ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಿಷ್ಠ ಬೆಂಬಲ ಬೆಲೆ ಕಾನೂನಿಗೆ ಆಗ್ರಹಿಸಿ ಹೆದ್ದಾರಿ ತಡೆದು ಪ್ರತಿಭಟನೆ

Last Updated 26 ನವೆಂಬರ್ 2021, 12:27 IST
ಅಕ್ಷರ ಗಾತ್ರ

ಚಾಮರಾಜನಗರ: ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಹಾಗೂ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕಡ್ಡಾಯಗೊಳಿಸುವ ಕಾನೂನು ಜಾರಿ ಮಾಡುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ನಗರದ ಸಂತೇಮರಹಳ್ಳಿ ರಸ್ತೆಯ ಜಾಲಹಳ್ಳಿಹುಂಡಿ ಬಳಿ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಸೇರಿದ ಪ್ರತಿಭಟನಕಾರರು, ರಸ್ತೆಯಲ್ಲೇ ಕುಳಿತು ವಾಹನಗಳ ಸಂಚಾರ ತಡೆದರಲ್ಲದೇ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಬ್ಬು ಬೆಳೆಗಾರರ ಸಂಘದ ಮೈಸೂರು–ಚಾಮರಾಜನಗರ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಅವರು ಮಾತನಾಡಿ, ‘ಕೇಂದ್ರ ಸರ್ಕಾರ ಕೂಡಲೇ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿ ಮಾಡಬೇಕು. ಎಂಎಸ್‌ಪಿಗಿಂತ ಕಡಿಮೆ ಬೆಲೆಗೆ ಬಕೃಷಿ ಉತ್ಪನ್ನಗಳನ್ನು ಖರೀದಿ ಮಾಡುವವರ ಮೇಲೆ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕಾನೂನು ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.

‘100 ಜನ ಶತಕೋಟ್ಯಧಿಪತಿಗಳಿಗೆ ಬೇಕಾದ ಕಾನೂನುಗಳನ್ನು ರೂಪಿಸುವ ಪ್ರಧಾನಿ ಮೋದಿ ಅವರು, ದೇಶದ ನೂರು ಕೋಟಿ ರೈತರಿಗೆ ಬೇಕಾದ ಕಾನೂನನ್ನು ಜಾರಿಗೆ ತರಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ದೂರಿದರು.

‘ಎಂಎಸ್‌ಪಿ ಜಾರಿಯಾದಲ್ಲಿ ಎಪಿಎಂಸಿ ಮಂಡಿ ಹಾಗೂ ಹೊರಗಡೆ ಖರೀದಿದಾರರಿಂದ ಬೆಲೆ ಕಡಿಮೆಯಾದರೆ, ರೈತರಿಗೆ ಆಗುವ ನಷ್ಟವನ್ನು ಸರ್ಕಾರ ತುಂಬಿ ಕೊಡುವ ಕಾನೂನು ಜಾರಿಯಾಗಬೇಕು’ ಎಂದು ಒತ್ತಾಯಿಸಿದರು.

‘ಒಂದು ವರ್ಷದಿಂದ ನಡೆದ ಹೋರಾಟದಲ್ಲಿ ಮೃತಪಟ್ಟ 700 ರೈತರ ಕುಟುಂಬಗಳಿಗೆ ತೆಲಂಗಾಣ ಸರ್ಕಾರವು ಸುಮಾರು ₹22 ಕೋಟಿ ಬಿಡುಗಡೆ ಮಾಡಿದೆ. ಅದೇ ರೀತಿ ಕೇಂದ್ರ ಸರ್ಕಾರವೂ ಪರಿಹಾರವನ್ನು ಬಿಡುಗಡೆ ಮಾಡಬೇಕು’ ಎಂದು ಭಾಗ್ಯರಾಜ್‌ ಒತ್ತಾಯಿಸಿದರು.

‘ಮಳೆಯಿಂದಾಗಿ ರಾಜ್ಯದಲ್ಲಿ ಏಳು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರಾಗಿ, ಜೋಳ, ಭತ್ತ, ಕಬ್ಬು, ತೋಟಗಾರಿಕೆ ಬೆಳೆಗಳು ಹಾಗೂ ಉಪ ಕಸುಬಿನ ಬೆಳೆಗಳು ನಷ್ಟವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳುವೈಜ್ಞಾನಿಕವಾಗಿ ನಷ್ಟ ಪರಿಹಾರ ಘೋಷಿಸಬೇಕು. ತಕ್ಷಣ ಕೇಂದ್ರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

ಹೋಬಳಿ ಮಟ್ಟದಲ್ಲಿ ಭತ್ತ ಖರೀದಿ ಕೇಂದ್ರವನ್ನು ಆರಂಭ ಮಾಡಿ ಎಲ್ಲ ತಳಿಯ ಭತ್ತವನ್ನು ಖರೀದಿ ಮಾಡಬೇಕು. ಕೇಂದ್ರ ಸರ್ಕಾರ ಎಂ.ಎಸ್. ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರುವಲ್ಲಿ ವಿಫಲವಾಗಿದೆ. ರಾಷ್ಟ್ರೀಯ ಕಂಪನಿಗಳು, ಬಂಡವಾಳಶಾಹಿಗಳ ಆಡಳಿತವನ್ನು ನಿಲ್ಲಿಸಿ ರೈತರ ಪರ ಆಡಳಿತವನ್ನು ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.

ಪಟೇಲ್ ಶಿವಮೂರ್ತಿ, ಮೂಡ್ಲುಪುರ ನಾಗರಾಜ್, ಕುರುಬೂರು ಪ್ರದೀಪ್, ಗೌಡಹಳ್ಳಿ ಷಡಕ್ಷರಿಸ್ವಾಮಿ, ಬಸವಲಿಂಗಪ್ಪ, ಸೋಮಣ್ಣ, ಶಿವಸ್ವಾಮಿ, ಅರುಣ್, ಮಲ್ಲೇಶ್, ಸಿದ್ದೇಶ್, ಮಂಜು, ಲೋಕೇಶ್, ಗುರುಮಲ್ಲಪ್ಪ, ಮಂಜುನಾಥ್, ವೃಷಬೇಂದ್ರ, ಸಿದ್ದರಾಜು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT