ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಳ್ಳೇಗಾಲ | ಹೆಚ್ಚಾದ ಮನೆಗಳವು ಪ್ರಕರಣ: ಜನರಿಗೆ ಮನೆಬಿಟ್ಟು ಹೊರಗೆ ಹೋಗಲು ಭಯ

Published 26 ಆಗಸ್ಟ್ 2024, 7:39 IST
Last Updated 26 ಆಗಸ್ಟ್ 2024, 7:39 IST
ಅಕ್ಷರ ಗಾತ್ರ

ಕೊಳ್ಳೇಗಾಲ: ನಗರದಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗಿದ್ದು ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಮನೆಯಲ್ಲಿ ಕಳವು, ಸರ ಕಳವು, ಹಾಗೂ ಬೈಕ್ ಕಳವು ಪ್ರಕರಣಗಳು ಎಗ್ಗಿಲ್ಲದೆ ನಡೆಯುತ್ತಿದ್ದು ನಗರಸಭಾ ವ್ಯಾಪ್ತಿಯ ಜನವಸತಿ ಪ್ರದೇಶಗಳಲ್ಲೇ ಹೆಚ್ಚು ಕಳವು ನಡೆಯುತ್ತಿದ್ದು, ಸಾರ್ವಜನಿಕರು ಭೀತಿಯಲ್ಲಿ ಬದುಕುವಂತಾಗಿದೆ.

ನಗರ ವ್ಯಾಪ್ತಿಯಲ್ಲಿ ಕಳವು ಪ್ರಕರಣಗಳು ಹೆಚ್ಚಾಗಿರುವುದರಿಂದ ನಾಗರಿಕರು ಖಾಸಗಿ ಸಮಾರಂಭಗಳಲ್ಲಿ ಭಾಗವಹಿಸಲು ಅಥವಾ ತುರ್ತು ಕಾರ್ಯನಿಮಿತ್ತ ದೂರದ ಊರುಗಳಿಗೆ ಪ್ರಯಾಣ  ಬೆಳೆಸಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅನಿವಾರ್ಯವಾಗಿ ಒಂದೆರಡು ದಿನ ಹೋಗಬೇಕಾಗಿ ಬಂದರೆ ಮನೆಯ ಓರ್ವ ಸದಸ್ಯನನ್ನು ಅಥವಾ ತೀರಾ ಆಪ್ತರನ್ನು ಮನೆಯಲ್ಲಿ ಉಳಿಸಿ ಹೋಗಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ನಗರಸಭಾ ವ್ಯಾಪ್ತಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಕಳವು ಪ್ರಕರಣಗಳು ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಕಡಿವಾಣ ಹಾಕಿಲ್ಲ. ಅಲ್ಲಲ್ಲಿ ನಿತ್ಯವೂ ಅಪರಾಧ ಕೃತ್ಯಗಳು ವರದಿಯಾಗುತ್ತಲೇ ಇದ್ದು ಭೀತಿ ಸೃಷ್ಟಿಸುತ್ತಿದೆ.  ಪೊಲೀಸ್ ಇಲಾಖೆ ಕಳ್ಳರನ್ನು ಬಂಧಿಸಿ ನೆಮ್ಮದಿಯ ವಾತಾವರಣ ನಿರ್ಮಾಣ ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹೊಸ ಬಡಾವಣೆಗಳೇ ಟಾರ್ಗೆಟ್: ಕಳ್ಳರು ನಗರಸಭಾ ವ್ಯಾಪ್ತಿಯ ಮನೆಗಳು ಹಾಗೂ ಜನವಸತಿ ವಿರಳವಾಗಿರುವ ನಗರದ ಹೊರವಲಯದ ಹೊಸ ಬಡಾವಣೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಮನೆಗಳು ಚದುರಿದಂತೆ ಇರುವುದು ಹಾಗೂ ಸಿಸಿಟಿವಿ ಕ್ಯಾಮೆರಾ, ಬೀದಿದೀಪಗಳ ಕೊರತೆಯ ಕಾರಣಕ್ಕೆ ಹೊಸ ಬಡಾವಣೆಗಳನ್ನು ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದಾರೆ.

ನಿರ್ಜನ ರಸ್ತೆಯಲ್ಲಿ ಒಬ್ಬಂಟಿಯಾಗಿ ಹೋಗುವ ಮಹಿಳೆಯರನ್ನು ಗುರಿಯಾಗಿಸಿ ದಾಳಿ ಮಾಡುತ್ತಿದ್ದಾರೆ. ಬೆಳಗಿನ ಜಾವ ಹಾಗೂ ಸಂಜೆಯ ಹೊತ್ತು ವಾಕಿಂಗ್ ಹೋಗುವ ಸಂದರ್ಭ, ದೇವಸ್ಥಾನಕ್ಕೆ ಹೋಗುವಾಗ ಹೆಚ್ಚು ಚಿನ್ನದ ಸರ ಕಳವು ನಡೆಯುತ್ತಿದೆ. ಒಬ್ಬಂಟಿಯಾಗಿ ಓಡಾಡುವ ಮಹಿಳೆಯರು ಎಚ್ಚರ ವಹಿಸಬೇಕು.

ಮನೆಯಿಂದ ಹೊರಗೆ ಏಕಾಂಗಿಯಾಗಿ ಹೋಗುವಾಗ ಚಿನ್ನದ ಸರಗಳನ್ನು ಧರಿಸುವುದು ಸುರಕ್ಷಿತವಲ್ಲ. ವಿಶೇಷವಾಗಿ ವಾಕಿಂಗ್ ಸಮಯದಲ್ಲಿ ಚಿನ್ನಾಭರಣ ದರಿಸುವುದು ಸೂಕ್ತವಲ್ಲ. ಬಸ್ ಹತ್ತುವಾಗ ಎಚ್ಚರದಿಂದ ಹತ್ತಬೇಕು. ಕಳ್ಳರು ಮಹಿಳೆಯರ ಕುತ್ತಿಗೆಗೆ ಕೈ ಹಾಕಿ ಸರ ಕಳವು ಮಾಡುತ್ತಿರುವುದು ಹೆಚ್ಚಾಗುತ್ತಿದ್ದು ಜಾಗರೂಕತೆಯಿಂದ ಇರಬೇಕು ಎಂದು ಹೇಳುತ್ತಾರೆ ಪೊಲೀಸರು ತಿಳಿಸಿದ್ದಾರೆ.

ಸಿಸಿ ಟಿವಿ ಕ್ಯಾಮೆರಾ ಕೊರತೆ:

ನಗರದಲ್ಲಿ ಸಿಸಿಟಿವಿ ಕ್ಯಾಮೆರಾಗಳ ಕೊರತೆಯೂ ಕಳ್ಳತನ ಹೆಚ್ಚಲು ಕಾರಣ ಎನ್ನಲಾಗುತ್ತಿದೆ. ಪ್ರತಿ ಬಡಾವಣೆಗಳ ಪ್ರವೇಶ ಹಾಗೂ ನಿರ್ಗಮನ ಸ್ಥಳಗಳಲ್ಲಿ, ಆಯಕಟ್ಟಿನ ಜಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಇಲ್ಲದಿರುವುದು ಕಳ್ಳರಿಗೆ ಕಳ್ಳತನ ಮಾಡಲು ಸುಲಭವಾದಂತಾಗಿದೆ. 

ಎಲ್ಲೆಲ್ಲಿ ಸಿಸಿಟಿವಿ ಕ್ಯಾಮೆರಾಗಲು ಇಲ್ಲವೋ ಅಂತಹ ಜಾಗಗಳನ್ನೇ ಕಳ್ಳತನಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸಾರ್ವಜನಿಕರು ದುಬಾರಿ ಹಣ ತೆತ್ತು ಮನೆಗಳಿಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವುದು ಕಷ್ಟಸಾಧ್ಯ. ಆದರೆ, ನಗರದ ಸುರಕ್ಷತೆಯ ಹೊಣೆ ಹೊತ್ತಿರುವ ನಗರಸಭೆ ಹಾಗೂ ಪೊಲೀಸ್ ಇಲಾಖೆಯಿಂದ ಅಲ್ಲಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದರೆ ಕಳ್ಳತನ ಕೃತ್ಯಗಳಿಗೆ ಕಡಿವಾಣ ಬೀಳಬಹುದು.

ತಡರಾತ್ರಿ ಹಾಗೂ ನಸುಕಿನ ಸಂದರ್ಭ ಪೊಲೀಸರು ಬೀಟ್‌ ಹೆಚ್ಚು ಮಾಡಬೇಕು. ನಿರಂತರವಾಗಿ ಬಡಾವಣೆಗಳಲ್ಲಿ ಗಸ್ತು ತಿರುಗಿದರೂ ಕಳ್ಳತನ ಪ್ರಕರಣಗಳು ಕಡಿಮೆಯಾಗುತ್ತವೆ. ಆದರೆ, ಇಂತಹ ಮುಂಜಾಗ್ರತಾ ಕ್ರಮಗಳು ನಗರ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ನಡೆಯುತ್ತಿಲ್ಲ ಆದ್ದರಿಂದ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ ಎನ್ನುತ್ತಾರೆ ಸಾರ್ವಜನಿಕರು.

ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್ ಅವರ ಮನೆಯಲ್ಲೇ ಶುಕ್ರವಾರ ರಾತ್ರಿ ಕಳ್ಳತನ ನಡೆದಿದೆ.

ಬೀಟ್ ವ್ಯವಸ್ಥೆ ಪರಿಣಾಮಕಾರಿಯಾಗಿ ನಡೆಯದಿರುವುದು ಕಳ್ಳತನ ನಡೆಯಲು ಪ್ರಮುಖ ಕಾರಣ. ಜನಪ್ರತಿನಿಧಿಗಳ ಮನೆಯನ್ನೂ ಕಳ್ಳರು ಟಾರ್ಗೆಟ್ ಮಾಡುತ್ತಿರುವುದನ್ನು ಕಂಡರೆ ಜನಸಾಮಾನ್ಯರ ಸ್ಥಿತಿ ಹೇಗಿದೆ ಎಂಬ ಪ್ರಶ್ನೆ ಮೂಡುತ್ತದೆ. ಪೊಲೀಸರು ಅಪರಾಧ ಕೃತ್ಯಗಳ ತಡೆಗೆ ಒತ್ತು ನೀಡಿ ಪ್ರತಿನಿತ್ಯ ಬೀಟ್ ಮಾಡಬೇಕು. ಈ ಸಂಬಂಧ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲಾಗುವುದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ತಿಳಿಸಿದರು.

‘ಮನೆಯಲ್ಲಿ ಇಲ್ಲದಿದ್ದರೆ ಮಾಹಿತಿ ನೀಡಿ’
ರಾತ್ರಿ ಸಮಯದಲ್ಲಿ ಬೀಟ್‌ ಹೆಚ್ಚಳಕ್ಕೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ನಾಗರಿಕರು ಎರಡು ಮೂರು ದಿನ ಮನೆ ಬಿಟ್ಟು ಹೊರಗೆ ಹೋಗಬೇಕಾದರೆ ಸಮೀಪದ ಠಾಣೆಗೆ ಬಂದು ಮಾಹಿತಿ ನೀಡಬೇಕು. ಇದರಿಂದ ಖಾಲಿ ಮನೆಗಳ ಸುತ್ತ ಪೊಲೀಸರು ಗಸ್ತು ತಿರುಗುವುದರಿಂದ ಕಳ್ಳತನ ಪ್ರಕರಣಗಳು ಕಡಿಮೆಯಾಗುತ್ತವೆ. ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಗೆ ನಾಗರಿಕರು ಆಸಕ್ತಿ ತೋರಿಸಬೇಕು. ಇದರಿಂದ ಕಳವು ಪ್ರಕರಣಗಳು ನಡೆಯುವುದು ಕಡಿಮೆಯಾಗುವುದರ ಜತೆಗೆ ಕಳ್ಳತನ ನಡೆದರೆ ಕಳ್ಳರನ್ನು ಹಿಡಿಯಲು ಸುಲಭವಾಗುತ್ತದೆ. ಪೊಲೀಸ್ ಇಲಾಖೆ ಕಳ್ಳರ ಪತ್ತೆಗೆ ಕಾರ್ಯಪ್ರವೃತ್ತವಾಗಿದೆ ಎಂದು ಡಿವೈಎಸ್ಪಿ ಧರ್ಮೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.
ಪೊಲೀಸ್ ಇಲಾಖೆ ವೈಫಲ್ಯ’
ತಿಂಗಳಿಗೆ ಎರಡರಿಂದ ಮೂರು ಕಳ್ಳತನ ಪ್ರಕರಣಗಳು ನಗರ ವ್ಯಾಪ್ತಿಯಲ್ಲಿ ನಡೆಯುತ್ತಿದ್ದು ಇದಕ್ಕೆ ಪೊಲೀಸರ ನಿರ್ಲಕ್ಷ್ಯ ಪ್ರಮುಖ ಕಾರಣವಾಗಿದೆ. ಪೊಲೀಸರು ಕಳ್ಳತನ ತಡೆಯಲು ಹೆಚ್ಚು ಗಮನ ಹರಸಿಬೇಕು. ವಿಶೇಷವಾಗಿ ರಾತ್ರಿ ವೇಳೆ ಬೀಟ್‌ ಹೆಚ್ಚಿಸಬೇಕು ಎನ್ನುತ್ತಾರೆ ಕರವೇ ತಾಲ್ಲೂಕು ಅಧ್ಯಕ್ಷ ಅಯಾಜ್ ಕನ್ನಡಿಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT