ಭಾನುವಾರ, ಜುಲೈ 25, 2021
25 °C
ಕೆಂಪು ಪಟ್ಟಿಗೆ ಸೇರಿದ ಬಹೂಪಯೋಗಿ ‘ಇಂಡಿಯನ್ ಕೋಪಲ್ ಟ್ರೀ’

ವನದಂಗಳದಲ್ಲಿ ಸುಗಂಧ ಸೂಸುವ ಕಾಂಧೂಪ ಮರ

ನಾ.ಮಂಜುನಾಥಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: 'ಇಂಡಿಯನ್ ಕೋಪಲ್ ಟ್ರೀ’ ಭಾರತದ ಅಪರೂಪದ ಸಸ್ಯ ಸಂಕುಲ. ಹೆಸರಿನೊಂದಿಗೆ ‘ಭಾರತ’ವನ್ನು ಸೇರಿಕೊಂಡ ಮರ. ಇದರ ರಾಳ, ತೊಗಟೆ ಸುಗಂಧ ದ್ರವ್ಯಗಳಿಗೆ ಬಹು ಬೇಡಿಕೆ ಇದೆ. ತಾಲ್ಲೂಕಿನ ಪರಿಸರದಲ್ಲಿ ಇವುಗಳ ಎರಡು ಪ್ರಭೇದಗಳು ಇನ್ನೂ ನಳನಳಿಸುತ್ತಿದೆ.

ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಘಟ್ಟ ಪ್ರದೇಶಗಳು ಕೂಡುವೆಡೆ ಗಮನಾರ್ಹ ಪ್ರಮಾಣದಲ್ಲಿ ಈ ಮರಗಳು ಇವೆ. ಆಶ್ರಯ ಪಡೆದಿವೆ. ಅವುಗಳಲ್ಲಿ ದಕ್ಷಿಣ ಭಾರತದ ಪಶ್ಚಿಮ ಘಟ್ಟದ ನಿತ್ಯಹರಿಧ್ವರ್ಣದ ಕಾಡುಗಳ ‘ಡಿಪ್ಟರೋಕಾರ್ಪೇಸಿ’ ಕುಟುಂಬಕ್ಕೆ ಸೇರಿದ ಕೋಪಲ್ ಟ್ರೀ ಪ್ರಮುಖ ಮರ.

ಜನವರಿ–ಮಾರ್ಚ್‌ನಲ್ಲಿ ಈ ವೃಕ್ಷಗಳು ಹೂ ಅರಳಿಸುತ್ತಲೇ ಪರಿಮಳ ಸೂಸುತ್ತವೆ. ಹಣ್ಣು ಮೇ–ಜುಲೈ ಅವಧಿಯಲ್ಲಿ ಪಕ್ವವಾಗುತ್ತವೆ. ಸುವಾಸನೆ ಹೊಮ್ಮಿಸುವ ಇದರ ತೊಗಟೆಯನ್ನು ಸುಗಂಧ ದ್ರವ್ಯಗಳ ತಯಾರಿಯಲ್ಲಿ ಬಳಸುತ್ತಾರೆ. ಹಾಗಾಗಿ, ಈ ಸಸ್ಯಕ್ಕೆ ‘ರಾಳದ ಮರ, ಧೂಪದ ಮರ’ ಎಂಬ ಹೆಸರೂ ಇದೆ. ಇದರ ಬುಡದಲ್ಲಿ ಒಸರುವ ಅಂಟಾದ ಬಿಳಿಯ ರಾಳ ಬೆರಳು ಇಲ್ಲವೇ ವಸ್ತ್ರ ಸೋಂಕಿದರೆ ದಿನವಿಡಿ ಪರಿಮಳ ಹೊಮ್ಮುತ್ತದೆ.

‘ಸೋಲಿಗರು ಇದರ ಅಂಟನ್ನು ದೇವರಗುಡಿ, ಜಾತ್ರೆ, ಮದುವೆಗಳಲ್ಲಿ ಪರಿಮಳ ದ್ರವ್ಯವಾಗಿ ಬಳಸುತ್ತಾರೆ. ಇದರ ಕೊಯ್ಲು ಮತ್ತು ಮಾರಾಟ ಇಲ್ಲ. ಹಾಗಾಗಿ, ಈ ವೃಕ್ಷ ಸಂತತಿ ಒಣ ಮತ್ತು ಸದಾ ಹಸಿರು ಕಾಡುಗಳಲ್ಲಿ ಇನ್ನೂ ಉಳಿದಿದೆ ಎನ್ನುತ್ತಾರೆ ಬಿಆರ್‌ಟಿ ಏಟ್ರೀ ಸಂಶೋಧಕ ಡಾ.ಸಿ.ಮಾದೇಗೌಡ ಅವರು.

ಮರದ ಬೊಡ್ಡೆ ಕೊರೆದಾಗ ಬರುವ ಅಂಟಿನಿಂದ ರೆಸಿನ್, ಸುಗಂಧ, ಆಯುರ್ವೇಧ ಔಷಧ ತಯಾರಿಯಲ್ಲಿ ಬಳಸಲಾಗುತ್ತದೆ. ವೃಕ್ಷದ ವಯಸ್ಸಿಗೆ ಅನುಗುಣಮವಾಗಿ ಒತ್ತಾದ ರಾಳ, ಕೋಶಮಯರಾಳ, ಕಪ್ಪುರಾಳ ಲಭಿಸುತ್ತದೆ. ಇದು ಟರ್ಪೆಂಟೈನ್, ಆಲ್ಕೋಹಾಲ್‌ಗೆ ಹಾಕಿದಾಗ ಕರಗುತ್ತದೆ. ರಾಳಕ್ಕೆ ತೆಂಗಿನೆಣ್ಣೆ ಸೇರಿಸಿ ಮೇಣದಬತ್ತಿ, ಕೃತಕ ಮುತ್ತಿನ ಮಣಿ ಸೃಷ್ಟಿಸುತ್ತಾರೆ.

ವಾರ್ಷಿಕವಾಗಿ ಕರ್ನಾಟಕದಲ್ಲಿ ಐದು ಮತ್ತು ಕೇರಳದಲ್ಲಿ ಏಳು ಸಾವಿರ ಟನ್ ಹಣ್ಣು ಸಂಗ್ರಹಿಸಲಾಗುತ್ತದೆ. ಇದರ ಬೀಜದಿಂದ ಎಣ್ಣೆ, ಸಸ್ಯ ಮೂಲದಿಂದ ಬೆಣ್ಣೆಯನ್ನು ತೆಗೆಯಬಹುದು. ದಕ್ಷಿಣ ಕನ್ನಡದಲ್ಲಿ ದೀಪ ಬೆಳಗಿಸಲು, ಆಹಾರ ಪದಾರ್ಥಕ್ಕೆ ಸುವಾಸನೆ ನೀಡಲು, ಬೆಣ್ಣೆ, ತುಪ್ಪಕ್ಕೆ ಬೆರೆಕೆ ಮಾಡಲು ಇದನ್ನು ಬಳಸಲಾಗುತ್ತದೆ. ಕಾಯಿಯನ್ನು ವಾಂತಿ ಮತ್ತು ವಾತಕ್ಕೆ ಉಪಶಮನವಾಗಿ ಬಳಸುತ್ತಾರೆ. ಹೆಂಡದಲ್ಲಿ ಬುರುಗು ಬರಿಸಲು ಶ್ರೀಲಂಕಾದಲ್ಲಿ ಬಳಸುತ್ತಾರೆ.

‘ಗಿರಿಜನರು ಬಹುತೇಕ ಮರದ ಉಪ ಉತ್ಪನ್ನದ ಸಂಗ್ರಹ ಮಾಡುತ್ತಿಲ್ಲ. ಇದರ ವಾಣಿಜ್ಯ ಬಳಕೆಯ ಬಗ್ಗೆ ಅರಿವಿಲ್ಲ. ಆಯುರ್ವೇದ ಬಳಕೆಯ ಜ್ಞಾನವೂ ಅಷ್ಟಾಗಿ ಉಳಿದಿಲ್ಲ. ಹಾಗಾಗಿ, ಧೂಪದ ಮರಗಳು ವಿಶೇಷವಾಗಿ ಕಂಡುಬರುತ್ತವೆ’ ಎಂದು ಮೂಲಿಕೆ ತಜ್ಞ ಬೊಮ್ಮಯ್ಯ ಅವರು ತಿಳಿಸಿದರು. 

ಅಳಿವಿನಂಚಿನ ಮರ

‘ಜೀವ ವೈವಿಧ್ಯತೆಯ ಸಂಭ್ರಮವನ್ನು ಆಚರಿಸಿ’ ಎಂಬ ಘೋಷ ವಾಕ್ಯದ ಅಡಿಯಲ್ಲಿ ಈ ವರ್ಷ ಪರಿಸರ ದಿನವನ್ನು ಆಚರಿಸಲಾಗುತ್ತಿದೆ.

ಕನ್ನಡದಲ್ಲಿ ಕಾಂಧೂಪ ಎನ್ನುವ ಕೋಪಲ್ ಟ್ರೀಗೆ ಇಂಗ್ಲಿಷಿನಲ್ಲಿ ‘ವೈಟ್ ಧಮ್ಮರ್’ ಎಂಬ ಹೆಸರಿದೆ. ‘ವೆಟೇರಿಯಾ ಇಂಡಿಕಾ’ ಇದರ ವೈಜ್ಞಾನಿಕ ಹೆಸರು.

ಜಾಗತಿಕವಾಗಿ ಅಳಿವಿನಂಚಿನಲ್ಲಿ ಇರುವ  ಈ ಮರವನ್ನು ಅಂತರರಾಷ್ಟ್ರೀಯ ಪರಿಸರ ಸಂರಕ್ಷಣಾ ಸಂಸ್ಥೆ (ಐಯುಸಿಎನ್) ಕೆಂಪು ಪಟ್ಟಿಗೆ ಸೇರಿಸಿದೆ. ನಮ್ಮ ಪರಿಸರದ ಅಮೂಲ್ಯ ಸಸ್ಯ ತಾಣವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಶ್ರಮಿಸಬೇಕಿದೆ ಎಂದು ಹೇಳುತ್ತಾರೆ ನಿಸರ್ಗ ಪ್ರಿಯರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು