ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಪ್ರಾಣಿಗಳಿಗೆ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಿ’

ಕಾಳ್ಗಿಚ್ಚು, ಲಂಟಾನ ಸಮಸ್ಯೆ ನಿಗ್ರಹಕ್ಕೆ ಹೆಚ್ಚಿನ ಹಣ ಒದಗಿಸಲು ಸಚಿವ ಈಶ್ವರ ಖಂಡ್ರೆ ಸೂಚನೆ
Published 26 ಜನವರಿ 2024, 6:33 IST
Last Updated 26 ಜನವರಿ 2024, 6:33 IST
ಅಕ್ಷರ ಗಾತ್ರ

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ‌ರುವ ಜಲಮೂಲಗಳಲ್ಲಿ ನೀರು ಕಡಿಮೆಯಾಗಿರುವುದರಿಂದ ಸೌರಪಂಪ್‌ ಮೂಲಕ ಕೊಳವೆಬಾಯಿ ನೀರು ಹರಿಸುವಂತೆ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದರು. 

ಬುಧವಾರ ಬೆಳಿಗ್ಗೆ ಸಫಾರಿ ವಾಹನದಲ್ಲಿ ಅಧಿಕಾರಿಗಳೊಂದಿಗೆ ಅರಣ್ಯ ಸುತ್ತಾಡಿ ವಸ್ತುಸ್ಥಿತಿ ಪರಿಶೀಲಿಸಿದ ಸಚಿವರು, ‘ಅಗತ್ಯ ಇರುವ ಕಡೆ ಕೊಳವೆ ಬಾವಿ ಕೊರೆಸಿ. ವನ್ಯಪ್ರಾಣಿಗಳಿಗೆ ನೀರಿನ ಸಮಸ್ಯೆ ಎದುರಾಗದಂತೆ ಕ್ರಮವಹಿಸಬೇಕು’ ಎಂದು ನಿರ್ದೇಶಿಸಿದರು. 

‘ಸೌರ ಫಲಕಗಳ ಸುತ್ತ ಆನೆಗಳು ದಾಳಿ ಮಾಡದ ರೀತಿಯಲ್ಲಿ ರೈಲ್ವೆ ಬ್ಯಾರಿಕೇಡ್ ಹಾಕಿ. ಜಲಮೂಲಗಳಲ್ಲಿ ಜಲ ಸಂಗ್ರಹದ ಸ್ಥಿತಿಯ ಬಗ್ಗೆ ನಿಗಾ ಇಡಬೇಕು’ ಎಂದರು. 

ಕಟ್ಟೆಚ್ಚರ ವಹಿಸಿ: ಸಾಮಾನ್ಯವಾಗಿ ಜನವರಿ ಅಂತ್ಯದಿಂದ ಏಪ್ರಿಲ್ ಮಧ್ಯಭಾಗದವರೆಗೆ ಕಾಳ್ಗಿಚ್ಚಿನ ಭೀತಿ ಇರುವುದರಿಂದ ಕಾಡಿನಲ್ಲಿ ಕಟ್ಟೆಚ್ಚರ ವಹಿಸುವಂತೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಬೆಂಕಿ ವೀಕ್ಷಕರನ್ನು ನಿಯೋಜಿಸುವಂತೆ ಸಚಿವರು ಸೂಚಿಸಿದರು. 

ಆದಿವಾಸಿಗಳು ಕಾಳ್ಗಿಚ್ಚು ನಿಯಂತ್ರಿಸುವಲ್ಲಿ ಪರಿಣಿತರಾಗಿದ್ದು, ಅವರ ಸೇವೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಉದ್ದೇಶಪೂರ್ವಕವಾಗಿ ಕಾಡಿನಲ್ಲಿ ಬೆಂಕಿ ಹಚ್ಚುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿ ಮತ್ತು ಅರಣ್ಯದೊಳಗೆ ಇರುವ ರಸ್ತೆಗಳಲ್ಲಿ ನಿರ್ಮಿಸಿರುವ ಬೆಂಕಿ ರೇಖೆಯನ್ನು ಸಚಿವರು ವೀಕ್ಷಿಸಿದರು. 

ಶಿಬಿರಕ್ಕೆ ಭೇಟಿ: ಬೇಟೆ ತಡೆ ಶಿಬಿರಗಳಿಗೆ ಭೇಟಿ ನೀಡಿದ ಅವರು, ಸಿಬ್ಬಂದಿಯ ಕಷ್ಟಸುಖ ವಿಚಾರಿಸಿದರು. ಅವರ ಅಡುಗೆ ಕೋಣೆಗೂ ಭೇಟಿ ನೀಡಿ ಪರಿಶೀಲಿಸಿ, ಸಿಬ್ಬಂದಿ ಮಾಡಿಕೊಟ್ಟ ನಿಂಬೆಹುಲ್ಲಿನ ಚಹಾ ಸವಿದರು.

ಕಾಡಿನಲ್ಲಿ ಹುಲ್ಲು ಕೂಡ ಬೆಳೆಯದಂತೆ ವ್ಯಾಪಿಸುತ್ತಿರುವ ಲಂಟಾನ ಕಳೆಯ ಸಮಸ್ಯೆಯನ್ನು ನಿವಾರಿಸಿ ಅರಣ್ಯ ಉಳಿಸಲು ಆದಿವಾಸಿ ಸಮುದಾಯದ ಸ್ಥಳೀಯರ ನೆರವು ಪಡೆಯುವಂತೆ ಖಂಡ್ರೆ ಸೂಚಿಸಿದರು. 

ನರೇಗಾ ಯೋಜನೆಯ ನೆರವು ಪಡೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಬಂಡೀಪುರ, ಕಬಿನಿ ಮತ್ತು ಬಿಆರ್.ಟಿ.ಯಲ್ಲಿ ಲಂಟಾನ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಹುಲಿ ಸಂರಕ್ಷಣಾ ಪ್ರತಿಷ್ಠಾನದ ನಿಧಿಯಿಂದ ಹೆಚ್ಚಿನ ಹಣ ಒದಗಿಸುವಂತೆಯೂ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT