ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೀಸಲು’ ಕ್ಷೇತ್ರದ ಟಿಕೆಟ್‌ ಯಾರಿಗೆ ಮೀಸಲು?

ಕೊಳ್ಳೇಗಾಲ: ಟಿಕೆಟ್‌ಗೆ ಪೈಪೋಟಿ: ಕಾಂಗ್ರೆಸ್‌, ಬಿಜೆಪಿ ವರಿಷ್ಠರಿಗೆ ಅಭ್ಯರ್ಥಿ ಆಯ್ಕೆಯೇ ಸವಾಲು
Last Updated 21 ಡಿಸೆಂಬರ್ 2022, 16:28 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಜಿಲ್ಲೆಯ ಏಕೈಕ ಮೀಸಲು ವಿಧಾನಸಭಾ ಕ್ಷೇತ್ರವಾದ ಕೊಳ್ಳೇಗಾಲ ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆ. ಕಳೆದ ಚುನಾವಣೆಯಲ್ಲಿ ಬಿಎಸ್‌ಪಿ ಗೆದ್ದು, ಈ ‘ಕೋಟೆ’ಯನ್ನು ವಶಪಡಿಸಿಕೊಂಡಿತ್ತು. ಶಾಸಕ ಎನ್‌.ಮಹೇಶ್‌ ಉಚ್ಚಾಟನೆ ನಂತರ ಕೋಟೆಯ ‘ಅಡಿಪಾಯ’ ಸಡಿಲವಾಗಿದ್ದು, ಬಿಜೆಪಿ ಈಗ ಅದನ್ನು ‘ಭದ್ರ’ಪಡಿಸಲು ಯತ್ನಿಸುತ್ತಿದೆ.

ಈ ಕ್ಷೇತ್ರದಲ್ಲಿ ಕಾಂಗ್ರೆಸ್‌, ಬಿಜೆಪಿ, ಬಿಎಸ್‌ಪಿ ನಡುವೆ ತ್ರಿಕೋನ ಸ್ಪರ್ಧೆ ಇರುತ್ತದೆ. ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಕ್ಷೇತ್ರದ ರಾಜಕೀಯ ಚಿತ್ರಣ ಬದಲಾಗಿದೆ. ಹಾಗಾಗಿ, ಮುಂಬರುವ ಚುನಾವಣೆ ಕುತೂಹಲ ಹುಟ್ಟುಹಾಕಿದೆ.

ಬಿಜೆಪಿಯಲ್ಲಿ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ. ಕಾಂಗ್ರೆಸ್‌ನಲ್ಲೂ ಟಿಕೆಟ್‌ಗಾಗಿ ಪೈಪೋಟಿ ಇದೆ. ಬಿಎಸ್‌ಪಿ ಕೂಡ ಸ್ಪರ್ಧಿಸುವುದನ್ನು ಖಚಿತ ಪಡಿಸಿದೆ. ಜೆಡಿಎಸ್‌, ಎಎಪಿ, ಕೆಆರ್‌ಎಸ್‌ ಪಕ್ಷಗಳೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದೆ ಬಂದಿವೆ.

ಆಕಾಂಕ್ಷಿಗಳ ಪೈಪೋಟಿ: ಬಿಎಸ್‌ಪಿಯಿಂದ ಉಚ್ಚಾಟನೆಗೊಂಡ ಬಳಿಕ ಶಾಸಕ ಎನ್‌.ಮಹೇಶ್‌ ಬಿಜೆಪಿಗೆ ಸೇರಿದ್ದಾರೆ. ಬಹುಬೇಗ ಅವರು ‘ಕಮಲ’ ಪಾಳಯದ ತತ್ವ, ಸಿದ್ಧಾಂತ, ರಾಜಕೀಯ ಶೈಲಿಗೆ ಹೊಂದಿಕೊಂಡಿದ್ದು, ಅವರ ನಡೆ ನುಡಿ ಎಲ್ಲವೂ ‘ಬಿಜೆಪಿ’ಯೇ ಆಗಿ ಹೋಗಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ನ ಪ್ರಮುಖ ಆಕಾಂಕ್ಷಿ ಅವರು. ಮೈತ್ರಿ ಸರ್ಕಾರ ಪತನಗೊಂಡು, ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಎನ್‌.ಮಹೇಶ್‌ ಬಗ್ಗೆ ಯಡಿಯೂರಪ್ಪ ಅವರಿಗೆ ವಿಶೇಷ ಮಮಕಾರ! ‘ಮುಂದಿನ ಚುನಾವಣೆಯಲ್ಲೂ ಕ್ಷೇತ್ರದ ಜನರು ಮಹೇಶ್‌ ಅವರನ್ನು ಬೆಂಬಲಿಸಬೇಕು’ ಎಂದು ಬಹಿರಂಗ ಸಭೆಯಲ್ಲಿ ಯಡಿಯೂರಪ್ಪ ಹೇಳಿರುವುದರಿಂದ ಅವರ ಆಶೀರ್ವಾದ ತಮ್ಮ ಮೇಲೆ ಇದೆ ಎಂಬುದು ಹಾಲಿ ಶಾಸಕರ ಅಚಲವಾದ ವಿಶ್ವಾಸ.

ಎನ್‌.ಮಹೇಶ್‌ ಬಿಜೆಪಿಗೆ ಸೇರಿದ್ದು, ಕ್ಷೇತ್ರದ ಕೆಲವು ಪಕ್ಷದ ಮುಖಂಡರಿಗೆ ಪಥ್ಯವಾಗಿಲ್ಲ. ಪಕ್ಷದಿಂದ ಟಿಕೆಟ್‌ ಬಯಸುತ್ತಿರುವ ಜಿ.ಎನ್‌.ನಂಜುಂಡಸ್ವಾಮಿ ಅವರು ಇತ್ತೀಚೆಗೆ ಮಹೇಶ್‌ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಇಬ್ಬರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಆರ್‌ಎಸ್‌ಎಸ್‌ ಮುಖಂಡರು, ಪಕ್ಷದ ವರಿಷ್ಠರೊಂದಿಗೆ ‘ಸಂತೋಷ’ದ ಒಡನಾಡ ಹೊಂದಿರುವ ನಂಜುಂಡಸ್ವಾಮಿ, ಕಳೆದ ಚುನಾವಣೆಯಲ್ಲಿ ಕೊನೆ ಕ್ಷಣದಲ್ಲಿ ಟಿಕೆಟ್‌ ಪಡೆಯಲು ಯಶಸ್ವಿಯಾಗಿದ್ದರು. ‘ಈಗ ರಾಜಕೀಯ ವಾತಾವರಣ ಹೇಗಾದರೂ ಇರಲಿ. ಟಿಕೆಟ್‌ ಹಂಚಿಕೆ ಸಂದರ್ಭದಲ್ಲಿ ಈ ಬಾರಿಯೂ ಹಿಂದಿನಂತೆ ಕೊನೆ ಕ್ಷಣದಲ್ಲಿ ‘ಅಚ್ಚರಿ’ ನಡೆಯಬಹುದು’ ಎಂಬ ನಿರೀಕ್ಷೆಯಲ್ಲಿ ಅವರಿದ್ದಾರೆ.

ಇವರಿಬ್ಬರಲ್ಲದೆ, ಬಿಜೆಪಿಯಲ್ಲಿ ಇನ್ನೂ ಹಲವರು ಟಿಕೆಟ್‌ಗೆ ಲಾಬಿ ನಡೆಸುತ್ತಿದ್ದಾರೆ. ಬಿಜೆಪಿ ಎಸ್‌.ಸಿ.ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಕಿನಕಹಳ್ಳಿ ರಾಚಯ್ಯ ಅವರು ಪಕ್ಷದ ಟಿಕೆಟ್‌ ಬಯಸಿದ್ದಾರೆ.

‘ರಾಜಕೀಯದಲ್ಲಿ ಹೆಸರು ಮಾಡಬೇಕು’ ಎಂದು ಚುನಾವಣಾ ಅಖಾಡಕ್ಕೆ ಇಳಿಯಲು ತುದಿಗಾಲಿನಲ್ಲಿ ನಿಂತಿರುವ ಪೊಲೀಸ್‌ ಇನ್‌ಸ್ಪೆಕ್ಟರ್‌ ಬಿ.ಪುಟ್ಟಸ್ವಾಮಿ ಬಿಜೆಪಿ ಟಿಕೆಟ್‌ಗೆ ಯತ್ನಿಸುತ್ತಿದ್ದಾರೆ. ತಮ್ಮ ಅಭಿಮಾನಿ ಬಳಗದ ಮೂಲಕ ಕ್ಷೇತ್ರದ ಜನರನ್ನು ತಲುಪುವ ಪ್ರಯತ್ನ ಮಾಡುತ್ತಿದ್ದಾರೆ.ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅಳಿಯ ಡಾ.ಮೋಹನ್‌ಕುಮಾರ್‌ ಕೂಡ ಬಿಜೆಪಿ ಟಿಕೆಟ್‌ ಆಕಾಂಕ್ಷಿ.

ಬಿಎಸ್‌ಪಿಗೆ ಯಾರು?: ಕ್ಷೇತ್ರದಲ್ಲಿ ಸದೃಢವಾಗಿದ್ದ ಬಿಎಸ್‌ಪಿ, ಈಗಲೂ ಪ್ರಾಬಲ್ಯ ಉಳಿಸಿಕೊಂಡಿದೆ ಎಂದು ಅವರ ಕಾರ್ಯಕರ್ತರು ಎದೆ ತಟ್ಟಿಕೊಂಡು ಹೇಳುವ ಪರಿಸ್ಥಿತಿ ಈಗಿಲ್ಲ. ಇತ್ತೀಚೆಗೆ ನಡೆದ ನಗರಸಭೆ ಉಪ ಚುನಾವಣೆಯಲ್ಲಿ ಪಕ್ಷ ನೀರಸ ಪ್ರದರ್ಶನ ನೀಡಿರುವುದು ಅದಕ್ಕೆ ಕಾರಣ. ಎನ್‌.ಮಹೇಶ್‌ ಉಪಸ್ಥಿತಿಯಲ್ಲಿ ಪಕ್ಷ ಕೊಳ್ಳೇಗಾಲ ಕ್ಷೇತ್ರದಲ್ಲಿ ಬಲಿಷ್ಠವಾಗಿತ್ತು. ಅವರು ದೂರವಾದ ಮೇಲೆ ಪಕ್ಷ ದುರ್ಬಲವಾಗಿದೆ. ಆದರೆ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಾಯಕರು ಕ್ಷೇತ್ರದಲ್ಲಿ ಬಿಎಸ್‌ಪಿಯನ್ನು ತಳಮಟ್ಟದಿಂದ ಸಂಘಟಿಸಲು ಪ್ರಯತ್ನಿಸುತ್ತಿದ್ದಾರೆ.

ಬಿಎಸ್‌ಪಿಯಿಂದ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಕಮಲ್‌ ನಾಗರಾಜು, ಬೆಂಗಳೂರಿನಲ್ಲಿ ವಕೀಲರಾಗಿರುವ ಮೋಹನ್ ಕುಮಾರ್ ಟಿಕೆಟ್‌ ಬಯಸುತ್ತಿದ್ದಾರೆ.

ಕ್ಷೇತ್ರದಲ್ಲಿ ಜೆಡಿಎಸ್‌ ಅಸ್ತಿತ್ವ ಗಟ್ಟಿಯಾಗಿಲ್ಲ. ಹಾಗಿದ್ದರೂ, ಮುಖಂಡರಾದ ಚಾಮರಾಜು, ಶಿವಮಲ್ಲು ಪಕ್ಷದ ಟಿಕೆಟ್‌ನಿಂದ ಸ್ಪರ್ಧಿಸಲು ಪ್ರಯತ್ನಿಸುತ್ತಿದ್ದಾರೆ. ಆಮ್‌ ಆದ್ಮಿ ಪಾರ್ಟಿಯಿಂದ ಕೆಂಪರಾಜು ಕಣಕ್ಕಿಳಿಯಲು ಬಯಸಿದ್ದಾರೆ.

ಕಾಂಗ್ರೆಸ್‌ನಲ್ಲಿ ಐವರ ಪೈಪೋಟಿ

ಕಾಂಗ್ರೆಸ್‌ನಲ್ಲೂ ಟಿಕೆಟ್‌ಗಾಗಿ ಸ್ಪರ್ಧೆ ಇದೆ. ಮೂವರು ಮಾಜಿ ಶಾಸಕರಾದ ಎ.ಆರ್‌. ಕೃಷ್ಣಮೂರ್ತಿ, ಎಸ್‌.ಜಯಣ್ಣ ಹಾಗೂ ಎಸ್‌.ಬಾಲರಾಜು ಟಿಕೆಟ್‌ ಬಯಸಿದ್ದಾರೆ. ಇದರ ಜೊತೆಗೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಹಾಗೂ ಮುಖಂಡ ದರ್ಶನ್‌ ಸೋಮಶೇಖರ್‌ ಕೂಡ ಕೆಪಿಸಿಸಿಗೆ ಅರ್ಜಿ ಹಾಕಿದ್ದಾರೆ.

ವರಿಷ್ಠರು ಎಸ್‌.ಜಯಣ್ಣ ಇಲ್ಲವೇ ಎಸ್‌.ಬಾಲರಾಜು ಇಬ್ಬರಲ್ಲಿ ಒಬ್ಬರಿಗೆ ಮಣೆ ಹಾಕಲಿದ್ದಾರೆ ಎಂಬ ವದಂತಿ ಇತ್ತೀಚೆಗೆ ಹರಡಿತ್ತು. ಇದಕ್ಕೆ ಕೃಷ್ಣಮೂರ್ತಿ ಅವರು, ‘ವರಿಷ್ಠರು ಇನ್ನೂ ನಿರ್ಧಾರ ಮಾಡಿಲ್ಲ. ಅದು ಸುಳ್ಳು ಸುದ್ದಿ’ ಎಂದು ತಮ್ಮ ಬೆಂಬಲಿಗರಿಗೆ ಸ್ಪಷ್ಟನೆಯನ್ನೂ ನೀಡಿದ್ದರು.

ಬಿ.ರಾಚಯ್ಯ ಅವರ ಹಿರಿಯ ಮಗನಾಗಿರುವ ಕೃಷ್ಣಮೂರ್ತಿ, ಸಿದ್ದರಾಮಯ್ಯ ಅವರಿಗೆ ಆಪ್ತರು. ಇತರ ಮುಖಂಡರೊಂದಿಗೆ ಬಾಂಧವ್ಯ ಹೊಂದಿದ್ದಾರೆ. ಎಸ್‌.ಜಯಣ್ಣ ಕೂಡ ಹಿಂದೆ ಶಾಸಕರಾಗಿ ಹೆಸರು ಮಾಡಿದವರು. ರಾಜ್ಯ ಮುಖಂಡರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಅವರಿಗೆ ಆಪ್ತರಾಗಿರುವ ಎಸ್‌.ಬಾಲರಾಜು ಅವರು ಪಕ್ಷದ ಯುವ ಮುಖ. ಕ್ಷೇತ್ರದಲ್ಲಿ ಓಡಾಡುತ್ತಾ ಜನರೊಂದಿಗೆ ಬೆರೆಯುತ್ತಿದ್ದಾರೆ.

‘ಮೂವರೂ ತಮ್ಮದೇ ಬೆಂಬಲಿಗರ ಪಡೆ ಹೊಂದಿದ್ದಾರೆ. ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡರೂ ಪರಸ್ಪರ ಸಾಮರಸ್ಯ ಇಲ್ಲ’ ಎಂಬುದು ಪಕ್ಷದ ಕಾರ್ಯಕರ್ತರ ಮಾತು.

ಮೈಸೂರಿನವರಾದ ಪುಷ್ಪಾಅಮರನಾಥ್‌, ಕೊಳ್ಳೇಗಾಲ ಕ್ಷೇತ್ರವನ್ನು ಬಲ್ಲವರು. ದರ್ಶನ್‌ ಇನ್ನೂ 25 ವರ್ಷದ ಯುವಕ. ರಾಜಕೀಯದಲ್ಲಿ ಬೆಳೆಯಬೇಕು ಎನ್ನುವ ಮಹತ್ವಾಕಾಂಕ್ಷೆ ಅವರಲ್ಲಿದೆ.

ಕೆಪಿಸಿಸಿ ವರಿಷ್ಠರು ಯಾರಿಗೆ ಮಣೆ ಹಾಕಲಿದ್ದಾರೆ ಎಂಬ ಕುತೂಹಲ ಕಾಂಗ್ರೆಸ್‌ ಮಾತ್ರವಲ್ಲದೆ, ಇಡೀ ರಾಜಕೀಯ ವಲಯದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT