ಶುಕ್ರವಾರ, ಏಪ್ರಿಲ್ 23, 2021
31 °C
ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಎರಡು ಗಂಟೆ ಕಾರ್ಯಾಚರಣೆ

ಚಾಮರಾಜನಗರ: ಹೊತ್ತಿ ಉರಿದ ಜಿಟಿಸಿ ಕ್ಲಬ್‌– ಲಕ್ಷಾಂತರ ರೂಪಾಯಿ ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನಗರದ ಸೋಮವಾರಪೇಟೆಯಲ್ಲಿರುವ ಜಿಟಿಸಿಯಲ್ಲಿ (ಗಾರ್ಡನ್‌ ಟೆನಿಸ್‌ ಕ್ಲಬ್‌) ಶುಕ್ರವಾರ ಮಧ್ಯಾಹ್ನ ಬೆಂಕಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಅದೃಷ್ಟವಶಾತ್‌ ಘಟನೆಯಲ್ಲಿ ಸಾವು ನೋವು ಸಂಭವಿಸಿಲ್ಲ. 

ಸತ್ಯಮಂಗಲ ರಸ್ತೆಯ ಬಳಿ ಇರುವ ಈ ಕ್ಲಬ್‌ನಲ್ಲಿ ಬಾರ್‌ ಅಂಡ್‌ ರೆಸ್ಟೋರೆಂಟ್‌ ಇದೆ. ಅಗ್ನಿ ಅವಘಡ ಹೇಗೆ ಸಂಭವಿಸಿದೆ ಎಂಬುದು ಗೊತ್ತಾಗಿಲ್ಲ. ಪೀಠೋಪಕರಣಗಳು, ಫಿಡ್ಜ್‌, ಟಿವಿ ಸೇರಿದಂತೆ ಹಲವು ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಸ್ವಲ್ಪ ಪ್ರಮಾಣದಲ್ಲಿ ಬಿಯರ್‌ ಹಾಗೂ ಮದ್ಯ ಕೂಡ ಘಟನೆಯಲ್ಲಿ ನಾಶವಾಗಿದೆ. ₹15 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿರಬಹುದು ಎಂದು ಮೂಲಗಳು ತಿಳಿಸಿವೆ.

ಘಟನೆ ನಡೆದಾಗ ಕ್ಲಬ್‌ನಲ್ಲಿ ಸಿಬ್ಬಂದಿ ಸೇರಿದಂತೆ 25 ಮಂದಿ ಇದ್ದರು, ಬೆಂಕಿ ಕಾಣಿಸಿಕೊಳ್ಳುತ್ತಲೇ, ಅವರು ಹೊರಗೆ ಬಂದರು. ಬೆಂಕಿ ತೀವ್ರವಾಗಿ ಹರಡುವುದಕ್ಕೂ ಮೊದಲು ಅಡುಗೆ ಅನಿಲ ಸಿಲಿಂಡರ್‌ ಸೇರಿದಂತೆ ಕೆಲವು ಪರಿಕರಗಳನ್ನು ಹೊರಗೆ ತರಲು ಸಿಬ್ಬಂದಿ ಯಶಸ್ವಿಯಾದರು. ಈ ಕಾರಣದಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ. 

ಸೌದೆ ಒಲೆಯಲ್ಲಿ ಅಡುಗೆ ಮಾಡುವ ಸ್ಥಳದಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತು ಎಂದು ಹೇಳಲಾಗುತ್ತಿದೆ. ಚಾವಣಿಗೆ ಜಿಂಟ್‌ ಶೀಟ್‌ ಹಾಕಿದ್ದರಿಂದ ಬೆಂಕಿ ಬೇಗ ಹರಡಿತು. ಆ ಬಳಿಕ ವಿದ್ಯುತ್‌ ಶಾರ್ಟ್‌ ಸರ್ಕಿಟ್‌ ಸಂಭವಿಸಿ ಇತರ ಕಡೆಗಳಲ್ಲೂ ಬೆಂಕಿ ಕಾಣಿಸಿಕೊಂಡಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. 

ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ: ಮಧ್ಯಾಹ್ನ 2.30ರ ಸುಮಾರಿಗೆ ಅಗ್ನಿಶಾಮಕ ದಳಕ್ಕೆ ಅಗ್ನಿ ಆಕಸ್ಮಿಕದ ಬಗ್ಗೆ ಮಾಹಿತಿ ಸಿಕ್ಕಿತು. ತಕ್ಷಣ ಸಿಬ್ಬಂದಿ ಎರಡು ಅಗ್ನಿಶಾಮಕ ವಾಹನಗಳನ್ನು ಬಳಸಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲು ಯಶಸ್ವಿಯಾದರು. 

‘ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ, ಬೆಂಕಿಯನ್ನು ಆರಿಸಿದ್ದೇವೆ. ಜೀವ ಹಾನಿ ಸಂಭವಿಸಿಲ್ಲ. ಸುತ್ತಮುತ್ತಲಿರುವ ಆಸ್ತಿಗೂ ಹಾನಿಯಾಗಿಲ್ಲ. ಜಿಂಕ್‌ ಶೀಟ್‌ನ ಚಾವಣಿ ಇದ್ದ ಜಾಗದಲ್ಲಿ ಹೆಚ್ಚು ಹಾನಿಯಾಗಿದೆ’ ಎಂದು ಅಗ್ನಿಶಾಮಕ ದಳದ ಜಿಲ್ಲಾ ಅಧಿಕಾರಿ ನವೀನ್‌ ಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಎರಡು ಜಲವಾಹನಗಳು ಲಭ್ಯವಿದ್ದುದರಿಂದ ಕಾರ್ಯಾಚರಣೆ ಸುಲಭವಾಯಿತು. ಮೊದಲು ಒಂದು ವಾಹನವನ್ನು ತೆಗೆದುಕೊಂಡು ಹೋಗಿದ್ದೆವು. ಹೊಗೆಯ ಪ್ರಮಾಣ ಹೆಚ್ಚು ಇದ್ದುದರಿಂದ ಇನ್ನೊಂದು ವಾಹನದ ಅಗತ್ಯ ಕಂಡು ಅದನ್ನೂ ಬಳಸಿದೆವು. ಅದೃಷ್ಟವಶಾತ್ ಇನ್ನೊಂದು ವಾಹನ ನಮ್ಮಲ್ಲಿ ಲಭ್ಯವಿತ್ತು. ಕಟ್ಟಡಕ್ಕೆ ಹೆಚ್ಚು ಹಾನಿಯಾದಂತೆ ಕಂಡಿಲ್ಲ. ಅಲ್ಲಲ್ಲಿ ಚಾವಣಿ ಹೋಗಿದೆ. ಒಳಗೆ ಏನೆಲ್ಲ ವಸ್ತುಗಳಿದ್ದವು ಎಂಬುದು ತಿಳಿದಿಲ್ಲ. ಹಾನಿ ಪ್ರಮಾಣವನ್ನು ಅಂದಾಜಿಸಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕ್ಲಬ್‌ ಮಾಲೀಕ ಮಂಜಣ್ಣ ಅವರು, ‘ಆಕಸ್ಮಿಕವಾಗಿ ಅಗ್ನಿ ಅನಾಹುತ ಸಂಭವಿಸಿದೆ. ನಷ್ಟದ ಪ್ರಮಾಣ ಇನ್ನೂ ಅಂದಾಜಿಸಿಲ್ಲ’ ಎಂದು ಹೇಳಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು