ಭಾನುವಾರ, ಜನವರಿ 23, 2022
27 °C
ಜಿಲ್ಲಾ ಮಟ್ಟದ ಅಂಗವಿಕಲರ ಕುಂದುಕೊರತೆ ಸಭೆ, ಜಿಲ್ಲಾಧಿಕಾರಿ ಮುಂದೆ ಹಲವು ದೂರು

ತಾಲ್ಲೂಕಿನಲ್ಲೂ ಕುಂದುಕೊರತೆ ಸಭೆಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಅಂಗವಿಕಲ ಕುಂದುಕೊರತೆಗಳ ಬಗ್ಗೆ ಚರ್ಚಿಸುವುದಕ್ಕಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ತಹಶೀಲ್ದಾರ್‌ ನೇತೃತ್ವದಲ್ಲಿ ತಾಲ್ಲೂಕು ಮಟ್ಟದಲ್ಲಿ ಸಭೆಗಳನ್ನು ನಡೆಸಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರು ಗುರುವಾರ ಸೂಚಿಸಿದರು. 

ಜಿಲ್ಲಾ ಮಟ್ಟದ ಅಂಗವಿಕಲರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ’ಜಿಲ್ಲೆಯ ಐದೂ ತಾಲ್ಲೂಕುಗಳಲ್ಲೂ ತಹಶೀಲ್ದಾರ್‌ಗಳ ನೇತೃತ್ವದಲ್ಲಿ ಸಭೆ ನಡೆಯಬೇಕು. ಅಲ್ಲಿ ಆಗುವ ಚರ್ಚೆಗಳಿಂದಾಗಿ ಜಿಲ್ಲಾ ಮಟ್ಟದಲ್ಲಿ ನಡೆಯುವ ಸಭೆಯಲ್ಲಿ ಚರ್ಚಿಸಲು ಅನುಕೂಲವಾಗುತ್ತದೆ. ತಾಲ್ಲೂಕು ಮಟ್ಟದ ಅಧಿಕಾರಿಗಳೂ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕು. ಮುಂದಿನ ಮಾರ್ಚ್ ಅಂತ್ಯ ಅಥವಾ ಏಪ್ರಿಲ್ ತಿಂಗಳಲ್ಲಿ ಸಭೆ ನಡೆಸಬೇಕು. ಅಲ್ಲದೇ ಅಂಗವಿಕಲರಿಗೆ ಸಂಬಂಧಿಸಿದಂತೆ ಆಗಬೇಕಿರುವ ಕೆಲಸಗಳ ಕುರಿತು ತಾಲ್ಲೂಕುವಾರು ಪಟ್ಟಿ ಮಾಡಿ ಕ್ರಿಯಾಯೋಜನೆ ರೂಪಿಸಬೇಕು‘ ಎಂದು ಹೇಳಿದರು. 

ಅನುದಾನ ಸದ್ಬಳಕೆ ಮಾಡಿ: ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಅಂಗವಿಕಲರ  ಕಲ್ಯಾಣಕ್ಕಾಗಿ ಮೀಸಲಿಟ್ಟಿರುವ ಅನುದಾನವನ್ನು ಸದ್ಭಳಕೆ ಮಾಡಿ ಫಲಾನುಭವಿಗಳಿಗೆ ಸವಲತ್ತುಗಳನ್ನು ಸಮರ್ಪಕವಾಗಿ ತಲುಪಿಸಬೇಕು ಅವರು ಗುರುವಾರ ಹೇಳಿದರು. 

’ಅಂಗವಿಕಲರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಬಸ್‌ಪಾಸ್ ಸೌಲಭ್ಯ, ಯುಡಿಐಡಿ ಕಾರ್ಡ್, ವಸತಿ, ಸರ್ಕಾರಿ ಇಲಾಖೆಗಳಲ್ಲಿ ರ‍್ಯಾಂಪ್ ವ್ಯವಸ್ಥೆ, ಶೌಚಾಲಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಮೀಸಲಿಟ್ಟಿರುವ ಶೇ 5ರಷ್ಟು ಅನುದಾನವನ್ನು ಅಂಗವಿಕಲರ ಅನುಕೂಲಕ್ಕೆ ಬಳಸಬೇಕು. ಎಲ್ಲ ತಾಲೂಕುಗಳಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಅಂಗವಿಕಲರ ಕುಂದುಕೊರತೆ ಸಭೆ ನಡೆಸಬೇಕು. ಪರಿಶೀಲಿಸಿ ತಾಲ್ಲೂಕುವಾರು ಪಟ್ಟಿ ಮಾಡಿ ಕ್ರಿಯಾಯೋಜನೆ ತಯಾರಿಸಿ ನಿಗದಿತ ಗುರಿ ಸಾಧಿಸಲು ಕಾರ್ಯೋನ್ಮುಖರಾಗಬೇಕು‘ ಎಂದರು.

’ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಆಸ್ಪತ್ರೆಗಳಲ್ಲಿ ಅಂಗವಿಕಲರಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ವೈದ್ಯಕೀಯ ತಪಾಸಣೆಗೆ ಸೌಲಭ್ಯ ಕಲ್ಪಿಸಬೇಕು. ಅಂಗವೈಕಲ್ಯದ ಬಗ್ಗೆ ಪ್ರಮಾಣಪತ್ರ ನೀಡಲು ಮಧ್ಯವರ್ತಿಗಳಿಗೆ ಅವಕಾಶವಾಗಬಾರದು. ವೈದ್ಯರು ಸೂಚಿಸಿದ ಔಷಧಿಗಳು ಸಂಬಂಧಪಟ್ಟ ಆಸ್ಪತ್ರೆಗಳಲ್ಲಿ ಲಭ್ಯವಿರುವಂತೆ ದಾಸ್ತಾನು ಮಾಡಿಕೊಳ್ಳಬೇಕು‘ ಎಂದು ತಿಳಿಸಿದರು.

ಅಂಗವಿಕಲರಿಗೆ ಉದ್ಯೋಗ ಮೇಳಗಳಲ್ಲಿ ಹೆಚ್ಚಿನ ಅವಕಾಶ, ಹೊಸದಾಗಿ ತೆರೆಯಲಾಗಿರುವ ಆಸ್ಪತ್ರೆಯಲ್ಲಿ ಉದ್ಯೋಗ, ಜಿಲ್ಲಾಮಟ್ಟದಲ್ಲಿ ಬುದ್ಧಿಮಾಂದ್ಯ ಮಕ್ಕಳ ಶಾಲೆ, ಅಂಗವಿಕಲರ ಹಕ್ಕುಗಳ ಸಂರಕ್ಷಣೆ ಕುರಿತು ಜನಪ್ರತಿನಿಧಿಗಳಿಗೆ ಅರಿವು ಕಾರ್ಯಾಗಾರ, ವಾಹನಗಳ ವಿತರಣೆ, ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಅಂಗವಿಕಲರಿಗೆ ರ‍್ಯಾಂಪ್, ಶೌಚಾಲಯಗಳ ವ್ಯವಸ್ಥೆ, ಯುಡಿಐಡಿ ಕಾರ್ಡ್ ನೀಡಲು ಹೋಬಳಿಮಟ್ಟದಲ್ಲಿ ಶಿಬಿರಗಳ ಆಯೋಜನೆ, ಕೋವಿಡ್ ಸಂದರ್ಭದಲ್ಲಿ ಕೋವಿಡ್ ಕೇರ್ ಕೇಂದ್ರಗಳಲ್ಲಿ ಗಾಲಿಕುರ್ಚಿಗಳ ಸೌಕರ್ಯ, ವಿಶೇಷ ಕೊಠಡಿ ವ್ಯವಸ್ಥೆ, ಅಂಗವಿಕಲ ಪುನರ್ವಸತಿ ಕಾರ್ಯಕರ್ತರನ್ನು ಮುಂಂಚೂಣಿ ಕಾರ್ಯಕರ್ತರಾಗಿ ಪರಿಗಣಿಸಬೇಕು ಎಂಬುದೂ ಸೇರಿದಂತೆ ಹಲವು ಕುಂದುಕೊರತೆಗಳನ್ನು ಅಂಗವಿಕಲರು ಸಭೆಯಲ್ಲಿ ಪ್ರಸ್ತಾಪಿಸಿದರು. 

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸೋಮಶೇಖರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೆ.ಸುರೇಶ್, ಡಾ.ಕೆ.ಎಂ.ವಿಶ್ವೇಶ್ವರಯ್ಯ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ಗೀತಾಲಕ್ಷ್ಮಿ, ಜಿಲ್ಲಾ ಸರ್ಜನ್ ಡಾ. ಶ್ರೀನಿವಾಸ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಕೃಷ್ಣರಾಜು ಇದ್ದರು.

ಯುಡಿಐಡಿ ಕಾರ್ಡ್‌ ವಿತರಿಸಲು ಆಗ್ರಹ

ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ್ ಅವರು ಮಾತನಾಡಿ, ’ಕುಂದುಕೊರತೆ ಸಭೆಗೆ ಕೆಲ ಅಧಿಕಾರಿಗಳು ಮಾತ್ರ ಬರುತ್ತಾರೆ. ಇದರಿಂದ ಅಂಗವಿಕಲರ ಸವಲತ್ತು ಕುರಿತು ಸ್ಪಷ್ಟ ಮಾಹಿತಿ ಸಿಗುವುದಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳ ಬದಲಿಗೆ ಕೆಳ ಹಂತದ ಅಧಿಕಾರಿಗಳು ಬರುತ್ತಾರೆ. ಎಲ್ಲ ಇಲಾಖೆಗಳ ಅಧಿಕಾರಿಗಳು ಸಭೆಗೆ ಬರುವಂತೆ ಕ್ರಮವಹಿಸಬೇಕು‘ ಎಂದು ಒತ್ತಾಯಿಸಿದರು. 

’ಜಿಲ್ಲೆಯಲ್ಲಿ22 ಸಾವಿರ ಅಂಗವಿಕಲರಿದ್ದಾರೆ. ಆದರೆ, 14 ಸಾವಿರ ಅಂಗವಿಕಲರಿಗೆ ಮಾತ್ರ ಯುಡಿಐಡಿ ಕಾರ್ಡ್ ಸೌಲಭ್ಯ ಸಿಕ್ಕಿದೆ. ಉಳಿದವರಿಗೂ ಕಾರ್ಡ್ ಕೊಡುವ ನಿಟ್ಟಿನಲ್ಲಿ ವಾರದಲ್ಲಿ ಎರಡು ದಿನ ವಿಶೇಷ ಶಿಬಿರಗಳನ್ನು ನಡೆಸಬೇಕು. ಜಿಲ್ಲಾಡಳಿತ ಭವನದಲ್ಲಿ ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮಾಡಬೇಕು‘ ಎಂದು ಅವರು ಆಗ್ರಹಿಸಿದರು. 

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಈ ಸಂಬAಧ ಸೂಕ್ತ ಕ್ರಮವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

’ಆಸ್ಪತ್ರೆಗಳಲ್ಲಿ ಮಧ್ಯವರ್ತಿಗಳ ಸಮ್ಮುಖದಲ್ಲಿ ನಕಲಿ ಅಂಗವಿಕಲರು ಕಾರ್ಡ್‌ಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಇದರಿಂದ ನಿಜವಾದ ಅಂಗವಿಕಲರಿಗೆ ಸೌಲಭ್ಯ ಸಿಗದಂತಾಗಿದೆ‘ ಎಂದು ರಮೇಶ್ ಅವರು ದೂರಿದರು.  

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.