ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ವರವಾದ ತೂಗು ಸೋಲಾರ್‌ ಬೇಲಿ

ಕಾವೇರಿ ವನ್ಯಧಾಮ: ₹12 ಲಕ್ಷ ವೆಚ್ಚದಲ್ಲಿ 12 ಕಿ.ಮೀ ಬೇಲಿ ನಿರ್ಮಾಣ, ಕಡಿಮೆಯಾದ ಪ್ರಾಣಿಗಳ ಉಪಟಳ
Last Updated 20 ಜನವರಿ 2021, 16:38 IST
ಅಕ್ಷರ ಗಾತ್ರ

ಹನೂರು: ತಾಲ್ಲೂಕಿನ ಕಾವೇರಿ ವನ್ಯಧಾಮದ ಕೊತ್ತನೂರು ವಲಯದ ಕಾಡಂಚಿನ ಪ್ರದೇಶದಲ್ಲಿ ಕಾಡಾನೆ ಹಾಗೂ ಇತರೆ ವನ್ಯಪ್ರಾಣಿಗಳ ಹಾವಳಿಯಿಂದ ಕೃಷಿ ಮಾಡದೇಪಾಳು ಬಿಟ್ಟಿದ್ದ ಜಮೀನಿನಲ್ಲಿ ಈಗ ಸಮೃದ್ಧ ಫಸಲು ಕಾಣತೊಡಗಿದೆ.

ಅರಣ್ಯ ಇಲಾಖೆ ನಿರ್ಮಿಸಿರುವ ತೂಗು ಸೋಲಾರ್ ಬೇಲಿಯಿಂದಾಗಿ (ತಂತಿಯನ್ನು ಕೆಳಗೆ ಇಳಿಬಿಟ್ಟಿರುವ ಬೇಲಿ) ರೈತರಿಗೆ ಅನುಕೂಲವಾಗಿದ್ದು, ನೂರಾರು ಎಕರೆ ಪಾಳು ಭೂಮಿ ಈಗ ಕೃಷಿ ಭೂಮಿಯಾಗಿ ಪರಿವರ್ತನೆಗೊಂಡಿದೆ.

ವನ್ಯಧಾಮಕ್ಕೆ ಹೊಂದಿಕೊಂಡಂತೆ ಇರುವ ಮರಿಯಪುರ, ಪ್ರಕಾಶ್ ಪಾಳ್ಯ, ಸಿಂಗನಲ್ಲೂರು ಗ್ರಾಮದ ವ್ಯಾಪ್ತಿಯ ರೈತರು ಏನೇ ಬೆಳೆದರೂ ವನ್ಯಪ್ರಾಣಿಗಳ ಪಾಲಾಗುತ್ತಿತ್ತು.ರಾತ್ರಿ ವೇಳೆ ಕಾಯಲು ಹೋಗುತ್ತಿದ್ದ ರೈತರು, ಜಿಂಕೆ, ಹಂದಿ ಮುಂತಾದ ಸಣ್ಣ ಪ್ರಾಣಿಗಳನ್ನು ಪಟಾಕಿ ಸಿಡಿಸಿ ಹೇಗೂ ಓಡಿಸುತ್ತಿದ್ದರು. ಆದರೆ, ಆನೆಯಂತಹ ಪ್ರಾಣಿಗಳು ಬಂದರೆ ಫಸಲು ನಾಶವಾಗುವುದರ ಜೊತೆಗೆ ಜೀವಭಯವು ಕಾಡುತ್ತಿತ್ತು. ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೆ ಅವರು ಬಂದು ಓಡಿಸುತ್ತಿದ್ದರು. ಆದರೆ, ಮರುದಿನ ಯಥಾಸ್ಥಿತಿ ಮುಂದುವರೆಯುತ್ತಿತ್ತು.

ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಅರಣ್ಯ ಇಲಾಖೆ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ದೃಷ್ಟಿಯಿಂದ ಕೊತ್ತನೂರು ವನ್ಯಜೀವಿ ವಲಯದ ವಗಚಯನ ಕೆರೆಯಿಂದ ಕೊತ್ಗಲ್ ಗುಡ್ಡದವರೆಗೆ ₹12 ಲಕ್ಷ ವೆಚ್ಚದಲ್ಲಿ 12 ಕಿ.ಮೀ ತೂಗು ಸೋಲಾರ್ ಬೇಲಿ ನಿರ್ಮಾಣ ಮಾಡಿದೆ. ಈಗ ಕಾಡು ಪ್ರಾಣಿಗಳ ಉಪಟಳ ಕಡಿಮೆಯಾಗಿದ್ದು, ರೈತರ ಚಿಂತೆ ದೂರವಾಗಿದೆ.

‘ಪ್ರತಿ ವರ್ಷ ಬೆಳೆ ಕಾಯುವುದರ ಜೊತೆಗೆ ಜಮೀನಿನಲ್ಲಿ ನಾವು ಪ್ರಾಣಭಯದಿಂದ ಇರಬೇಕಾದ ಪರಿಸ್ಥಿತಿ ಇತ್ತು. ವನ್ಯಪ್ರಾಣಿಗಳ ಹಾವಳಿ ತಡೆಗೆ ಶಾಶ್ವತ ಪರಿಹಾರ ಬೇಕು ಎಂದು ನಿರಂತರವಾಗಿ ಒತ್ತಡ ಹೇರಿದ ಪರಿಣಾಮ ಅರಣ್ಯಾಧಿಕಾರಿಗಳು ತೂಗು ಸೋಲಾರ್ ನಿರ್ಮಿಸುವ ಮೂಲಕ ನಮ್ಮ ಆತಂಕ ನಿವಾರಣೆ ಮಾಡಿದ್ದಾರೆ’ ಎಂದು ಸಿಂಗನಲ್ಲೂರು ಗ್ರಾಮದ ಬೆಟ್ಟೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಡಿಮೆ ವೆಚ್ಚ: ಆನೆ ಕಂದಕ, ಸೋಲಾರ್ ಬೇಲಿ, ರೈಲ್ವೆ ಕಂಬಿ ಬೇಲಿಗೆ ಹೋಲಿಸಿದರೆ ತೂಗು ಸೋಲಾರ್ ಬೇಲಿ ನಿರ್ಮಾಣ ಸುಲಭ ಹಾಗೂ ವೆಚ್ಚಯೂ ಕಡಿಮೆ ಸಾಕು ಎಂದು ಹೇಳುತ್ತಾರೆ ಅರಣ್ಯ ಅಧಿಕಾರಿಗಳು.

‘ಆನೆ ಕಂದಕ ಸ್ವಲ್ಪ ಸಮಯದ ನಂತರ ಮುಚ್ಚಿ ಹೋಗುತ್ತದೆ. ಸೋಲಾರ್ ಬೇಲಿಯೂ ಕಿತ್ತು ಬರುತ್ತದೆ. ತೂಗು ಸೋಲಾರ್ ಬೇಲಿಯಲ್ಲಿ ತಂತಿಗಳನ್ನು ಮೇಲಿನಿಂದ ಕೆಳಕ್ಕೆ ಇಳಿದು ಬಿಡಲಾಗುತ್ತದೆ. ಇದರ ನಿರ್ವಹಣೆಯೂ ಸುಲಭ. ವೆಚ್ಚವೂ ಕಡಿಮೆ. ಈ ಬೇಲಿಯನ್ನು ಇನ್ನಷ್ಟು ವಿಸ್ತರಿಸಬೇಕು ಎಂದು ರೈತರಿಂದ ಬೇಡಿಕೆ ಬಂದಿದೆ. ಈ ಬಗ್ಗೆ ಸರ್ಕಾರಕ್ಕೂ ಪತ್ರ ಬರೆಯಲಾಗಿದೆ’ ಎಂದು ಹೇಳುತ್ತಾರೆ ವನ್ಯಧಾಮದ ಅಧಿಕಾರಿಗಳು.

ಸ್ಥಳೀಯ ರೈತರಿಗೆ ನಿರ್ವಹಣೆ ಹೊಣೆ

‘ಇಲ್ಲಿನ ರೈತರು ಸಾಲ ಮಾಡಿ ಜಮೀನಿನಲ್ಲಿ ಅಳವಡಿಸಿದ್ದ ಪೈಪ್ ಲೈನ್ ಹಾಗೂ ಸಾಮಗ್ರಿಗಳನ್ನು ಆನೆಗಳು ಧ್ವಂಸಗೊಳಿಸಿದ್ದವು. ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಹಾಗೂ ರೈತರ ನಡುವೆ ನಿತ್ಯ ಸಂಘರ್ಷ ನಡೆಯುತ್ತಿತ್ತು‌. ಈಗ ಸಮಸ್ಯೆ ನಿವಾರಣೆಯಾಗಿದೆ. ಬೇಲಿಯ ನಿರ್ವಹಣೆಯ ಜವಾಬ್ದಾರಿಯನ್ನೂ ಸ್ಥಳೀಯ ರೈತರಿಗೆ ವಹಿಸಲಾಗಿದೆ. ಇದಕ್ಕಾಗಿ 12 ಜನರ ತಂಡ ರಚನೆ ಮಾಡಲಾಗಿದೆ. ಅವರು ವಾರಕ್ಕೊಮ್ಮೆ ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ ಇಲಾಖೆಗೆ ಸಹಕರಿಸುತ್ತಿದ್ದಾರೆ’ ಎಂದು ಕಾವೇರಿ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ಡಾ.ಎಸ್.ರಮೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಶೂನ್ಯ ಪರಿಹಾರ: ತೂಗು ಸೋಲಾರ್ ಬೇಲಿ ನಿರ್ಮಾಣಕ್ಕೂ ಮೊದಲು ಮತ್ತೀಪುರ, ಇಕ್ಕಡಹಳ್ಳಿ, ಮರಿಯಪುರ, ಪ್ರಕಾಶ್ ಪಾಳ್ಯ, ಬೂದುಬಾಳು ಹಾಗೂ ಗುಂಡಾಪುರ ಗ್ರಾಮಗಳಿಂದ ಪ್ರತಿ ವರ್ಷ ಬೆಳೆ ಪರಿಹಾರಕ್ಕೆ ಅರ್ಜಿಗಳು ಬರುತ್ತಿದ್ದವು. ಕಳೆದ ವರ್ಷವೂ ₹ 4 ಲಕ್ಷದವರೆಗೂ ಬೆಳೆ ಪರಿಹಾರ ನೀಡಲಾಗಿದೆ. ಆದರೆ ಬೇಲಿ ನಿರ್ಮಾಣವಾದ ನಂತರ ಅರ್ಜಿಗಳು ಬಂದಿಲ್ಲ’ ಎಂದು ಕೊತ್ತನೂರು ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಒ) ಪ್ರವೀಣ್ ಕುಮಾರ್ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT