ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಆರ್‌ಟಿ: ಸಫಾರಿ ಹೋಗುವವರಿಗೆ ವಿಮೆ

Published 25 ನವೆಂಬರ್ 2023, 6:14 IST
Last Updated 25 ನವೆಂಬರ್ 2023, 6:14 IST
ಅಕ್ಷರ ಗಾತ್ರ

ಚಾಮರಾಜನಗರ: ರಾಜ್ಯದ ರಕ್ಷಿತಾರಣ್ಯಗಳಲ್ಲಿ ಪರಿಸರ ಪ್ರವಾಸೋದ್ಯಮ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ವಿಮೆ ಭದ್ರತೆ ಒದಗಿಸುವ ಅರಣ್ಯ ಇಲಾಖೆಯ ಯೋಜನೆ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯದ ಹುಲಿ ಸಂರಕ್ಷಿತ ಪ್ರದೇಶದಲ್ಲೂ ಅನುಷ್ಠಾನಗೊಂಡಿದೆ. 

ಶುಕ್ರವಾರದಿಂದ ವಿಮೆ ಸೌಲಭ್ಯ ಜಾರಿಗೆ ಬಂದಿದ್ದು, ಕೆ.ಗುಡಿಯಲ್ಲಿ ಸಫಾರಿ ಹೋಗುವ ಎಲ್ಲ ಪ್ರವಾಸಿಗರಿಗೂ ಇದು ಲಭ್ಯವಾಗಲಿದೆ. 

ಜಿಲ್ಲೆಯ ಬಂಡೀಪುರ ಮತ್ತು ಮೈಸೂರು ಜಿಲ್ಲೆಯ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಅಕ್ಟೋಬರ್‌ ತಿಂಗಳ ಮೊದಲ ವಾರದಲ್ಲೇ ಈ ಯೋಜನೆ ಅನುಷ್ಠಾನಗೊಂಡಿದೆ. 

ಬಿಆರ್‌ಟಿಯಲ್ಲಿ ಜಾರಿ ಕೊಂಚ ವಿಳಂಬವಾಗಿದೆ. ಸಂರಕ್ಷಿತ ಪ್ರದೇಶದ ಆಡಳಿತವು ಯುನೈಟೆಡ್‌ ಇಂಡಿಯಾ ಇನ್ಶೂರೆನ್ಸ್‌ ಕಂಪನಿಯಲ್ಲಿ ವಿಮಾ ಪಾಲಿಸಿ ಮಾಡಿಸಿದೆ. ಶುಕ್ರವಾರದಿಂದ (ನ.24ರಿಂದ) ವಿಮೆ ಅವಧಿ ಆರಂಭಗೊಂಡಿದ್ದು, 2024ರ ನ.23ಕ್ಕೆ ಅವಧಿ ಮುಗಿಯಲಿದೆ. ₹50 ಲಕ್ಷ ಮೊತ್ತಕ್ಕೆ ವಿಮೆ ಮಾಡಲಾಗಿದೆ. ಇದಕ್ಕಾಗಿ ₹47,200 ಮೊತ್ತವನ್ನು ಬಿಆರ್‌ಟಿ ಆಡಳಿತ ಪಾವತಿಸಿದೆ. 

ವಿಮೆ ಕಂತು ಸಣ್ಣ ಮೊತ್ತ ಇದೆ. ಅದರ ಹಣವನ್ನು ಬಿಆರ್‌ಟಿ ಪ್ರತಿಷ್ಠಾನದಿಂದ ಭರಿಸಿದ್ದೇವೆ. ಪ್ರವಾಸಿಗರ ಮೇಲೆ ಹೊರೆ ಹಾಕುವುದಿಲ್ಲ.
ದೀಪ್‌ ಜೆ.ಕಾಂಟ್ರ್ಯಾಕ್ಟರ್‌, ಬಿಆರ್‌ಟಿ ಡಿಸಿಎಫ್‌

ಸಫಾರಿ ಹೋದ ಸಂದರ್ಭದಲ್ಲಿ ಪ್ರಾಣಿ ದಾಳಿ ಇಲ್ಲವೇ, ವಾಹನ ಅಪಘಾತಗಳಂತಹ ಅವಘಡ ಸಂಭವಿಸಿ ಪ್ರವಾಸಿಗರ ಪ್ರಾಣ ಹಾನಿ ಸಂಭವಿಸಿದರೆ, ಅಥವಾ ತೀವ್ರವಾಗಿ ಗಾಯಗೊಂಡರೆ ಪ್ರವಾಸಿಗರಿಗೆ ಗರಿಷ್ಠ ₹5 ಲಕ್ಷದವರೆಗೆ ವಿಮೆಯ ಪರಿಹಾರ ಸಿಗಲಿದೆ.  

‘ಪ್ರವಾಸಿಗರ ಸಂಖ್ಯೆ ಹೆಚ್ಚಿರುವ ಬಂಡೀಪುರ ಮತ್ತು ನಾಗರಹೊಳೆಗಳಲ್ಲಿ ವಿಮೆಯ ಮೊತ್ತ ₹1 ಕೋಟಿ ಇದೆ. ಅಲ್ಲಿಗೆ ಸಫಾರಿಗೆ ಬರುವ ಜನರ ಸಂಖ್ಯೆಗೆ ಹೋಲಿಸಿದರೆ ನಮ್ಮಲ್ಲಿ ಅಷ್ಟು ಪ್ರಮಾಣದಲ್ಲಿ ಪ್ರವಾಸಿಗರು ಬರುವುದಿಲ್ಲ. ಹಾಗಾಗಿ, ₹50 ಲಕ್ಷ ಮೊತ್ತದ ವಿಮೆ ಮಾಡಲಾಗಿದೆ’ ಎಂದು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್‌, ನಿರ್ದೇಶಕಿ ದೀಪ್‌ ಜೆ.ಕಾಂಟ್ರ್ಯಾಕ್ಟರ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಕೆ.ಗುಡಿ ಸಫಾರಿಗೆ ವಾರ್ಷಿಕವಾಗಿ ಅಂದಾಜು 10 ಸಾವಿರದಷ್ಟು ಜನರು ಬರುತ್ತಾರೆ.  

‘ನಮ್ಮಲ್ಲಿ ಸಫಾರಿಗೆ ತೆರಳುವ ಪ್ರತಿ ಪ್ರವಾಸಿಗರಿಗೂ ಈ ಸೌಲಭ್ಯ ಸಿಗಲಿದೆ. ಸಫಾರಿ ಸಂದರ್ಭದಲ್ಲಿ ಯಾವುದೇ ಅವಘಡಗಳು ಸಂಭವಿಸಿದರೆ, ಪ್ರವಾಸಿಗರಿಗೆ ಪರಿಹಾರ ಮೊತ್ತ ಸಿಗಲಿದೆ’ ಎಂದು ಕೆ.ಗುಡಿ ವಲಯ ಅರಣ್ಯಾಧಿಕಾರಿ ವಿನೋದ್‌ ಗೌಡ ಮಾಹಿತಿ ನೀಡಿದರು.

ಇಲಾಖೆಯ ಗಮನ ಸೆಳೆದಿದ್ದ ಗಿರಿಧರ್‌

ಸಂರಕ್ಷಿತ ಪ್ರದೇಶಗಳಲ್ಲಿರುವ ಪರಿಸರ ಸ್ನೇಹಿ ಪ್ರವಾಸಿ ತಾಣಗಳು ಸಫಾರಿಗೆ ಭೇಟಿ ನೀಡುವ ಪ್ರವಾಸಿಗರಿಗೆ ವಿಮೆ ಭದ್ರತೆ ಒದಗಿಸಬೇಕು ಎಂದು ಬೆಳಗಾವಿಯ ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ್‌ ಕುಲಕರ್ಣಿ ಅವರು ಅರಣ್ಯ ಇಲಾಖೆಯ ಗಮನ ಸೆಳೆದಿದ್ದರು.  ಅರಣ್ಯ ಇಲಾಖೆಯ ಅಂಗ ಸಂಸ್ಥೆ ಜಂಗಲ್‌ ಲಾಡ್ಜಸ್‌ ಅಂಡ್‌ ರೆಸಾರ್ಟ್ಸ್‌ಗೆ ಭೇಟಿ ನೀಡುವ ಪ್ರವಾಸಿಗರಿಗೆ ಸಂಸ್ಥೆ ವಿಮೆ ಭದ್ರತೆ ಒದಗಿಸುತ್ತಿದೆ. ಇದನ್ನು ಮನವಿಯಲ್ಲಿ ಉಲ್ಲೇಖಿಸಿದ್ದ ಕುಲಕರ್ಣಿಯವರು ಪ್ರವಾಸಿಗರ ಹಿತದೃಷ್ಟಿಯಿಂದ ಅರಣ್ಯ ಇಲಾಖೆಯೂ ಈ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದ್ದರು.  ಇದಕ್ಕೆ ಸ್ಪಂದಿಸಿದ್ದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್‌ ಪುಷ್ಕರ್‌ ಅವರು ಜಿಲ್ಲೆಯ ಬಂಡೀಪುರ ಬಿಆರ್‌ಟಿ ಸೇರಿದಂತೆ ರಾಜ್ಯದ ಎಲ್ಲ ಐದು ಹುಲಿಸಂರಕ್ಷಿತ ಪ್ರದೇಶದ ನಿರ್ದೇಶಕರು ರಕ್ಷಿತಾರಣ್ಯಗಳ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಈ ವರ್ಷದ ಜೂನ್‌ 22ರಂದು ಪತ್ರ ಬರೆದು ಯೋಜನೆ ಅನುಷ್ಠಾನಕ್ಕೆ ಕ್ರಮವಹಿಸುವಂತೆ ಸೂಚಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT