ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹನೂರು | ಕೆಟ್ಟು ನಿಲ್ಲುವ ಬಸ್‌: ಪ್ರಯಾಣಿಕರಲ್ಲಿ ಆತಂಕ

ಸಾರಿಗೆ ಬಸ್‌ ಅವಾಂತರಕ್ಕೆ ಪ್ರಯಾಣಿಕರು ಹೈರಾಣ
Published 2 ಜುಲೈ 2024, 4:39 IST
Last Updated 2 ಜುಲೈ 2024, 4:39 IST
ಅಕ್ಷರ ಗಾತ್ರ

ಹನೂರು: ಕೊಳ್ಳೇಗಾಲದಿಂದ ಲೊಕ್ಕನಹಳ್ಳಿ ಮಾರ್ಗದಲ್ಲಿ ಸಂಚರಿಸುವ ಸಾರಿಗೆ ಬಸ್‌ಗಳು ಪ್ರತಿದಿನ ಒಂದಲ್ಲ ಒಂದು ಸಮಸ್ಯೆಯನ್ನು ತೊಂದೊಡುತ್ತಿದ್ದು ಪ್ರಯಾಣಿಕರು ಪರಿತಪಿಸುವಂತಾಗಿದೆ. ಸುಸ್ಥಿಯಲ್ಲಿರದ ಹಳೆಯ ಬಸ್‌ಗಳು ಅಲ್ಲಲ್ಲಿ ಕೆಟ್ಟು ನಿಲ್ಲುತ್ತಿದ್ದು ಪ್ರತಿದಿನ ಸಾರಿಗೆ ಬಸ್‌ಗಳನ್ನೇ ಅವಲಂಬಿಸಿರುವ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ.

ಪ್ರತಿನಿತ್ಯ ಜೀವ ಭಯದಿಂದ ಬಸ್‌ಗಳಲ್ಲಿ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್ ಎಲ್ಲಿ ಕೆಟ್ಟು ನಿಲ್ಲುವುದೋ, ಅನಾಹುತಗಳು ಸಂಭವಿಸುವುದೋ ಎಂಬ ಭೀತಿಯಲ್ಲಿ ಪ್ರಯಾಣಿಕರು ಪ್ರಯಾಣಿಸಬೇಕಿದೆ. ಜತೆಗೆ ಬಸ್‌ಗಳಿಗೆ ಕಾದು ಕಾದು ಬಸವಳಿದು ಬೆಂಡಾಗುತ್ತಿದ್ದಾರೆ.

ಕೊಳ್ಳೇಗಾಲದಿಂದ ಹೊರಡುವ ಸಾರಿಗೆ ಬಸ್‌ಗಳು ಮಧುವನಹಳ್ಳಿ, ಹಿಂದ್ವಾಡಿ, ಕಾಮಗೆರೆ, ಮಂಗಲ, ಕಣ್ಣೂರು, ಚೆನ್ನಲಿಂಗನಹಳ್ಳಿ ಮೂಲಕ ಲೊಕ್ಕನಹಳ್ಳಿ ಮಾರ್ಗವಾಗಿ ಪಿ.ಜಿ. ಪಾಳ್ಯ, ಒಡೆಯರಪಾಳ್ಯ, ಬೈಲೂರು ಗ್ರಾಮಗಳಿಗೆ ತೆರಳುತ್ತವೆ. ಆದರೆ, ಕೊಳ್ಳೇಗಾಲ, ಮಧುವನಹಳ್ಳಿ, ಗುಂಡಾಲ್, ಲೊಕ್ಕನಹಳ್ಳಿ ಮುಖ್ಯ ರಸ್ತೆಯಲ್ಲಿ ಸಂಚರಿಸುವ ಬಹುತೇಕ ಸರ್ಕಾರಿ ಬಸ್‌ಗಳು ಅಲ್ಲಲ್ಲಿ ಕೆಟ್ಟು ನಿಲ್ಲುವುದು ಸರ್ವೆ ಸಾಮಾನ್ಯವಾಗಿದೆ.

ಬಸ್‌ಗಳಲ್ಲಿ ತೆರಳುವಾಗ ಟೈರ್‌ಗಳು ಸಿಡಿಯುವುದು, ರಸ್ತೆ ಬದಿಯ ಹಳ್ಳ ಕೊಳ್ಳಗಳಿಗೆ ಇಳಿಯುವುದು ಸಾಮಾನ್ಯ ಎನ್ನುವಂತಾಗಿದೆ. ಮಂಗಲ, ಕಣ್ಣೂರು, ಚೆನ್ನಾಲಿಂಗನಹಳ್ಳಿ ಮೂಲಕ ಲೊಕ್ಕನಹಳ್ಳಿ ಮುಖ್ಯ ರಸ್ತೆಯಲ್ಲಿ ಸಾಗುವ ಸರ್ಕಾರಿ ಬಸ್‌ಗಳು ಸತತವಾಗಿ ವಾರದಿಂದ ಒಂದಲ್ಲ ಒಂದು ಕಾರಣಕ್ಕೆ ನಿಗದಿತ ಸಮಯಕ್ಕೆ ಬರುತ್ತಿಲ್ಲ. ಇದನ್ನು ಖಂಡಿಸಿ ಬೈಲೂರು ಶಾಲಾ ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಈ ಮಾರ್ಗದ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಈ ಬಸ್‌ಗಳನ್ನೇ ನೆಚ್ಚಿಕೊಂಡಿದ್ದು ಸಮಸ್ಯೆ ಗಂಭೀರವಾಗಿದೆ.

ನಿರಂತರವಾಗಿ ಬಸ್‌ಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾತ್ರ ಈ‌ ಮಾರ್ಗಕ್ಕೆ ಗುಣಮಟ್ಟದ ಹಾಗೂ ಸುಸ್ಥಿತಿಯಲ್ಲಿ ರುವ ಬಸ್‌ಗಳನ್ನು ಓಡಿಸಲು ಮನಸ್ಸು ಮಾಡುತ್ತಿಲ್ಲ ಎಂಬುದು ಈ ಭಾಗದ ಜನರ ಆರೋಪ.

ಲೊಕ್ಕನಹಳ್ಳಿ ಪಿ. ಜಿ.ಪಾಳ್ಯ ಬೈಲೂರು ಮಾರ್ಗದಲ್ಲಿ ಸಂಚರಿಸುವ ಬಸ್‌ಗಳು ಈಗಾಗಲೇ ಹಲವು ಅವಘಡಳಿಗೆ ಕಾರಣವಾಗಿವೆ. ಈ ಮಾರ್ಗದಲ್ಲಿ ಹಲವು ಸಾವು ನೋವುಗಳು ಸಂಭವಿಸಿವೆ. ಈಚೆಗೆ ಸಂಭವಿಸಿದ ಕುಡುವಾಳೆ ಹಳ್ಳ ಬಸ್ ದುರಂತದಲ್ಲಿ ಮೂವರು ಸಾವಿಗೀಡಾಗಿದ್ದರು. ಈಚೆಗೆ ಇದೇ ಮಾರ್ಗದಲ್ಲಿ ಚಲಿಸುತ್ತಿದ್ದ ಬಸ್ ಮಗುಚಿ ಶಿಕ್ಷಕರು ಸೇರಿದಂತೆ ಹಲವು ಪ್ರಯಾಣಿಕರು ಗಾಯಗೊಂಡಿದ್ದರು.

ಸೋಮವಾರ ಕೂಡ ಮಂಗಲ ಕಣ್ಣೂರು ಮಾರ್ಗವಾಗಿ ತೆರಳುವ ಬಸ್ ಕೆಟ್ಟು ನಿಂತ ಪರಿಣಾಮ ಈ ಭಾಗದಲ್ಲಿ ಸಂಚರಿಸುತ್ತಿದ್ದ ಶಿಕ್ಷಕರು ನಿಗದಿತ ಸಮಯಕ್ಕೆ ಶಾಲೆಗಳಿಗೆ ತೆರಳಲು ಸಾಧ್ಯವಾಗದೆ ತೊಂದರೆ ಅನುಭವಿಸಿದರು.

ಸಮಯಕ್ಕೆ ಸರಿಯಾಗಿ ಶಾಲಾ ಕಾಲೇಜು, ಕಚೇರಿ ತಲುಪದ ಪ್ರಯಾಣಿಕರು ಅಲ್ಲಲ್ಲಿ ಕೆಟ್ಟು ನಿಲ್ಲುವ ಸರ್ಕಾರಿ ಸಾರಿಗೆ ಬಸ್‌ಗಳು ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತೊಂದರೆ

ಸಾರಿಗೆ ಬಸ್‌ಗಳು ತಡವಾಗಿ ಬರುತ್ತಿರುವುದರಿಂದ ಶಾಲೆಗಳಿಗೆ ತಡವಾಗಿ ಹೋಗಬೇಕಾಗಿದೆ. ಕೆಲವು ಬಾರಿ ಗಂಟೆಗಟ್ಟಲೆ ಕಾದರು ಬಸ್‌ಗಳು ಬರುವುದಿಲ್ಲ. ಸರ್ಕಾರ ಹೊಸ ಹಾಗೂ ಹೆಚ್ಚುವರಿ ಬಸ್‌ಗಳನ್ನು ಓಡಿಸಲಿ

–ಮಹದೇವ್‌ ವಿದ್ಯಾರ್ಥಿ

ಬಸ್‌ಗಳು ಆಗಾಗ ಕೆಟ್ಟು ನಿಲ್ಲುವುದರಿಂದ ಕಚೇರಿಗಳಿಗೆ ತಡವಾಗಿ ಹೋಗಬೇಕಾಗಿದೆ. ಕೊಳ್ಳೆಗಾಲ ಲೊಕ್ಕನಹಳ್ಳಿ ಮಾರ್ಗದಲ್ಲಿ ಸುಸ್ಥಿತಿಯಲ್ಲಿರುವ ಬಸ್‌ಗಳನ್ನು ಓಡಿಸಲಿ

–ಸರ್ಕಾರಿ ನೌಕರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT