ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿನ ಕೂಲಿಗೆ ಗುಳೆ ಹೊರಟ ಕಾರ್ಮಿಕರು

ಕೇರಳದಲ್ಲಿ ಕಾಫಿ ಕೊಯ್ಲು: ಮಕ್ಕಳನ್ನು ಶಾಲೆಯಿಂದ ಬಿಡಿಸಿ ಕುಟುಂಬ ಸಮೇತ ಪ್ರಯಾಣ
Last Updated 4 ಜನವರಿ 2020, 11:58 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ನೆರೆಯ ರಾಜ್ಯ ಕೇರಳದಲ್ಲಿ ಕಾಫಿ ಬೆಳೆ ಕಟಾವಿನ ಹಂತಕ್ಕೆ ಬಂದಿದ್ದು, ಹೆಚ್ಚಿನ ಕೂಲಿ ಸಿಗುತ್ತದೆ ಎಂಬ ಕಾರಣಕ್ಕೆ ತಾಲ್ಲೂಕಿನ ಕುಟುಂಬಗಳು ತಂಡೋಪತಂಡವಾಗಿ ಕೇರಳದ ವಿವಿಧ ಪ್ರದೇಶಗಳಿಗೆ ವಲಸೆ ಹೋಗಲು ಆರಂಭಿಸಿವೆ.

ನವೆಂಬರ್‌ನಿಂದ ಫೆಬ್ರುವರಿ ತಿಂಗಳವರೆಗೂ ಕೇರಳದಲ್ಲಿ ಕಾಫಿ ಕೊಯ್ಲು ನಡೆಯುತ್ತದೆ. ಈ ಅವಧಿಯಲ್ಲಿ ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ.ಕೆಜಿಗೆ ಇಂತಿಷ್ಟು ಎಂದು ನಿಗದಿ ಮಾಡಿರುತ್ತಾರೆ. ದಿನಕ್ಕೆ ಗರಿಷ್ಠ ಎಂದರೆ ₹1,500ವರೆಗೂ ದುಡಿಯಬಹುದು.

ದಿನನಿತ್ಯ ನೂರಕ್ಕೂ ಹೆಚ್ಚು ಜನರು ಕೇರಳ ರಾಜ್ಯದ ಬಸ್‍ಗಾಗಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಕಾಯುತ್ತಿರುವ ದೃಶ್ಯ ಕಂಡು ಬರುತ್ತಿದೆ. ಕಲ್ಪೆಟ್ಟಾ, ವಯನಾಡು, ಬತ್ತೇರಿ, ಕೋಯಿ ಕ್ಕೋಡ್, ನೆಲೆಂಬೂರು, ಎಡಕ್ಕರ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ.

‘ಕೇರಳಕ್ಕೆ ಹೋದರೆ ಮೂರು ತಿಂಗಳು ಕೆಲಸ ಸಿಗುತ್ತದೆ. ಹಾಗಾಗಿ ಕಾಫಿ ಕೊಯ್ಯಲು ಹೋಗುತ್ತಿದ್ದೇವೆ’ ಎಂದು ಗುಂಡ್ಲುಪೇಟೆ ಬಸ್‌ ನಿಲ್ದಾಣದಲ್ಲಿದ್ದ ಕೂಲಿ ಕಾರ್ಮಿಕರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಲ್ಲೂಕಿನ ಕೂತನೂರು, ಭೀಮನಬೀಡು, ಬೇರಂಬಾಡಿ, ಕಗ್ಗಳ, ಹಂಗಳ, ಬೊಮ್ಮಲಾಪುರ, ಕೊಡಹಳ್ಳಿ, ಅಣ್ಣೂರು, ಮಂಗಲ ಸೇರಿದಂತೆ ವಿವಿಧ ಗ್ರಾಮಗಳ ಅನೇಕ ಆದಿವಾಸಿಗಳು ಕೇರಳಕ್ಕೆ ಕೂಲಿ ಕೆಲಸಕ್ಕೆ ತೆರಳುತ್ತಿದ್ದಾರೆ.

ಕೇರಳದ ಗಡಿ ಭಾಗವಾಗಿರುವ ಗುಂಡ್ಲುಪೇಟೆ ತಾಲ್ಲೂಕಿನಿಂದ ತರಕಾರಿ ಸೇರಿದಂತೆ ಹಲವು ವಸ್ತುಗಳು ನೆರೆಯ ರಾಜ್ಯಕ್ಕೆ ಹೋಗುತ್ತವೆ. ಅಲ್ಲಿಂದಲೂ ಅನೇಕ ಸರಕುಗಳು ತಾಲ್ಲೂಕಿಗೆ ಬರುತ್ತವೆ.

‘ತಾಲ್ಲೂಕು ಮಳೆಯಾಶ್ರಿತ ಪ್ರದೇಶ. ಹೆಚ್ಚಿನ ಮಂದಿ ಒಣ ಭೂಮಿಯನ್ನು ಹೊಂದಿದ್ದಾರೆ. ಮಳೆ ಬಂದರೆ ಮಾತ್ರ ಬೆಳೆ ಎಂಬತಾಗಿದೆ.ಹಲವು ಗ್ರಾಮ ಪಂಚಾಯಿತಿಗಳು ಉದ್ಯೋಗ ಖಾತರಿ ಯೋಜನೆಯಡಿ ಸರಿಯಾದ ರೀತಿಯ ಕೆಲಸ ನೀಡುತ್ತಿಲ್ಲ. ಜೊತೆಗೆ ಅವರು ಕೊಡುತ್ತಿರುವ ಕೂಲಿ ಹಣವೂ ಸಾಲುತ್ತಿಲ್ಲ.ಯಂತ್ರಗಳನ್ನು ಬಳಸಿ ಕೆಲಸ ಮಾಡುತ್ತಾರೆ. ಹೀಗಾಗಿ ಕೆಲಸ ಅರಸಿ ಕೇರಳಕ್ಕೆ ಗುಳೆ ಹೋಗುತ್ತಿದ್ದೇವೆ’ ಎಂದು ಬೇರಂಬಾಡಿಯ ಯುವಕ ಸಿದ್ದರಾಜು ತಿಳಿಸಿದರು.

₹90 ಸಾವಿರ ಸಿಗುತ್ತದೆ: ‘ಗ್ರಾಮದಲ್ಲಿ ಕೂಲಿ ಕೆಲಸ ಸಿಗದಿರುವುದರಿಂದ ಕಾಫಿ ಬೆಳೆ ಕಟಾವಿಗೆ ಕೇರಳಕ್ಕೆ ಹೋಗುತ್ತಿದ್ದೇವೆ. 2-3 ತಿಂಗಳು ಅಲ್ಲಿ ಕೆಲಸ ಮಾಡಿದರೆ ₹80 ಸಾವಿರದಿಂದ ₹90 ಸಾವಿರ ಸಂಪಾದನೆಯಾಗುತ್ತದೆ. ನಂತರದ ದಿನಗಳಲ್ಲಿ ಕೆಲಸವಿಲ್ಲದ ಸಂದರ್ಭ ಆ ಹಣದಿಂದಲೇ ಜೀವನ ನಡೆಯುತ್ತದೆ’ ಎಂದು ಕೇರಳಕ್ಕೆ ತೆರಳಲು ಸಿದ್ಧರಾಗಿದ್ದ ಕಾರ್ಮಿಕ ಬೆಳ್ಳಶೆಟ್ಟಿ ಹೇಳಿದರು.

ಗುಳೆ ತಡೆಗೆ ಕ್ರಮ: ಕಾರ್ಮಿಕರು ವಲಸೆ ಹೋಗುವುದನ್ನು ತಡೆಯಲು ಕ್ರಮ ವಹಿಸಲಾಗುವುದು.ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಉದ್ಯೋಗ ಖಾತರಿ ಯೋಜನೆಯನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನ ಮಾಡಲು ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿಗೆ ಸೂಚನೆ ನೀಡಲಾಗುವುದು’ ಎಂದು ತಹಶೀಲ್ದಾರ್‌ ನಂಜುಂಡಯ್ಯ ತಿಳಿಸಿದರು.

ಮಕ್ಕಳನ್ನು ನೋಡಿಕೊಳ್ಳುವವರಿಲ್ಲ: ಅಸಹಾಯಕತೆ

ಕುಟುಂಬ ಸಮೇತ ವಲಸೆ ಹೋಗುವವರು, ಶಾಲೆಗೆ ಹೋಗುತ್ತಿರುವ ಮಕ್ಕಳನ್ನು ಕೂಡ ಶಾಲೆ ಬಿಡಿಸಿ ಕರೆದುಕೊಂಡು ಹೋಗುತ್ತಿದ್ದಾರೆ. ಇದರಿಂದ ಅವರ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ. ಹಣ ಅನಿವಾರ್ಯವಾಗಿ ಬೇಕಾಗಿರುವುದರಿಂದ ಮಕ್ಕಳನ್ನು ಶಾಲೆ ಬಿಡಿಸಲೇ ಬೇಕಾಗಿದೆ ಎಂದು ಕಾರ್ಮಿಕರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

‘ಮಕ್ಕಳ ಶಿಕ್ಷಣದ ದೃಷ್ಟಿಯಿಂದ ಕೆಲವರು ಬರುವುದಿಲ್ಲ. ಆದರೆ, ಇಲ್ಲಿ ಸಿಗುವ ಕೂಲಿ ಜೀವನ ನಿರ್ವಹಣೆಗೆ, ಸಾಲಕ್ಕೆ ಕಟ್ಟಲು ಸಾಲುವುದಿಲ್ಲ. ಹಾಗಾಗಿ, ಒಂದೆರಡು ತಿಂಗಳು ಮಕ್ಕಳನ್ನು ಶಾಲೆಗೆ ಕಳುಹಿಸದೆ ನಮ್ಮೊಂದಿಗೆ ಕರೆದುಕೊಂಡು ಹೋಗುತ್ತೇವೆ. ಮಕ್ಕಳನ್ನು ನೋಡಿ ಕೊಳ್ಳುವವರಿದ್ದರೆ ಇಲ್ಲೇ ಬಿಡಬಹುದು. ಆದರೆ ಎಲ್ಲರೂ ಕೇರಳಕ್ಕೆ ಹೋಗುವವರೇ ಆಗಿರುವುದರಿಂದ ಮಕ್ಕಳನ್ನು ನೋಡಿಕೊಳ್ಳುವವರು ಯಾರೂ ಇಲ್ಲ’ ಎಂದು ಹಂಗಳ ಗ್ರಾಮದ ಗೋಪಾಲ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT