ಹನೂರು: ಒಟ್ಟು ಭೂಭಾಗದಲ್ಲಿ ಶೇ 70ರಷ್ಟು ಅರಣ್ಯ ಪ್ರದೇಶವನ್ನೇ ಹೊಂದಿದೆ ಹನೂರು ತಾಲ್ಲೂಕು. ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿದ್ದರೂ ತಾಲ್ಲೂಕಿನ ವನ್ಯಧಾಮಗಳಲ್ಲಿ ಅರಣ್ಯ ಸಿಬ್ಬಂದಿ ಹಾಗೂ ಅದಿಕಾರಿಗಳ ಕೊರತೆ ಹೆಚ್ಚಾಗಿದೆ. ಪರಿಣಾಮ ಅರಣ್ಯ ಸಂಪತ್ತು ಹಾಗೂ ವನ್ಯಜೀವಿಗಳ ಕಳ್ಳಬೇಟೆ, ಮಾನವ ಹಾಗೂ ಪ್ರಾಣಿ ಸಂಘರ್ಷ ತಡೆಯಲು ಲಭ್ಯವಿರುವ ಸಿಬ್ಬಂದಿ ಪ್ರಯಾಸ ಪಡುವಂತಾಗಿದೆ. ನಿತ್ಯವೂ ಹೆಚ್ಚುವರಿ ಜವಾಬ್ದಾರಿಗಳನ್ನು ನಿಭಾಯಿಸಿ ಅರಣ್ಯ ಇಲಾಖೆ ಸಿಬ್ಬಂದಿ ಹೈರಾಣಾಗುತ್ತಿದ್ದಾರೆ.
ಹನೂರು ತಾಲ್ಲೂಕು ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯಧಾಮಗಳನ್ನು ಒಡಲೊಳಗೆ ಇರಿಸಿಕೊಂಡಿದ್ದು ಅಪಾರ ವನ್ಯ ಸಂಪತ್ತು ಹಾಗೂ ಅಪರೂಪದ ವನ್ಯಜೀವಿಗಳಿಗೆ ಆಶ್ರಯ ತಾಣವಾಗಿದೆ. ಮುಖ್ಯವಾಗಿ ತಾಲ್ಲೂಕಿನ ವನ್ಯಧಾಮಗಳು ನೆರೆಯ ತಮಿಳುನಾಡು ರಾಜ್ಯದೊಂದಿಗೆ ಗಡಿ ಹಂಚಿಕೊಂಡಿದ್ದು ಸಾರಿಗೆ ಸಂಪರ್ಕವೂ ಇರುವುದರಿಂದ ರಾಜ್ಯದ ವನ್ಯಸಂಪತ್ತು ಹಾಗೂ ವನ್ಯಜೀವಿಗಳ ರಕ್ಷಣೆ ಬಹುದೊಡ್ಡ ಹೊಣೆಗಾರಿಕೆಯಾಗಿದ್ದು ಇದನ್ನು ನಿಭಾಯಿಸಲು ಇಲಾಖೆಗೆ ಅಗತ್ಯ ಪ್ರಮಾಣದ ಸಿಬ್ಬಂದಿ ಇಲ್ಲದಂತಾಗಿದೆ. ಇದರಿಂದ ಆತಂಕವೂ ಶುರುವಾಗಿದೆ.
ಮಲೆಮಹದೇಶ್ವರ ವನ್ಯಧಾಮವು ಕೊಳ್ಳೇಗಾಲ, ಹನೂರು ಹಾಗೂ ಮಹದೇಶ್ವರ ಬೆಟ್ಟ ಸೇರಿದಂತೆ ಮೂರು ಉಪ ವಿಭಾಗಗಳನ್ನು ಹೊಂದಿದೆ. ಕೊಳ್ಳೇಗಾಲ ಬಿಟ್ಟರೆ ಉಳಿದ ಎರಡು ಕಡೆಗಳಲ್ಲಿ ಎಸಿಎಫ್ ದರ್ಜೆಯ ಹುದ್ದೆಗಳು ಖಾಲಿ ಇವೆ. ಏಳು ವಲಯಗಳ ಪೈಕಿ ಪಾಲಾರ್, ಮಹದೇಶ್ವರ ಬೆಟ್ಟ, ಹೂಗ್ಯಂ ಹಾಗೂ ಪಿ.ಜಿ ಪಾಳ್ಯ ವಲಯಗಳಲ್ಲಿ ಆರ್‌ಎಫ್‌ಓ ಹುದ್ದೆಗಳು ಖಾಲಿ ಇವೆ.
ಕಾವೇರಿ ವನ್ಯಧಾಮದ ಹನೂರು ಉಪ ವಿಭಾಗದಲ್ಲಿ ಎಸಿಎಫ್ ಹಾಗೂ ಗೋಪಿನಾಥಂ ವಲಯದಲ್ಲಿ ಆರ್‌ಎಫ್‌ಓ ಹುದ್ದೆಗಳು ಖಾಲಿ ಇದೆ. ಮುಂದೆ ಇನ್ನೂ ಕೆಲವು ವಲಯಗಳಲ್ಲಿ ಪ್ರಮುಖ ಹುದ್ದೆಗಳು ತೆರವಾಗುವ ಸಂಭವಗಳು ಹೆಚ್ಚಾಗಿವೆ. ಇದರ ಜತೆ ಡಿಆರ್‌ಎಫ್‌ಓ ಹಾಗೂ ಗಾರ್ಡ್‌ಗಳ ಕೊರತೆಯೂ ಅತಿಯಾಗಿ ಕಾಡುತ್ತಿದೆ.
ಗಡಿಭಾಗದಲ್ಲಿ ಆತಂಕ: ಕಳೆದ ಮೂರು ದಶಕಗಳಿಂದಲೂ ಗಡಿಭಾಗದಲ್ಲಿ ವನ್ಯಜೀವಿಗಳ ಕಳ್ಳಬೇಟೆ ಪ್ರಕರಣಗಳು ನಡೆಯುತ್ತಲೇ ಇವೆ. ಅರಣ್ಯ ಇಲಾಖೆ ಸಿಬ್ಬಂದಿ ಕಳ್ಳಬೇಟೆಗಾರ ಉಪಟಳ ತಗ್ಗಿಸಲು, ವನ್ಯಸಂಪತ್ತನ್ನು ಉಳಿಸಲು ಎಷ್ಟೆ ಶ್ರಮವಹಿಸುತ್ತಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳ ಕೊರತೆಯಿಂದ ಪರಿಣಾಮಕಾರಿಯಾಗಿ ಮಟ್ಟಹಾಕಲು ಸಾಧ್ಯವಾಗಿಲ್ಲ.
ಅರಣ್ಯ ಸಂಪತ್ತು ಹಾಗೂ ವನ್ಯಜೀವಿಗಳ ರಕ್ಷಣೆಗೆ ಇಲಾಖೆಯಲ್ಲಿ ಲಭ್ಯವಿರುವ ಸಿಬ್ಬಂದಿಯನ್ನು ಒಂದೆಡೆ ನಿಯೋಜಿಸಿದರೆ ಮತ್ತೊಂದೆಡೆ ಸಿಬ್ಬಂದಿ ಕೊರತೆ ಎದುರಾಗುತ್ತಿದೆ. ಇದರಿಂದ ಕಳ್ಳಬೇಟೆಗಾರರಿಗೆ ಹಾಗೂ ದಂಧೆಕೋರರು ಸುಲಭವಾಗಿ ಅಕ್ರಮ ಎಸಗಲು ದಾರಿ ಮಾಡಿಕೊಟ್ಟಂತಾಗಿದೆ.
ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳ ಕೊರತೆಯಿಂದ ಹಲವರ ಪ್ರಾಣಕ್ಕೆ ಕುತ್ತುಂಟಾದ ನಿದರ್ಶನಗಳು ನಡೆದಿವೆ. ಕಳ್ಳಬೇಟೆ ಹಾಗೂ ಅರಣ್ಯ ಲೂಟಿ ತಡೆಯಲು ಲಭ್ಯವಿರುವ ಸಿಬ್ಬಂದಿ ಹೋದಾಗ ಬೇಟೆಗಾರರು ಗುಂಡು ಹಾರಿಸಿದ ಘಟನೆಗಳೂ ನಡೆದಿವೆ. 2019-20ರಲ್ಲಿ ಪಾಲಾರ್ ನದಿ ದಾಟಿ ಬಂದು ಬೇಟೆಯಾಡುತ್ತಿದ್ದ ತಮಿಳುನಾಡಿನ ಬೇಟೆಗಾರರನ್ನು ಸೆರೆಹಿಡಿಯಲು ಹೋದಾಗ ಅರಣ್ಯ ಅಧಿಕಾರಿಗಳೂ ಹಾಗೂ ಅಕ್ರಮ ಬೇಟೆಕೋರರ ಮಧ್ಯೆ ಗುಂಡಿನ ಚಕಮಕಿ ನಡೆದಿತ್ತು. ಘಟನೆಯಲ್ಲಿ ಆರ್‌ಎಫ್‌ಒ ಒಬ್ಬರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ಹೆಚ್ಚಿನ ಸಿಬ್ಬಂದಿ, ಅಧಿಕಾರಿಗಳು ಇದ್ದರೆ ಅಕ್ರಮ ಬೇಟೆಗಾರರನ್ನು ಸುಲಭವಾಗಿ ಹಿಮ್ಮೆಟ್ಟಿಸಬಹುದು ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ಹೇಳಿದರು.
ಮುಖ್ಯವಾಗಿ ಪ್ರಸ್ತುತ ಆರ್‌ಎಫ್‌ಓ ಹುದ್ದೆಗಳು ಖಾಲಿ ಇರುವ ವಲಯಗಳೆಲ್ಲವೂ ತಮಿಳುನಾಡಿನ ಗಡಿಗೆ ಹೊಂದಿಕೊಂಡಿವೆ. ಅಧಿಕಾರಿಗಳ ಹಾಗೂ ಸಿಬ್ಬಂದಿ ಕೊರತೆಯಿಂದ ಈ ಭಾಗದಲ್ಲಿ ಮತ್ತೆ ವನ್ಯಜೀವಿಗಳ ಬೇಟೆ ಪ್ರಕರಣಗಳು ಹೆಚ್ಚಾಗುವ ಆತಂಕ ಇದೆ ಎನ್ನುತ್ತಾರೆ ಹಿರಿಯ ಅರಣ್ಯಾಧಿಕಾರಿಗಳು.
ಗೋಪಿನಾಥಂ ಹಾಗೂ ಪಾಲಾರ್ ವಲಯಗಳಲ್ಲಿ ರಾತ್ರಿ ವೇಳೆ ನದಿ ದಾಟಿ ಬರುವ ಬೇಟೆಗಾರರು ಯಾವುದೇ ಭೀತಿ ಇಲ್ಲದೆ ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಿದ್ದಾರೆ. ಜತೆಗೆ ತಡೆಯಲು ಬರುವ ಅರಣ್ಯಾಧಿಕಾರಿಗಳ ಮೇಲೂ ದಾಳಿ ಮಾಡುತ್ತಿರುವ ಘಟನೆಗಳು ಆಗಾಗ ನಡೆಯುತ್ತಿವೆ. ಹೂಗ್ಯಂ ಹಾಗೂ ಪಿ.ಜಿ ಪಾಳ್ಯ ವಲಯಗಳು ಸಮಸ್ಯೆಯಿಂದ ಹೊರತಾಗಿಲ್ಲ.
ಈ ಬಗ್ಗೆ ಸಾಕಷ್ಟು ಬಾರಿ ತಮಿಳುನಾಡಿನ ಅರಣ್ಯಾಧಿಕಾರಿಗಳು ಹಾಗೂ ರಾಜ್ಯದ ಅರಣ್ಯಾಧಿಕಾರಿಗಳು ಗಡಿ ಭಾಗದಲ್ಲಿ ಸಭೆಗಳನ್ನು ನಡೆಸಿ ಅರಣ್ಯದಲ್ಲಿ ನಡೆಯುವ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಪ್ರಯತ್ನಿಸಿದರೂ ಸಿಬ್ಬಂದಿ ಹಾಗೂ ಅಧಿಕಾರಿಗಳ ಕೊರತೆಯಿಂದ ಪರಿಣಾಮಕಾರಿಯಾಗಿ ನಿಯಂತ್ರಣ ಸಾಧ್ಯವಾಗಿಲ್ಲ.
ಮಾನವ ಮತ್ತು ವನ್ಯಜೀವಿ ಸಂಘರ್ಷ:
ಅರಣ್ಯದಂಚಿನ ಜಮೀನಿನಲ್ಲಿ ಈಗ ಬಿತ್ತನೆ ಕಾರ್ಯ ಆರಂಭವಾಗಿದೆ. ಮುಂದೆ ಫಸಲು ಸಮೃದ್ಧವಾಗಿ ಬಂದು ಇನ್ನೇನು ರೈತರ ಕೈ ಸೇರುವಷ್ಟರಲ್ಲಿ ಜಮೀನಿನ ಮೇಲೆ ಪ್ರಾಣಿಗಳು ದಾಳಿ ನಡೆಸಿ ಫಸಲನ್ನು ತಿಂದು ಹಾಳು ಮಾಡುತ್ತವೆ. ಪ್ರಾಣಿಗಳ ಹಾವಳಿ ತಡೆಗೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಕೈಕಟ್ಟಿ ಕೂರಬೇಕಾದ ಪರಿಸ್ಥಿತಿ ಇದೆ ಎನ್ನಲಾಗಿದೆ.
ಮಲೆಮಹದೇಶ್ವರ ವನ್ಯಧಾಮದಲ್ಲಿ ಸಿಬ್ಬಂದಿ ಕೊರತೆ ಇರುವ ಬಗ್ಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಶೀಘ್ರ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ.–ಡಾ.ಜಿ.ಸಂತೋಷ್ ಕುಮಾರ್ ಡಿಸಿಎಫ್ ಮಲೆಮಹದೇಶ್ವರ ವನ್ಯಧಾಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.