ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಕ್ಷ ಬಲಪಡಿಸಲು ರಾಜ್ಯದಾದ್ಯಂತ ಪ್ರವಾಸ: ಬಿ.ಎಸ್‌. ಯಡಿಯೂರಪ್ಪ

Last Updated 30 ಜುಲೈ 2021, 19:01 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಶುಕ್ರವಾರ ತಾಲ್ಲೂಕಿನ ಬೊಮ್ಮಲಾಪುರ ಗ್ರಾಮಕ್ಕೆ ಭೇಟಿ ನೀಡಿ, ತಮ್ಮ ರಾಜೀನಾಮೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ರವಿಯ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ತಾಯಿ ರೇವಮ್ಮ ಹಾಗೂ ಇಬ್ಬರು ಸಹೋದರಿಯರಿಗೆ ಧೈರ್ಯ ತುಂಬಿದರು. ಕುಟುಂಬದ ಆರ್ಥಿಕ ಸಂಕಷ್ಟ ಕಂಡು ₹5 ಲಕ್ಷ ಪರಿಹಾರ ನೀಡಿದರು. ಇನ್ನೂ ₹5 ಲಕ್ಷ ಹಣ ಠೇವಣಿ ಇರಿಸಿ, ಬಡ್ಡಿ ಕುಟುಂಬಕ್ಕೆ ಬರುವಂತೆ ಮಾಡುವ ಭರವಸೆ ನೀಡಿದರು.

ಗುಂಡ್ಲುಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ರಾಜ್ಯದಲ್ಲಿ ಬಿಜೆಪಿಯನ್ನು ಬಲಪ‍ಡಿಸಲು ರಾಜ್ಯದಾದ್ಯಂತ ಪ್ರವಾಸ ನಡೆಸುತ್ತೇನೆ. ನನ್ನ ಮುಂದಿನ ಯೋಜನೆಯನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಪಕ್ಷವನ್ನು ಬಲಪಡಿಸಲು ರಾಜ್ಯದಾದ್ಯಂತ ಪ್ರವಾಸ ಮಾಡುತ್ತೇನೆ. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲೇಬೇಕು. 130–135 ಸ್ಥಾನಗಳನ್ನು ಗೆಲ್ಲಲೇಬೇಕು. ಅದಕ್ಕಾಗಿ ಪ್ರಯತ್ನ ನಡೆಸುತ್ತೇನೆ’ ಎಂದರು.

‘ನನಗೆ ಅಧಿಕಾರ ಇಲ್ಲದಿದ್ದರೂ, ಜನರು ಸಾಕಷ್ಟು ಬೆಂಬಲ ನೀಡುತ್ತಿದ್ದಾರೆ ಎಂಬುದಕ್ಕೆ ಇಲ್ಲಿ ಸೇರಿರುವ ಜನರು ಒಂದು ಉದಾಹರಣೆ’ ಎಂದರು.

ಸಂಪುಟ ರಚನೆಯ ಬಗ್ಗೆ ಕೇಳಿದ ಪ್ರಶ್ನೆಗೆ, ‘ಸಂಪುಟ ರಚನೆಯ ಬಗ್ಗೆ ನಾನು ಮಾತನಾಡುವುದಿಲ್ಲ. ಮುಖ್ಯಮಂತ್ರಿ ಅವರು ದೆಹಲಿಗೆ ಹೋಗಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ರಚನೆಯಾಗಲಿದೆ’ ಎಂದರು.

‘ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಶಾಸಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಕೇಂದ್ರದ ನಾಯಕರು ತೀರ್ಮಾನಿಸುತ್ತಾರೆ’ ಎಂದು ಪ‍್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಹೊಸ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆವರು ಆಯ್ಕೆ ಆಗಿರುವುದು ಹಾಗೂ ಆಯ್ಕೆ ಮಾಡಿರುವ ವಿಧಾನ ತೃಪ್ತಿ ತಂದಿದೆ. ಅವರು ಉತ್ತಮ ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಅವರಿಂದ ಉತ್ತಮ ಕಾರ್ಯಗಳಾಗಲಿವೆ’ ಎಂದು ಹೇಳಿದರು.

ಹಿಂದಿನ ಸರ್ಕಾರದ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿದ ಅವರು, ‘ಸಿದ್ದರಾಮಯ್ಯ ಅವರು ಸಂಯಮ ಕಳೆದುಕೊಂಡು ಮಾತನಾಡುತ್ತಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT