ಹೊಸ ವರ್ಷ: ಪ್ರಕೃತಿಯಲ್ಲಿ ಜೀವಂತಿಕೆಯ ಹರ್ಷ

ಯಳಂದೂರು: ನಾವು ಮಾತ್ರ ಅಲ್ಲ; ಪ್ರಕೃತಿ ಕೂಡ ಹೊಸ ವರ್ಷವನ್ನು ತನ್ನದೇ ರೀತಿಯಲ್ಲಿ ಭರ್ಜರಿಯಾಗಿ ಸ್ವಾಗತಿಸುತ್ತದೆ. ಜನವರಿ ಎಂಬುದು ಪರಿಸರಕ್ಕೆ ಮೆರುಗು ಜೀವಂತಿಕೆ ತುಂಬುವ ತಿಂಗಳು.
ಸುತ್ತಲಿನ ವಾತಾವರಣವನ್ನು ಗಮನಿಸಿ. ಈ ಸಮಯದಲ್ಲಿ ಭೂರಮೆಯನ್ನು ಮಂಜಿನ ಪಸೆ ಆವರಿಸಿರುತ್ತದೆ. ಮುಳ್ಳು ಗಿಡ, ಕಳೆ ಸಸ್ಯಗಳಲ್ಲಿ ಅರಳಿಕೊಳ್ಳುವ ಹೂಗಳು ಪ್ರಕೃತಿಯ ವಿಲಾಸ ದರ್ಶನ ಮಾಡಿಸುತ್ತವೆ. ಕೆಲವೇ ಸಮಯ ಅರಳುವ ಪುಷ್ಪಲೋಕ ಪಕ್ಷಿ, ಜೇನು, ಪತಂಗಗಳನ್ನು ಸೆಳೆದು ರುಜು ಪಡೆದು, ನವ ವರ್ಷದ ಆರಂಭಕ್ಕೂ ಜೀವಂತಿಕೆ ಚೆಲ್ಲುತ್ತವೆ.
ತಾಲ್ಲೂಕಿನಲ್ಲಿ ಈಗ ಚಳಿ, ಬಿಸಿಲಿನ ಹಿತಕಾರಿ ಅನುಭವ. ಕೆರೆಕಟ್ಟೆ ಸೇರಿದ ನೀರಲ್ಲಿ ಹುಟ್ಟಿದ ಕಳೆಗಿಡ, ಬೇಲಿ ಬದಿಯಲ್ಲಿ ಒಣಗಿ ನಿಂತ ಮುಳ್ಳು ಬಳ್ಳಿ, ನೆಲವಪ್ಪಿ ವೃದ್ಧಿಸುವ ಇಂಚಿಂಚು ಸಸ್ಯಗಳಲ್ಲೂ ಈಗ ನವೋಲ್ಲಾಸ ಕಾಣುತ್ತಿದೆ. ವರ್ಣ ವೈವಿಧ್ಯದ ಕುಸುಮಗಳು ತಮ್ಮ ಚೆಲುವಿನಿಂದಲೇ ಮನ ಸೆಳೆಯುತ್ತಿವೆ. ಒಣಗಿದ ಗಿಡದಲ್ಲೂ ವಿಕಾಸ ಹೊಂದಿ, ತಮ್ಮ ಸಂತತಿ ಉಳಿಸುವ ಜರೂರಿನಲ್ಲಿ ಇವೆ.
‘ಇವಕ್ಕೆ ಮೂಲ ಹೆಸರಿಲ್ಲ, ಆದರೆ, ಇರುವಷ್ಟು ಕಾಲ ಮನುಕುಲದ ನೆರವಿಗೆ ಬಳಕೆ ಆಗುತ್ತವೆ’ ಎಂಬುದು ಪರಿಸರ ಪ್ರಿಯರ ಮಾತು.
‘ಈಗ ದೀರ್ಘ ಹಗಲಿನ ಸಮಯ, ಇಳೆಯ ಮೇಲಿನ ಸಮಸ್ತ ಜೀವಕೋಟಿ ನೇಸರನ ಕಿರಣಕ್ಕೆ ಮೈ ಒಡ್ಡಿಕೊಳ್ಳುವ ಹೊತ್ತು. ಎಲ್ಲ ಸಸ್ಯ ನಮೂನೆಗಳು ಇಲ್ಲಿನ ಪರಿಸರದಲ್ಲಿ ರಾರಾಜಿಸುತ್ತವೆ. ಸಸ್ಯ ವಿಜ್ಞಾನಿಗಳು ಕಾಲಿಡುವ ಮೊದಲೇ ಜನಪದರು ಸಣ್ಣಪುಟ್ಟ ಸಸ್ಯವರ್ಗಕ್ಕೆ ನಾಮಕರಣ ಮಾಡಿದ್ದಾರೆ. ಇಲ್ಲಿನ ಜನರೊಟ್ಟಿಗೆ ಸುಮಗಳ ಹೆಸರು, ಅವುಗಳ ಬಳಕೆ ಮತ್ತು ಅವುಗಳಲ್ಲಿ ಇರುವ ಔಷಧೀಯ ಗುಣಗಳನ್ನು ತಿಳಿದಿದ್ದಾರೆ. ಪುಷ್ಪ ಕುಲಗಳಿಂದ ಜನ-ಜಾನುವಾರುಗಳಿಗೆ ಲಭಿಸುವ ಉಪಯೋಗ ಅನನ್ಯ’ ಎಂದು ಹೇಳುತ್ತಾರೆ ಜೀವವಿಜ್ಞಾನ ಶಿಕ್ಷಕ ಸಂತೇಮರಹಳ್ಳಿಯ ನಿಂಗರಾಜು ಅವರು.
ತಾಲ್ಲೂಕಿನ ಕಾನನ ಮತ್ತು ಕೆರೆಗಳಲ್ಲಿ ಅನೇಕ ಬಗೆಯ ಸಸ್ಯಸಿರಿ ಆವರಿಸಿವೆ. ಹುಲ್ಲು, ಕಂಟಿ, ಮುಳ್ಳು ಮತ್ತು ಅಪ್ಪುಗೆ ಸಸ್ಯಲೋಕ ಬಗೆ ಬಗೆಯ ಹೂ ಬಿಟ್ಟಿದೆ. ಕೆಲವು ಸದಾ ಹಸಿರು, ಶುಷ್ಕ, ಕುರುಚಲು, ಶೋಲಾ, ಬೈಸೆ ಅಭಯಾರಣ್ಯದ ಭಾಗವಾದರೆ, ಉಳಿದವು ಬಯಲನ್ನು ಅಪ್ಪಿವೆ. ವನ್ಯ ಜೀವಿಗಳ ಬದುಕಿಗೂ ಆಹಾರದ ಮೂಲವಾಗಿವೆ. ಪುಷ್ಪಲೋಕ ಜೇನು, ಕೀಟ, ಪಕ್ಷಿಗಳ ಆವಾಸ ವಿಸ್ತಾರಕ್ಕೆ ನೆಲೆ ಒದಗಿಸುತ್ತಿವೆ.
'ಆಯಾ ಪ್ರದೇಶದ ಮಳೆ ಪ್ರದೇಶ, ಮಣ್ಣಿನ ಗುಣ, ತಾಪಮಾನ, ಏರಿಳಿತ ಮತ್ತು ಭೌಗೋಳಿಕ ಸ್ಥಾನಮಾನಕ್ಕೆ ಅನುಗುಣವಾಗಿ ಸಸ್ಯ ಪ್ರಭೇದಗಳು ರೂಪು ತಳೆಯುತ್ತವೆ. ಕೆರೆ-ಕಟ್ಟೆಯಲ್ಲಿನ ಸಸ್ಯಗಳ ಸುಮ ಇನ್ನಿತರ ಕೀಟಗಳ ಆಕರ್ಷಣೆಗೆ ಕಾರಣವಾಗಿವೆ. ಇವು ಆಹಾರದ ಸರಪಳಿಯ ಭಾಗವಾಗಿ ಇತರ ಜೀವಿಗಳ ಬದುಕು ರೂಪಿಸಿವೆ. ಈ ದೆಸೆಯಲ್ಲಿ ಪ್ರತಿ ಕುಸುಮ ಮುಂದಿನ ಜೀವ-ಜಗತ್ತನ್ನು ಪೊರೆಯುವ ಗುಣ ಹೊಂದಿವೆ' ಎಂದು ಏಟ್ರೀ ವಿಜ್ಞಾನಿ ಸಿದ್ದಪ್ಪಶೆಟ್ಟಿ ಅವರು ಹೇಳಿದರು.
‘ನಮ್ಮ ಸುತ್ತಮುತ್ತಲ ನಿಸರ್ಗದಲ್ಲಿ ಮುಂಜಾವು ಚುಮು ಚುಮು ಚಳಿಯಲ್ಲಿ ಅಡ್ಡಾಡಿದರೆ ಅಪರೂಪದ ಹೂಗಳ ದರ್ಶನವಾಗುತ್ತವೆ. ಬಣ್ಣ, ವಿನ್ಯಾಸದಿಂದ ಮನ ಸೆಳೆಯುತ್ತವೆ. ಸೂರ್ಯೋದಯದ ನಂತರ ಕೆಲವು ಲತೆಗಳು ಉದುರುತ್ತವೆ. ಇವುಗಳನ್ನು ಸಂಗ್ರಹಿಸಿ ಅಲಂಕಾರಕ್ಕೆ ಬಳಸಬಹುದು. ಇದರಿಂದ ಕಾರ್ಯಕ್ರಮಗಳ ಮೆರಗು ಹೆಚ್ಚಿಸಬಹುದು’ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ ಸಂಚಾಲಕ ಮುಡಿಗುಂಡ ಮಹದೇವ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.