ಕೊಳ್ಳೇಗಾಲ: ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ ಅವರ ಜನ್ಮದಿನದ ಅಂಗವಾಗಿ ಎಸ್. ಜಯಣ್ಣ ಅಭಿಮಾನಿ ಬಳಗದಿಂದ ಸಂಸದ ಸುನಿಲ್ ಬೋಸ್ ಅವರಿಗೆ ಸನ್ಮಾನ ಕಾರ್ಯಕ್ರಮ ಸೆ.9ರಂದು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್ ಹೇಳಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಅಂದು ಬೆಳಿಗ್ಗೆ 10:30ಕ್ಕೆ ನಗರದ ಭ್ರಮರಂಭ ಕಲ್ಯಾಣ ಮಂಟಪದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ ಮಹದೇವಪ್ಪ ಅವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್ ಪಾಲ್ಗೊಳ್ಳುವರು. ಶಾಸಕ ಎ.ಆರ್. ಕೃಷ್ಟಮೂರ್ತಿ ಅಧ್ಯಕ್ಷತೆ ವಹಿಸಲಿದ್ದು, ಜಯಣ್ಣ ಅವರಿಗೆ ಅಭಿಮಾನಿಗಳು ಕಾರ್ಯಕರ್ತರು ಸನ್ಮಾನಿಸುವರು.
‘ಶಾಸಕರಾದ ಪುಟ್ಟರಂಗ ಶೆಟ್ಟಿ, ಗಣೇಶ್ ಪ್ರಸಾದ್, ದರ್ಶನ್ ಧ್ರುವನಾರಾಯಣ್, ಮಂಜುನಾಥ್, ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಜಿ.ಎನ್. ನಂಜುಂಡಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜಿಲ್ಲಾ ಅಧ್ಯಕ್ಷ ಚಂದ್ರು ಪಾಲ್ಗೊಳ್ಳುವರು’ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಎಂಎಫ್ ನಿರ್ದೇಶಕ ನಂಜುಂಡಸ್ವಾಮಿ, ಮುಖಂಡ ಕೊಪ್ಪಳ್ಳಿ ಮಹದೇವ ನಾಯಕ, ಮಂಜು, ಉದಯ್ ಶಂಕರ್, ಪ್ರಕಾಶ್, ಬಸವಣ್ಣ, ಮನೋಹರ್, ನಾಗರಾಜು ಸೇರಿದಂತೆ ಅನೇಕ ಮುಖಂಡರು ಇದ್ದರು.