ಭಾನುವಾರ, ಅಕ್ಟೋಬರ್ 2, 2022
19 °C
ಅಮೃತ ಮಹೋತ್ಸವದ ಸಂಭ್ರಮ: ಸ್ವಾತಂತ್ರ್ಯ ಹೋರಾಟಗಾರ ಕೆ.ಎಂ.ತೋಟಪ್ಪ ಮಾತು

ಚಾಮರಾಜನಗರ: ಸತ್ತರೆ ದೇಶಕ್ಕಾಗಿ ಸಾಯುತ್ತೇನೆ ಎಂದು ಹೋರಾಟಕ್ಕೆ ಧುಮುಕಿದೆ...

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ನನಗಾಗ 15 ವರ್ಷ. ಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆಯುತ್ತಿದೆ. ಸ್ವಾತಂತ್ರ್ಯ ಹೋರಾಟದ ಕೊನೆಯ ಹಂತದ ದಿನಗಳವು. ಗಾಂಧೀಜಿ ಸೇರಿದಂತೆ ರಾಷ್ಟ್ರ ನಾಯಕರು ಹಾಗೂ ಸ್ಥಳೀಯ ನಾಯಕರ ಭಾಷಣಗಳಿಂದ ಪ್ರೇರಿತನಾಗಿದ್ದೆ. ಜೀವನದಲ್ಲಿ ಸಾವು ಬಂದೇ ಬರುತ್ತದೆ. ಸತ್ತರೆ ದೇಶಕ್ಕಾಗಿ ಸಾಯುತ್ತೇನೆ ಎಂದುಕೊಂಡು, ಮನೆಯರಿಗೆ ಗೊತ್ತಾಗದಂತೆ ಹೋರಾಟಕ್ಕೆ ಇಳಿದೆ...’ 

ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾದ, ಚಾಮರಾಜನಗರದ ಕರಿನಂಜನಪುರದ ಕೆ.ಎಂ.ತೋಟಪ್ಪ ಅವರ ಮಾತುಗಳಿವು. 

92 ವರ್ಷ ವಯಸ್ಸಿನ ತೋಟಪ್ಪ ಅವರಿಗೆ ಈಗಲೂ ಸ್ವಾತಂತ್ರ್ಯ ಹೋರಾಟದ ತಾಜಾ ನೆನಪುಗಳಿವೆ.  ಮಾತಿಗೆ ಎಳೆದರೆ ಹೋರಾಟದ ಹಾದಿಯನ್ನು ಹುಮ್ಮಸ್ಸಿನಿಂದಲೇ ವಿವರಿಸುತ್ತಾರೆ ಅವರು. ತಿಂಗಳಿಗೂ ಹೆಚ್ಚು ಕಾಲ ಜೈಲಿವಾಸದ ಅನುಭವವೂ ಅವರ ಸ್ಮೃತಿ ಪೆಟ್ಟೆಗೆಯಲ್ಲಿ ಬೆಚ್ಚಗಿವೆ.  

ಕರಿನಂಜನಪುರದ ಮಲ್ಲೇದೇವರು ಹಾಗೂ ಪಾರ್ವತಮ್ಮ ದಂಪತಿಯ ಮೂರನೇ ಮಗನಾಗಿರುವ ತೋಟಪ್ಪ ಅವರು 1931ರ ಜುಲೈ 1ರಂದು ಜನಿಸಿದರು. ಸ್ವಾತಂತ್ರ್ಯ ಹೋರಾಟದ ಕಾವು ದೇಶದಾದ್ಯಂತ ಹೆಚ್ಚುತ್ತಿದ್ದ ಸಂದರ್ಭ ಅದು. ಊರು ಊರುಗಳಲ್ಲಿ ಸ್ವಾತಂತ್ರ್ಯದ ಪರ ಘೋಷಣೆ ಮೊಳಗುತ್ತಿತ್ತು. ಶಾಲಾ ಮಕ್ಕಳಲ್ಲೂ ಹೋರಾಟದ ಕಿಚ್ಚು ಕುದಿಯುತ್ತಿತ್ತು.   

‘ಗಾಂಧೀಜಿ ಸೇರಿದಂತೆ ಹಲವು ರಾಷ್ಟ್ರನಾಯಕರ ಭಾಷಣಗಳನ್ನು ಕೇಳುತ್ತಿದ್ದೆವು. ಅಪರೂಪಕ್ಕೆ ಪತ್ರಿಕೆಗಳನ್ನೂ ಓದುತ್ತಿದ್ದೆವು. ಜಿಲ್ಲೆಯಲ್ಲಿ ಕಾಂಗ್ರೆಸ್‌ ನಾಯಕರು ಶಾಲೆಗಳಿಗೆ ಬಂದು, ಹೋರಾಟದಲ್ಲಿ ಭಾಗವಹಿಸುವಂತೆ ಕರೆ ಕೊಡುತ್ತಿದ್ದರು. ನನ್ನ ತಂದೆ ತಾಯಿಗೆ ನಾನು  ಹೋರಾಟದಲ್ಲಿ ಪಾಲ್ಗೊಳ್ಳುವುದು ಇಷ್ಟ ಇರಲಿಲ್ಲ. ಆದರೆ, ನಾವು ಕೆಲವರು ಹುಡುಗರು ಚಳವಳಿಯಲ್ಲಿ ಭಾಗವಹಿಸಲು ನಿರ್ಧಾರ ಮಾಡಿದ್ದೆವು. ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುತ್ತಿದ್ದೆವು. ಇದು ನಾವು ಜೈಲು ಸೇರುವಂತೆಯೂ ಮಾಡಿತ್ತು’ ಎಂದು ನೆನಪಿನ ಸುರುಳಿಯನ್ನು ಬಿಚ್ಚಿಟ್ಟರು ತೋಟಪ್ಪ. 

ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದ ಗೋಪಾಲರಾಯರು, ಸಿ.ವಿ.ರಾಮಸ್ವಾಮಿ ಶಾಸ್ತ್ರಿ, ಪುಟ್ಟನಂಜಪ್ಪ, ಶಂಕರಪ್ಪ, ಲಲಿತಾ ಜಿ.ತಗತ್‌, ಸುಬ್ಬರಾವ್‌ ದಂಪತಿ, ಪುಟ್ಟಸುಬ್ಬಣ್ಣ ಮುಂತಾದ
ವರೊಂದಿಗಿನ ಒಡನಾಟವನ್ನು ಸ್ಮರಿಸುತ್ತಾರೆ ಅವರು.

ಜಿಲ್ಲೆಯ ಮತ್ತೊಬ್ಬ ಸ್ವಾತಂತ್ರ್ಯ ಹೋರಾಟಗಾರ್ತಿ ಲಲಿತಾ ಜಿ.ತಗತ್‌ ಹಾಗೂ ತೋಟಪ್ಪ ಅವರು ಸಹಪಾಠಿಗಳು. ಹೋರಾಟಕ್ಕೆ ಧುಮುಕಿದ್ದೂ ಒಟ್ಟಿಗೆ. ಜೈಲಿಗೂ ಜೊತೆಗೆ ನಡೆದಿದ್ದರು.  

ತಾವು ಜೈಲಿಗೆ ಹೋದ ಘಟನೆಯನ್ನು ತೋಟಪ್ಪ ವಿವರಿಸುವುದು ಹೀಗೆ: ‘1947ರಲ್ಲಿ ಸ್ವಾತಂತ್ರ್ಯ ಘೋಷಣೆ ಮಾಡುವುದಕ್ಕೂ ಮೊದಲು ಚಳವಳಿ ತೀವ್ರ ಸ್ವರೂಪ ಪಡೆದಿತ್ತು. ಕೈಯಲ್ಲಿ ಧ್ವಜ ಹಿಡಿದು ಜನರು ಗುಂಪಾಗಿ ಹೋಗುತ್ತಿದ್ದರೆ ಪೊಲೀಸರು ತಡೆದು ಬಂಧಿಸುತ್ತಿದ್ದರು. ಮನೆಯಲ್ಲಿ ಹೇಳದೆ ಸ್ನೇಹಿತ ಕೆ.ಸಿ.ಪುಟ್ಟಸುಬ್ಬಣ್ಣನೊಂದಿಗೆ ಮೈಸೂರಿಗೆ ಹೋಗಲು ನಿರ್ಧರಿಸಿದ್ದೆ. ಆಗ ತಂಡ ತಂಡಗಳಾಗಿ ನಡೆದುಕೊಂಡು ಹೋಗುತ್ತಿದ್ದೆವು. ನಂಜನಗೂಡು ದಾಟಿ ಹೋಗುತ್ತಿದ್ದಾಗ ಪೊಲೀಸರು ತಡೆದು ಎಲ್ಲರನ್ನೂ ವಶಕ್ಕೆ ಪಡೆದರು. ಮೈಸೂರಿನ ಠಾಣೆಗೆ ಕರೆದುಕೊಂಡು ಹೋಗಿ ಇರಿಸಿದರು. ಆಗ ಮರಿಸ್ವಾಮಿ ಎಂಬುವವರು ಎಸ್‌ಪಿಯಾಗಿದ್ದರು. ಆರಂಭದಲ್ಲಿ, ನಮ್ಮನ್ನೆಲ್ಲ ಎಚ್‌.ಡಿ.ಕೋಟೆ ಅರಣ್ಯ ಪ್ರದೇಶದಲ್ಲಿ ಕಿ.ಮೀಗೆ ಒಬ್ಬರಂತೆ ಬಿಡುವುದಕ್ಕೆ ಸೂಚಿಸಿದರು. ಕೊನೆಗೆ ಮನಸ್ಸು ಬದಲಾಯಿಸಿದ ಅವರು, ಮೈಸೂರು ಸೆಂಟ್ರಲ್‌ ಜೈಲಿಗೆ ಕಳುಹಿಸಿದರು. ಅಲ್ಲಿ 800 ಮಂದಿ ಇದ್ದರು. ನಾವೂ ಒಂದು ತಿಂಗಳು ಇದ್ದೆವು. ಅಷ್ಟರಲ್ಲಿ ಸ್ವಾತಂತ್ರ್ಯ ಘೋಷಣೆಯಾಗಿ ನಮ್ಮನ್ನು ಬಿಡುಗಡೆ ಮಾಡಿದರು’.

‘ಮನೆಯಲ್ಲಿ, ಮಗ ಕಾಣುತ್ತಿಲ್ಲ ಎಂದು ತಂದೆ– ತಾಯಿ, ಸಂಬಂಧಿಕರು ಆತಂಕಗೊಂಡಿದ್ದರು. ಜೈಲಿನಿಂದ ನಾನು ಬರೆದ ಪತ್ರ ತಲುಪಿದ ನಂತರಷ್ಟೇ ಅವರಿಗೆ ಸಮಾಧಾನವಾಗಿತ್ತು’ ಎಂದು ನಗುತ್ತಾ ಹೇಳಿದರು ತೋಟಪ್ಪ. 

‘ಸ್ವಾತಂತ್ರ್ಯ ಬಂದ ನಂತರವೂ ಒಕ್ಕೂಟ ವ್ಯವಸ್ಥೆಗೆ ಸೇರಲು ಕೆಲವು ಪ್ರಾಂತ್ಯದ ರಾಜರು ಒಪ್ಪದೇ ಇದ್ದಾಗ ಮತ್ತೆ ಚಳವಳಿ ನಡೆಸಿದ್ದೆವು. ಆ ಸಂದರ್ಭದಲ್ಲೂ 25 ದಿನಗಳ ಕಾಲ ಜೈಲು ವಾಸ ಅನುಭವಿಸಿದ್ದೆ’ ಎಂದು ಅವರು ಸ್ಮರಿಸಿದರು.

ಸ್ವಾತಂತ್ರ್ಯ ಬಂದ ನಂತರ ಓದು ಮುಂದುವರಿಸಿದ ತೋಟಪ್ಪ, 1954ರಲ್ಲಿ ಬಿಎ ಪದವಿ ಪಡೆದರು. ಬಳಿಕ ಕೃಷಿಯಲ್ಲಿ ತೊಡಗಿಕೊಂಡರು. 

ಶ್ರಮ ಜೀವಿಯಾಗಿರುವ ತೋಟಪ್ಪ ಈಗಲೂ ಗಟ್ಟಿಮುಟ್ಟಾಗಿದ್ದಾರೆ. ಆರೋಗ್ಯವೂ ಉತ್ತಮವಾಗಿದೆ. ಆರೋಗ್ಯದ ಗುಟ್ಟೇನು ಎಂದು ಕೇಳಿದರೆ, ‘ಪ್ರತಿ ದಿನ 10–12 ಕಿ.ಮೀ ಸೈಕಲ್‌ ಹೊಡೆಯುತ್ತಿದೆ’ ಎಂದು ಮಂದಹಾಸ ಬೀರುತ್ತಾರೆ ತೋಟಪ್ಪ. 

ಪತ್ನಿ ನಾಗಮ್ಮ, ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬ ಪುತ್ರಿ ಅವರಿಗಿದ್ದಾರೆ. 

ಹೆಚ್ಚಾದ ಅನ್ಯಾಯ, ಕಾನೂನು ಬಿಗಿ ಇಲ್ಲ...

ರಾಜ್ಯ, ದೇಶದ ಈಗಿನ ಪರಿಸ್ಥಿತಿ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ ತೋಟಪ್ಪ. 

‘ಅಂದಿನ ಸರ್ಕಾರಕ್ಕೂ, ಈಗಿನ ಸರ್ಕಾರಗಳಿಗೂ ಅಜಗಜಾಂತರ ಇದೆ. ಅಂದು ಕಾನೂನು ಕಟ್ಲೆ ಬಿಗಿ ಇತ್ತು. ಈಗ ಯಾವುದೂ ಇಲ್ಲ. ಅನ್ಯಾಯ, ಭ್ರಷ್ಟಾಚಾರ ಹೆಚ್ಚಾಗಿದೆ. ಮೊದಲೆಲ್ಲ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಹೇಳಿದರೆ ಜನರು ಹೆದರುತ್ತಿದ್ದರು. ಈಗ ಯಾರಿಗೂ ಹೆದರಿಕೆ ಎನ್ನುವುದೇ ಇಲ್ಲ. ಪ್ರಜಾ‍ಪ್ರಭುತ್ವ ವ್ಯವಸ್ಥೆಯೇ ಅಣಕಿಸುವಂತೆ ಇಂದಿನ ಪರಿಸ್ಥಿತಿ ಇದೆ’ ಎಂದು ಅವರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು