ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ: ಹಳ್ಳ ಬಿದ್ದ ರಸ್ತೆಯಲ್ಲಿ ಸಂಚಾರ ಸರ್ಕಸ್‌

ಕೊಳ್ಳೇಗಾಲ: ಎಪಿಎಂಸಿ ಮುಖ್ಯರಸ್ತೆಯ ದುಃಸ್ಥಿತಿ, ಸ್ಥಳೀಯರ ಆಕ್ರೋಶ
Last Updated 9 ಸೆಪ್ಟೆಂಬರ್ 2020, 19:45 IST
ಅಕ್ಷರ ಗಾತ್ರ

ಕೊಳ್ಳೇಗಾಲ: ನಗರದ ಎಪಿಎಂಸಿ ಮಾರುಕಟ್ಟೆಯ ಮುಖ್ಯ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಹೊಂಡ ಗುಂಡಿಗಳಿಂದ ಕೂಡಿದೆ.

ಸ್ವಲ್ಪ ಮಳೆ ಬಂದರೂ ರಸ್ತೆ ಕೆಸರು ಗದ್ದೆಯಾಗಿ ಬದಲಾಗುತ್ತದೆ. ಪಾದಚಾರಿಗಳು ಹಾಗೂ ವಾಹನ ಸವಾರರು ಪರದಾಡಬೇಕಾಗುತ್ತದೆ.ಮೂರ್ನಾಲ್ಕು ದಿನಗಳಿಂದ ನಗರದಲ್ಲಿ ಮಳೆಯಾಗುತ್ತಿದ್ದು, ಸಂಚಾರ ದುಸ್ತರವಾಗಿದೆ.

ರಸ್ತೆಯ ಅಭಿವೃದ್ಧಿಗಾಗಿ ನಗರೋತ್ಥಾನ ಯೋಜನೆಯ ಅಡಿಯಲ್ಲಿ ₹2.17 ಕೋಟಿ ಬಿಡುಗಡೆಯಾಗಿತ್ತು. ಮೂರು ವರ್ಷಗಳ ಹಿಂದೆ ಅಂದಿನ ಶಾಸಕ ಎಸ್‌.ಜಯಣ್ಣ ಅವರು ಕಾಮಗಾರಿಗೆ ಚಾಲನೆ ನೀಡಿದ್ದರು.

ಐಬಿ ವೃತದಿಂದ 675 ಮೀಟರ್ ಕೆಎಸ್ಆರ್‌ಟಿಸಿ ಡಿಪೊವರೆಗೆ ರಸ್ತೆ ಮತ್ತು ಚರಂಡಿ ಕಾಮಗಾರಿ ಪೂರ್ಣಗೊಂಡಿದೆ. ಅಲ್ಲಿಂದ 400 ಮೀಟರ್ ಉದ್ದದ ರಸ್ತೆ, ಚರಂಡಿ ಕಾಮಗಾರಿ ಮುಕ್ತಾಯವಾಗಿಲ್ಲ. ಎರಡೂ ಕಾಮಗಾರಿಗಳನ್ನು ಬೇರೆ ಬೇರೆ ಗುತ್ತಿಗೆದಾರರಿಗೆ ವಹಿಸಲಾಗಿತ್ತು. ಒಬ್ಬರು ಪೂರ್ಣಗೊಳಿಸಿದ್ದರೆ, ಇನ್ನೊಬ್ಬರು ಮುಗಿಸಿಲ್ಲ.

ನಿವಾಸಿಗಳಿಗೆ ತೊಂದರೆ: ರಸ್ತೆ ಸರಿ ಇಲ್ಲದಿರುವುದರಿಂದ ಅಲ್ಲಿನ ಬಡಾವಣೆಯ ನಿವಾಸಿಗಳಿಗೆ ತೊಂದರೆಯಾಗಿದೆ. ತಾಲ್ಲೂಕಿನ ಲಕ್ಕರಸನಪಾಳ್ಯ, ಕೆಂಪನಪಾಳ್ಯ, ತಿಮ್ಮರಾಜೀಪುರ, ಕುರುಬನಕಟ್ಟೆ, ಕರಳಕಟ್ಟೆ, ಜಕ್ಕಳಿ, ಸೇರಿದಂತೆ 10 ಕ್ಕೂ ಹೆಚ್ಚು ಹಳ್ಳಿಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಪ್ರತಿನಿತ್ಯ ಈ ರಸ್ತೆಯಲ್ಲಿ ನೂರಾರು ಜನರು ಓಡಾಡುತ್ತಾರೆ. ಕಾಮಗಾರಿ ಪೂರ್ಣಗೊಳ್ಳದಿರುವುದರಿಂದ ಬೇಸಿಗೆಯಲ್ಲಿ ದೂಳಿನ ಹಾವಳಿಯಾದರೆ, ಮಳೆಗಾಲದಲ್ಲಿ ಕೆಸರಿನ ಸಮಸ್ಯೆ.

'ಸೋಮವಾರ ಮತ್ತು ಶುಕ್ರವಾರ ಕುರುಬನ ಕಟ್ಟೆಯ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ರಸ್ತೆ ಸರಿ ಇಲ್ಲದಿರುವುದರಿಂದ ಭಕ್ತರಿಗೆ ತೊಂದರೆಯಾಗುತ್ತಿದೆ. ಸ್ಥಳೀಯರ ಸಂಚಾರಕ್ಕೂ ತೊಡಕಾಗುತ್ತಿದೆ. ನಗರಸಭೆ ಅಧಿಕಾರಿಗಳು, ಜನ ಪ್ರತಿನಿಧಿಗಳು ಇತ್ತ ಗಮನಹರಿಸಿ ಕಾಮಗಾರಿ ನಡೆಸುವುದಕ್ಕೆ ಕ್ರಮ ಕೈಗೊಳ್ಳಬೇಕು' ಎಂದು ಸ್ಥಳಿಯ ನಿವಾಸಿ ಅವಿನಾಶ್ ಅವರು ಒತ್ತಾಯಿಸಿದರು.

'ಪ್ರತಿನಿತ್ಯ ಈ ರಸ್ತೆಯಲ್ಲೇ ಸಂಚಾರ ಮಾಡಬೇಕು. ಮಳೆ ಬಂದರೆ ಸಾಕು ಕೆಸರು ಗದ್ದೆಯಾಗುತ್ತದೆ. ಓಡಾಡುವುದಕ್ಕೇ ಬೇಸರವಾಗುತ್ತದೆ' ಎಂದು ಸ್ಥಳೀಯ ನಿವಾಸಿ ಸಮೀರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಬಗ್ಗೆ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ನಗರಸಭೆ ಆಯುಕ್ತ ನಾಗಶೆಟ್ಟಿ ಅವರು, 'ಈಗಾಗಲೇ ನಾವು ಗುತ್ತಿಗೆದಾರರಿಗೆ ನೋಟಿಸ್ ನೀಡಿದ್ದೇವೆ. ಟೆಂಡರ್ ರದ್ದು ಮಾಡಿ ಶೀಘ್ರವೇ ಕಾಮಗಾರಿ ಆರಂಭಿಸಲು ತಿರ್ಮಾನ ಕೈಗೊಳ್ಳಲಾಗಿದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT