ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್‌ರೋಡ್ ಸೇತುವೆ: ಕೊನೆಗೂ ಬಂತು ಉದ್ಘಾಟನೆ ಭಾಗ್ಯ

ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆ, ಇಂದು ಸಚಿವರಿಂದ ಜನ ಬಳಕೆಗೆ ಮುಕ್ತ
Last Updated 23 ಏಪ್ರಿಲ್ 2021, 5:21 IST
ಅಕ್ಷರ ಗಾತ್ರ

ಹನೂರು: ವನ್ಯಧಾಮದಲ್ಲಿ ಅನುಮತಿಯಿಲ್ಲದೇ ಅವೈಜ್ಞಾನಿಕವಾಗಿ ಸೇತುವೆ ನಿರ್ಮಿಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ತಡೆಹಿಡಿದಿದ್ದ ನಾಲ್‌ರೋಡ್ ಹಳ್ಳಕ್ಕೆ ನಿರ್ಮಿಸಲಾಗುತ್ತಿದ್ದ ಸೇತುವೆ ಕಾಮಗಾರಿ ಕೊನೆಗೂ ಮುಕ್ತಾಯವಾಗಿ, ಉದ್ಘಾಟನೆ ಭಾಗ್ಯ ಕಾಣುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಶುಕ್ರವಾರ (ಏ.23) ಲೋಕಾರ್ಪಣೆಗೊಳಿಸಲಿದ್ದಾರೆ.

ಜಲ್ಲಿಪಾಳ್ಯ, ಯರಂಬಾಡಿ, ಹೂಗ್ಯಂ, ಕೂಡ್ಲೂರು, ಪೆದ್ದನಪಾಳ್ಯ, ಹಂಚಿಪಾಳ್ಯ ಹಾಗೂ ನೆಲ್ಲೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ನಾಲ್ರೋಡ್ ಸೇತುವೆ ಕಾಮಗಾರಿಯನ್ನು 2017ರಲ್ಲಿ ಆರಂಭಿಸಲಾಗಿತ್ತು. ಆದರೆ, ಇರುವ ಸ್ಥಳವಲ್ಲದೇ ಎರಡು ಬದಿಗಳಲ್ಲೂ ಸೇತುವೆಯನ್ನು ವಿಸ್ತರಿಸಲಾಗಿದೆ ಎಂದು ಮಲೆಮಹದೇಶ್ವರ ವನ್ಯಧಾಮದ ಅಂದಿನ ಡಿಸಿಎಫ್ ಡಾ.ಎಂ.ಮಾಲತಿಪ್ರಿಯ ಅವರಿಗೆ ಪರಿಸರ ಪ್ರೇಮಿಗಳು ದೂರು ನೀಡಿದ್ದರು. ಹೀಗಾಗಿ, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು.

ಏಳು ಗ್ರಾಮಗಳಿಗೆ ಸೇತುವೆ ಸಂಪರ್ಕ ಕಲ್ಪಿಸುತ್ತಿದ್ದುದ್ದರಿಂದ ಆ ಗ್ರಾಮಸ್ಥರೆಲ್ಲ ಸುಗಮ ಸಂಚಾರಕ್ಕೆ ಸೇತುವೆಯನ್ನು ಅವಲಂಬಿಸಿದ್ದರು. ಸೇತುವೆ ಪಕ್ಕದಲ್ಲಿ ಕಚ್ಚಾರಸ್ತೆ ನಿರ್ಮಿಸಲಾಗಿತ್ತು. ಮಳೆಗಾಲದಲ್ಲಿ ಹಳ್ಳವು ತುಂಬಿ ಹರಿಯುತ್ತಿದ್ದುದ್ದರಿಂದ ಜನರು ತಮ್ಮ ಗ್ರಾಮಗಳಿಗೆ ತೆರಳಲಾಗದೆ ಯಾತನೆ ಪಡುವಂತಾಗಿತ್ತು. ಈ ಬಗ್ಗೆ ‘ಪ್ರಜಾವಾಣಿ’ಯೂ ಈ ಹಿಂದೆ ವಿಶೇಷ ವರದಿ ಪ್ರಕಟಿಸಿ ಜಿಲ್ಲಾಡಳಿತದ ಗಮನ ಸೆಳೆದಿತ್ತು.

ಸೇತುವೆ ನಿರ್ಮಿಸಬೇಕು ಎಂದು ಗ್ರಾಮಸ್ಥರು ಜನಪ್ರತಿನಿಧಿಗಳು ಹಾಗೂ ಗುತ್ತಿಗೆದಾರರ ಮೇಲೆ ಒತ್ತಡ ಹಾಕುತ್ತಲೇ ಬಂದಿದ್ದರು. ಆದರೆ ಅರಣ್ಯ ಇಲಾಖೆ ಇದಕ್ಕೆ ಒಪ್ಪಿಗೆ ನೀಡದೇ ಇದ್ದುದ್ದರಿಂದ ಮೂರು ವರ್ಷಗಳಿಂದ ಯೋಜನೆ ನನೆಗುದಿಗೆ ಬಿದ್ದಿತ್ತು.

‘ಮೊದಲು ಇದ್ದಷ್ಟೇ ಅಗಲಕ್ಕೆ ಸೇತುವೆ ನಿರ್ಮಾಣವಾಗುವುದಾದರೆ ನಮ್ಮದೇನು ತಕರಾರಿಲ್ಲ. ಆದರೆ, ಅಳತೆಯನ್ನು ಹೆಚ್ಚಿಸಬೇಕು ಎಂದಿದ್ದರೆ, ಅದಕ್ಕೆ ರಾಷ್ಟ್ರೀಯ ವನ್ಯಜೀವಿ ವನ್ಯಜೀವಿ ಮಂಡಳಿಯ ಅನುಮತಿ ಕಡ್ಡಾಯ’ ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದರು.

ಮೂರು ವರ್ಷಗಳಿಂದಅರಣ್ಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯ ನಡುವಿನ ಹಗ್ಗಜಗ್ಗಾಟಕ್ಕೆ ನಲುಗಿದ್ದ ಸೇತುವೆ ನಿರ್ಮಾಣ ಕಾಮಗಾರಿ ಈಗ ಮೊದಲಿದ್ದ ವಿಸ್ತೀರ್ಣಕ್ಕೆ ಅನ್ವಯವಾಗುವಂತೆ ಪೂರ್ಣಗೊಂಡಿದೆ.

ಮಳೆಗಾಲದಲ್ಲಿ ಇಲ್ಲಿ ಸಂಚಾರ ಯಮಯಾತನೆ ತರುತ್ತಿತ್ತು. ಈಗ ಸೇತುವೆ ನಿರ್ಮಾಣ ಆಗಿರುವುದರಿಂದ ಈ ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಸಂಚರಿಸಬಹುದು ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT