ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ ಲೋಕಸಭಾ ಕ್ಷೇತ್ರ: ಬಾಲರಾಜ್‌ ‘ಕಮಲ’ದ ಹುರಿಯಾಳು

ಒಂದು ಬಾರಿ ಶಾಸಕನಾಗಿ ಅನುಭವ, ಅಭ್ಯರ್ಥಿ ಆಯ್ಕೆಯಲ್ಲಿ ಯಡಿಯೂರಪ್ಪ ಮೇಲುಗೈ
Published 14 ಮಾರ್ಚ್ 2024, 6:09 IST
Last Updated 14 ಮಾರ್ಚ್ 2024, 6:09 IST
ಅಕ್ಷರ ಗಾತ್ರ

ಚಾಮರಾಜನಗರ: ಡಜನ್‌ ಆಕಾಂಕ್ಷಿಗಳಿದ್ದ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯು ಕೊಳ್ಳೇಗಾಲದ ಮಾಜಿ ಶಾಸಕ ಎಸ್‌.ಬಾಲರಾಜ್‌ ಅವರಿಗೆ ಟಿಕೆಟ್‌ ಘೋಷಿಸಿದೆ. 

1999ರಿಂದಲೂ ಚುನಾವಣಾ ರಾಜಕೀಯದಲ್ಲಿರುವ ಬಾಲರಾಜ್‌ ಲೋಕಸಭಾ ಚುನಾವಣೆಗೆ ಮೊದಲ ಬಾರಿ ಸ್ಪರ್ಧಿಸುತ್ತಿದ್ದಾರೆ. ಒಂದು ಬಾರಿ ಶಾಸಕರಾಗಿ ಅಧಿಕಾರ, ಆಡಳಿತದ ಅನುಭವವಿರುವ ಅವರು ರಾಷ್ಟ್ರ ರಾಜಕಾರಣಕ್ಕೆ ಹೊಸ ಮುಖ.

ಮೂರು ದಶಕಗಳ ರಾಜಕೀಯ ಜೀವನದಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌, ಕೆಜೆಪಿ ಮತ್ತೆ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದ ಬಾಲರಾಜ್‌, ಈಗ ಬಿಜೆಪಿಯಲ್ಲಿದ್ದಾರೆ. ಹತ್ತು ತಿಂಗಳು ಹಿಂದಿನವರೆಗೂ ಅವರು ಕಾಂಗ್ರೆಸ್‌ ಮುಖಂಡರಾಗಿದ್ದರು. 

ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಕೊಳ್ಳೇಗಾಲ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಕಾಂಗ್ರೆಸ್‌ ಎ.ಆರ್‌.ಕೃಷ್ಣಮೂರ್ತಿಯವರಿಗೆ ಮಣೆ ಹಾಕಿದ್ದರಿಂದ ಮುನಿಸಿಕೊಂಡು ಪಕ್ಷ ತೊರೆದಿದ್ದರು. ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಪ್ರಯತ್ನದಿಂದಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಬಳಿಕ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎನ್‌.ಮಹೇಶ್‌ ಪರವಾಗಿ ಕೆಲಸ ಮಾಡಿದ್ದರು. 

‘ಪಕ್ಷ ಸೇರ್ಪಡೆ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಟಿಕೆಟ್‌ ನೀಡುವ ಭರವಸೆಯನ್ನು ಯಡಿಯೂರಪ್ಪ ಮತ್ತು ವಿಜಯೇಂದ್ರ ನೀಡಿದ್ದರು. ಅದರಂತೆ ಈಗ ಅವರಿಗೇ ಟಿಕೆಟ್‌ ಸಿಕ್ಕಿದೆ’ ಎಂದು ಅವರ ಆಪ್ತರು ತಿಳಿಸಿದ್ದಾರೆ.  

ಯಡಿಯೂರಪ್ಪ ಮೇಲುಗೈ: ಕ್ಷೇತ್ರದಲ್ಲಿ ಬಿಜೆಪಿಗೆ ಟಿಕೆಟ್‌ಗಾಗಿ 12 ಮಂದಿ ಆಕಾಂಕ್ಷಿಗಳಿದ್ದರು. 

ಎಸ್‌.ಬಾಲರಾಜ್‌, ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರ ಕಿರಿಯ ಅಳಿಯ ಡಾ.ಎನ್‌.ಎಸ್‌.ಮೋಹನ್‌, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಗಕ್ಷ ಎಸ್‌.ಮಹದೇವಯ್ಯ, ಮಾಜಿ ಸಚಿವ ಕೋಟೆ ಎಂ. ಶಿವಣ್ಣ, ನಿವೃತ್ತ ಐಎಫ್‌ಎಸ್‌ ಅಧಿಕಾರಿ ರಾಜು ಅವರ ಹೆಸರುಗಳು ಪ್ರಮುಖವಾಗಿ ಕೇಳಿ ಬಂದಿತ್ತು.

‘ಇತ್ತೀಚೆಗೆ ಮೈಸೂರಿನಲ್ಲಿ ನಡೆದಿದ್ದ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಬಾಲರಾಜ್‌, ಮೋಹನ್‌ ಅವರ ಹೆಸರು ಪ್ರಮುಖವಾಗಿ ಕೇಳಿ ಬಂದಿತ್ತು. ಕೊನೆಯ ಹಂತದವರೆಗೂ ಇಬ್ಬರ ನಡುವೆ ಪ್ರಬಲ ಪೈಪೋಟಿ ನಡೆದಿದೆ. ಅಂತಿಮವಾಗಿ ಯಡಿಯೂರಪ್ಪ ಅವರ ಸೂಚಿಸಿರುವ ಹೆಸರನ್ನು ವರಿಷ್ಠರು ಅಂತಿಮಗೊಳಿಸಿದ್ದಾರೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ. 

ಟಿಕೆಟ್‌ ಸಿಕ್ಕಿದ್ದು ಹೇಗೆ?: ‘ಮೋಹನ್‌ ಅವರಿಗೆ ಆರ್‌ಎಸ್‌ಎಸ್‌ ಬೆಂಬಲವಿತ್ತು. ವೈದ್ಯರಾಗಿ ಉತ್ತಮ ಹೆಸರೂ ಗಳಿಸಿದ್ದರು. ಸಮಾಜ ಸೇವೆಯಲ್ಲೂ ತೊಡಗಿಕೊಂಡಿದ್ದರು. ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರು ಮೋಹನ್‌ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಪಕ್ಷ ನಡೆಸಿದ್ದ ಸಮೀಕ್ಷೆಯಲ್ಲಿ ಬಾಲರಾಜ್‌ ಅವರ ಪರವಾಗಿ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಕಾರಣಕ್ಕೆ ವರಿಷ್ಠರು ಬಾಲರಾಜ್‌ ಅವರನ್ನು ಆಯ್ಕೆ ಮಾಡಿದ್ದಾರೆ’ ಎಂದು ಪಕ್ಷದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಬಾಲರಾಜ್‌ ಪಕ್ಷೇತರ ಶಾಸಕರಾಗಿದ್ದವರು. ಎಲ್ಲ ಪಕ್ಷಗಳ ಮುಖಂಡರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಶಾಸಕರಾಗಿದ್ದಾಗಿ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಸರು ಕೆಡಿಸಿಕೊಂಡಿಲ್ಲ. ಕೊಳ್ಳೇಗಾಲ ವ್ಯಾಪ್ತಿಯಲ್ಲಿ ಅಭಿಮಾನಿ ಬಳಗವೂ ಇದೆ. ಗಾಯಕರಾಗಿ, ಕಲಾ ಪೋಷಕರಾಗಿ ಸಾಂಸ್ಕೃತಿಕ ವಲಯದಲ್ಲೂ ಗುರುತಿಸಿಕೊಂಡಿದ್ದಾರೆ. ವರಿಷ್ಠರು ಅದನ್ನೆಲ್ಲ ಪರಿಗಣಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ. 

‘ಮೋಹನ್‌ ಅವರು ಉತ್ತಮ ಆಯ್ಕೆಯಾಗಿದ್ದರೂ, ಹಾಲಿ ಸಂಸದರ ಅಳಿಯ ಆಗಿರುವುದರಿಂದ ಕುಟುಂಬ ರಾಜಕಾರಣ ವಿಚಾರ ಮುನ್ನೆಲೆಗೆ ಬರುತ್ತಿತ್ತು. ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಹೆಚ್ಚು ಅಭಿವೃದ್ಧಿ ಕೆಲಸಗಳು ಆಗಿಲ್ಲ ಎಂಬ ಅಭಿಪ್ರಾಯವೂ ಜನರಲ್ಲಿದೆ. ಇದು ಪಕ್ಷದ ಮೇಲೆ ಪರಿಣಾಮ ಬೀರಬಹುದು ಎಂಬ ಅಳುಕೂ ನಾಯಕರಿಗಿತ್ತು’ ಎಂದು ಮುಖಂಡರೊಬ್ಬರು ತಿಳಿಸಿದರು. 

ಎಸ್‌.ಬಾಲರಾಜ್‌
ಎಸ್‌.ಬಾಲರಾಜ್‌

ಅಭ್ಯರ್ಥಿಯ ಗೆಲುವೇ ಗುರಿ: ನಿರಂಜನಕುಮಾರ್‌

‘ರಾಷ್ಟ್ರೀಯ ವರಿಷ್ಠರು ಎಸ್‌.ಬಾಲರಾಜ್‌ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ. ನಾಳೆಯಿಂದಲೇ ಪ್ರಚಾರ ಆರಂಭಿಸುತ್ತೇವೆ. ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಬೇಕು ಎಂದು ರಾಜ್ಯಾಧ್ಯಕ್ಷ ವಿಜಯೇಂದ್ರ ಸಂಕಲ್ಪ‍ ಮಾಡಿದ್ದಾರೆ. ಅದನ್ನು ಈಡೇರಿಸುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್‌.ನಿರಂಜನ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.  ‘ಕ್ಷೇತ್ರದಲ್ಲಿ ಹೆಚ್ಚು ಆಕಾಂಕ್ಷಿಗಳು ಇರುವುದು ಸಹಜ. ವರಿಷ್ಠರು ಎಲ್ಲರ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಂಡಿದ್ದಾರೆ. ಪಕ್ಷದಲ್ಲಿ ಭಿನ್ನಮತ ಇಲ್ಲ. ಬಾಲರಾಜ್‌ ಅವರ ಗೆಲುವಿಗೆ ಎಲ್ಲರೂ ಶ್ರಮ ಹಾಕಲಿದ್ದಾರೆ’ ಎಂದರು. 

ಗೆಲ್ಲುವ ವಿಶ್ವಾಸ: ಬಾಲರಾಜ್‌

‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡ ಎಸ್‌.ಬಾಲರಾಜ್‌ ‘ಪಕ್ಷ ನನ್ನನ್ನು ಗುರುತಿಸಿ ಟಿಕೆಟ್ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಗೃಹಸಚಿವ ಅಮಿತ್ ಶಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನಾಯಕರಾದ ಬಿ.ಎಸ್.ಯಡಿಯೂರಪ್ಪ ವಿಜಯೇಂದ್ರ ಸೇರಿದಂತೆ ಎಲ್ಲ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದರು.  ‘ದೇಶ ಅಭಿವೃದ್ಧಿಯಾಗಬೇಕಾದರೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು. ಅವರ ಕೈ ಬಲಪಡಿಸಬೇಕಾದರೆ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಪಕ್ಷ ಗೆಲ್ಲಬೇಕು. ಪಕ್ಷ ಕೊಟ್ಟಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡು ಹಗಲಿರುಳು ಗೆಲುವಿಗಾಗಿ ಶ್ರಮಿಸುತ್ತೇನೆ. ಪಕ್ಷದ ಮುಖಂಡರು ಕ್ಷೇತ್ರದ ಜನ ನನಗೆ ಸಹಕಾರ ನೀಡಲಿದ್ದಾರೆ ಎನ್ನುವ ಸಂಪೂರ್ಣ ವಿಶ್ವಾಸವಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT