ್ಷಿಸಿದಷ್ಟು ತೆರಿಗೆ ಸಂಗ್ರಹವಾಗಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್‌ ಪ್ರಕಾಶ್‌ ಮೀನಾ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಮತ್ತು ತೆರಕಣಾಂಬಿ ಗ್ರಾಮ ಪಂಚಾಯಿತಿಯು ದೊಡ್ಡದಾಗಿದ್ದು, ಪ್ರತಿ ವರ್ಷ ಉತ್ತಮವಾಗಿ ಕಂದಾಯ ವಸೂಲಿ ಆಗುತ್ತಿತ್ತು. ಈ ವರ್ಷ ಅಲ್ಲೂ ಹೆಚ್ಚು ಆಗಿಲ್ಲ’ ಎಂದು ಅವರು ಹೇಳಿದರು.

₹44.75 ಕೋಟಿ ಕಂದಾಯ ಬಾಕಿ

ಜಿಲ್ಲೆಯಲ್ಲಿ ಪ್ರತಿ ವರ್ಷ ಶೇ 100ರಷ್ಟು ಕಂದಾಯ ವಸೂಲಿ ಆಗುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಬಾಕಿ ಕಂದಾಯದ ಮೊತ್ತ ಹೆಚ್ಚುತ್ತಲೇ ಇದೆ. ಎಲ್ಲ 130 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ₹44.75 ಕೋಟಿಯಷ್ಟು ತೆರಿಗೆ ವಸೂಲಿಗೆ ಬಾಕಿ ಇದೆ.  2022–23ನೇ ಆರ್ಥಿಕ ವರ್ಷದ ಅಂತ್ಯಕ್ಕೆ ಈ ಮೊತ್ತ ₹34.28 ಕೋಟಿಯಷ್ಟಿತ್ತು.  ‘ಅಭಿಯಾನದ ಮಾದರಿಯಲ್ಲಿ ಕಂದಾಯ ವಸೂಲಾತಿ ಮಾಡುವಂತೆ ಈಗಾಗಲೇ ತಾಲ್ಲೂಕು ಪಂಚಾಯಿತಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿ ಸೂಚಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದರು. 

ಉಳಿದಿರುವ ಸಮಯದಲ್ಲಿ ಗರಿಷ್ಠ ಪ್ರಮಾಣದಲ್ಲಿ ತೆರಿಗೆ ಸಂಗ್ರಹಿಸಲು ಆದ್ಯತೆ ನೀಡುವಂತೆ ಇಒಗಳು ಪಿಡಿಒಗಳಿಗೆ ಸೂಚಿಸಲಾಗಿದೆ.
ಆನಂದ್‌ ಪ್ರಕಾಶ್‌ ಮೀನಾ, ಜಿ.ಪಂ ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT