ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಾಲ್‌ ಜಲಾಶಯ ಭರ್ತಿ: ಅನ್ನದಾತರ ಹರ್ಷ

50ಕ್ಕೂ ಹೆಚ್ಚು ಗ್ರಾಮಗಳ 15,100 ಎಕರೆ ಪ್ರದೇಶಕ್ಕೆ ನೀರುಣಿಸುವ ಜಲಾವರ
Last Updated 2 ಡಿಸೆಂಬರ್ 2021, 16:26 IST
ಅಕ್ಷರ ಗಾತ್ರ

ಕೊಳ್ಳೇಗಾಲ/ಹನೂರು:ಕೊಳ್ಳೇಗಾಲ ಹಾಗೂ ಹನೂರು ತಾಲ್ಲೂಕಿನ ರೈತರ ಜೀವನಾಡಿಯಾಗಿರುವ ಗುಂಡಾಲ್ ಜಲಾಶಯ 43 ವರ್ಷದ ಅವಧಿಯಲ್ಲಿ ಮೊ‌ದಲ ಬಾರಿಗೆ ಕೋಡಿ ಬಿದ್ದಿರುವುದು ಎರಡೂ ತಾಲ್ಲೂಕುಗಳ ರೈತರಲ್ಲಿ ಹರ್ಷ ಮೂಡಿಸಿದೆ.

1978ರಲ್ಲಿ ನಿರ್ಮಾಣಗೊಂಡಿದ್ದ ಜಲಾಶಯ 2005, 2015ರಲ್ಲಿ ಬಹುತೇಕ ಭರ್ತಿಯಾಗಿತ್ತು. ಆದರೆ ಕೋಡಿ ಬಿದ್ದಿರಲಿಲ್ಲ. ಈ ವರ್ಷ ನವೆಂಬರ್‌ ತಿಂಗಳಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಜಲಾಶಯಕ್ಕೆ ಸಾಕಷ್ಟು ನೀರು ಹರಿದು ಬಂದಿದ್ದು, ಜಲಾಶಯ ಕೋಡಿ ಬಿದ್ದಿದೆ.

2,267 ಅಡಿ ಗರಿಷ್ಠ ಮಟ್ಟದ ಜಲಾಶಯ 697 ಎಕರೆ ವಿಸ್ತೀರ್ಣ ಹೊಂದಿದೆ. 0.97 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಈ ಅಣೆಕಟ್ಟು 15,100 ಎಕರೆ ಕೃಷಿ ಭೂಮಿಗೆ ನೀರುಣಿಸುತ್ತದೆ.

ಈ ಜಲಾಶಯದ ನೀರನ್ನು ನಂಬಿ ಕಾಮಗೆರೆ, ಸಿಂಗನಲ್ಲೂರು, ಮಧುವನಹಳ್ಳಿ, ಆಂಜನೇಯಪುರ, ಕೊಂಗರಹಳ್ಳಿ, ಕಣ್ಣೂರು, ಲೊಕ್ಕನಹಳ್ಳಿ, ಸಿದ್ದಯ್ಯನಪುರ, ಮತ್ತೀಪುರ, ಇಕ್ಕಡಹಳ್ಳಿ ಸೇರಿದಂತೆ 50ಕ್ಕೂ ಹೆಚ್ಚು ಗ್ರಾಮದವರು ವ್ಯವಸಾಯ ಮಾಡುತ್ತಾರೆ.

‘ಪ್ರತಿ ವರ್ಷ ಜಲಾಶಯವು ಅರ್ಧದಷ್ಟು ಮಾತ್ರ ಭರ್ತಿಯಾಗುತ್ತಿತ್ತು. ಇದೇ ಮೊದಲ ಬಾರಿಗೆ ಕೋಡಿ ಬಿದ್ದಿದೆ. ಈ ಬೇಸಿಗೆಯಲ್ಲಿ ವ್ಯವಸಾಯಕ್ಕೆ ನೀರಿನ ಕೊರತೆ ಕಾಡದು’ ಎಂದು ಗುಂಡಾಲ್‌ ಭಾಗದ ರೈತ ಮಾದೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೂರು ವರ್ಷದ ಹಿಂದೆ ಜಲಾಶಯದಲ್ಲಿ ನೀರು ಇಲ್ಲದ ಕಾರಣ ವ್ಯವಸಾಯ ಮಾಡಿರಲಿಲ್ಲ. ಆಗ ನಮ್ಮ ಜೀವನ ನಡೆಸುವುದಕ್ಕೆ ಕಷ್ಟವಾಗಿತ್ತು. ಈ ಬಾರಿ ಭರ್ತಿಯಾಗಿದೆ. ಯಾವುದೇ ಯೋಚನೆ ಇಲ್ಲ’ ಎಂದು ಮೊಳಗನಕಟ್ಟೆ ರೈತ ರುದ್ರಸ್ವಾಮಿ ಹೇಳಿದರು.

ಸದ್ಬಳಕೆಗೆ ಮನವಿ: ಜಲಾಶಯದಲ್ಲಿ ತುಂಬಿರುವ ನೀರು ಪೂರ್ಣ ಪ್ರಮಾಣದಲ್ಲಿ ರೈತರ ಬಳಕೆಗೆ ಸಿಗಬೇಕು. ಅದಕ್ಕಾಗಿ ಕಾವೇರಿ ನೀರಾವರಿ ನಿಗಮ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

‘ಮೊದಲು ಜಲಾಶಯದ ನೀರು ಗೇಟ್‌ಗಳ ಮೂಲಕ ಪೋಲಾಗುತ್ತಿತ್ತು. ಇದರಿಂದ ರೈತರಿಗೆ ಅನುಕೂಲವಾಗುತ್ತಿರಲಿಲ್ಲ. ಎರಡೂ ಗೇಟ್‌ಗಳ ಬುಷ್‌ಗಳನ್ನು ದುಷ್ಕರ್ಮಿಗಳು ಹಾಳು ಮಾಡಿದ್ದರಿಂದ ಗೇಟ್‌ಗಳಲ್ಲಿ ನಿರಂತರವಾಗಿ ನೀರು ಹರಿಯುತ್ತಿದೆ. ಅಧಿಕಾರಿಗಳು ಇದನ್ನು ದುರಸ್ತಿ ಪಡಿಸಬೇಕು’ ಎಂದು ಕಣ್ಣೂರು ಗ್ರಾಮದ ರೈತ ಜಗದೀಶ್ ಒತ್ತಾಯಿಸಿದರು.

‘ಜಲಾಶಯ ತುಂಬಿರುವುದು ಸಂತಸದ ವಿಚಾರ. ಆದರೆ ತುಂಬಿರುವ ನೀರು ರೈತರಿಗೆ ಉಪಯೋಗವಾಗಬೇಕು. ಎಡದಂಡೆ ಹಾಗೂ ಬಲದಂಡೆ ನಾಲೆಗಳು ಸಂಪೂರ್ಣವಾಗಿ ಹಾಳಾಗಿವೆ. ನಾಲೆಗಳಲ್ಲಿ ನೀರು ಹರಿಸಿದರೆ ಅದು ಒಂದೆರಡು ಜಮೀನುಗಳಿಗೆ ಮಾತ್ರ ಸೀಮಿತವಾಗುತ್ತಿದೆ. ನಾಲೆಗಳೆಲ್ಲಾ ಹೂಳಿನಿಂದ ಆವೃತವಾಗಿರುವುದು ಇದಕ್ಕೆ ಕಾರಣ. ನಿಗಮದ ಅಧಿಕಾರಿಗಳು ಮೊದಲು ನಾಲೆಗಳನ್ನು ಸರಿಪಡಿಸಿ ನೀರು ಹರಿಸಿದರೆ ಅನುಕೂಲವಾಗಲಿದೆ’ ಎಂದು ಗುಂಡಾಲ್ ಜಲಾಶಯ ನೀರು ಬಳಕೆದಾರರ ಸಂಘದ ಮಾಜಿ ಅಧ್ಯಕ್ಷ ಕಾಮಗೆರೆ ನಟೇಶ್ ಹೇಳಿದರು.

ರೈತನಾಗಿ ಬಾಗಿನ ಅರ್ಪಿಸಿದ್ದೇನೆ: ನರೇಂದ್ರ

ಹನೂರು ಶಾಸಕ ಆರ್‌.ನರೇಂದ್ರ ಗುರುವಾರ ವೈಯಕ್ತಿಕವಾಗಿ ಗುಂಡಾಲ್‌ ಜಲಾಶಯಕ್ಕೆ ಬಾಗಿನ ಅರ್ಪಿಸಿದರು.

ನಂತರ ಮಾತನಾಡಿದ ಅವರು, ‘43 ವರ್ಷದಲ್ಲಿ ಜಲಾಶಯವು ಭರ್ತಿಯಾಗಿರುವುದು ರೈತರಿಗೆ, ಗ್ರಾಮಸ್ಥರಿಗೆ ಮತ್ತು ನನಗೆ ತುಂಬಾ ಸಂತೋಷ ತಂದಿದೆ. ಚುನಾವಣೆ ನೀತಿ ಸಂಹಿತೆ ಇರುವುದರಿಂದ ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲು ಸಾಧ್ಯವಿಲ್ಲ. ನಾನು ಶಾಸಕನಾಗಿ ಬಂದು ಬಾಗಿನ ಅರ್ಪಿಸಿಲ್ಲ. ಒಬ್ಬ ರೈತನಾಗಿ ಬಂದು ಗ್ರಾಮಸ್ಥರ ಜೊತೆ ಬಾಗಿನ ಅರ್ಪಿಸಿದ್ದೇನೆ. ನನ್ನ ಜಮೀನಿಗೂ ಇದೇ ಜಲಾಶಯದ ನೀರು ಬರುತ್ತದೆ. ಜಲಾಶಯದ ನೀರಿನಲ್ಲೇ ಈ ಬಾರಿ ಕೃಷಿ ಮಾಡಿದ್ದೇನೆ’ ಎಂದರು.

‘ನಾಲ್ಕು ವರ್ಷದ ಹಿಂದೆ ನೀರಿಲ್ಲದೆ ಜಲಾಶಯವು ಒಣಗಿತ್ತು. ಆಗ ರೈತರಿಗೆ ವ್ಯವಸಾಯ ಮಾಡಲು ಸಾಧ್ಯವಾಗಲಿಲ್ಲ. ಈಗ ಜಲಾಶಯವು ಭರ್ತಿಯಾದ ಕಾರಣ ಸುತ್ತಮುತ್ತಲಿನ ರೈತರಿಗೆ ವ್ಯವಸಾಯ ಮಾಡಲು ಅನುಕೂಲವಾಗುತ್ತದೆ. ನನ್ನ ತಂದೆ ರಾಜುಗೌಡ ಶಾಸಕರಾಗಿದ್ದಾಗ ಈ ಜಲಾಶಯ ನಿರ್ಮಾಣ ಆಗಿತ್ತು. ಈಗ ನಾನು ಈ ಜಲಾಶಯಕ್ಕೆ ಬಾಗಿನ ಅರ್ಪಿಸುತ್ತಿದ್ದೇನೆ. ಇದು ನನ್ನ ಸೌಭಾಗ್ಯ’ ಎಂದು ಹೇಳಿದರು.

ಜಲಾಶಯಕ್ಕೆ ಜನರ ದಂಡು

ಈ ಮಧ್ಯೆ, ಜಲಾಶಯ ಕೋಡಿ ಬಿದ್ದಿರುವುದರನ್ನು ವೀಕ್ಷಿಸಲು ಸ್ಥಳೀಯರು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಜನರ ಸುರಕ್ಷತೆ ದೃಷ್ಟಿಯಿಂದ ಕಾವೇರಿ ನೀರಾವರಿ ನಿಗಮ, ಅರಣ್ಯ ಇಲಾಖೆಯ ಅಧಿಕಾರಿಗಳು ಜನರ ಭೇಟಿಗೆ ನಿರ್ಬಂಧ ವಿಧಿಸುವ ಚಿಂತನೆಯಲ್ಲಿದ್ದಾರೆ.

‘ಜಲಾಶಯ ನೋಡಲು ಬರುವ ಪ್ರವಾಸಿಗರು ನೀರಿನಲ್ಲಿ ಆಟವಾಡಲು ಹೋಗುತ್ತಾರೆ ಮತ್ತು ಕೆಲವರು ಮೀನುಗಳನ್ನು ಹಿಡಿಯಲು ನೀರಿಗೆ ಇಳಿಯುತ್ತಿದ್ದಾರೆ. ಜಲಾಶಯವು ಬಿಆರ್‌ಟಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದೆ. ಹಾಗಾಗಿ, ಹೆಚ್ಚು ಜನರು ಬಂದರೆ ವನ್ಯಪ್ರಾಣಿಗಳಿಗೆ ತೊಂದರೆಯಾಗುತ್ತದೆ ಎಂದು ಅರಣ್ಯ ಇಲಾಖೆಯವರು ಹೇಳುತ್ತಿದ್ದಾರೆ’ ಎಂದು ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ನವೀನ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT