ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣಾರಿ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶರವಣನ್ ಪರ, ವಿರೋಧ ಪ್ರತಿಭಟನೆ

8ನೇ ದಿನವೂ ರೈತರ ಹೋರಾಟ, ವರ್ಗಾವಣೆ ಮಾಡದಂತೆ ಬೇರೆ ಸಂಘಟನೆಗಳ ಒತ್ತಾಯ
Last Updated 21 ಸೆಪ್ಟೆಂಬರ್ 2021, 4:48 IST
ಅಕ್ಷರ ಗಾತ್ರ

ಚಾಮರಾಜನಗರ: ರೈತ ಸಂಘಟನೆಗಳು ಹಾಗೂ ರೈತ ಮುಖಂಡರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಆರೋಪ ಹೊತ್ತಿರುವ ಬಣ್ಣಾರಿ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶರವಣನ್ ಅವರ ಪರ ಹಾಗೂ ವಿರುದ್ಧದ ಪ್ರತಿಭಟನೆಗೆ ಜಿಲ್ಲಾಡಳಿತ ಭವನ ಸೋಮವಾರ ಸಾಕ್ಷಿಯಾಯಿತು.

ಶರವಣನ್‌ ಅವರನ್ನು ರಾಜ್ಯದಿಂದ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ರೈತ ಮುಖಂಡರು ಸತತ ಏಳನೇ ದಿನವೂ ಪ್ರತಿಭಟನೆ ಮುಂದುವರಿ
ಸಿದರೆ, ಕಾರ್ಖಾನೆಯ ಉಪಾಧ್ಯಕ್ಷರನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬಾರದು ಎಂದು ಆಗ್ರಹಿಸಿಕಬ್ಬು ಬೆಳೆಗಾರರ ಹೋರಾಟ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ: ಏಳು ದಿನಗಳಿಂದ ಜಿಲ್ಲಾಡಳಿತ ಭವನದ ಎದುರು ಧರಣಿ ಕುಳಿತು ಹೋರಾಟ ಮಾಡುತ್ತಿರುವ ರೈತ ಮುಖಂಡರು ಸೋಮವಾರವೂ ಚಳವಳಿ ಮುಂದುವರೆಸಿ ಜಿಲ್ಲಾಡಳಿತ ಹಾಗೂ ಚುನಾಯಿತ ಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಜಿಲ್ಲೆಯಿಂದ ಆಯ್ಕೆಯಾಗಿರುವ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರದೆ ನಿರ್ಲಕ್ಷ್ಯವಹಿಸುತ್ತಿದ್ದಾರೆ. ರೈತ ಸಂಘಟನೆಗಳ ಹಾಗೂ ರೈತರ ಬೆಂಬಲಕ್ಕೆ ನಿಲ್ಲುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಶರವಣನ್‌ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಕಾರ್ಖಾನೆ ಪತ್ರ ಕೊಟ್ಟಿದೆ. ಆದರೆ, ಅದರಲ್ಲಿ ದಿನಾಂಕ ಅಥವಾ ಅವಧಿ ನಮೂದಾಗಿಲ್ಲ. ಅವರು ವರ್ಗಾವಣೆಯಾಗುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ಪ್ರತಿಭಟನಕಾರರು ತಿಳಿಸಿದರು.

ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಮುಖಂಡರಾದ ಕಮರವಾಡಿ ಶಂಕರಪ್ಪ, ಹೆಗ್ಗೊಠಾರ ಲಿಂಗಸ್ವಾಮಿ, ಹುಲಿಯ ನಾಯ್ಕ, ಬೂದಂಬಳ್ಳಿ ಸುರೇಶ್ ಶೆಟ್ಟಿ, ಮಹದೇವಶೆಟ್ಟಿ, ಗೂಳಿಪುರ ಜಿ.ಮಹದೇವಪ್ಪ, ಮಣಿಕಂಠ, ಜಡೆಸ್ವಾಮಿ, ಮಹದೇವಸ್ವಾಮಿ ಇದ್ದರು.

ಉಗ್ರ ಹೋರಾಟದ ಎಚ್ಚರಿಕೆ: ಶರವಣನ್‌ ಅವರನ್ನು ಬೆಂಬಲಿಸಿ ಸೋಮವಾರ ನಗರದಲ್ಲಿ ಬೈಕ್‌ ರ‍್ಯಾಲಿ ನಡೆಸಿರುವ ಕಬ್ಬು ಬೆಳೆಗಾರರ ಹೋರಾಟ ಹಿತರಕ್ಷಣಾ ಸಮಿತಿ, ಲಾರಿ ಮತ್ತು ಟ್ರ್ಯಾಕ್ಟರ್‌ ಮಾಲೀಕರ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯ
ಕರ್ತರು, ವರ್ಗಾವಣೆ ಮಾಡಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾಡಳಿತ ಭವನದವರೆಗೆ ಬೈಕ್‌ ರ‍್ಯಾಲಿ ನಡೆಸಿದ ಪ್ರತಿಭಟನಕಾರರು, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ ಅವರಿಗೆ ಮನವಿ ಸಲ್ಲಿಸಿದರು.

ರೈತ ಮುಖಂಡ ಅಣಗಳ್ಳಿ ಬಸವರಾಜು ಅವರು ಮಾತನಾಡಿ, ‘ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯಿಂದ ರೈತರು ಹಾಗೂ ಈ ಭಾಗದ ಕೂಲಿಕಾರ್ಮಿಕರಿಗೆ ಅನುಕೂಲವಾಗುತ್ತಿದೆ. ಕಾರ್ಖಾನೆಯು ರೈತರ ಪರವಾಗಿದ್ದು, ಶರವಣನ್‌ ಅವರು ಅಡಳಿತ ಮಂಡಳಿಯನ್ನು ಬಂದೋಬಸ್ತಿನಲ್ಲಿಟ್ಟುಕೊಂಡು ರೈತ
ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ರೈತ ಸಂಘಟನೆಗಳ ವಿರುದ್ಧ ಹೇಳಿಕೆ ಬೇಷರತ್ತು ಕ್ಷಮಯಾಚನೆ ಮಾಡಿದ್ದಾರೆ. ಇಷ್ಟಾಗಿಯೂ ಕಬ್ಬು ಬೆಳೆಗಾರರ ಸಂಘ ಎಂದು ಹೇಳಿಕೊಂಡು ಎಂಟು ದಿನಗಳಿಂದ ಜಿಲ್ಲಾಡಳಿತ ಭವನ ಎದುರು ಧರಣೆ ಕುಳಿತಿರುವುದು ಸರಿಯಲ್ಲ’ ಎಂದರು.

ಕಬ್ಬುಬೆಳೆಗಾರರ ಹೋರಾಟ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬೂದಿತಿಟ್ಟು ಗುರುಸ್ವಾಮಿ, ಲಾರಿ ಮತ್ತು ಟ್ರಾಕ್ಟರ್ ಮಾಲೀಕರ ಸಂಘದ ಅಧ್ಯಕ್ಷ ಜಿ.ಎಂ.ಬಸಪ್ಪ, ಬಿಎಸ್‌ಪಿ ಮುಖಂಡ ಕಮಲ್, ರೈತ ಮುಖಂಡರಾದ ಗುರುಸ್ವಾಮಿ, ನರಸಿಂಹನ್, ವರದರಾಜು, ಜಗದೀಶ್, ಬಸಪ್ಪ, ಸೀಗನಾಯಕ, ಕೃಷ್ಣಮೂರ್ತಿ, ಬಿ.ಚಾಮರಾಜು, ವಸಂತರಾಜು, ರಾಚಶೆಟ್ಟಿ, ಶಿವನಂಜಪ್ಪ, ರವಿ, ರಂಗಸ್ವಾಮಿ, ವಸಂತರಾಜೇ ಅರಸ್, ಸೋಮಣ್ಣ, ಗುರುಬಸಪ್ಪ, ಆಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT