ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ಅಧಿಕಾರಿಗಳಿಂದ ಸ್ಥಳ ಪರಿಶೀಲನೆ, ಅಕ್ರಮ ಗಣಿಗಾರಿಕೆ ಪತ್ತೆ

ಬಿಳಿಗುಡ್ಡಮಠದ ಜಾಗದಲ್ಲಿ ಅಕ್ರಮ ಕರಿ ಕಲ್ಲು ಗಣಿಗಾರಿಕೆ ಆರೋಪ
Last Updated 24 ಸೆಪ್ಟೆಂಬರ್ 2019, 13:01 IST
ಅಕ್ಷರ ಗಾತ್ರ

ಯಳಂದೂರು: ವರನಟ ಡಾ.ರಾಜ್‌ಕುಮಾರ್‌ ಅವರ ಕುಟುಂಬಕ್ಕೆ ದೀಕ್ಷೆ ನೀಡಿರುವ ತಾಲ್ಲೂಕಿನ ಗುಂಬಳ್ಳಿ ಬಳಿಯ ಬಿಳಿಗುಡ್ಡ ಮಠಕ್ಕೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಕರಿಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ಆ‌ರೋಪ ಕೇಳಿಬರುತ್ತಿದ್ದಂತೆಯೇ, ಗಣಿ ಮತ್ತು ಭೂ ವಿಜ್ಞಾನ, ಕಂದಾಯ ಇಲಾಖೆಗಳ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗುಂಬಳ್ಳಿ ಗ್ರಾಮದ ಸರ್ವೆ ನಂಬರ್‌ 353/7ರಲ್ಲಿ ಒಂದು ಎಕರೆ ಮೂರು ಗುಂಟೆ ಜಾಗದಲ್ಲಿ ಗಣಿಗಾರಿಕೆ ನಡೆಸಲು ಜಮೀಲ್‌ ಅಹಮ್ಮದ್‌ ಎಂಬುವವರು ಅನುಮತಿ ಪಡೆದಿದ್ದಾರೆ. ಆದರೆ ಅವರು ಬೇರೆ ಕಡೆ ಜಮೀನು ಒತ್ತುವರಿ ಮಾಡಿ ಗಣಿಗಾರಿಕೆ ನಡೆಸುತ್ತಿರುವುದನ್ನು ಗಣಿ ಇಲಾಖೆಯ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದು, ಗಣಿ ಮಾಲೀಕರ ವಿರದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ದೂರು ಸ್ವೀಕರಿಸಿರುವ ಯಳಂದೂರು ಪೊಲೀಸರು ಪ್ರಕರಣವನ್ನೂ ದಾಖಲಿಸಿದ್ದಾರೆ.

ರಾಜ್‌ ಸೋದರಿಯ ಆರೋಪ:‘ಮಠಕ್ಕೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ. ಇದರಿಂದ ಮಠದ ಆಸ್ತಿ ಹಾಳಾಗುತ್ತಿದ್ದು,ಮಠದ ಸಂಸ್ಥಾಪಕ ಪೇರ್‌ಸಿಂಗ್‌ ಸ್ವಾಮೀಜಿಯ ವಂಶಸ್ಥರು ಧ್ಯಾನ ಮಾಡುವ ಮೂರು ಮಂಟಪಗಳಲ್ಲಿ ಎರಡು ಮಂಟಪಗಳು ಗಣಿಗಾರಿಕೆಯ ಸಿಡಿಮದ್ದುಗಳಿಂದಾಗಿ ಮುರಿದು ಬಿದ್ದಿವೆ’ ಎಂದು ಡಾ.ರಾಜ್‌ ಅವರ ಸಹೋದರಿ ನಾಗಮ್ಮ ಅವರು ಆರೋಪಿಸಿದ್ದರು.

‘ಮಠದ ಮುಂಭಾಗ ಇರುವ ಕೆರೆಯ ಪಕ್ಕದ ಪಟ್ಟಾ ಭೂಮಿಯಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ಪಡೆದು ಪಟ್ಟಾದ ಭೂಮಿಯಲ್ಲದೆ ಮಠದ ಒಂದು ಎಕರೆ ಒಂದು ಗುಂಟೆ ಜಾಗದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಮಠದ ಭಕ್ತರು ಹಾಗೂ ನಮ್ಮ ಕುಟುಂಬದ ವತಿಯಿಂದ ಮನವಿ ಸಲ್ಲಿಸಿದರೂ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ದೂರಿದ್ದರು.

400 ವರ್ಷಗಳ ಹಿಂದೆ ಪೇರ್‌ಸಿಂಗ್‌ ಎಂಬುವರು ಬಿಳಿಗುಡ್ಡ ಸ್ಥಳಕ್ಕೆ ಬಂದು ಜೀವಂತವಾಗಿ ಐಕ್ಯರಾಗಿದ್ದಾರೆ. ಡಾ.ರಾಜ್‌ಕುಮಾರ್‌ ಸೇರಿದಂತೆ ಅವರ ಕುಟುಂಬದ ಎರಡು ತಲೆಮಾರಿನವರು ಈ ಮಠದಲ್ಲಿ ದೀಕ್ಷೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT