ಶನಿವಾರ, ಡಿಸೆಂಬರ್ 4, 2021
20 °C
ಅನ್‌ಲಾಕ್‌: ವಾಣಿಜ್ಯ ಚಟುವಟಿಕೆಗಳು ಆರಂಭ, ಹೆಚ್ಚಿದ ಜನರ ಓಡಾಟ, ಸೋಂಕು ಹೆಚ್ಚಳವಾಗುವ ಸಾಧ್ಯತೆ

ಚಾಮರಾಜನಗರ: ಅನ್‌ಲಾಕ್‌–4ನೇ ಹಂತ; ಜವಾಬ್ದಾರಿ ಅರಿಯಿರಿ, ಎಚ್ಚರದಿಂದಿರಿ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೋವಿಡ್‌ ಕಾರಣಕ್ಕೆ ಹೇರಲಾಗಿದ್ದ ನಿರ್ಬಂಧಗಳನ್ನು ರಾಜ್ಯದಾದ್ಯಂತ ಪೂರ್ಣಪ್ರಮಾಣದಲ್ಲಿ ಸಡಿಲಿಕೆ ಮಾಡಿದ್ದು, ಜಿಲ್ಲೆಯಲ್ಲೂ ಅದು ಜಾರಿಗೆ ಬಂದಿದೆ. 

ಎಲ್ಲ ವಾಣಿಜ್ಯ ಚಟುವಟಿಕೆಗಳು ಆರಂಭವಾಗಿವೆ. ನಗರ, ಪಟ್ಟಣ ಪ್ರದೇಶಗಳಲ್ಲಿ ಜನರ ಓಡಾಟ ಹೆಚ್ಚಾಗಿದೆ. ಹಾಗಾಗಿ, ಜನರು ಕೋವಿಡ್‌–19ನಿಂದ ಪಾರಾಗಲು ಈಗ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕಾಗಿದೆ. ನಿರ್ಲಕ್ಷ್ಯ ವಹಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸುತ್ತಾರೆ ಅಧಿಕಾರಿಗಳು ಹಾಗೂ ವೈದ್ಯರು. 

ಎರಡು ವಾರಗಳಿಂದೀಚೆಗೆ ಜಿಲ್ಲೆಯಲ್ಲಿ ಪ್ರತಿ ದಿನ ವರದಿಯಾಗುತ್ತಿರುವ ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ಇದುವರೆಗೆ ಎರಡು ದಿನ ಮಾತ್ರ ಪ್ರಕರಣಗಳ ಸಂಖ್ಯೆ 100 ದಾಟಿತ್ತು. ಎರಡು ದಿನಗಳ ಹಿಂದೆ 85 ತಲುಪಿದ್ದು ಬಿಟ್ಟರೆ, ಆ ಬಳಿಕ 50ರ ಒಳಗಡೆಯೇ ಪ್ರಕರಣಗಳಿವೆ.

ಇದುವರೆಗೂ, ದಿನ ನಿತ್ಯದ ವ್ಯವಹಾರಗಳಿಗೆ ಕೆಲವು ನಿರ್ಬಂಧಗಳಿತ್ತು ಇತ್ತು. ಈಗ ಎಲ್ಲವನ್ನೂ ತೆರವುಗೊಳಿಸಲಾಗಿದೆ. ಜನರು ಎಲ್ಲ ರೀತಿಯ ಚಟುವಟಿಕೆಗಳಲ್ಲಿ ತೊಡಗುವುದರಿಂದ ಸೋಂಕು ಪಸರಿಸುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಜನರೇ ಹೆಚ್ಚು ಜಾಗರೂಕರಾಗಿ ಇರಬೇಕಾಗಿದೆ.  

ಜನಸಂದಣಿಯಿಂದ ದೂರವಿರಿ: ‘ಅನ್‌ಲಾಕ್‌–4 ಅವಧಿಯಲ್ಲಿ ಪ್ರತಿಯೊಬ್ಬ ನಾಗರಿಕರೂ ಜವಾಬ್ದಾರಿ ಅರಿತುಕೊಂಡು ಸೋಂಕಿನ ವಿರುದ್ಧ ಹೋರಾಡಬೇಕಾದ ಅಗತ್ಯವಿದೆ. ವೈಯಕ್ತಿಕ ಅಂತರ ಕಾಪಾಡಿಕೊಳ್ಳಬೇಕು. ಮಾಸ್ಕ್‌ ಧರಿಸುವುದನ್ನು ಮರೆಯಬಾರದು. ಸ್ವಚ್ಛತೆಯನ್ನು ಕಾಪಾಡಿಕೊಂಡರೆ ಕೋವಿಡ್‌–19 ನಿಯಂತ್ರಣ ಸಾಧ್ಯ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಜನದಟ್ಟಣೆ ಹೆಚ್ಚಿರುವ ಕಡೆಗಳಲ್ಲಿ ಜನರು ಹೋಗಬಾರದು. ಸಭೆ ಸಮಾರಂಭಗಳಿಂದ ದೂರ ಇರುವುದು ಒಳ್ಳೆಯದು. ಹೆಚ್ಚು ಸ್ನೇಹಿತರು, ಕುಟುಂಬದ ಸದಸ್ಯರು ಒಟ್ಟಾಗಿ ಸೇರುವುದನ್ನು ಕಡಿಮೆ ಮಾಡಬೇಕು. ಹಿರಿಯ ನಾಗರಿಕರು, ಮಕ್ಕಳು ಹಾಗೂ ಆರೋಗ್ಯ ಸಮಸ್ಯೆ ಹೊಂದಿರುವವರು ಆದಷ್ಟೂ ಮನೆಯಲ್ಲೇ ಇರಬೇಕು. ಯಾವುದೇ ರೋಗ ಲಕ್ಷಣಗಳು ಕಂಡು ಬಂದರೆ, ತಕ್ಷಣವೇ ವೈದ್ಯರ ಬಳಿಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ಅವರು ಹೇಳಿದರು. 

ಜೀವನಶೈಲಿ ಉತ್ತಮವಾಗಿರಲಿ: ‘ಸುರಕ್ಷಿತ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್‌ ಧರಿಸುವುದು ಹಾಗೂ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದನ್ನು ಜೀವನದ ಭಾಗವನ್ನಾಗಿ ಮಾಡಿಕೊಳ್ಳಬೇಕು. ಆರೋಗ್ಯ ಕಾಪಾಡಿಕೊಳ್ಳುವುದಕ್ಕಾಗಿ ಅತ್ಯುತ್ತಮ ಜೀವನ ಶೈಲಿಯನ್ನು ಅನುಸರಿಬೇಕು. ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯೂ ಅತ್ಯಂತ ಮುಖ್ಯ’ ಎಂದು ಜಿಲ್ಲಾಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ಕೃಷ್ಣಕುಮಾರ್‌ ಅವರು ಹೇಳಿದರು. 

‘ಜನರು ದೈಹಿಕ ಚಟುವಟಿಕೆಗಳಿಗೆ ಒತ್ತು ನೀಡಬೇಕು. ವ್ಯಾಯಾಮ, ಧ್ಯಾನ, ಯೋಗಾಭ್ಯಾಸ ನಡೆಸುತ್ತಾ ಸದಾ ಚಟುವಟಿಕೆಯಿಂದಿರುವುದು ಈ ಸಂದರ್ಭದಲ್ಲಿ ಒಳ್ಳೆಯದು’ ಎಂದು ಅವರು ಸಲಹೆ ನೀಡಿದರು.

ವೈಯಕ್ತಿಕ ಜವಾಬ್ದಾರಿಯಾಗಬೇಕು: ಜಿಲ್ಲಾಧಿಕಾರಿ
‘ನಮ್ಮ ಜಿಲ್ಲೆಯಲ್ಲಿ ಪ್ರಕರಣಗಳು ಗರಿಷ್ಠ ಮಟ್ಟಕ್ಕೆ ಹೋಗಿ, ಕಡಿಮೆಯಾಗಿರುವ ಸಾಧ್ಯತೆ ಕಂಡು ಬರುತ್ತಿದೆ. ಕೆಲವು ದಿನಗಳಿಂದ ಕಡಿಮೆ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಆದರೆ, ಈಗ ಎಲ್ಲ ಚಟುವಟಿಕೆಗಳೂ ಮುಕ್ತವಾಗಿರುವುದರಿಂದ ಸೋಂಕು ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹಾಗಾಗಿ, ಜನರು ಈಗ ಹೆಚ್ಚು ಎಚ್ಚರಿಕೆಯಿಂದ ಇರಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಕೋವಿಡ್‌–19 ಹರಡುವಿಕೆ ತಡೆಯುವ ಪ್ರಕ್ರಿಯೆಯನ್ನು ಮೂರು ಹಂತಗಳಲ್ಲಿ ನೋಡಬಹುದು. ಆರಂಭಿಕ ಹಂತದಲ್ಲಿ ಸರ್ಕಾರ ಜವಾಬ್ದಾರಿ ವಹಿಸಿಕೊಂಡು, ಲಾಕ್‌ಡೌನ್‌ ಜಾರಿಗೊಳಿಸಿ ಸೋಂಕು ತಡೆಗೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿತ್ತು. ಲಾಕ್‌ಡೌನ್‌ ಪ್ರಕ್ರಿಯೆ ಆರಂಭವಾದಾಗ ಅಂದರೆ ಎರಡನೇ ಹಂತದಲ್ಲಿ ಸೋಂಕು ತಡೆಯುವ ಜವಾಬ್ದಾರಿ ಸಮುದಾಯಕ್ಕೆ ವರ್ಗಾವಣೆ ಆಯಿತು. ಈಗ ಲಾಕ್‌ ಡೌನ್‌–4 ಪ‍್ರಕ್ರಿಯೆ ನಡೆಯುತ್ತಿದೆ. ಎಲ್ಲವೂ ಮುಕ್ತವಾಗಿದೆ. ಈ ಹಂತದಲ್ಲಿ ಜವಾಬ್ದಾರಿಯು ಜನರಿಗೆ ವರ್ಗಾವಣೆಯಾಗಿದೆ. ಪ್ರತಿಯೊಬ್ಬರೂ ಸ್ವತಃ ಎಚ್ಚರಿಕೆಯಿಂದಿದ್ದು, ಸೋಂಕು ಹರಡದಂತೆ ಶ್ರಮಿಸಬೇಕಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ನಿರಂತರ ಎಚ್ಚರಿಕೆ ಅಗತ್ಯ. ಮಾಸ್ಕ್‌ ಧರಿಸುವುದು, ಸ್ಯಾನಿಟೈಸರ್‌ ಅಥವಾ ಸಾಬೂನಿನಿಂದ ಕೈ ತೊಳೆಯುವುದು, ಸುರಕ್ಷಿತ ಅಂತರ ಕಾಪಾಡಿಕೊಳ್ಳುವುದನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಡಾ.ಎಂ.ಆರ್.ರವಿ ಅವರು ಸಲಹೆ ನೀಡಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು