ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡತನದಲ್ಲಿ ಅರಳಿದ ಗ್ರಾಮೀಣ ಪ್ರತಿಭೆ

ಸಂತೇಮರಹಳ್ಳಿ ತೋಟಗಾರಿಕಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸುಷ್ಮಾ
Last Updated 23 ಜನವರಿ 2022, 19:30 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಜಮೀನಿನಲ್ಲೊಂದು ಪುಟ್ಟ ಗುಡಿಸಲು. ಅಲ್ಲಿಂದ ಶಾಲಾ ಕಾಲೇಜಿಗೆ ತೆರಳಲು ಒಂದೂವರೆ ಕಿಲೊ ಮೀಟರ್ ನಡಿಗೆ. ಈ ಪುಟ್ಟ ಗುಡಿಸಲಿನಲ್ಲಿ ಅರಳಿದ ಶೈಕ್ಷಣಿಕ ಪ್ರತಿಭೆ ಎಂ.ಕೆ.ಸುಷ್ಮಾ.

ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಕಳೆದ 2020-21 ಸಾಲಿನ ಘಟಿಕೋತ್ಸವದಲ್ಲಿ 15 ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡ ಪ್ರತಿಭಾನ್ವಿತ ವಿದ್ಯಾರ್ಥಿನಿ ಸುಷ್ಮಾ.

ಸಂತೇಮರಹಳ್ಳಿಯ ಕುಮಾರ್ ಮತ್ತು ಚಂದ್ರಮತಿ ದಂಪತಿಯ ಮಗಳಾಗಿರುವ ಸುಷ್ಮಾ, ಬಡತನ‌ದ ಬಗ್ಗೆ ಯೋಚಿಸದೆ, ಅಪ್ಪ ಅಮ್ಮನ ಸಹಕಾರದಿಂದ ಕಷ್ಟ ಪಟ್ಟು ಓದಿ ಸಾಧನೆ ಮಾಡಿರುವ ಹೆಣ್ಣು ಮಗಳು.

ಬಾಲ್ಯದಿಂದಲೇ ಓದಿನ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದ ಸುಷ್ಮಾಗೆ ಬಡತನವೇ ಶಾಪವಾಗಿತ್ತು.ಜಮೀನಿನ ಮನೆಯಿಂದ ಒಂದೂವರೆ ಕಿಲೋ ಮೀಟರ್ ನಡೆದು ಶಾಲಾ ಕಾಲೇಜಿಗೆ ಹೋಗಬೇಕಿತ್ತು. ಮಗಳ ಆಸಕ್ತಿಗೆ ತಂದೆ ತಾಯಿ ಕಷ್ಟದ ನಡುವೆಯೇ ನೀರೆರೆದರು.

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಸಂತೇಮರಹಳ್ಳಿಯ ಜೆಎಸ್‍ಎಸ್ ಶಾಲೆಯಲ್ಲಿ ಪಡೆದು, ಕಾಲೇಜು ವಿದ್ಯಾಬ್ಯಾಸಕ್ಕೆ ಚಾಮರಾಜನಗರದ ಜೆಎಸ್‍ಎಸ್ ಮಹಿಳಾ ಕಾಲೇಜಿನಲ್ಲಿ ದಾಖಲಾಗಿ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಪಿನಲ್ಲಿ ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆಯಾದರು. ತಂದೆ-ತಾಯಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಇವರಿಗೆ ತೋಟಗಾರಿಕೆಯಲ್ಲಿ ಆಸಕ್ತಿ ಬೆಳೆದು ಮೈಸೂರಿನ ತೋಟಗಾರಿಕೆ ವಿದ್ಯಾಲಯದಲ್ಲಿ ಬಿಎಸ್‌ಸಿಗೆ ಸೇರಿದ್ದರು.

ತಂದೆ ಕುಮಾರ್‌ ಅವರು ಮಗಳ ಶಿಕ್ಷಣಕ್ಕಾಗಿ ಸಾಲ ಮಾಡಿದ್ದರು. ಇದರ ಅರಿವು ಇದ್ದ ಸುಷ್ಮಾ ಪದವಿಯಲ್ಲಿ ಉತ್ತಮವಾಗಿ ಓದಿ 15 ಚಿನ್ನದ ಪದಕಗಳನ್ನು ಗಳಿಸಿ ರಾಜ್ಯಕ್ಕೆ ಮೊದಲಿಗರಾದರು.

ಬಿಎಸ್ಸಿ ಪದವಿ ಮುಗಿಸಿದ ನಂತರ ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಬೀಜ ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ರ‍್ಯಾಂಕ್‌ ಪಡೆದು ಇದೀಗ ಇದೇ ವಿಷಯದಲ್ಲಿ ಪಿಎಚ್‍ಡಿ ಮಾಡಲು ಮುಂದಾಗಿದ್ದಾರೆ.

ತೋಟಗಾರಿಕೆಯೇ ಸಾಧನೆ ಕ್ಷೇತ್ರ

’ಅಪ್ಪ ನನ್ನ ಓದಿಗಾಗಿ ಸಾಲ ಮಾಡುತ್ತಿದ್ದರು. ಅವರು ಮತ್ತೆ ಸಾಲ ಮಾಡಬಾರದು ಎಂಬುದು ನನ್ನ ಆಶಯವಾಗಿತ್ತು. ಈಗ ನನಗೆ ಕೇಂದ್ರ ಸರ್ಕಾರದಿಂದ ಪ್ರತಿ ತಿಂಗಳು ₹15 ವಿದ್ಯಾರ್ಥಿವೇತನ ಬರುತ್ತಿದೆ. ಹೀಗಾಗಿ ತಂದೆಯ ಮೇಲಿನ ಸಾಲದ ಒತ್ತಡವನ್ನು ಕಡಿಮೆ ಮಾಡಿದ್ದೇನೆ. ತೋಟಗಾರಿಕೆ ವಿಷಯದಲ್ಲಿ ಪಿಎಚ್‍ಡಿ ಮುಗಿಸಿ ಈ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬೇಕು ಎಂದುಕೊಂಡಿದ್ದೇನೆ‘ ಎಂದು ಸುಷ್ಮಾ ಅವರು ’ಪ್ರಜಾವಾಣಿ‘ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT