ಶನಿವಾರ, ಆಗಸ್ಟ್ 13, 2022
22 °C
ಹನೂರು, ರಾಮಾಪುರ, ಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲಿ ಗಾಂಜಾ ಪ್ರಕರಣಗಳು ಹೆಚ್ಚು,

ಚಾಮರಾಜನಗರ ಜಿಲ್ಲೆಯಲ್ಲೂ ಡ್ರಗ್ಸ್‌ ಜಾಲ ಸಕ್ರಿಯ: ಸಿಸಿಬಿಯಿಂದ ನಾಲ್ವರ ವಿಚಾರಣೆ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಬೆಂಗಳೂರಿನಲ್ಲಿ ಡ್ರಗ್ಸ್‌ ಮಾಫಿಯಾದ ವಿರುದ್ಧ ಸಿಸಿಬಿ ಪೊಲೀಸರು ನಡೆಯುತ್ತಿರುವ ಕಾರ್ಯಾಚರಣೆ ಸದ್ದು ಮಾಡುತ್ತಿದ್ದಂತೆಯೇ ಗಡಿ ಜಿಲ್ಲೆಯಲ್ಲೂ ಮಾದಕ ವಸ್ತುಗಳ ಬಗೆಗಿನ ಚರ್ಚೆ ಮುನ್ನಲೆಗೆ ಬಂದಿದೆ. 

ಎರಡು ದಿನಗಳ ಹಿಂದೆ ಸಿಸಿಬಿ ಪೊಲೀಸರು, ಹನೂರು ತಾಲ್ಲೂಕಿನ ಪುಷ್ಪಪುರ, ಶೆಟ್ಟಹಳ್ಳಿ ಹಾಗೂ ಮಹದೇಶ್ವರ ಬೆಟ್ಟದಿಂದ ನಾಲ್ವರನ್ನು ವಿಚಾರಣೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್‌ ಅವರು ಇದನ್ನು ‘ಪ್ರಜಾವಾಣಿ’ಗೆ ಖಚಿತ ಪಡಿಸಿದ್ದಾರೆ. ನಾಲ್ವರ ಪೈಕಿ ಒಬ್ಬರ ವಿರುದ್ಧ ಜಿಲ್ಲೆಯಲ್ಲೂ ಈ ಹಿಂದೆ ಪ್ರಕರಣ ದಾಖಲಾಗಿತ್ತು ಎಂದು ಅವರು ಹೇಳಿದ್ದಾರೆ. ಮೂವರನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ ಎಂಬ ಮಾಹಿತಿಯೂ ಇದೆ. 

ಜಿಲ್ಲೆಯಲ್ಲೂ ಡ್ರಗ್ಸ್‌ ಜಾಲ ಸಕ್ರಿಯವಾಗಿದ್ದು, ಕಾಡಂಚಿನ ಪ್ರದೇಶಗಳಲ್ಲಿ ಗಾಂಜಾ ದಂಧೆ ನಡೆಯುತ್ತಿರುವುದು ರಹಸ್ಯವಾಗಿ ಉಳಿದಿಲ್ಲ. ಹನೂರು, ಕೊಳ್ಳೇಗಾಲ ಗ್ರಾಮಾಂತರ, ಚಾಮರಾಜನಗರ ತಾಲ್ಲೂಕಿನ ಪುಣಜನೂರು ಹಾಗೂ ಯಳಂದೂದು ತಾಲ್ಲೂಕಿನ ಬಿಆರ್‌ಟಿ ಅರಣ್ಯಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಗಾಂಜಾ ಬೆಳೆದಿರುವ ನಿದರ್ಶನಗಳಿವೆ. 

ಮೂರ್ನಾಲ್ಕು ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಪೊಲೀಸರು ದಾಖಲಿಸಿರುವ ಪ್ರಕರಣಗಳು ಹಾಗೂ ವಶಪಡಿಸಿಕೊಂಡಿರುವ ಗಾಂಜಾದ ವಿವರಗಳನ್ನು ನೋಡಿದರೆ ಇದು ಮನದಟ್ಟಾಗುತ್ತದೆ.

2018ರಲ್ಲಿ ಹೆಚ್ಚು ಪ್ರಕರಣ: ಐದಾರು ವರ್ಷಗಳ ಅಂಕಿ ಅಂಶಗಳನ್ನು ಗಮನಿಸದರೆ, ಮಾದಕ ದ್ರವ್ಯಕ್ಕೆ ಸಂಬಂಧಿಸಿದಂತೆ 2018ರಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆ ವರ್ಷ ಪೊಲೀಸರು 46 ‍ಪ್ರಕರಣಗಳನ್ನು ದಾಖಲಿಸಿ 500 ಕೆಜಿಯಷ್ಟು ಗಾಂಜಾ ವಶಪಡಿಸಿಕೊಂಡಿದ್ದರು. 2019ರಲ್ಲಿ 11 ಪ್ರಕರಣಗಳಲ್ಲಿ 120 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಈ ವರ್ಷ (2020) ಈಗಾಗಲೇ 8 ಪ್ರಕರಣಗಳನ್ನು ದಾಖಲಿಸಲಾಗಿದ್ದು, 150 ಕೆಜಿಗಳಷ್ಟು ಗಾಂಜಾ ಜಪ್ತಿ ಮಾಡಲಾಗಿದೆ. 2016ರಲ್ಲಿ 12 ಹಾಗೂ 2017ರಲ್ಲಿ 20 ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದರು. 

ಎರಡು ವರ್ಷಗಳಿಂದೀಚೆಗೆ ಚಾಮರಾಜನಗರ ಹಾಗೂ ಯಳಂದೂರು ತಾಲ್ಲೂಕುಗಳಲ್ಲಿ ಗಾಂಜಾ ಪ್ರಕರಣಗಳು ವರದಿಯಾಗುತ್ತಿಲ್ಲ. 

‘ನಮ್ಮ ಜಿಲ್ಲೆಯಲ್ಲಿ ಹನೂರು, ರಾಮಾಪುರ, ಮಹದೇಶ್ವರ ಬೆಟ್ಟ ಹಾಗೂ ಕೊಳ್ಳೇಗಾಲದ ಕೆಲವು ಭಾಗಗಳಲ್ಲಿ ಗಾಂಜಾ ಬೆಳೆಯುವವರಿದ್ದಾರೆ. ಇದರ ವಿರುದ್ಧ ನಾವು ನಿರಂತರ ಕಾರ್ಯಾಚರಣೆ ಮಾಡುತ್ತಾ ಬರುತ್ತಿದ್ದೇವೆ. 2018ರಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ವರ್ಷ ಈವರೆಗೆ ಎಂಟು ಪ್ರಕರಣಗಳನ್ನು ದಾಖಲಿಸಿದ್ದೇವೆ. 150 ಕೆಜಿಗಳಷ್ಟು ಗಾಂಜಾ ವಶಪಡಿಸಿಕೊಂಡಿದ್ದೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಜನವಸತಿ ಇಲ್ಲದ ಪ್ರದೇಶದಲ್ಲಿ ಬೆಳೆ: ಕಾಡು ಮೇಡುಗಳಿಂದ ಕೂಡಿದ ಪ್ರದೇಶದಲ್ಲಿ ತೀರಾ ಒಳ ಭಾಗದಲ್ಲಿರುವ ಕೃಷಿ ಜಮೀನಿನಲ್ಲಿ ಕೃಷಿ ಬೆಳೆಗಳ ಮಧ್ಯೆ ಗಾಂಜಾ ಗಿಡಗಳನ್ನು ಬೆಳೆಯಲಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಬೆಳೆಯುವವರು ಕಡಿಮೆ. ಬೆರಳೆಣಿಕೆ ಗಿಡಗಳನ್ನು ಮಾತ್ರ ಬೆಳೆಯುತ್ತಾರೆ. ಕೃಷಿ ಜಮೀನುಗಳಲ್ಲಿ ಬೆಳೆಗಳ ಪೈರು ಮಧ್ಯೆ ದೂರ ದೂರದಲ್ಲಿ ಗಾಂಜಾ ಗಿಡ ಬೆಳೆಸಿದರೆ ಪೊಲೀಸರಿಗೆ ಹಾಗೂ ಜನರಿಗೆ ಗೊತ್ತಾಗುವುದಿಲ್ಲ ಎಂಬ ಉದ್ದೇಶದಿಂದ ಈ ರೀತಿ ಮಾಡುತ್ತಾರೆ.

ಕೊಳ್ಳೇಗಾಲ ಗ್ರಾಮಾಂತರ, ಹನೂರು, ರಾಮಾಪುರ, ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶ ಹೆಚ್ಚಿದ್ದು, ಇಲ್ಲಿ ಜನ ವಸತಿ ಕಡಿಮೆ. ಪಟ್ಟಣ ಪ್ರದೇಶಕ್ಕಿಂತ ತುಂಬಾ ದೂರದಲ್ಲಿದೆ. ಜನರ ಸಂಚಾರವೂ ಹೆಚ್ಚಿಲ್ಲ ಎಂಬ ಕಾರಣಕ್ಕೆ ದಂಧೆಕೋರರು ಈ ಪ್ರದೇಶಗಳಲ್ಲಿ ಗಾಂಜಾ ಬೆಳೆಯುತ್ತಾರೆ ಎಂದು ಪೊಲೀಸರು ಹೇಳುತ್ತಾರೆ.

ಜಿಲ್ಲೆಯಿಂದ ಬೆಂಗಳೂರಿಗೆ ಗಾಂಜಾ ಪೂರೈಕೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಜಿಲ್ಲೆಯ ಕೆಲವರು ಇದರಲ್ಲಿ ಸಕ್ರಿಯರಾಗಿದ್ದಾರೆ ಎಂಬ ಗುಮಾನಿ ಪೊಲೀಸರದ್ದು. ಈ ಹಿಂದೆ ಬೆಂಗಳೂರಿನಲ್ಲಿ ವರದಿಯಾದ ಎರಡು–ಮೂರು ಪ್ರಕರಣಗಳಲ್ಲಿ ಮಾದಕ ದ್ರವ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಕೆಲವವರನ್ನು ಬಂಧಿಸಲಾಗಿತ್ತು. 

ಕಳೆದ ವರ್ಷ ಜುಲೈ ತಿಂಗಳಲ್ಲಿ ಗಾಂಜಾ ಮಾರಾಟದ ದುಡ್ಡಿನ ವಿಚಾರದಲ್ಲಿ ಹನೂರು ತಾಲ್ಲೂಕಿನ ಮಣಗಳ್ಳಿ ಸಮೀಪ ವ್ಯಕ್ತಿಯೊಬ್ಬರ ಕೊಲೆಯೂ ನಡೆದಿತ್ತು. 

ಅರಣ್ಯ ಇಲಾಖೆ ಜೊತೆ ಸೇರಿ ಕಾರ್ಯಾಚರಣೆ: ಎಸ್‌‍ಪಿ

‘ಗಾಂಜಾ ಬೆಳೆಯುವವರು ಹಾಗೂ ಈ ಜಾಲದಲ್ಲಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಡಿವೈಎಸ್‌ಪಿ ಹಾಗೂ ವಿವಿಧ ಠಾಣೆಗಳ ಇನ್‌ಸ್ಪೆಕ್ಟರ್‌ಗಳಿಗೆ ಈಗಾಗಲೇ ಸೂಚಿಸಲಾಗಿದೆ. ಅರಣ್ಯದ ಅಂಚಿನಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವುದರಿಂದ ಅರಣ್ಯ ಇಲಾಖೆಯ ನೆರವನ್ನು ತೆಗೆದುಕೊಂಡು ಜಂಟಿ ಕಾರ್ಯಾಚರಣೆ ನಡೆಸಲಾಗುವುದು’ ಎಂದು ದಿವ್ಯ ಸಾರಾ ಥಾಮಸ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಈ ಬಗ್ಗೆ ‍‍‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್‌) ಮನೋಜ್‌ಕುಮಾರ್‌ ಅವರು, ‘ಅರಣ್ಯ ವ್ಯಾಪ್ತಿಯಲ್ಲಿ ಅಥವಾ ಕಾಡಂಚಿನ ಪ್ರದೇಶದಲ್ಲಿ ಯಾರಾದರೂ ಗಾಂಜಾ ಬೆಳೆದಿರುವುದು ಗಮನಕ್ಕೆ ಬಂದರೆ ನಾವು ತಕ್ಷಣ ಪೊಲೀಸರಿಗೆ ಮಾಹಿತಿ ನೀಡುತ್ತೇವೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಎಲ್ಲ ಸಹಕಾರ ನೀಡಲು ನಾವು ಸಿದ್ಧ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.