ಸೋಮವಾರ, ಆಗಸ್ಟ್ 15, 2022
27 °C
ಶಾಸಕ ನಿರಂಜನಕುಮಾರ್‌ ಪತ್ರಕ್ಕೆ ಪರಿಸರ ವಾದಿಗಳ ಆಕ್ಷೇಪ

ನಂಜನಗೂಡು–ಗುಂಡ್ಲುಪೇಟೆ ರಸ್ತೆ ವಿಸ್ತರಣೆಗೆ ಪ್ರಧಾನಿಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ಪಟ್ಟಣದ ಮೂಲಕ ಹಾದು ಹೋಗಿ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 766ರನ್ನು ನಂಜನಗೂಡಿನಿಂದ ಕೇರಳದ ಗಡಿವರೆಗೆ ಚತುಷ್ಫಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಿ ಮಧ್ಯದಲ್ಲಿ ವಿಭಜಕ ಅಳವಡಿಸಬೇಕು ಎಂದು ಮನವಿ ಮಾಡಿ ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಕೇರಳದ ಗಡಿವರೆಗೂ ರಸ್ತೆ ಅಭಿವೃದ್ಧಿಪಡಿಸಿ ವಿಭಜಕ ಅಳವಡಿಸಬೇಕು ಎಂದು ಬರೆದಿರುವುದಕ್ಕೆ ಪರಿಸರ ಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಕೇರಳದ ಗಡಿವರೆಗೆ ಇರುವ ಹೆದ್ದಾರಿಯ ಸ್ವಲ್ಪ ಭಾಗ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದುಹೋಗುತ್ತದೆ. ಅಲ್ಲಿ ವಿಭಜಕ ಅಳವಡಿಸಿದರೆ ವನ್ಯಪ್ರಾಣಿಗಳಿಗೆ ತೊಂದರೆಯಾಗಲಿದೆ’ ಎಂದು ಅವರು ಹೇಳಿದ್ದಾರೆ. 

ಆಕ್ಷೇಪದ ಬಗ್ಗೆ ‘ಪ್ರಜಾವಾಣಿ’ಗೆ ಸ್ಪಷ್ಟನೆ ನೀಡಿರುವ ನಿರಂಜನಕುಮಾರ್‌, ‘ನಂಜನಗೂಡುವರೆಗೆ ವಿಭಜಕ ಇದೆ. ಅದನ್ನು ಅರಣ್ಯ ಪ್ರದೇಶದ ಗೇಟ್‌ವರೆಗೆ ವಿಸ್ತರಿಸಿ ಎಂದು ಮನವಿ ಮಾಡಿದ್ದೇನೆಯೇ ವಿನಾ, ಅರಣ್ಯ ಪ್ರದೇಶದಲ್ಲಿ ಮಾಡಿ ಎಂದು ಕೇಳಿಲ್ಲ. ಹಿಂದೆ ನಾನೇ ಅದನ್ನು ವಿರೋಧ ಮಾಡಿ, ಈಗ ಹೇಗೆ ಹೇಳಿಕೆ ಬದಲಾವಣೆ ಮಾಡಲಿ? ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚು ಅಪಘಾತ ಆಗುತ್ತಿರುವುದರಿಂದ ರಸ್ತೆಯನ್ನು ಇನ್ನಷ್ಟು ಅಗಲ ಮಾಡಿ ಬಂಡೀಪುರದ ಅರಣ್ಯ ಗೇಟ್‌ವರೆಗೆ ವಿಸ್ತರಿಸಿ ಎಂದು ಮನವಿ ಮಾಡಿದ್ದೇನೆ’ ಎಂದರು. 

ಪತ್ರದಲ್ಲಿ ಏನಿದೆ?: ಇದೇ 20ರಂದು ಪ್ರಧಾನಿ ನರೇಂದ್ರ ಮೋದಿಗೆ ಶಾಸಕರು ಪತ್ರ ಬರೆದಿದ್ದಾರೆ. 

‘ರಾಷ್ಟ್ರೀಯ ಹೆದ್ದಾರಿ 766ರಲ್ಲಿ ನಂಜನಗೂಡುವರೆಗೆ ಚಚುಷ್ಪತ ರಸ್ತೆ ಇದ್ದು, ಮಧ್ಯದಲ್ಲಿ ವಿಭಜನಕವಿದೆ. ನಂಜನಗೂಡಿನಿಂದ ಗುಂಡ್ಲುಪೇಟೆಯ ಮೂಲಕ ಸಾಗಿ ಕೇರಳದ ಗಡಿವರೆಗೆ ದ್ವಿಪಥ ರಸ್ತೆ ಇದ್ದು, ಮಧ್ಯದಲ್ಲಿ ವಿಭಜಕ ಇಲ್ಲ. ಈ ಭಾಗದಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿ ಪ್ರಾಣ ಹಾನಿಯಾಗುತ್ತಿವೆ. ಇದನ್ನು ತಡೆಯುವುದಕ್ಕಾಗಿ ರಸ್ತೆಯನ್ನು ವಿಸ್ತರಿಸಿ ಮಧ್ಯದಲ್ಲಿ ವಿಭಜಕ ಅಳವಡಿಸಬೇಕು. ಇದರಿಂದ ಅಪಘಾತಗಳನ್ನು ತಡೆಯಬಹುದು. ಇದಕ್ಕಾಗಿ ಪ್ರತ್ಯೇಕವಾಗಿ ಭೂಸ್ವಾಧೀನ ಮಾಡುವ ಅಗತ್ಯವಿಲ್ಲ. ಈಗಾಗಲೇ ಮಾಡಲಾಗಿದೆ.  ವಾಹನ ದಟ್ಟನೆಯಿಂದಾಗಿ ಅಪಘಾತ ಹೆಚ್ಚಾಗಿದೆ. ರಸ್ತೆ ಅಭಿವೃದ್ಧಿ ಮಾಡಿ ರಸ್ತೆ ವಿಭಜಕ ಅಳವಡಿಸಬೇಕು. ಈ ಸಂಬಂಧ ಸಾರ್ವಜನಿಕರು ಒತ್ತಡ ಹೇರುತ್ತಿದ್ದಾರೆ’ ಎಂದು ನಿರಂಜನಕುಮಾರ್‌ ಅವರು ಪತ್ರದಲ್ಲಿ ಬರೆದಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು