ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ಎ ಮೀಸಲಾತಿ ಹೋರಾಟಕ್ಕೆ ಗೌಡ ಲಿಂಗಾಯತರೂ ಸಜ್ಜು, ಬೆಂಗಳೂರು ಚಲೋಗೆ ನಿರ್ಧಾರ

ಸಂತೇಮರಹಳ್ಳಿಯಲ್ಲಿ ಮುಖಂಡರ ಸಭೆ, ಸುತ್ತೂರು ಶ್ರೀ, ಸಿದ್ಧಗಂಗಾ ಶ್ರೀಗಳಿಗೆ ಮನವಿಗೆ ತೀರ್ಮಾನ
Last Updated 28 ಫೆಬ್ರುವರಿ 2021, 14:01 IST
ಅಕ್ಷರ ಗಾತ್ರ

ಚಾಮರಾಜನಗರ: ಪ್ರವರ್ಗ 2ಎಗೆ ಸೇರಿಸುವಂತೆ ಪಂಚಮಸಾಲಿ ಲಿಂಗಾಯತ ಸಮುದಾಯ ಹೋರಾಟ ನಡೆಸುತ್ತಿರುವ ಬೆನ್ನಲ್ಲೇ, ಹಳೆ ಮೈಸೂರು ಭಾಗದಲ್ಲಿರುವ ಗೌಡ/ಒಕ್ಕಲಿಗ ಲಿಂಗಾಯತರು ಕೂಡ ತಮ್ಮನ್ನೂ 2ಎಗೆ ಸೇರಿಸಬೇಕು ಎಂದು ಹೋರಾಟ ನಡೆಸಲು ಮುಂದಾಗಿದ್ದಾರೆ.

ಬಿಜೆಪಿ ಮುಖಂಡ ಅಮ್ಮನಪುರ ಮಲ್ಲೇಶ್‌ ಅವರ ನೇತೃತ್ವದಲ್ಲಿ ಭಾನುವಾರ ಸಂತೇಮರಹಳ್ಳಿಯಲ್ಲಿ ಗೌಡ ಲಿಂಗಾಯತ ಸಮುದಾಯದ ಮುಖಂಡರು ಸಭೆ ಸೇರಿದ್ದು, ಸರ್ಕಾರವನ್ನು ಒತ್ತಾಯ ಮಾಡುವುದಕ್ಕಾಗಿ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ.

ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಹಮ್ಮಿಕೊಳ್ಳುವ ಹೋರಾಟದ ನೇತೃತ್ವವನ್ನು ವಹಿಸಿಕೊಳ್ಳಬೇಕು ಎಂದು ಸುತ್ತೂರುಶ್ರೀಗಳು ಹಾಗೂ ಸಿದ್ಧಗಂಗಾ ಶ್ರೀಗಳಿಗೆ ಮನವಿ ಮಾಡುವ ಹಾಗೂ ಅವರ ನೇತೃತ್ವದಲ್ಲೇ ಬೆಂಗಳೂರು ಚಲೋ ಕಾರ್ಯಕ್ರಮ ಆಯೋಜಿಸುವ ಬಗ್ಗೆಯೂ ಮುಖಂಡರು ನಿರ್ಧಾರ ಕೈಗೊಂಡಿದ್ದಾರೆ.

ಪಂಚಮಸಾಲಿ ಸಮುದಾಯದ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುವ ನಿರ್ಣಯವನ್ನೂ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ಹಳೆ ಮೈಸೂರು ಪ್ರಾಂತ್ಯದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಗೌಡ ಲಿಂಗಾಯತ, ಒಕ್ಕಲಿಗ ಲಿಂಗಾಯತ ಸಮುದಾಯದವರು ಇದ್ದಾರೆ. ಈ ಸಮುದಾಯಕ್ಕೆ 2ಎ ಮೀಸಲಾತಿ ಕೊಡಿಸಲು ಈ ಭಾಗದ ಸ್ವಾಮೀಜಿಗಳು ಪ್ರಯತ್ನಿಸಬೇಕು ಎಂಬ ಅಭಿಪ್ರಾಯವನ್ನು ಮುಖಂಡರು ವ್ಯಕ್ತಪಡಿಸಿದರು.

‘ಜಿಲ್ಲೆಯ ಐದೂ ತಾಲ್ಲೂಕುಗಳಲ್ಲಿಯೂ ವೀರಶೈವ ಲಿಂಗಾಯತ ಮುಖಂಡರ ಸಭೆಗಳನ್ನು ನಡೆಸಿ, ಜಾಗೃತಿ ಮೂಡಿಸುವ ಜೊತೆಗೆ ಆಯಾ ಭಾಗದಲ್ಲಿರುವ ಮಠಾಧೀಶರು ನೇತೃತ್ವ ವಹಿಸಿಕೊಳ್ಳುವಂತೆ ಮನವಿ ಮಾಡಿಕೊಳ್ಳಬೇಕು. ಅಂತಿಮವಾಗಿ ಸಮಿತಿಯನ್ನು ರಚನೆ ಮಾಡಿಕೊಂಡು, ಸಂಘಟನೆಯನ್ನು ಬಲಿಷ್ಠಗೊಳಿಸಲು ಶ್ರಮ ವಹಿಸಬೇಕು’ ಎಂಬ ತೀರ್ಮಾನಕ್ಕೆ ಮುಖಂಡರು ಬಂದರು.

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಮೂಡ್ಲುಪುರ ನಂದೀಶ್, ಮುಖಂಡಕೋಡಸೋಗೆ ಶಿವಬಸಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಉಡಿಗಾಲಪಾಪಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಪಿ.ಶಂಕರ್, ಉದ್ಯಮಿ ಎಚ್.ಜಿ.ಮಹದೇವಪ್ರಸಾದ್, ಶಿವಪುರ ಸುರೇಶ್, ಬಂಡಹಳ್ಳಿ ಶಿವಕುಮಾರ್, ಡಾ. ಪರಮೇಶ್ವರಪ್ಪ, ಕೊತ್ತಲವಾಡಿ ಕುಮಾರ್, ಕಾವುದವಾಡಿ ಗುರು, ಅರಕವಾಡಿ ಮಹೇಶ್, ಕಮಲೇಶ್, ಅಲೂರು ಪ್ರದೀಪ್, ರಮೇಶ್‌ಬಾಬು, ಎನ್.ಆರ್. ಪುರುಷೋತ್ತಮ್, ಮರಹಳ್ಳಿ ರಾಜು, ಮಹದೇವಸ್ವಾಮಿ, ಶಿವಶಂಕರ್, ದುಗ್ಗಟ್ಟಿ ಶಿವಕುಮಾರ್, ಎಂ.ಪಿ.‌ಬಸವಣ್ಣ, ನಟರಾಜು, ಸುಭಾಷ್ ಇದ್ದರು.

‘ಮುಂದಿನ ಪೀಳಿಗೆಗಾಗಿ ಹೋರಾಟ ಅನಿವಾರ್ಯ’

ಸಭೆಯಲ್ಲಿ ಮಾತನಾಡಿನಾಡಿದ ಅಮ್ಮನಪುರ ಮಲ್ಲೇಶ್‌ ಅವರು, ‘ಹಳೆ ಮೈಸೂರು ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ವೀರಶೈವ ಲಿಂಗಾಯತರೆಲ್ಲ ಗೌಡ ಅಥವಾ ಒಕ್ಕಲಿಗ ಅಥವಾ ಪಂಚಮಸಾಲಿ ಲಿಂಗಾಯತರು. ಈ ಭಾಗದಲ್ಲಿ ಮೂರು ಕೂಡ ಸಮಾನಾರ್ಥಕ ಪದಗಳೇ. ಈಗಾಗಲೇ ಪಂಚಮಸಾಲಿ ಲಿಂಗಾಯತರ ಹೋರಾಟ ತೀವ್ರವಾಗಿದೆ. ಅದೇ ಮಾದರಿಯಲ್ಲಿ ಹಳೆ ಮೈಸೂರು ಭಾಗದ ಲಿಂಗಾಯತರು ಕೂಡ ಹೋರಾಟ ಮಾಡಿ ಮೀಸಲಾತಿ ಪಡೆದುಕೊಳ್ಳಬೇಕಾಗಿದೆ. ನಮ್ಮ ಹೋರಾಟದ ಕಾವು ರಾಜಧಾನಿಗೆ ತಲುಪಬೇಕಾಗಿದೆ. ಸಮುದಾಯದವರು ಸಂಘಟಿತರಾಗಿ ನಮ್ಮ ಹಕ್ಕು ಕೇಳಬೇಕಾಗಿದೆ. ನಮ್ಮ ಹೋರಾಟ 2ಎಗೆ ಸೇರಿಸುವವರೆಗೆ ನಿರಂತರವಾಗಿರುತ್ತದೆ. ಇದು ಯಾವುದೇ ರಾಜಕೀಯ ಪಕ್ಷದ ವಿರುದ್ಧದ ಹೋರಾಟವಲ್ಲ. ನಮ್ಮ ಮುಂದಿನ ಪೀಳಿಗೆಗೆ ಈ ಹೋರಾಟ ಅನಿವಾರ್ಯವಾಗಿದೆ. ಇದಕ್ಕೆ ಸಮುದಾಯದ ಸಹಕಾರ ಅಗತ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT