ಸೋಮವಾರ, ಸೆಪ್ಟೆಂಬರ್ 20, 2021
25 °C
ಹಲವು ವರ್ಷಗಳಿಂದ ಇತ್ಯರ್ಥವಾಗದಿದ್ದ ಪ್ರಕರಣ: ಜಂಟಿ ಸರ್ವೆಗೆ ಸೂಚಿಸಿದ್ದ ಜಿಲ್ಲಾಧಿಕಾರಿ

ಬಿಆರ್‌ಟಿ: ಸರ್ವೆ ಪೂರ್ಣ, ಒತ್ತುವರಿ ಗುರುತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯ ಪ್ರಸಿದ್ದ ಬಿಳಿಗಿರಿರಂಗನಬೆಟ್ಟ ವ್ಯಾಪ್ತಿಯಲ್ಲಿ ಕಂದಾಯ, ಅರಣ್ಯ, ಭೂ ಮಾಪನ ಇಲಾಖೆ ಜಂಟಿಯಾಗಿ ನಡೆಸಿರುವ ಸರ್ವೆ ಪೂರ್ಣಗೊಂಡಿದ್ದು, ಒತ್ತುವರಿ ಭೂಮಿ ಗುರುತಿಸಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ.

ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯದ ಹುಲಿ ಸಂರಕ್ಷಿತ ‌ಪ್ರದೇಶದ ವ್ಯಾಪ್ತಿಯ ಬಿಳಿಗಿರಿರಂಗನಬೆಟ್ಟದಲ್ಲಿ ಕಂದಾಯ, ಅರಣ್ಯ ಭೂಮಿಗೆ ಸಂಬಂಧಿಸಿದಂತೆ ಹಲವು ದಶಕಗಳಿಂದ ವಿವಾದ ಇದೆ. ಹಲವು ವರ್ಷಗಳಿಂದ ಸರ್ವೆ ಕಾರ್ಯ ನಡೆಯದೆ ವಿವಾದ ಇತ್ಯರ್ಥವಾಗಿರಲಿಲ್ಲ. 

ಇತ್ತೀಚೆಗೆ ಈ ಸಂಬಂಧ ಅಧಿಕಾರಿಗಳ ಸಭೆ ನಡೆಸಿದ್ದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಜಂಟಿ ಸರ್ವೆ ನಡೆಸುವಂತೆ ಕಟ್ಟುನಿಟ್ಟಾಗಿ ಸೂಚಿಸಿದ್ದರು. ಕಂದಾಯ, ಅರಣ್ಯ ಹಾಗೂ ಭೂಮಾಪನ ಇಲಾಖೆ ಅಧಿಕಾರಿಗಳು ಬಿಳಿಗಿರಿರಂಗನ ಬೆಟ್ಟದಲ್ಲೇ ಮೊಕ್ಕಾಂ ಹೂಡಿ ಸರ್ವೆ ಮಾಡುವಂತೆ ನಿರ್ದೇಶನ ನೀಡಿದ್ದರು.

ಸರ್ವೆ ಕಾರ್ಯ ಪೂರ್ಣಗೊಂಡ ಬಳಿಕ ಅಧಿಕಾರಿಗಳು, ಒತ್ತುವರಿ ಭೂಮಿ ಗುರುತಿಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ. 

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅಧ್ಯಕ್ಷತೆಯಲ್ಲಿ ಗುರುವಾರ ಕಂದಾಯ, ಅರಣ್ಯ, ಭೂ ಮಾಪನ ಇಲಾಖೆಗಳ ಅಧಿಕಾರಿಗಳ ಸಭೆ ನಡೆದಿದೆ. ಮುಂದೆ ಕೈಗೊಳ್ಳುವ ಕ್ರಮಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಾಗಿದೆ.

ಅರಣ್ಯ ಇಲಾಖೆಗೆ ಒಳಪಟ್ಟ ಜಮೀನಿನ ಪೈಕಿ ಕಂದಾಯ ದಾಖಲೆಗಳಲ್ಲಿ ನಮೂದಾಗದಿರುವ ಪ್ರದೇಶದ ಜಮೀನನ್ನು ಕಂದಾಯ ದಾಖಲೆಗಳಲ್ಲಿ ದಾಖಲಿಸುವ ಬಗ್ಗೆ ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೂಚನೆ ನೀಡಿದ್ದಾರೆ.

ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಜಿ.ಮಲ್ಲೇಶಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬದೋಲೆ, ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಾಣಾಧಿಕಾರಿ ಡಾ.ಸಂತೋಷ್ ಕುಮಾರ್, ತಹಶೀಲ್ದಾರ್‌ ಆರ್.ಜಯಪ್ರಕಾಶ್, ಭೂ ದಾಖಲೆಗಳ ಉಪನಿರ್ದೇಶಕಿ ವಿದ್ಯಾಯಿನಿ, ಭೂ ದಾಖಲೆಗಳ ಸಹಾಯಕ ನಿರ್ದೆಶಕರಾದ ಶ್ರೀನಿವಾಸಮೂರ್ತಿ, ಶಿರಸ್ತೇದಾರರಾದ ಬಿ.ಕೆ.ನಾಗೇಶ್ ಇದ್ದರು.

ದಾಖಲೆಗಳಿಲ್ಲದೆ ಅನುಭವ: ಕೆಲವು ಜಮೀನುಗಳಿಗೆ ಸಂಬಂಧಿಸಿದಂತೆ ದಾಖಲೆಗಳು ಇಲ್ಲ. ಹಾಗಿದ್ದರೂ, ಕೆಲವರು ಆ ಭೂಮಿಯನ್ನು ಅನುಭವಿಸುತ್ತಿದ್ದಾರೆ. ಅಲ್ಲದೇ ಕೆಲವರು ಹೊಂದಿರುವ ದಾಖಲೆಗಳಿಂದಲೂ ಹೆಚ್ಚಿನ ಜಮೀನು ಅನುಭವಿಸುತ್ತಿದ್ದಾರೆ. ಇದೆಲ್ಲವೂ ಸರ್ವೆಯಲ್ಲಿ ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಜಿ.ಸಂತೋಷ್‌ಕುಮಾರ್‌, ‘ಸರ್ವೆ ಕಾರ್ಯ ಮುಕ್ತಾಯವಾಗಿದ್ದು, ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಸದ್ಯಕ್ಕೆ ಪೂರ್ಣ ವಿವರಗಳನ್ನು ನೀಡಲು ಸಾಧ್ಯವಿಲ್ಲ. ಸ್ವಲ್ಪ ಸಮಯ ಬೇಕು’ ಎಂದು ಹೇಳಿದರು.

ಯಾವ ಸರ್ವೆ ನಂಬರ್‌ನಲ್ಲಿ ಎಷ್ಟು ಒತ್ತುವರಿ?

ಸರ್ವೆ ನಂ 1,2,3,4ರಲ್ಲಿ ಜಂಟಿಯಾಗಿ ಒಟ್ಟು 605.26 ಎಕರೆ ಪ್ರದೇಶದ ಸರ್ವೆ ಮಾಡಲಾಗಿದೆ.

ಸರ್ವೆ ನಂ 1ರಲ್ಲಿ 5.20 ಎಕರೆ ವಿಸ್ತೀರ್ಣವಿದ್ದು ಸದರಿ ಜಮೀನು ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನದ ಆಸ್ತಿಯಾಗಿದ್ದು, ಈ ಪೈಕಿ 1.33 ಎಕರೆ ಒತ್ತುವರಿಯಾಗಿರುವುದನ್ನು ಗುರುತಿಸಲಾಗಿದೆ.

ಸರ್ವೆ ನಂ 2, 21.36 ಎಕರೆ ವಿಸ್ತೀರ್ಣವಿದ್ದು, ಈ ಜಮೀನು ಬಿಳಿಗಿರಿರಂಗನಾಥಸ್ವಾಮಿ ಮೀಸಲು ಅರಣ್ಯವಾಗಿದ್ದು, ಅರಣ್ಯ ಇಲಾಖೆಗೆ ಸೇರಿದೆ. ಈ ಪೈಕಿ, 4.8 ಎಕರೆ ಜಮೀನು ಒತ್ತುವರಿಯಾಗಿರುವುದನ್ನು ಗುರುತಿಸಲಾಗಿದೆ ಎಂದು ವರದಿ ಹೇಳಿದೆ.

ಸರ್ವೆ ನಂ 3ರಲ್ಲಿ 13.10 ಎಕರೆ ವಿಸ್ತೀರ್ಣವಿದ್ದು, ಅರಣ್ಯ ಇಲಾಖೆಗೆ ಸೇರಿದೆ. ಇದರಲ್ಲಿ 6.25 ಎಕರೆ ಒತ್ತುವರಿಯಾಗಿದೆ. 

ಸರ್ವೆ ನಂ 4ರಲ್ಲಿ ಒಟ್ಟು 22,735.06 ಎಕರೆ ವಿಸ್ತೀರ್ಣವಿದ್ದು, ಅರಣ್ಯ ಪ್ರದೇಶವಾಗಿದೆ. ಈ ಪೈಕಿ 565 ಎಕರೆ ಪ್ರದೇಶವನ್ನು ದೇವಾಲಯದ ಅಭಿವೃದ್ಧಿ ಸಂಬಂಧ ಅರಣ್ಯ ಇಲಾಖೆ ವ್ಯಾಪ್ತಿಯಿಂದ ಬಿಡುಗಡೆಗೊಳಿಸಲಾಗಿತ್ತು.

ಅರಣ್ಯ ಇಲಾಖೆಯಿಂದ ಬಿಡುಗಡೆಯಾದ ಜಮೀನು ಅನೇಕ ಜನರಿಗೆ ಇನಾಮ್ ಗ್ರಾಂಟ್, ದರಖಾಸ್ತು, ಅಕ್ರಮ ಸಕ್ರಮ ಮೂಲಕ ಮಂಜೂರಾತಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು