ಸೋಮವಾರ, ಅಕ್ಟೋಬರ್ 18, 2021
23 °C
ಎರಡು ತಿಂಗಳಿಂದ ಹೆಚ್ಚಿದ ಕಾಟ, ಬೆಳೆ ಹಾನಿ, ಕೃಷಿ ಉಪಕರಣಗಳ ನಾಶ: ಕೃಷಿಕರು ಕಂಗಾಲು

ಭರಚುಕ್ಕಿ: ಕಾಡಾನೆ ಹಾವಳಿ- ರೈತರಿಗೆ ಸಂಕಷ್ಟ

ಅವಿನ್ ಪ್ರಕಾಶ್ ವಿ. Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ತಾಲ್ಲೂಕಿನ ಭರಚುಕ್ಕಿ ಜಲಪಾತದ ಸುತ್ತಮುತ್ತಲಿನ ಕೃಷಿ ಜಮೀನುಗಳಲ್ಲಿ ಎರಡು ತಿಂಗಳಿಂದ ಕಾಡಾನೆ ಹಾವಳಿ ಮಿತಿ ಮೀರಿದ್ದು, ಬೆಳೆ ನಾಶವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಶಿವನ ಸಮುದ್ರದ ಸಮೀಪದ ಭರಚುಕ್ಕಿ ಜಲಪಾತ, ಬೂದಗಟ್ಟೆ ದೊಡ್ಡಿ ಸೇರಿದಂತೆ ಸುತ್ತ ಮುತ್ತಲ ಪ್ರದೇಶದಲ್ಲಿ ಕಾಡಾನೆಗಳು ರೈತರ ಜಮೀನಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ. ಭತ್ತ ನಾಟಿ ಸಮಯದಲ್ಲಿ ಆನೆಗಳು ನಿರಂತರವಾಗಿ ಜಮೀನುಗಳಿಗೆ ಬಂದು ಭತ್ತದ ಹೊಟ್ಟಿನ ಪಾತೆಯನ್ನು ಹಾಳು ಮಾಡಿ ಹೋಗುತ್ತಿವೆ.

ಇದು ಇತ್ತೀಚಿನ ಸಮಸ್ಯೆ ಅಲ್ಲ, ಎರಡು ವರ್ಷಗಳಿಂದಲೂ ಇದೆ. ಇದೇ ಕಾರಣಕ್ಕೆ ಈ ಭಾಗದ ಕೆಲವು ರೈತರು ಕೃಷಿಯಿಂದ ದೂರ ಉಳಿದಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಗಮನಕ್ಕೆ ತಂದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಿದ್ದಾರೆ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ’ ಎಂದು ರೈತ ಶಿವಮಲ್ಲು ಅಳಲು ತೋಡಿಕೊಂಡರು.

‘ಎರಡು ತಿಂಗಳಿಂದ ಆನೆಗಳ ಹಾವಳಿ ವಿಪರೀತವಾಗಿದ್ದು, ಅರಣ್ಯ ಇಲಾಖೆ ತಕ್ಷಣವೇ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ನಾಡಿಗೆ ನುಗ್ಗಿರುವ ಆನೆಗಳನ್ನು ಕಾಡಿಗೆ ಓಡಿಸಬೇಕು. ಇಲ್ಲದಿದ್ದರೆ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು’ ಎಂದು ಅವರು ಹೇಳಿದರು. 

ರೈತರು ಕಂಗಾಲು: ‘ಕಾಡಾನೆಗಳು ನಿರಂತರವಾಗಿ ಜಮೀನಿಗೆ ಬಂದು ಬೆಳೆ ಹಾನಿ ಮಾಡಿ ಹೋಗುವುದಲ್ಲದೆ ಜಮೀನಿನ ಪಂಪ್ ಸೆಟ್, ತಂತಿ ಬೇಲಿ, ವಿದ್ಯುತ್ ಪರಿಕರಗಳನ್ನು ಹಾಳು ಮಾಡುತ್ತಿವೆ. ಸಾಲ ಮಾಡಿ ಜಮೀನಿಗೆ ಬೆಳೆ ಹಾಕಿದರೆ ಈ ಕಾಡಾನೆಗಳು ಬಂದು ಫಸಲನ್ನು ತುಳಿದು ಹೋಗುತ್ತಿವೆ. ಹೀಗಾದರೆ ನಾವು ಜೀವನ ನಡೆಸುವುದು ಹೇಗೆ’ ಎಂದು ರೈತ ಮಣಿ ಪ್ರಶ್ನಿಸಿದರು.  

ಅರಣ್ಯ ಇಲಾಖೆ ನಿರ್ಲಕ್ಷ್ಯ: ‘ವನ್ಯಜೀವಿಗಳ ಹಾವಳಿ ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ಕಾಡಾನೆಗಳ ಸಂಚಾರದ ಬಗ್ಗೆ ರೈತರಿಗೆ ಸಮರ್ಪಕ ಮಾಹಿತಿಯನ್ನು ಅಧಿಕಾರಿಗಳು, ಸಿಬ್ಬಂದಿ ಒದಗಿಸುತ್ತಿಲ್ಲ. ಕಾಡಂಚಿಗೆ ಬರುವ ಆನೆಗಳನ್ನು ಮತ್ತೆ ಕಾಡೊಳಕ್ಕೆ ಓಡಿಸಲು ಕ್ರಮ ಕೈಗೊಳ್ಳುತ್ತಿಲ್ಲ. ರೈತರು ಆನೆ ಓಡಿಸಿ ಎಂದು ಮನವಿ ಮಾಡಿದರೂ, ಅರಣ್ಯ ಇಲಾಖೆ ಸ್ಪಂದಿಸುತ್ತಿಲ್ಲ’ ಎಂಬುದು ಗ್ರಾಮಸ್ಥರ ಆರೋಪ.

ಶೀಘ್ರದಲ್ಲೇ ಆನೆ ಕಂದಕ ನಿರ್ಮಾಣ: ಡಿಸಿಎಫ್‌
‘ಕಳೆದ ತಿಂಗಳಿಂದ ಈ ಭಾಗದಲ್ಲಿ ಆನೆಗಳು ಜಮೀನುಗಳಿಗೆ ನುಗ್ಗುತ್ತಿವೆ. ಇದನ್ನು ತಡೆಯುವುದಕ್ಕಾಗಿ ನಾವು ಆನೆ ಕಂದಕ ನಿರ್ಮಿಸಲಿದ್ದೇವೆ. ₹35 ಲಕ್ಷ ವೆಚ್ಚದಲ್ಲಿ ಎರಡು ಕಿ.ಮೀ ಉದ್ದಕ್ಕೆ ಕಂದಕ ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ ಟೆಂಟರ್ ಕರೆಯಲಾಗಿದೆ’ ಎಂದು ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಭರಚುಕ್ಕಿ ಜಲಪಾತದ ಅರಣ್ಯದಿಂದ ಆನೆಗಳು ಬರುತ್ತಿವೆ. ಆನೆ ಕಂದಕ ನಿರ್ಮಾಣವಾದ ನಂತರ ಯಾವುದೇ ತೊಂದರೆಯಾಗದು. ರೈತರು ಧೈರ್ಯವಾಗಿ ವ್ಯವಸಾಯ ಮಾಡಬಹುದು. ಆನೆಗಳ ಓಡಾಟದ ಬಗ್ಗೆ ಸಿಬ್ಬಂದಿ ನಿಗಾ ಇಟ್ಟಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.