ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಸ್ಥಾನಗಳ ಆಸ್ತಿ ಸರ್ವೆ ಮಾಡಲು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

ಶಾಸಕರು, ಅಧಿಕಾರಿಗಳೊಂದಿಗೆ ಮುಜರಾಯಿ ಸಭೆ
Last Updated 17 ಜುಲೈ 2021, 3:35 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿರುವ ದೇವಾಲಯಗಳ ಆಸ್ತಿಯನ್ನು ಸರ್ವೆ ಮಾಡಿ, ಅವುಗಳನ್ನು ರಕ್ಷಿಸಲು ಕ್ರಮ ವಹಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಅಧಿಕಾರಿಗಳಿಗೆ ಶುಕ್ರವಾರ ಕಟ್ಟುನಿಟ್ಟಿನ ಸೂಚನೆ ನೀಡಿದರು.

ತಮ್ಮ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ‘ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲ ದೇವಾಲಯಗಳನ್ನು ಸಂರಕ್ಷಿಸಬೇಕು. ಅವುಗಳಿಗೆ ಸೇರಿದ ಆಸ್ತಿಯನ್ನು ರಕ್ಷಿಸಬೇಕು. ಇದಕ್ಕಾಗಿ ದೇವಾಲಯಗಳ ಆಸ್ತಿಯನ್ನು ಸರ್ವೆ ಮಾಡಲು ಸೂಚಿಸಲಾಗಿದೆ. ಎಷ್ಟು ದೇವಾಲಯಗಳದ್ದು ಜಿಲ್ಲೆಯಲ್ಲಿ ಮಾಡಲಾಗಿದೆ ಎಂದು ಪ್ರಶ್ನಿಸಿದರು.

ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ಹರದನಹಳ್ಳಿ ದಿವ್ಯಲಿಂಗೇಶ್ವರ ದೇವಾಲಯಕ್ಕೆ ಸೇರಿದ ಜಮೀನಿನ ಒತ್ತುವರಿ ತೆರವುಗೊಳಿಸಿ ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ಸಚಿವರು ಮಾತನಾಡಿ, ‘ದೇವಾಲಯಗಳ ಆಸ್ತಿಗಳ ಸರ್ವೆಯನ್ನು ಕಡ್ಡಾಯವಾಗಿ ಮಾಡಬೇಕು. ಜಿಲ್ಲೆಯಲ್ಲಿ ದೇವಾಲಯಗಳ ಸಂಖ್ಯೆ ಕಡಿಮೆ ಇದ್ದು, ತಿಂಗಳಿಗೆ ಕನಿಷ್ಠ ಐದು ದೇವಾಲಯಗಳದ್ದು ಸರ್ವೆ ಮಾಡಿದರೂ ಬೇಗ ಮುಗಿಯುತ್ತದೆ. ಎಡಿಸಿ ಅಥವಾ ಉಪವಿಭಾಗಾಧಿಕಾರಿ ಇಲ್ಲವೇ ತಹಶೀಲ್ದಾರ್‌ ಉಸ್ತುವಾರಿಯಲ್ಲಿ ಈ ಕಾರ್ಯ ನಡೆಯಲಿ. ಸರ್ವೆ ಮಾಡಿ ಗಡಿ ಗುರುತು ಹಾಕಿಕೊಡಬೇಕು. ನಂತರ ವ್ಯವಸ್ಥಾಪನಾ ಸಮಿತಿಯವರು ಆಸ್ತಿ ರಕ್ಷಣೆಗೆ ಕ್ರಮ ವಹಿಸಬೇಕು’ ಎಂದರು.

ಜಿಲ್ಲಾ ಧಾರ್ಮಿಕ ಪರಿಷತ್ತಿನ ಸಭೆ ತಿಂಗಳಿಗೆ ಒಂದು ಬಾರಿ ನಡೆಯಲೇಬೇಕು. ಜಿಲ್ಲಾಧಿಕಾರಿ ಅವರಿಗೆ ಸಭೆ ನಡೆಸಲು ಸಾಧ್ಯವಾಗದಿದ್ದರೆ, ಹೆಚ್ಚುವರಿ ಜಿಲ್ಲಾಧಿಕಾರಿ ಅವರು ನಡೆಸಬೇಕು ಎಂದು ಶ್ರೀನಿವಾಸ ಪೂಜಾರಿ ಅವರು ಸೂಚಿಸಿದರು.

‘ಹನೂರು ತಾಲ್ಲೂಕಿನ ಸುಳ್ವಾಡಿಯಲ್ಲಿರುವ ಬ್ರಹ್ಮೇಶ್ವರ ದೇವಾಲಯಕ್ಕೆ ಸೇರಿದ ಜಾಗವನ್ನು (ಸರ್ವೆ ನಂಬರ್‌ 53/ಬಿ) ಚರ್ಚ್‌ ಒತ್ತುವರಿ ಮಾಡಿಕೊಂಡಿದೆ ಅದನ್ನು ತೆರವುಗೊಳಿಸಲು ಕ್ರಮ ವಹಿಸಬೇಕು’ ಎಂದು ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯರೊಬ್ಬರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದರು.

ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರು, ‘ಕೊಳ್ಳೇಗಾಲದಲ್ಲಿರುವ ಮರುಳೇಶ್ವರ ದೇವಾಲಯ ಪುನರುಜ್ಜೀವನಕ್ಕೆ ಕ್ರಮವಹಿಸಬೇಕು’ ಎಂದು ಸಚಿವರಲ್ಲಿ ಮನವಿ ಮಾಡಿದರು.

ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ಮಾತನಾಡಿ, ‘ಜಿಲ್ಲೆಯಲ್ಲಿರುವ 96 ಶತಮಾನ ಕಂಡ ದೇವಾಲಯಗಳನ್ನು ಅಭಿವೃದ್ಧಿ ಪಡಿಸಲು ಯೋಜನಾ ವರದಿ ಸಿದ್ಧಪಡಿಸಿ ಮುಜರಾಯಿ ಇಲಾಖೆಗೆ ಕಳುಹಿಸಲಾಗಿದೆ. ಇದಕ್ಕೆ ಅನುಮೋದನೆ ನೀಡಬೇಕು’ ಎಂದು ಮನವಿ ಮಾಡಿದರು.

ನೋಟಿಸ್‌ಗೆ ಸೂಚನೆ: ಬೆಟ್ಟದಲ್ಲಿ ಪ್ರಗತಿಯಲ್ಲಿರುವ 512 ಕೊಠಡಿಗಳ ವಸತಿಗೃಹ ಕಾಮಗಾರಿ ವಿಳಂಬವಾಗುತ್ತಿರುವುದರ ಬಗ್ಗೆ ಚರ್ಚೆ ನಡೆಸುವಾಗ ಲೋಕೋಪಯೋಗಿ ಇಲಾಖೆ‌ಯ ಕಾರ್ಯಪಾಲಕ ಎಂಜಿನಿಯರ್‌ ಅವರು ಇಲ್ಲದಿರುವುದನ್ನು ಗಮನಿಸಿದ ಸಚಿವರು, ಅಸಮಾಧಾನ ವ್ಯಕ್ತಪಡಿಸಿದರಲ್ಲದೇ, ಎಂಜಿನಿಯರ್‌ ಅವರಿಗೆ ನೋಟಿಸ್‌ ನೀಡುವಂತೆ ಜಿಲ್ಲಾಧಿಕಾರಿ ಅವರಿಗೆ ಸೂಚಿಸಿದರು.

ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಆರ್‌.ನರೇಂದ್ರ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಂತಮೂರ್ತಿ ಕುಲಗಾಣ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಎಎಸ್‌ಪಿ ಎಸ್.ಸುಂದರರಾಜು, ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ, ರವಿಶಂಕರ್, ಜಯಪ್ರಕಾಶ್, ಕೆ.ಕುನಾಲ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರೇವಣ್ಣ, ಧಾರ್ಮಿಕ ಪರಿಷತ್ತಿನ ಸದಸ್ಯರು, ವಿವಿಧ ದೇವಾಲಯಗಳ ಸಮಿತಿ ಸದಸ್ಯರು, ಇತರರು ಸಭೆಯಲ್ಲಿ ಹಾಜರಿದ್ದರು.

ಸಾಮೂಹಿಕ ವಿವಾಹ ನಡೆಸಲು ಸಲಹೆ

ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯನಿರ್ವಹಣೆಯ ಬಗ್ಗೆಯೂ ಸಚಿವರು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರಿಂದ ಸಚಿವರು ಮಾಹಿತಿ ಪಡೆದರು.

ಕೋವಿಡ್‌ ಕಾರಣಕ್ಕೆ ಸಾಮೂಹಿಕ ವಿವಾಹ ಕಾರ್ಯಕ್ರಮ ಕಳೆದ ವರ್ಷದಿಂದ ನಡೆಯುತ್ತಿಲ್ಲ ಎಂದು ಜಯವಿಭವಸ್ವಾಮಿ ಅವರು ತಿಳಿಸಿದಾಗ, ‘ಕೋವಿಡ್‌ ನಿಯಮ ಪಾಲಿಸಿಕೊಂಡು ಸಾಮೂಹಿಕ ವಿವಾಹ ನಡೆಸಿ. ಒಂದು ಬಾರಿಗೆ 10 ಜೋಡಿಗಳಿಗೆ, ಸ್ವಲ್ಪ ಹೊತ್ತು ಬಿಟ್ಟು ಮತ್ತೆ 10 ಜೋಡಿಗಳಿಗೆ ಮದುವೆ ಮಾಡಿಸಬಹುದು. ಇಂತಹ ಕಾರ್ಯಕ್ರಮಗಳಿಂದ ಬಡವರಿಗೆ ಸಹಾಯವಾಗುತ್ತದೆ’ ಎಂದು ಶ್ರೀನಿವಾಸ ಪೂಜಾರಿ ಅವರು ಸಲಹೆ ನೀಡಿದರು.

ಬೆಟ್ಟದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಜಯ ವಿಭವಸ್ವಾಮಿ ಅವರು ಸಚಿವರಿಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT