ಬುಧವಾರ, ಜನವರಿ 27, 2021
16 °C
ಯಳಂದೂರು: ಶಿಕ್ಷಕ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ ವಿಡಿಯೊ ವೈರಲ್‌

ಶಿಕ್ಷಕನ ರಂಪಾಟಕ್ಕೆ ಭಯ ಬಿದ್ದು, ಸಹಾಯಕ್ಕಾಗಿ ರಸ್ತೆಯಲ್ಲಿ ನಿಂತ ಮುಖ್ಯ ಶಿಕ್ಷಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ಶಾಲೆಯ ಗೇಟಿನ ಬಳಿ ನಿಂತು ಮುಖ್ಯಶಿಕ್ಷಕಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 

ಶಿಕ್ಷಕನ ರಂಪಾಟದಿಂದ ಭಯ ಬಿದ್ದು ಮುಖ್ಯಶಿಕ್ಷಕಿ ಶಾಲೆಯ ಎದುರಿನ ರಸ್ತೆಯಲ್ಲಿ ನಿಂತುಕೊಂಡು ಸ್ಥಳೀಯರ ಸಹಾಯಯಾಚಿಸುತ್ತಿರುವ ದೃಶ್ಯವೂ ವಿಡಿಯೊದಲ್ಲಿದೆ. 

ಯಳಂದೂರು ತಾಲ್ಲೂಕಿನ ಚಾಮಲಪುರದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇದೇ 7ರಂದು ಈ ಘಟನೆ ನಡೆದಿದೆ. ಸ್ಥಳೀಯರೊಬ್ಬರು ಘಟನೆಯನ್ನು ಮೊಬೈಲ್‌ ಚಿತ್ರೀಕರಿಸಿದ್ದಾರೆ. 

ಈ ಶಾಲೆಯಲ್ಲಿ ಇಬ್ಬರು ಬೋಧಕ ಸಿಬ್ಬಂದಿ ಇದ್ದಾರೆ. ದಾಕ್ಷಾಯಿಣಿ ಅವರು ಮುಖ್ಯ ಶಿಕ್ಷಕಿಯಾಗಿದ್ದರೆ, ಲೋಕೇಶ್‌ ಅವರು ಸಹ ಶಿಕ್ಷಕರಾಗಿದ್ದಾರೆ.

ಲೋಕೇಶ್‌ ಅವರು ದಾಕ್ಷಾಯಿಣಿ ಅವರನ್ನು ಉದ್ದೇಶಿಸಿ ಹಿಗ್ಗಾಮುಗ್ಗ ಬೈಯುವ ದೃಶ್ಯ ವಿಡಿಯೊದಲ್ಲಿದೆ. ‘ಇಲ್ಲಿ ನಾನೇ ಮುಖ್ಯ ಶಿಕ್ಷಕ. ನೀನ್ಯಾರೇ? ನನಗೆ ಮಾಟ ಮಾಡಿಸಿದ್ದೇ ನೀನು. ಗೊತ್ತಿರುವ ಹೆಂಗಸೇ ಮಾಟ ಮಾಡಿಸಿದ್ದಾಳೆ ಎಂದು ಶನಿ ದೇವರು ಹೇಳಿದ್ದಾನೆ. ನೀನು ಡಿಡಿಪಿಐ, ಬಿಇಒಗೆ ಎಲ್ಲರಿಗೂ ಹೇಳು. ಇಲ್ಲಿ ನೀ ಇರಬೇಕು, ಇಲ್ಲ ನಾನು ಇರಬೇಕು’ ಎಂದೆಲ್ಲ ಲೋಕೇಶ್‌ ಅವರು ಹೇಳುತ್ತಿರುವ ದೃಶ್ಯ ತುಣುಕಿನಲ್ಲಿದೆ. ಸ್ಥಳೀಯರು ಲೋಕೇಶ್‌ ಅವರನ್ನು ಸಮಾಧಾನಪಡಿಸುವ ದೃಶ್ಯವೂ ಇದೆ. 

ಲೋಕೇಶ್‌ ಅವರಿಗೆ ಇತ್ತೀಚೆಗೆ ಅಪಘಾತವಾಗಿತ್ತು. ಹಾಗಾಗಿ, ಪ್ರತಿ ತಿಂಗಳು ದೈಹಿಕ ದೃಢತೆ ಪ್ರಮಾಣಪತ್ರ ಸಲ್ಲಿಸಲು ಅಧಿಕಾರಿಗಳು ಸೂಚಿಸಿದ್ದರು. ಮುಖ್ಯ ಶಿಕ್ಷಕಿ ದಾಕ್ಷಾಯಿಣಿ ಅವರು ಪ್ರಮಾಣ ಪತ್ರವನ್ನು ಕೇಳಿದ್ದರು ಎಂದು ಮೂಲಗಳು ತಿಳಿಸಿವೆ. ಇದರಿಂದ ಕೋಪಗೊಂಡ ಲೋಕೇಶ್‌, ವಿದ್ಯಾರ್ಥಿಗಳ ಎದುರಿನಲ್ಲೇ ದಾಕ್ಷಾಯಿಣಿ ಅವರಿಗೆ ಬೆದರಿಕೆ ಹಾಕಿ ಕೂಗಾಡಿದ್ದಾರೆ. ಭಯಗೊಂಡ ಮುಖ್ಯ ಶಿಕ್ಷಕಿ ಹೊರಕ್ಕೆ ಓಡಿಬಂದಿದ್ದಾರೆ. ಅವರನ್ನೇ ಹಿಂಬಾಲಿಸಿದ ಲೋಕೇಶ್‌ ಅವರು, ಗೇಟ್‌ ಬಳಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. 

ಶಿಕ್ಷಕನ ವಿರುದ್ಧ ಕ್ರಮ: ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಟಿ.ಜವರೇಗೌಡ ಅವರು, ‘ಘಟನೆ ನಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಮುಖ್ಯ ಶಿಕ್ಷಕಿ ಹೇಳಿದ ಕೆಲಸವನ್ನು ಶಿಕ್ಷಕರು ಮಾಡಿಲ್ಲ. ಕೇಳಿದ್ದಕ್ಕೆ ಬೈದಿದ್ದಾರೆ. ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು