ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ದೀನಬಂಧು ವಿದ್ಯಾರ್ಥಿನಿಗೆ ಸಚಿವರ ಅಚ್ಚರಿಯ ಕರೆ

ಎಸ್ಸೆಸ್ಸೆಲ್ಸಿ ಪರೀಕ್ಷೆ, ಪರೀಕ್ಷಾ ಕೇಂದ್ರದ ಬಗ್ಗೆ ವಿಚಾರಣೆ, ಧೈರ್ಯ ತುಂಬುವ ಮಾತನಾಡಿದ ಸುರೇಶ್‌ ಕುಮಾರ್‌
Last Updated 4 ಜುಲೈ 2020, 16:50 IST
ಅಕ್ಷರ ಗಾತ್ರ

ಚಾಮರಾಜನಗರ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಶುಕ್ರವಾರ ರಾತ್ರಿ ನಗರದ ದೀನಬಂಧು ಪ್ರೌಢ ಶಾಲೆಯ ಗೌರಿ ಎಂಬ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ ಶುಕ್ರವಾರ ರಾತ್ರಿ ಕರೆ ಮಾಡಿ ಪರೀಕ್ಷೆ ಹಾಗೂ ಹಾಗೂ ಕೋವಿಡ್‌–19 ತಡೆಗೆ ಪರೀಕ್ಷಾ ಕೇಂದ್ರದಲ್ಲಿ ಕೈಗೊಳ್ಳಲಾಗಿದ್ದ ಮು‌ನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿಚಾರಿಸಿದ್ದಾರೆ.

ಪರೀಕ್ಷೆ ಆರಂಭಕ್ಕೂ ಮುನ್ನ ಗೌರಿಯ ತಂದೆ, ‘ಕೋವಿಡ್‌–19 ಭೀತಿಯ ನಡುವೆ ಪರೀಕ್ಷೆ ನಡೆಸಬಾರದು. ಪರೀಕ್ಷೆಯನ್ನು ಮುಂದೂಡಬೇಕು’ ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದರು. ಇದನ್ನು ಗಮನಿಸಿದ್ದ ಸುರೇಶ್‌ ಕುಮಾರ್‌ ಅವರು ಅಂದೇ ಅವರಿಗೆ ಕರೆ ಮಾಡಿ, ಮಗಳೊಂದಿಗೆ ಮಾತನಾಡುವ ಇರಾದೆ ವ್ಯಕ್ತಪಡಿಸಿದ್ದರು. ಆ ನಂತರ ಗೌರಿಯೊಂದಿಗೂ ಮಾತನಾಡಿದ್ದ ಸಚಿವರು, ಧೈರ್ಯ ತುಂಬಿದ್ದರಲ್ಲದೇ ಕೈಗೊಳ್ಳಲಾಗಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿವರಿಸಿದ್ದರು.

ಪಾಯಸ ಕಳುಹಿಸಲಾ..:ಶುಕ್ರವಾರ ರಾಜ್ಯದಾದ್ಯಂತ ಪರೀಕ್ಷೆ ಯಶಸ್ವಿಯಾಗಿ ಮುಕ್ತಾಯವಾಗಿತ್ತು. ಶುಕ್ರವಾರ ರಾತ್ರಿ ಮತ್ತೆ ವಿದ್ಯಾರ್ಥಿನಿಯ ತಂದೆಗೆ ಕರೆ ಮಾಡಿದ್ದ ಸುರೇಶ್‌ ಕುಮಾರ್‌ ಅವರು, ಗೌರಿಯೊಂದಿಗೆ ಒಂದೂ ಮುಕ್ಕಾಲು ನಿಮಿಷ ಮಾತನಾಡಿದ್ದಾರೆ.

‘ಹೇಗಿದ್ದೀಯಮ್ಮಾ,ಈಗ ನಿನ್ನ ಮನಸ್ಸಿನ ಭಾರ ಇಳಿಯಿತಾ? ಮನೆಗೆ ಬಂದು ಏನು ತಿಂದೆ? ರಾತ್ರಿ ಊಟಕ್ಕೆ ಪಾಯಸ ಮಾಡಿದ್ದಾರಾ? ಎಂದು ಕೇಳಿದ್ದಾರೆ. ಪಾಯಸ ಮಾಡಿಲ್ಲ ಎಂದು ಗೌರಿ ಪ್ರತಿಕ್ರಿಯಿಸಿದಾಗ, ‘ನಮ್ಮ ಮನೆಯಲ್ಲಿ ಪಾಯಸ ಮಾಡಿದ್ದಾರೆ, ಫೋನ್‌ನಲ್ಲೇ ಕಳುಹಿಸಲಾ’ ಎಂದು ಸಚಿವರು ತಮಾಷೆಯಾಗಿ ಮಾತನಾಡಿದ್ದಾರೆ.

ಮತ್ತೆ ಮಾತು ಮುಂದುವರಿಸಿದ ಅವರು, ‘ಪರೀಕ್ಷೆ ಬರೆಯಲು ಧೈರ್ಯ ಬಂತು ತಾನೆ? ವಿಜ್ಞಾನ, ಗಣಿತ ಪರೀಕ್ಷೆ ಹೇಗಿತ್ತು? ಪರೀಕ್ಷಾ ಕೇಂದ್ರದ ವ್ಯವಸ್ಥೆಗಳು ಹೇಗಿದ್ದವು’ ಎಂದು ವಿಚಾರಿಸಿದ್ದಾರೆ. ಆಗಸ್ಟ್ ಮೊದಲ ವಾರದಲ್ಲಿ ಫಲಿತಾಂಶ ಬರುತ್ತದೆ. ಆಗ ನೀನೆ ನನಗೆ ಕರೆ ಮಾಡಿ ಹೇಳಬೇಕು. ಎರಡು ಮೂರು ದಿನಗಳ ಕಾಲ ಆರಾಮವಾಗಿರು, ಚೆನ್ನಾಗಿ ನಿದ್ದೆ ಮಾಡು’ ಎಂದು ಧೈರ್ಯ ತುಂಬಿದ್ದಾರೆ.

‘ಪರೀಕ್ಷಾ ಸಮಯದಲ್ಲಿ ಪಾಲಿಸಿದ, ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸ್‌ ಬಳಕೆಯನ್ನು ಇನ್ನೂ ಮರೆಯಬಾರದು’ ಎಂದು ಸಲಹೆಯನ್ನೂ ನೀಡಿದ್ದಾರೆ.

ನಂತರ ಆಕೆಯ ತಂದೆ ಹಾಗೂ ತಾಯಿಯೊಂದಿಗೂ ಮಾತನಾಡಿ, ‘‌ನಿಮ್ಮ ಮಗಳನ್ನು ನಮ್ಮ ಮಗಳ ರೀತಿ ನೋಡಿಕೊಂಡಿದ್ದೇವೆ. ಪರೀಕ್ಷೆ ಬರೆದ ನಂತರ ನಿಮಗೆ ಕೈಗೆ ಒಪ್ಪಿಸಿದ್ದೇವೆ.ಚೆನ್ನಾಗಿ ಬೆಳೆಸಿ, ವಿದ್ಯೆ ಕೊಡಿ’ ಎಂದು ಹಾರೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT