ಸೋಮವಾರ, ಜನವರಿ 17, 2022
21 °C

ರಕ್ತ ಕುಡಿಯುವವರು, ರಾಕ್ಷಸರು ವಿಧಾನಸೌಧದಲ್ಲಿದ್ದಾರೆ; ಸಿದ್ದರಾಮಯ್ಯ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಮನುಷ್ಯರ ರಕ್ತ ಕುಡಿಯುವವರು, ರಾಕ್ಷಕರು ವಿಧಾನಸೌಧದಲ್ಲಿ ಬಂದು ಕುಳಿತಿದ್ದಾರೆ. ಅವರನ್ನು ಒದ್ದು ಓಡಿಸುವುದಕ್ಕಾಗಿ ಈಗಿನಿಂದಲೇ ಚುನಾವಣೆಗೆ ತಯಾರಾಗಿ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಾರ್ಯಕರ್ತರಿಗೆ ಭಾನುವಾರ ಕರೆ ನೀಡಿದರು. 

ಜಿಲ್ಲಾ ಕಾಂಗ್ರೆಸ್‌ ಸಮಿತಿ ವತಿಯಿಂದ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್‌ ಸದಸ್ಯತ್ಯ ಅಭಿಯಾನ ಮತ್ತು ಮೇಕೆದಾಟು ಪಾದಯಾತ್ರೆಗೆ ಸಂಬಂಧಿಸಿದ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬಿಜೆಪಿಯ ದುರಾಡಳಿತ, ಜನ ವಿರೋಧಿ ಆಡಳಿತ, ಭ್ರಷ್ಟಾಚಾರದ ಬಗ್ಗೆ ಹೇಳುತ್ತಾ ಹೋದರೆ ಇಡೀ ದಿನ ಬೇಕು. ಅಂತಹ ನೀಚರು, ಜನವಿರೋಧಿಗಳು, ಭಷ್ಟರು ಕರ್ನಾಟಕದ ಇತಿಹಾಸದಲ್ಲಿ ಯಾರೂ ಬಂದಿರಲಿಲ್ಲ’ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. 

‘ಶೇ 40ರ ಸರ್ಕಾರ ಇದು. ನಮ್ಮ ಸರ್ಕಾರದ ಸಮಯದಲ್ಲಿ ಮಂಜೂರಾದ ಹಣವನ್ನು ಕಮಿಷನ್‌ ಕೊಟ್ಟಿಲ್ಲ ಅಂತ ಬಿಡುಗಡೆ ಮಾಡಿಲ್ಲ. ವಿಧಾನಸೌಧದ ಕಲ್ಲು ಕಲ್ಲು ಕೂಡ ಇದನ್ನು ಹೇಳುತ್ತದೆ. ಕೆಂಗಲ್‌ ಹನುಮಂತಯ್ಯ ಜನರ ಕೆಲಸ ದೇವರ ಕೆಲಸ ಅಂತ ಹೇಳುತ್ತಿದ್ದರು. ಈಗ... ಎಲ್ಲರೂ ರಾಕ್ಷಸರು ಬಂದು ಕುಳಿತಿದ್ದಾರೆ’ ಎಂದರು. 

‘ಎರಡೂವರೆ ವರ್ಷದ ಅವಧಿಯಲ್ಲಿ ಒಂದು ಅಭಿವೃದ್ಧಿ ಕೆಲಸ ನಡೆದಿಲ್ಲ. ಜನರಿಗೆ ಮನೆ, ನಿವೇಶನ ಕೊಟ್ಟಿಲ್ಲ. ಅನುದಾನವನ್ನೂ ಮಂಜೂರು ಮಾಡಿಲ್ಲ. ಜಿಲ್ಲೆಯ ಅಭಿವೃದ್ಧಿಗೂ ಏನೂ ಮಾಡಿಲ್ಲ. ರಾಜ್ಯದ ಜನರಿಗೆ ತುಂಬಾ ಅನ್ಯಾಯವಾಗಿದೆ. ಇಂತಹ ಸರ್ಕಾರ ತೊಲಗಬೇಕೋ ಬೇಡ್ವೋ’ ಎಂದು ಅವರು ನೆರೆದಿದ್ದವರನ್ನು ಪ್ರಶ್ನಿಸಿದರು. 

ಜಿಲ್ಲೆಯಲ್ಲಿ ನಡೆದ ಆಮ್ಲಜನಕ ದುರಂತವನ್ನು ಪ್ರಸ್ತಾಪಿಸಿದ ಅವರು, ‘ಆಮ್ಲಜನಕ ಕೊರತೆಯಿಂದ 36 ಕೋವಿಡ್‌ ರೋಗಿಗಳು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿ, ಆಸ್ಪತ್ರೆಯ ನಿರ್ದೇಶಕ ಮತ್ತು ವೈದ್ಯರು ನಮಗೆ ಹೇಳಿದ್ದರು. ಆದರೆ, ಆರೋಗ್ಯ ಸಚಿವ ಡಾ.ಸುಧಾಕರ್‌, ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ ಕುಮಾರ್‌ ಅವರು ಕೇವಲ ಮೂರು ಜನರು ಮಾತ್ರ ಮೃತಪಟ್ಟಿದ್ದಾರೆ ಎಂದು ಸುಳ್ಳು ಹೇಳಿ ಜನದ್ರೋಹದ ಕೆಲಸ ಮಾಡಿದ್ದರು’ ಎಂದು ಕಿಡಿ ಕಾರಿದರು.  

ಬಿಜೆಪಿ ಕತ್ತರಿ, ಕಾಂಗ್ರೆಸ್‌ ಸೂಜಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಮಾತನಾಡಿ, ‘ಕಬ್ಬಿಣದಿಂದ ಕತ್ತರಿಯನ್ನು ಮಾಡಬಹುದು, ಸೂಜಿಯನ್ನೂ ತಯಾರಿಸಬಹುದು. ರಾಜ್ಯದಲ್ಲಿ ಬಿಜೆಪಿಯು ಕತ್ತರಿಯಂತೆ ಸಮಾಜವನ್ನು ಭಾಗ ಮಾಡುವ ಕೆಲಸ ಮಾಡುತ್ತಿದ್ದರೆ, ಕಾಂಗ್ರೆಸ್‌ ಸಮಾಜವನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಮಾಡಿರುವ ಕಾರ್ಯಕ್ರಮಗಳು ಕಣ್ಣಿಗೆ ಕಾಣಿಸುತ್ತಿದ್ದರೆ, ಬಿಜೆಪಿ ಸರ್ಕಾರದ ಕಾರ್ಯಕ್ರಮಗಳು ಕಿವಿಗೆ ಮಾತ್ರ ಕೇಳಿಸುತ್ತಿವೆ’ ಎಂದು ವ್ಯಂಗ್ಯವಾಡಿದರು. 

‘ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಇದೇ 9ರಿಂದ 19ರವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆ ಬಗ್ಗೆ ಮಾತನಾಡಿದ ಅವರು, ‘ನಮ್ಮ ಸರ್ಕಾರದಲ್ಲಿ ಈ ಯೋಜನೆ ರೂಪಿಸಲಾಗಿತ್ತು. ಇನ್ನೂ ಅನುಷ್ಠಾನಗೊಂಡಿಲ್ಲ. ನಮ್ಮ ನೀರು ನಮ್ಮ ಹಕ್ಕು. ಈ ಯೋಜನೆಯಿಂದ ನಮ್ಮ ಜಿಲ್ಲೆ, ನಿಮ್ಮ ಜಿಲ್ಲೆಗಳಿಗೆ ಅನುಕೂಲವಾಗಲಿದೆ’ ಎಂದರು.   

‘ಐತಿಹಾಸಿಕವಾದ ಈ ಪಾದಯಾತ್ರೆಗೆ ಪಕ್ಷ, ಜಾತಿಯ ಭೇದ ಇಲ್ಲ. ಎಲ್ಲ ಪಕ್ಷಗಳು, ಸಂಘಟನೆಗಳು ಇದರಲ್ಲಿ ಭಾಗವಹಿಸಬಹುದು. ಮೊದಲೇ ನೋಂದಣಿ ಮಾಡಬೇಕು. ಪ್ರತಿ ವಿಧಾನಸಭಾ ಕ್ಷೇತ್ರದಿಂದ ಕನಿಷ್ಠ 2,500 ಜನರಂತೆ ಜಿಲ್ಲೆಯಿಂದ 10 ಸಾವಿರ ಜನರು ಮೊದಲ ದಿನವೇ ಭಾಗವಹಿಸಬೇಕು’ ಎಂದರು. 

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಶಾಸಕರಾದ ಪುಟ್ಟರಂಗಶೆಟ್ಟಿ, ಆರ್‌.ನರೇಂದ್ರ, ವಿಧಾನಪರಿಷತ್‌ ಸದಸ್ಯ ಡಾ.ತಿಮ್ಮಯ್ಯ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಪುಷ್ಪಾ ಅಮರನಾಥ್‌, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ, ಮುಖಂಡರಾದ ಎ.ಆರ್‌.ಕೃಷ್ಣಮೂರ್ತಿ, ಬಾಲರಾಜ್‌, ಜಯಣ್ಣ, ಆರ್‌.ಉಮೇಶ್‌, ಗಣೇಶ್‌ ಪ್ರಸಾದ್‌ ಸೇರಿದಂತೆ ಜಿಲ್ಲಾ ಸಮಿತಿಯ ಪದಾಧಿಕಾರಿಗಳು, ಮುಖಂಡರು ಇದ್ದರು. 

ದೇವಸ್ಥಾನ ಭೇಟಿ, ಪಾದಯಾತ್ರೆ

ಕೊಳ್ಳೇಗಾಲದಿಂದ ಒಂದು ವಾಹನದಲ್ಲಿ ಬಂದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರು ನೇರವಾಗಿ ಚಾಮರಾಜೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಅಲ್ಲಿಂದ ಪ್ರವಾಸಿ ಮಂದಿರಕ್ಕೆ ತೆರಳಿದರು. 

ಪ್ರವಾಸಿ ಮಂದಿರದಿಂದ, ಕಾರ್ಯಕ್ರಮ ಆಯೋಜನೆಯಾಗಿದ್ದ ಹಳೆ ಬಸ್‌ ನಿಲ್ದಾಣದವರೆಗೆ ಪಾದಯಾತ್ರೆ ನಡೆಸಿದರು. ನಾಲ್ಕೂ ವಿಧಾನಸಭಾ ಕ್ಷೇತ್ರಗಳಿಂದ ಭಾರಿ ಸಂಖ್ಯೆಯಲ್ಲಿ ಬಂದಿದ್ದ ಮುಖಂಡರು ಹಾಗೂ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡರು. 

--

ಮೇಕೆದಾಟು ಯೋಜನೆ ಜಾರಿಗಾಗಿ ಮೇಕದಾಟು ಪಾದಯಾತ್ರೆ ನಡೆಸಲಾಗುತ್ತಿದ್ದು, ಜಿಲ್ಲೆಯಿಂದ ಕನಿಷ್ಠ 10 ಸಾವಿರ ಮಂದಿ ಇದರಲ್ಲಿ ಭಾಗವಹಿಸಬೇಕು

- ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

--

ಮುಂದಿನ ಚುನಾವಣೆಯಲ್ಲೂ ಇದೇ ಐಕ್ಯತೆ, ಒಗ್ಗಟ್ಟು ಪ್ರದರ್ಶಿಸಬೇಕು. ಜಿಲ್ಲೆಯಲ್ಲಿ ನಾಲ್ಕಕ್ಕೆ ನಾಲ್ಕೂ ಸ್ಥಾನಗಳನ್ನೂ ನಾವು ಗೆಲ್ಲಬೇಕು

- ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

--

ಮಾರ್ಚ್‌ 31ರೊಳಗೆ ಪಕ್ಷದ ಸದಸ್ಯತ್ವ ನೋಂದಣಿ ಪೂರ್ಣಗೊಳ್ಳಬೇಕು. ಆ ನಿಟ್ಟಿನಲ್ಲಿ ಎಲ್ಲ ಮುಖಂಡರು ಇದರ ಯಶಸ್ಸಿಗೆ ಶ್ರಮಿಸಬೇಕು

- ಆರ್‌.ಧ್ರುವನಾರಾಯಣ, ಕೆಪಿಸಿಸಿ ಕಾರ್ಯಾಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು